ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನೇ ಎಲ್ಲಾ ನನ್ನಿಂದ ಎಲ್ಲಾ

Last Updated 19 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಪ್ರಶ್ನೆ: ಪತ್ರಿಕಾ ಸಂದರ್ಶನದಲ್ಲಿ ಸುಳ್ಳು ಹೇಳುವುದು ಎಷ್ಟು ಮುಖ್ಯ.
ಉತ್ತರ: ಸುಳ್ಳು ಹೇಳದಿದ್ದರೆ ಕಂಬಿ ಎಣಿಸೋ ಹಾಗೆ ಮಾಡಿಬಿಡ್ತಾರೆ (ಜೋರು ನಗೆ).

ಪ್ರಶ್ನೆ: ಬದುಕಿನಲ್ಲಿ ನೀವು ಮತ್ತೆ ಮಾಡಲು ಬಯಸದ ಮೂರು ತಪ್ಪುಗಳು ಯಾವುವು?
ಉತ್ತರ: ಮದುವೆಯಾದವನ ಜೊತೆ ಡೇಟ್ ಮಾಡಿದ್ದು. ಶೂಟಿಂಗ್ ನಡೆಯುವಾಗ ಸಿಗರೇಟು ಸೇದಿದ್ದು. ಅಪ್ಪ-ಅಮ್ಮ ಫೋನ್ ಮಾಡಿದರೆ ಮಾತನಾಡದೇ ಇದ್ದದ್ದು.

ಕಂಗನಾ ರನೌತ್ ಎಂಬ ಹಾಲು ಬಣ್ಣದ ನಟಿ ತುಟಿ ಕೊಂಕಿಸುತ್ತಾ, ಹೀಗೆ ಪ್ರಶ್ನೆಗಳಿಗೆ ತುಪಾಕಿಯಂಥ ಉತ್ತರ ಕೊಡುವ ಪರಿ ಕಂಡರೆ ಬೆಚ್ಚಿಬೀಳುವವರ ಸಂಖ್ಯೆ ದೊಡ್ಡದಾದೀತು. ಮೊದಮೊದಲು ವಿಕ್ಷಿಪ್ತ, ವಿಲಕ್ಷಣ ಪಾತ್ರಗಳನ್ನು ಒಪ್ಪಿಕೊಳ್ಳುತ್ತಾ ಬಂದ ಕಂಗನಾ ಈಗ ಬದಲಾಗಿದ್ದಾರೆ. ಈ ವರ್ಷ ಅವರ ಅಭಿನಯದ ಆರು ಚಿತ್ರಗಳು ತೆರೆಕಂಡಿವೆ.
 
`ಡಬಲ್ ಧಮಾಲ್~ ಹಾಗೂ `ರ‌್ಯಾಸ್ಕಲ್ಸ್~ ತರಹದ ಕಾಮಿಡಿ ಚಿತ್ರಗಳಲ್ಲಿ ಬಿಕಿನಿಯ ಉಪ್ಪಿನಕಾಯಿಯನ್ನು ಜೋರಾಗೇ ಉಣಬಡಿಸಿದ ಕಂಗನಾ ಈ ಶತಮಾನದ ಸಾಹಸಿ ಹೆಣ್ಣು ಎಂದೇ ತಮ್ಮನ್ನು ಬಣ್ಣಿಸಿಕೊಳ್ಳುವುದು.

`ನನ್ನ ಓರಗೆಯ ಹೆಣ್ಣುಮಕ್ಕಳು ಕಾಲೇಜಿನಲ್ಲಿ ಓದುತ್ತಾ ಬಿಂದಾಸ್ ಆಗಿ ಕಾಲ ಕಳೆಯುತ್ತಿದ್ದಾಗ ನಾನು ಬಣ್ಣ ಹಚ್ಚಿಕೊಂಡು ಅಭಿನಯಿಸಲು ನಿಂತಿದ್ದೆ. ಕಾಲೆಳೆಯಲು ಅನೇಕರು ಕಾದಿದ್ದರು. ಸ್ಪರ್ಧೆಗೆ ಪೈಪೋಟಿ ನೀಡಲು ಸುಂದರಿಯರ ಸರತಿ ಸಾಲು. ಎಲ್ಲರ ನಡುವೆ ನಾನು ಏಗಿದೆ. ನಟಿಸಿ ಗೆದ್ದೆ. ಈಗಿನ್ನೂ ನನಗೆ ವಯಸ್ಸು ಇಪ್ಪತ್ತನಾಲ್ಕು.

ಸಮಾರಂಭಕ್ಕೆಂದು ನೆಂಟರಿಷ್ಟರ ನಡುವೆ ಸೇರಿದರೆ ಗಂಡು ಹುಡುಕುವ ಮಾತಾಡುತ್ತಾರೆ. ಇನ್ನು ನಾಲ್ಕು ವರ್ಷ ಯಾರೂ ನನ್ನ ಮದುವೆಯ ಯೋಚನೆ ಮಾಡಬೇಡಿ ಎಂದಿದ್ದೇನೆ. ಇನ್ನು ಮದುವೆಯಾದವರ ಜೊತೆ ಡೇಟಿಂಗ್‌ಗೂ ನಾನು ಲಭ್ಯಳಿಲ್ಲ~ ಎಂದು ಸಭ್ಯತೆಯ ಸೋಗಿನಲ್ಲೇ ಮಾತನಾಡುವ ಕಂಗನಾ ಪ್ರತಿ ಮಾತಿಗೂ ಸೊಕ್ಕನ್ನು ತೀಡುವುದರಲ್ಲಿ ಎತ್ತಿದ ಕೈ.
 
ಅವರ ಸೊಕ್ಕಿನ ಬಿಸಿಯುಂಡ ಸಂಜಯ್ ದತ್ ಹಾಗೂ ಅಜಯ್ ದೇವಗನ್ ಇಬ್ಬರೂ `ರ‌್ಯಾಸ್ಕಲ್ಸ್ ಚಿತ್ರದ ಪ್ರಚಾರಕ್ಕೆ ಈಯಮ್ಮನ ಕರೆಸಬೇಡಿ~ ಎಂದು ನಿರ್ಮಾಪಕರಿಗೆ ಸಲಹೆ ಇತ್ತಿದ್ದು ಗುಟ್ಟೇನೂ ಅಲ್ಲ. ನಿರ್ದೇಶಕ ಡೇವಿಡ್ ಧವನ್ ಮಾತ್ರ `ಬೇಜಾರಾಗಬೇಡಮ್ಮಾ, ಕಂಗನಾ~ ಎಂದು ಸಮಾಧಾನ ಮಾಡಿದರು.

ವಿಷಯ ಏನಪ್ಪಾ ಅಂದರೆ, `ರ‌್ಯಾಸ್ಕಲ್ಸ್~ ಚಿತ್ರದಲ್ಲಿ ಬಿಕಿನಿ ತೊಡಬೇಕಾಗಿತ್ತು. `ಅದು ಹೇಗಿರುತ್ತದೆ, ಎಲ್ಲಿಂದ ತರಿಸುತ್ತೀರಿ, ಬಣ್ಣವೇನು?~ ಎಂದೆಲ್ಲಾ ಕಂಗನಾ ತಗಾದೆ ತೆಗೆಯಲಾಗಿ ನಿರ್ಮಾಪಕರು ಬೆವೆತುಹೋದರು. ಕೊನೆಗೆ ಪ್ಯಾರಿಸ್‌ನಿಂದ ತಾವೇ ಬಿಕಿನಿ ತರಿಸಿಕೊಂಡು, ಅದರ ಬಿಲ್ಲನ್ನು ನಿರ್ಮಾಪಕರ ಕೈಗಿಟ್ಟು ನಕ್ಕಿದ್ದೂ ಇದೇ ಚೆಲುವೆ.

ಕಂಗನಾ ಕಣ್ಣಿನಲ್ಲಿ ಮಾದಕತೆ ಇದೆ. ತುಟಿ ಬಟ್ಟಲನ್ನು ಒಡ್ಡಿಕೊಳ್ಳಲೂ ಅವರು ಸದಾ ಸಿದ್ಧ. ಆದರೆ, ಎಲ್ಲದರಲ್ಲೂ ಹೀಗೇ ಆಗಬೇಕು ಎಂದು ಗೆರೆ ಎಳೆಯುವುದು ಜಾಯಮಾನ. ಸಂಭಾವನೆಯಿಂದ ಹಿಡಿದು ಬಯಸುವ ಸೌಕರ್ಯದವರೆಗೆ ಯಾವುದರಲ್ಲೂ ರಾಜಿಯಾಗುವುದಿಲ್ಲ. ಸಹಾಯಕ ಹಿಡಿದು ನಿಲ್ಲುವ ಕೊಡೆಯಲ್ಲಿ ಸಣ್ಣ ತೂತು ಕಂಡರೂ ನಿರ್ಮಾಪಕನ ಮುಖದ ಮೇಲೆ ನೀರಿಳಿಸುತ್ತಾರೆ.

`ಫ್ಯಾಷನ್~ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಸಿಕ್ಕ ಸಂದರ್ಭದಲ್ಲಿ ಒಂದಿಡೀ ವರ್ಷ ಕಂಗನಾ ಕೈಲಿ ಒಂದೂ ಸಿನಿಮಾ ಇರಲಿಲ್ಲ. ಈ ವರ್ಷ ಶೂಟಿಂಗ್ ನಡೆಯದ ದಿನಗಳು ವಿರಳ. ಪ್ಯಾರಿಸ್‌ನ ಯಾವುದೋ ಡಿಸೈನರ್ ಬಟ್ಟೆಗೆ ತಾವೇ ಮಾಡೆಲ್ ಎಂದು ಕಂಗನಾ ಬೂಸಿ ಬಿಡುತ್ತಿದ್ದಾರೆ ಎಂಬ ಸುದ್ದಿ ಫ್ರಾನ್ಸ್‌ನಿಂದ ಮುಂಬೈ ಗಲ್ಲಿಗಳನ್ನೂ ತಲುಪಿತ್ತು.

`ಅದಕ್ಕೂ ನನಗೂ ಸಂಬಂಧವಿಲ್ಲ. ನನ್ನ ಹೆಸರು ಮಾರಾಟವಾಗುತ್ತದೆ. ಅದನ್ನು ನಿಯಂತ್ರಿಸಲು ಹೋಗುವುದಿಲ್ಲ. ಯಾಕೆಂದರೆ, ಮಾರುಕಟ್ಟೆಯಲ್ಲಿ ನನ್ನ ಹೆಸರು ಚಾಲ್ತಿಯಲ್ಲಿರಬೇಕು. ಅದು ತಂತಾನೇ ಒದಗಿಬಂದರೆ ನನಗೇ ಸುಖ. ಸಿನಿಮಾದಲ್ಲಿ ಚಾಲ್ತಿಯಲ್ಲಿದ್ದರಷ್ಟೇ ಅವಕಾಶ.
 
ಇಲ್ಲದಿದ್ದರೆ ಕನ್ನಡಿಯಲ್ಲಿ ನಮ್ಮ ಮೂತಿಯನ್ನು ನಾವೇ ನೋಡುತ್ತಾ ಕೂರಬೇಕು. ನಾನು ಯಾವುದೋ ಹೊಸ ನಟನ ಚಿತ್ರದ ಆಫರ್ ಒಪ್ಪಿಕೊಂಡರೆ ಸಿಕ್ಕಾಪಟ್ಟೆ ಹಣ ಸಿಗುತ್ತದೆ. ಒಂದು ತಿಂಗಳಲ್ಲಿ ಕೆಲವೇ ಚಿತ್ರಗಳಿಗೆ ಕಾಲ್‌ಷೀಟ್ ಕೊಟ್ಟು ಐವತ್ತು ಕೋಟಿ ರೂಪಾಯಿ ದಕ್ಕಿಸಿಕೊಳ್ಳಬಹುದು.
 
ಆದರೆ, ನಾನು ಹಾಗೆ ಮಾಡುವುದಿಲ್ಲ. ನನಗೂ ಜವಾಬ್ದಾರಿ ಇದೆ. ಮಾರುಕಟ್ಟೆ ಇದೆ. ನನ್ನೊಬ್ಬಳಿಂದಲೇ ಸಿನಿಮಾ ಗೆಲ್ಲಿಸುತ್ತೇನೆಂಬ ಆತ್ಮವಿಶ್ವಾಸವಿದೆ...~- ಹೀಗೆ ಬಿಡುಬೀಸಾಗಿ ಮಾತು ಚೆಲ್ಲುತ್ತಾರೆ ಕಂಗನಾ.

ಕಂಗನಾ ಮನೆಯಲ್ಲಿ ಪತ್ರಿಕೆ, ನಿಯತಕಾಲಿಕೆಗಳಿಗೆ ನಿಷೇಧ. ವೆಬ್‌ಸೈಟ್‌ಗಳಲ್ಲಿ ಕೂಡ ತಮ್ಮ ಬಗ್ಗೆ ಯಾರು ಏನೇ ಬರೆದರೂ ಓದುವುದನ್ನು ಬಿಟ್ಟು ತಿಂಗಳುಗಳೇ ಆಗಿವೆ. ಪಿಂಕ್ ಬಣ್ಣದ ಉಡುಗೆಯೆಂದರೆ ಅಲರ್ಜಿ. ವ್ಯಾಯಾಮ ತಪ್ಪಿಸದ ಬದುಕು. ಗಂಡುಜೀವಗಳನ್ನು ಕಂಡರೆ ಅಷ್ಟಕ್ಕಷ್ಟೇ. ಲಂಡನ್‌ನ ವಿವಾಹಿತ ವೈದ್ಯರೊಬ್ಬರ ಜೊತೆ ಮಾಡಿದ್ದೊಂದೇ ಡೇಟಿಂಗ್.

`ಬದುಕು ಮಾಯೆಯ ಮಾಟ~ ಎಂಬುದು ಕವಿ ಬೇಂದ್ರೆ ಬರೆದ ಸಾಲು. `ಬದುಕೇ ನನ್ನಯ ಆಟ~ ಎನ್ನುವುದು ಕಂಗನಾ ಗೀಚಿದ ಲೈನು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT