ಹೊಸತಿಗಾಗಿ ಹಂಬಲಿಸುವ ಒಂದಷ್ಟು ಉಜ್ವಲ ಮನಸ್ಸುಗಳು ಕನ್ನಡ ಚಿತ್ರರಂಗದಲ್ಲಿವೆ ಎಂಬುದನ್ನು ರುಜುವಾತುಪಡಿಸಿದ ವರ್ಷ 2010. ಯಶಸ್ಸಿನ ಅನುಪಾತ, ಬಾಕ್ಸಾಫೀಸ್ ಗಳಿಕೆಯ ದೃಷ್ಟಿಯಿಂದ ಕನ್ನಡ ಚಿತ್ರೋದ್ಯಮದ ರಂಗು ವ್ಯಾಪಕವಾಗಿ ಬದಲಾಗಿಲ್ಲದಿರಬಹುದು. ಆದರೆ, ದೃಶ್ಯ ತಾಂತ್ರಿಕತೆ, ಸೃಜನಶೀಲತೆ ಅಭಿವ್ಯಕ್ತಿಯ ದೃಷ್ಟಿಯಿಂದ ಇದು ಭರ್ಜರಿ ಫಸಲಿನ ವರ್ಷ.

ವರ್ಷ ಶುರುವಾದದ್ದು ‘ನಾನ್ ಮಾಡಿದ್ ತಪ್ಪಾ’ ಎಂಬ ನೀರಸ ಚಿತ್ರ ಬಿಡುಗಡೆಯಾಗುವುದರೊಂದಿಗೆ.ಆದರೆ, ಆಮೇಲಾಮೇಲೆ ಪ್ರಯೋಗಶೀಲತೆಯ ಆಮ್ಲಜನಕದ ಪ್ರಮಾಣ ಹೆಚ್ಚಾಗತೊಡಗಿತು. ಜನವರಿ ಮಧ್ಯಭಾಗ ಹಾಗೂ ಏಪ್ರಿಲ್‌ನ ಅವಧಿಯಲ್ಲಿ ಸೃಜನಶೀಲತೆಯದ್ದು ಹುಲುಸು ಬೆಳೆ. ತಾಂತ್ರಿಕವಾಗಿ ಬಿಗಿಯಾಗಿದ್ದ ಚೈತನ್ಯ ನಿರ್ದೇಶನದ ಸೂರ್ಯಕಾಂತಿ, ತಮ್ಮನ್ನು ತಾವೇ ಮೀರುವ ಬಯಕೆಯಿಂದ ಸುದೀಪ್ ನಿರ್ದೇಶಿಸಿದ ‘ಜಸ್ಟ್ ಮಾತ್ ಮಾತಲ್ಲಿ’, ಕಾಶಿಯ ಮುಕ್ತಿಧಾಮದಲ್ಲಿ ಸಾವಿನ ಆಸೆ ಪೂರೈಸಿಕೊಳ್ಳುವ ಮನೋವ್ಯಾಪಾರವನ್ನು ಸಾವಧಾನದ ಚೌಕಟ್ಟಿನಲ್ಲಿ ತೋರಿಸಿದ ಪಿ.ಶೇಷಾದ್ರಿ ನಿರ್ದೇಶನದ ವಿಮುಕ್ತಿ, ವಿಷ್ಣುವರ್ಧನ್ ಕೊನೆಯ ಚಿತ್ರ ‘ಆಪ್ತರಕ್ಷಕ’, ಹದಿನೆಂಟೇ ಗಂಟೆಗಳಲ್ಲಿ ಚಿತ್ರೀಕರಣ ಮುಗಿಸಿ ಸುದ್ದಿಯಾದ ‘ಸುಗ್ರೀವ’, ಮೈಂಡ್ ಗೇಮ್‌ನ ಅಪರೂಪದ ಕಥಾಹಂದರ ಇದ್ದ ‘ಜುಗಾರಿ’, ಕನಸನ್ನು ಹೆಚ್ಚು ಕಾಲ ಬಳಸಿಕೊಳ್ಳುವ ಸಾಧ್ಯತೆಗೆ ಮುಖಮಾಡಿದ ದಯಾಳ್ ವಿರಚಿತ ‘ಶ್ರೀಹರಿಕಥೆ’, ಪಾತ್ರಗಳ ಸಹಜ ಭಾವಗಳೇ ತೆರೆಮೇಲೆ ಪರಿಣಾಮಕಾರಿಯಾಗಿ ಮೂಡುವಂತೆ ಎಚ್ಚರ ವಹಿಸಿ ಹೊಸತನ ತೋರಿದ ನವ ನಿರ್ದೇಶಕ ಅಮರ್ ಅವರ ‘ದಿಲ್ದಾರ’, ಚೀನಾದ ಗಮನಾರ್ಹ ಸಿನಿಮಾ ‘ದಿ ಶಾಫ್ಟ್’ನ ದೃಶ್ಯತಂತ್ರವನ್ನು ಅಳವಡಿಸಿಕೊಂಡ ‘35/100- ಜಸ್ಟ್ ಪಾಸ್’, ಗಣಿ ಮಾಫಿಯಾದಂಥ ಸಮಕಾಲೀನ ವಸ್ತುವನ್ನು ರಾಜಕೀಯ ವಾಸ್ತವದ ಸಹಿತ ತೋರಿಸಿದ ‘ಪೃಥ್ವಿ’- ಈ ಎಲ್ಲಾ ಚಿತ್ರಗಳು ತೆರೆಕಂಡಿದ್ದು ಫೆಬ್ರುವರಿ ಹಾಗೂ ಏಪ್ರಿಲ್ ಅವಧಿಯ ನಡುವೆಯೇ. ಆದರೆ, ‘ಪೃಥ್ವಿ’ ಹೊರತುಪಡಿಸಿದರೆ ಮಿಕ್ಕ ಚಿತ್ರಗಳು ಮೂಲ ಬಂಡವಾಳವನ್ನು ಹುಟ್ಟಿಸಲಿಲ್ಲ.

ಕೆಲವು ಚಿತ್ರೋತ್ಸವಗಳಲ್ಲಿ ‘ವಿಮುಕ್ತಿ’ ಮಿಂಚಿತು. ಭಯೋತ್ಪಾದನೆಯ ವಸ್ತುವನ್ನು ಒಳಗೊಂಡಿರುವ ಕಾರಣಕ್ಕೆ ಜೂನ್ ತಿಂಗಳಲ್ಲಿ ತೆರೆಕಂಡ ‘ತಮಸ್ಸು’ ಮುಖ್ಯವಾಗುತ್ತದೆ. ವರ್ಷದ ಮೊದಲರ್ಧದಲ್ಲಿ ಬಾಕ್ಸಾಫೀಸ್ ಲೆಕ್ಕದ ಪ್ರಕಾರ ಯಶಸ್ಸು ಕಂಡಿದ್ದು ‘ಕೃಷ್ಣನ್ ಲವ್ ಸ್ಟೋರಿ’ ಮಾತ್ರ. ಜುಲೈನಲ್ಲಿ ತೆರೆಕಂಡ ‘ಎರಡನೇ ಮದುವೆ’ ದಿನೇಶ್ ಬಾಬು ಮಿತವ್ಯಯದ ಸೂತ್ರ ನೆಚ್ಚಿಕೊಂಡ ನಗೆಚಿತ್ರ. ನಿರ್ಮಾಪಕರ ಜೇಬಿಗೆ ಇನ್ನೊಂದು ಸಿನಿಮಾ ಮಾಡುವಷ್ಟು ಲಾಭ ಈ ಚಿತ್ರದಿಂದ ಬಂದಿದೆ ಎಂಬ ಅಭಿಪ್ರಾಯವಿದೆ. ಕನ್ನಡದಲ್ಲೂ ಸಿನಿಮಾ ಮಾಡಬೇಕೆಂಬ ಪ್ರಕಾಶ್ ರೈ ಕನಸು ಜೀವಗೊಂಡಿದ್ದು ‘ನಾನು ನನ್ನ ಕನಸೂ’ ರೀಮೇಕ್ ಮೂಲಕ.

ಮದುವೆಯ ಹಳೆಯ ವಿಷಯಕ್ಕೆ ಸಮಕಾಲೀನತೆ ಹಾಗೂ ವ್ಯಂಗ್ಯದ ಲೇಪ ಕೊಟ್ಟು ಗೆದ್ದ ಸಿನಿಮಾ ‘ಪಂಚರಂಗಿ’. ಕಥನಗಳನ್ನು ಹರಡಿಕೊಂಡ, ಕಥೆಯೇ ಇಲ್ಲದ ಈ ಚಿತ್ರ ವರ್ಷದ ಯಶಸ್ವಿ ಪ್ರಯೋಗಶೀಲತೆ. ಕನ್ನಡ ಚಿತ್ರರಂಗದ ಬಜೆಟ್ ಮಿತಿಯಲ್ಲೇ ಧಾಟಿ ಬದಲಿಸುವುದು ಹೇಗೆ ಎಂಬುದಕ್ಕೆ ‘ಪಂಚರಂಗಿ’ ಒಳ್ಳೆಯ ಉದಾಹರಣೆ ಕೂಡ. ‘ದುನಿಯಾ’ ಸಿನಿಮಾ ನೂರು ದಿನದಲ್ಲಿ ಗಳಿಸಿದಷ್ಟು ಹಣವನ್ನು ಈ ವರ್ಷ ಒಂದೇ ವಾರದಲ್ಲಿ ಸಂಪಾದಿಸಿ ಕೊಟ್ಟ ಚಿತ್ರ ‘ಜಾಕಿ’. ಇಂದಿಗೂ ಚಿತ್ರೋದ್ಯಮವಿರುವುದು ಇದೇ ಚಿತ್ರದ ಯಶಸ್ಸಿನ ಗುಂಗಿನಲ್ಲಿ. ವರ್ಷದ ಕೊನೆಯಲ್ಲಿ ತೆರೆಕಂಡ ‘ಸೂಪರ್’ ಉಪೇಂದ್ರ ಹತ್ತು ವರ್ಷದ ನಂತರ ನಿರ್ದೇಶಿಸಿದ ಸಿನಿಮಾ ಎಂಬ ಕಾರಣಕ್ಕೆ ಭರ್ಜರಿ ಆರಂಭ ಪಡೆಯಿತು. ಆದರೆ, ನಿರೀಕ್ಷಿಸಿದಷ್ಟು ‘ಪ್ರೇಕ್ಷಕರ ಮಾತಿನ ಶ್ಲಾಘನೆ’ (ಮೌತ್‌ಟಾಕ್) ಈ ಚಿತ್ರಕ್ಕೆ ಸಿಗಲಿಲ್ಲ.

ವರ್ಷದ ಅತಿ ಜನಪ್ರಿಯ ನಿರ್ದೇಶಕ ‘ಜಾಕಿ’ ಸೃಷ್ಟಿಕರ್ತ ಸೂರಿ. ಜನಪ್ರಿಯ ನಿರ್ದೇಶಕ ‘ಪಂಚರಂಗಿ’ ವಾರಸುದಾರ ಯೋಗರಾಜ್ ಭಟ್. ನಿರ್ಮಾಪಕರು ನಗುವಂತೆ ಮಾಡಿದವರು ಶಶಾಂಕ್ ಹಾಗೂ ದಿನೇಶ್ ಬಾಬು. ‘ಸೂಪರ್’ ಮೇಲೆ ದೊಡ್ಡ ಮೊತ್ತ ವಿನಿಯೋಗಿಸಿದ ರಾಕ್‌ಲೈನ್ ವೆಂಕಟೇಶ್ ಕೂಡ ನಗುತ್ತಿರುವುದರಿಂದ ಅವರನ್ನು ವರ್ಷದ ನಿರ್ಮಾಪಕ ಎನ್ನಬಹುದೇನೋ?

ವರ್ಷದ ಸೂಪರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಎನ್ನಲು ಸಮರ್ಥನೆಗಳೇ ಬೇಕಿಲ್ಲ. ‘ಕೃಷ್ಣನ್ ಲವ್ ಸ್ಟೋರಿ’ ಹಾಗೂ ‘ಗಾನ ಬಜಾನಾ’ದಲ್ಲಿ ಅಭಿನಯದ ಗಂಧ ಬೀರಿದ ರಾಧಿಕಾ ವರ್ಷದ ನಾಯಕಿ. ಹಣೆಬರಹ ಬದಲಾದ ಪ್ರಮುಖ ನಾಯಕ ಗಣೇಶ್. ‘ಉಲ್ಲಾಸ ಉತ್ಸಾಹ’, ‘ಏನೋ ಒಂಥರಾ’ ಎರಡೂ ನೆಲಕಚ್ಚಿರುವುದೇ ಇದಕ್ಕೆ ಸಾಕ್ಷಿ. ‘ಮಿನುಗು’, ‘ಶ್ರೀಹರಿಕಥೆ’, ‘ನಾ ರಾಣಿ ನೀ ಮಹಾರಾಣಿ’ಯ ಹ್ಯಾಟ್ರಿಕ್ ಸೋಲು ಪೂಜಾ ಗಾಂಧಿ ಪ್ರಭಾವ ಕ್ಷೀಣಿಸಿರುವುದಕ್ಕೆ ನಿದರ್ಶನ. ದರ್ಶನ್ ಗ್ರಾಫ್ ಕೂಡ ಈ ವರ್ಷ ಇಳಿಮುಖವಾಗಿದೆ. ‘ಪೊರ್ಕಿ’, ‘ಶೌರ್ಯ’ ಎರಡೂ ಬೋರಲಾದವು. ವಿಜಯ್ ಮೇಲಿನ ನಂಬಿಕೆಯನ್ನು ಮಾದೇಶ್ ನಿರ್ದೇಶನದ ‘ಕರಿಚಿರತೆ’ ಉಳಿಸಿತಾದರೂ, ‘ಶಂಕರ್ ಐಪಿಎಸ್’ ದಯನೀಯವಾಗಿ ಸೋತಿತು. ‘ಯಕ್ಷ’ ಸೋಲಿನಿಂದ ಚೇತರಿಸಿಕೊಳ್ಳಲು ಯೋಗೀಶ್‌ಗೆ ಹೆಚ್ಚು ಕಾಲಾವಕಾಶವೇ ಬೇಕು.

ಈ ವರ್ಷ ರಮೇಶ್ ಐದು ಚಿತ್ರಗಳಲ್ಲಿ (ಕೃಷ್ಣಾ ನೀ ಲೇಟಾಗ್ ಬಾರೋ, ಕ್ರೇಜಿ ಕುಟುಂಬ, ಪ್ರೀತಿಯಿಂದ ರಮೇಶ್, ಹೆಂಡ್ತೀರ್ ದರ್ಬಾರ್ ಹಾಗೂ ಶಾಕ್), ಶಿವರಾಜ್‌ಕುಮಾರ್ (ಸುಗ್ರೀವ, ತಮಸ್ಸು, ಚೆಲುವೆಯೇ ನಿನ್ನೇ ನೋಡಲು, ಮೈಲಾರಿ) ಹಾಗೂ ಸುದೀಪ್ (ಜಸ್ಟ್ ಮಾತ್‌ಮಾತಲ್ಲಿ, ಮಿಸ್ಟರ್ ತೀರ್ಥ, ಕಿಚ್ಚ ಹುಚ್ಚ, ವೀರ ಪರಂಪರೆ) ನಾಲ್ಕರಲ್ಲಿ ಅಭಿನಯಿಸಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ದು ‘ವೀರ ಪರಂಪರೆ’ ಮಾತ್ರ. ಈ ವಾರ ತೆರೆಕಾಣುತ್ತಿರುವ ‘ಮೈಲಾರಿ’ ಮೇಲೆ ಶಿವರಾಜ್‌ಕುಮಾರ್ ನಂಬಿಕೆಯ ಕಣ್ಣಿಟ್ಟಿದ್ದಾರೆ.

ವರ್ಷದ ಕೊನೆಯಲ್ಲಿ ತೆರೆಕಂಡ ಗಿರೀಶ ಕಾಸರವಳ್ಳಿ ನಿರ್ದೇಶನದ ‘ಕನಸೆಂಬೋ ಕುದುರೆಯನೇರಿ’ ಅಂತರರಾಷ್ಟ್ರೀಯ ಮಟ್ಟದಲ್ಲಿ ನಟ ವೈಜನಾಥ್ ಬಿರಾದರ್ ಗುರುತಾಗಲು ಕಾರಣವಾದ ಚಿತ್ರ. ಈ ವರ್ಷ ಇದುವರೆಗೆ 130ಕ್ಕೂ ಹೆಚ್ಚು ಚಿತ್ರಗಳು ತೆರೆಕಂಡಿವೆ. ವಿವಿಧ ಕಾರಣಗಳಿಂದಾಗಿ ಮೆಚ್ಚಿಕೊಳ್ಳಲು ಹದಿನೈದು ಇಪ್ಪತ್ತು ಚಿತ್ರಗಳಂತೂ ಇವೆ. ತಾಂತ್ರಿಕವಾಗಿ ಹೊಸ ಪಟ್ಟುಗಳನ್ನು ಕಾಣಿಸಿದ, ಜನಪ್ರಿಯ ಚಿತ್ರಗಳ ಏಕತಾನತೆಯನ್ನು ಎದ್ದುಕಾಣುವಂತೆ ಮುರಿದ, ಲುಕ್ಸಾನಿನ ಪ್ರಮಾಣವನ್ನು ಅಷ್ಟಾಗಿ ಇಳಿಸಿಕೊಳ್ಳದ, ಸ್ಟಾರ್ ಪಟ್ಟದ ದೊಡ್ಡ ಅಲುಗಾಟ ಕಾಣಿಸಿದ 2010 ಭರವಸೆಯ ಪಸೆಯನ್ನಂತೂ ಉಳಿಸಿದೆ. 2011ರ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಲು ಅದು ಸಾಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.