ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲುಗಿನ ಕಥಾಕಂಬದ ಮೇಲಿನ ‘ಸಿಂಬ’

Last Updated 28 ಡಿಸೆಂಬರ್ 2018, 10:14 IST
ಅಕ್ಷರ ಗಾತ್ರ

ಚಿತ್ರ: ಸಿಂಬ (ಹಿಂದಿ)
ನಿರ್ಮಾಣ: ಕರಣ್ ಜೋಹರ್, ಹೀರೂ ಯಶ್ ಜೋಹರ್, ರೋಹಿತ್ ಶೆಟ್ಟಿ, ಅಪೂರ್ವ ಮೆಹ್ತಾ
ನಿರ್ದೇಶನ: ರೋಹಿತ್ ಶೆಟ್ಟಿ
ತಾರಾಗಣ: ರಣವೀರ್ ಸಿಂಗ್, ಸಾರಾ ಅಲಿ ಖಾನ್, ಸೋನು ಸೂದ್, ಆಶುತೋಷ್ ರಾಣಾ, ಅಜಯ್ ದೇವಗನ್.

ದಕ್ಷಿಣ ಭಾರತದ ಥಾಲಿಯನ್ನು ಕರಣ್ ಜೋಹರ್ ಮುಂಬೈಗೆ ಅನಾಮತ್ತು ಎತ್ತಿಕೊಂಡು ಹೋಗಿದ್ದು, ಅದನ್ನು ರೋಹಿತ್ ಶೆಟ್ಟಿ ಎದುರಲ್ಲಿ ಇಟ್ಟಿದ್ದಾರೆ. ಯೂನುಸ್ ಸಾಜ್ವಲ್, ಸಾಜಿದ್ ಸಂಜಿ ಅದನ್ನು ‘ಹಿಂದಿಯನೈಜ್’, ‘ಮರಾಠೈಜ್’ ಮಾಡಿ, ಬೇರೆಯದೇ ಒಗ್ಗರಣೆ ಕೊಟ್ಟು ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ.

ತೆಲುಗಿನಲ್ಲಿ ‘ಟೆಂಪರ್’ ನೋಡಿದ್ದವರಿಗೆ ಈ ‘ಸಿಂಬಾ’ ಎಲ್ಲೋ ನೋಡಿದ ಹಾಗೆ ಇದೆಯಲ್ಲ ಎನಿಸುವುದು ಸಹಜವೇ. ರೋಹಿತ್ ಶೆಟ್ಟಿ ‘ಸಿಂಗಂ’ ಎಂಬ ಬ್ರಾಂಡನ್ನು ಇನ್ನೂ ಮಾರುಕಟ್ಟೆ ಮಾಡುವುದರಲ್ಲಿ ನಿರತರಾಗಿದ್ದು, ಅದರ ಸೃಷ್ಟಿಕ್ರಿಯೆಯ ಹೆಮ್ಮೆ ದಕ್ಷಿಣ ಭಾರತದ ಚಿತ್ರ ನಿರ್ಮಾರ್ತೃಗಳದ್ದು.

‘ಕಿಕ್’, ‘ಊಸರವಳ್ಳಿ’, ‘ರೇಸು ಗುರ್ರಂ’ ತರಹದ ಭಾರೀ ಮಸಾಲೆಯನ್ನು ಮಾರುಕಟ್ಟೆ ಮಾಡಿದ ತೆಲುಗಿನ ಕಥೆಗಾರ ವಕ್ಕಂತಂ ವಂಶಿ ಅವರಿಗೆ ಕರಣ್ ಜೋಹರ್ ಕ್ರೆಡಿಟ್ ಕೊಟ್ಟಿರುವುದು ಮೆಚ್ಚತಕ್ಕ ಸಂಗತಿ. ಖುದ್ದು ಕರಣ್ ಒಂದು ಹಾಡಿನಲ್ಲಿ ಎಂಟ್ರಿ ಕೊಟ್ಟು, ‘ರೀಮೇಕ್ ಎಗೇನ್’ ಎಂದು ತಮ್ಮನ್ನು ತಾವೇ ಗೇಲಿ ಮಾಡಿಕೊಂಡಿರುವುದೂ ಮಾರುಕಟ್ಟೆ ತಂತ್ರವೇ.

ನಾಯಕನ ಹೆಸರು ಸಂಗ್ರಾಮ್ ಭಾಲೆರಾವ್. ಚುಟುಕಾಗಿ ‘ಸಿಂಬ’ ಎನ್ನಬೇಕು. ರಾಜಾಮೀಸೆ. ಹುರಿ ಮೈಕಟ್ಟು. ಅದಕ್ಕಂಟಿದ ಅಂಗಿ. ಭ್ರಷ್ಟಾಚಾರವನ್ನು ಮೈತುಂಬಾ ಮೆತ್ತಿಕೊಂಡಿರುವ ಪೊಲೀಸ್ ಅಧಿಕಾರಿ. ಮೇಲಾಗಿ ಅನಾಥ. ಹೀಗಾಗಿ ಸುತ್ತಮುತ್ತ ಪರಿಚಿತರಾಗುವ ಆಪ್ತೇಷ್ಟರಲ್ಲೇ ಅಣ್ಣ-ತಂಗಿ-ತಂದೆಯರನ್ನು ಕಾಣುವಾತ. ಹಿಂದಿ, ಮರಾಠಿ, ಕೆಟ್ಟ ಇಂಗ್ಲಿಷ್ ಬೆರೆಸಿದ ತಮಾಷೆಯ ಮಾತು. ಇಂಥ ಅವನಿಗೆ ತನ್ನ ತಂಟೆಗೆ ಬಂದರೆ ಸುಮ್ಮನೆ ಬಿಡದ ಖಳ ಸಿಗುತ್ತಾನೆ. ದಂಧಾಕೋರರಾದ ಖಳನ ತಮ್ಮಂದಿರು ಅಮಾಯಕ ಬಾಲಕಿಯ ಅತ್ಯಾಚಾರ ಮಾಡುವುದರಿಂದ ಸಿನಿಮಾಗೆ ಭಾವುಕ ತಿರುವು. ಮಿಕ್ಕಿದ್ದು ಹೋರಾಟ, ಎನ್ ಕೌಂಟರ್. ಚಿಂಗಿಪಿಂಗಿ ಆಡುತ್ತಿದ್ದ ನಾಯಕ ದಿಢೀರನೆ ಕಟ್ಟರ್ ಪೊಲೀಸ್ ಆಗಿಬಿಡುವುದರೊಂದಿಗೆ ಸಿಂಹ ಗರ್ಜಿಸುತ್ತದೆ. ಮೇಜುಗಳು, ಕುರ್ಚಿಗಳು, ಮೂಳೆಗಳು ಪುಡಿ ಪುಡಿ. ಕೊನೆಯಲ್ಲಿ ‘ಪಾನ್ ಪೀಡಾ’ ರೀತಿ ಅಜಯ್ ದೇವಗನ್ ಎಂಟ್ರಿ ಕೊಟ್ಟು, ಖಳ-ಖಳಸಖರನ್ನು ತದುಕುವುದರೊಂದಿಗೆ ‘ಥಾಲಿ’ ಸಂಪೂರ್ಣಂ.

ಕಡತಂದ ಕಥೆಗೆ ರೋಹಿತ್ ತೊಡಿಸಿರುವ ಉಡುಗೆ ಮಜವಾಗಿದೆ. ಯಾಕೆಂದರೆ, ಅವರಿಗೆ ರಣವೀರ್ ಸಿಂಗ್ ತರಹದ ಅತಿನಟ ಸಿಕ್ಕಿದ್ದಾರೆ. ತುಂಟತನವನ್ನು ಮುಖದ ಮೇಲೆಲ್ಲಾ ಕುಣಿಸುವ, ಹುರಿಗಟ್ಟಿದ್ದರೂ ದೇಹವನ್ನು ಇಷ್ಟ ಬಂದಂತೆ ಬಾಗಿ ಬಳುಕಿಸುವ ಅವರು, ತಮ್ಮ ‘ಎಕ್ಸ್ ಫ್ಯಾಕ್ಟರ್’ ಮೂಲಕ ತೆಳುವಾದ ಈ ಸಿನಿಮಾವನ್ನೂ ಮೇಲಕ್ಕೆತ್ತಿದ್ದಾರೆ. ಅವರ ಅಭಿನಯ ನೋಡಿದರೆ ಕಾರ್ಟೂನ್ ನೆಟ್ ವರ್ಕ್ ನೋಡುವಾಗ ಸಿಗುವಂಥದ್ದೇ ಕಚಗುಳಿ. ಅವರ ಎದುರು ಸಾರಾ ಅಲಿ ಖಾನ್ ಮಂಕು. ಸೋನು ಸೂದ್ ಈಗಲೂ ಪಕ್ಕಾ ಖಳನಟ. ಪ್ರಾಮಾಣಿಕತೆಯ ಚುಚ್ಚುಮದ್ದು ಕೊಡುವ ಹೆಡ್ ಕಾನ್ ಸ್ಟೆಬಲ್ ಆಗಿ ಆಶುತೋಷ್ ರಾಣಾ ಕಣ್ಣುಗಳು ಚೆನ್ನ.


ಸಿನಿಮಾ ಮುಗಿಯಿತು ಎಂದುಕೊಂಡು ಮೇಲೇಳುವಾಗ ರೋಹಿತ್ ಶೆಟ್ಟಿ ಇನ್ನೊಂದು ಕಿಟಕಿ ತೆರೆದಿಡುತ್ತಾರೆ. ಅದರಲ್ಲಿ ಅಕ್ಷಯ್ ಕುಮಾರ್. ‘ಮುಂದಿನ ವರ್ಷ ಸಿಂಗಂ ಬ್ರಾಂಡ್ ನ ಇನ್ನೊಂದು ಪ್ರಾಡಕ್ಟ್ ಹೊಡೆದಾಟದ ಅಭಿಮಾನಿಗಳಿಗೆ’ ಎಂಬ ಜಾಣತನದ ಪ್ರಕಟಣೆ.

ಅರ್ಥಾತ್ ಸಿಂಹದ ಹೊಡೆದಾಟ ಮುಂದುವರಿಯಲಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT