ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್‌’ಗೆ ಸಕ್ಕರೆ ಕಾರ್ಖಾನೆ ಹಗರಣದ ದುಡ್ಡು?

ಮಹಾರಾಷ್ಟ್ರದ ಪ್ರತಿಪಕ್ಷಗಳಿಂದ ಗಂಭೀರ ಆರೋಪ
Last Updated 29 ಡಿಸೆಂಬರ್ 2018, 18:50 IST
ಅಕ್ಷರ ಗಾತ್ರ

ಮುಂಬೈ:ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಜೀವನಾಧಾರಿತ ‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿನಿಮಾ ನಿರ್ಮಾಣಕ್ಕೆ ಸಕ್ಕರೆ ಕಾರ್ಖಾನೆ ಹಗರಣದ ದುಡ್ಡನ್ನು ಬಳಸಿಕೊಳ್ಳಲಾಗಿದೆ ಎಂದು ಮಹಾರಾಷ್ಟ್ರದ ಪ್ರತಿಪಕ್ಷಗಳು ಆರೋಪಿಸಿವೆ.

ನಿರ್ದೇಶಕ ವಿಜಯ ರತ್ನಾಕರ್‌ ಗುಟ್ಟೆ ಅವರ ತಂದೆರತ್ನಾಕರ್‌ ಗುಟ್ಟೆ ಅವರು ಸುಮಾರು ₹328 ಕೋಟಿ ಮೊತ್ತದ ಸಕ್ಕರೆ ಕಾರ್ಖಾನೆ ಹಗರಣದ ಆರೋಪ ಎದುರಿಸುತ್ತಿದ್ದಾರೆ.ರತ್ನಾಕರ್‌ ಗುಟ್ಟೆ ಒಡೆತನದ ‘ಗಂಗಾಖೇಡ್ ಶುಗರ್ ಆ್ಯಂಡ್ ಎನರ್ಜಿ ಪ್ರೈವೇಟ್ ಲಿಮಿಟೆಡ್‘ ಕಂಪನಿಯು ಆರು ಬ್ಯಾಂಕ್‌ಗಳಿಂದ ₹328 ಕೋಟಿ ಸಾಲ ಪಡೆಯಲುಪ್ರಭಾನಿ ಜಿಲ್ಲೆಯ 2,298 ರೈತರ ಹೆಸರನ್ನು ಬಳಸಿಕೊಂಡು ಅರ್ಜಿ ಸಲ್ಲಿಸಿತ್ತು. ಬಾಂಬೆ ಹೈಕೋರ್ಟ್‌ ಆದೇಶದ ನಂತರ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದರು. ಆ ಹಗರಣದ ದುಡ್ಡನ್ನು ಸಿನಿಮಾ ನಿರ್ಮಾಣಕ್ಕೂ ಬಳಸಿಕೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.

ಸಿನಿಮಾ ನಿರ್ಮಾಪಕರಿಗೂ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೂ ನಂಟಿರುವುದಾಗಿ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಆರೋಪಿಸಿದ್ದನ್ನೂ ವರದಿ ಉಲ್ಲೇಖಿಸಿದೆ. ‘ನಮ್ಮ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನಗಳಾಗುತ್ತಿವೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇಂತಹ ಪ್ರಯತ್ನಗಳು ಹೆಚ್ಚಾಗಿವೆ. ಹೀಗಿರುವಾಗ, ಹಗರಣದ ಬಗ್ಗೆ ಗಂಭೀರ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಬಗ್ಗೆ ಅನುಮಾನವಿದೆ’ ಎಂದು ಸಾವಂತ್ ಹೇಳಿದ್ದಾರೆ.

ರತ್ನಾಕರ್‌ ಗುಟ್ಟೆ
ರತ್ನಾಕರ್‌ ಗುಟ್ಟೆ

ಹಗರಣದಲ್ಲಿ ಬಿಜೆಪಿಯೂ ಭಾಗಿಯಾಗಿರುವ ಅನುಮಾನವಿದ್ದು, ಜಾರಿ ನಿರ್ದೇಶನಾಲಯ ತನಿಖೆ ನಡೆಸಬೇಕು ಎಂದು ಶರದ್ ಪವಾರ್ ನೇತೃತ್ವದ ಎನ್‌ಸಿಪಿಯೂ ಆಗ್ರಹಿಸಿತ್ತು.

ಆದರೆ, ಪ‍್ರತಿಪಕ್ಷಗಳ ಆರೋಪಗಳನ್ನು ರತ್ನಾಕರ್ ಗುಟ್ಟೆ ನಿರಾಕರಿಸಿದ್ದಾರೆ. ಮಗ ಸ್ವತಂತ್ರನಾಗಿದ್ದು ಪ್ರತಿಪಕ್ಷಗಳ ಆರೋಪ ರಾಜಕೀಯ ಪ್ರೇರಿತ ಎಂದು ಅವರು ಹೇಳಿದ್ದಾರೆ.ಈ ಮಧ್ಯೆ, ‘ಗುಟ್ಟೆ ಅವರಿಗೆ ನಮ್ಮ ಪಕ್ಷದ ಜತೆ ಸಂಬಂಧವಿಲ್ಲ. ಅವರು ಮೂಲತಃ ಎನ್‌ಸಿಪಿಯವರು’ ಎಂದು ಬಿಜೆಪಿ ವಕ್ತಾರ ಮಾಧವ್ ಬಂಢಾರಿ ಹೇಳಿದ್ದಾರೆ.

ರತ್ನಾಕರ್‌ ಗುಟ್ಟೆ ಅವರ ಸಕ್ಕರೆ ಕಾರ್ಖಾನೆ ಪಡೆದಿದೆ ಎನ್ನಲಾದ ಸಾಲದ ವಿವರ

* ಆಂಧ್ರಾ ಬ್ಯಾಂಕ್ – ₹39.17 ಕೋಟಿ

* ಯುಸಿಒ ಬ್ಯಾಂಕ್ – ₹47.78 ಕೋಟಿ

* ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ – ₹76.32 ಕೋಟಿ

* ಬ್ಯಾಂಕ್ ಆಫ್ ಇಂಡಿಯಾ – ₹77.59 ಕೋಟಿ

* ಸಿಂಡಿಕೇಟ್ ಬ್ಯಾಂಕ್ – ₹47.22 ಕೋಟಿ

* ರತ್ನಾಕರ್ ಬ್ಯಾಂಕ್ – ₹40.20 ಕೋಟಿ

₹5,400 ಕೋಟಿ ವಂಚನೆ ಆರೋಪ

2014ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿರತ್ನಾಕರ್‌ ಗುಟ್ಟೆ ಗಂಗಾಖೇಡ್‌ ಕ್ಷೇತ್ರದಿಂದ ಬಿಜೆಪಿ ಮಿತ್ರ ಪಕ್ಷ ರಾಷ್ಟ್ರೀಯ ಸಮಾಜ ಪಕ್ಷದ (ಆರ್‌ಎಸ್‌ಪಿ) ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಇವರ ವಿರುದ್ಧ ಸುಮಾರು ₹5,400 ಕೋಟಿ ವಂಚನೆ ಆರೋಪವೂ ಇದೆ.ರತ್ನಾಕರ್‌ ಅವರ ಕಂಪನಿಗಳು ಸುಮಾರು ₹5,400 ಕೋಟಿ ವಂಚನೆ ಎಸಗಿದ್ದಾರೆ ಎಂದುಎನ್‌ಸಿಪಿ ಮುಖಂಡ ಮಹಾರಾಷ್ಟ್ರ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಧನಂಜಯ್‌ ಮುಂಡೆ ಜುಲೈನಲ್ಲಿ ಆರೋಪಿಸಿದ್ದರು.

ನಿರ್ದೇಶಕರ ವಿರುದ್ಧತೆರಿಗೆ ವಂಚನೆ ಆರೋಪ

ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ರೂಪದಲ್ಲಿ ₹34 ಕೋಟಿ ವಂಚಿಸಿದ ಆರೋಪದ ಮೇಲೆ ಚಿತ್ರ ನಿರ್ದೇಶಕ ವಿಜಯ ಆಗಸ್ಟ್‌ನಲ್ಲಿ ಬಂಧನಕ್ಕೆ ಒಳಗಾಗಿದ್ದರು. ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯವು (ಡಿಜಿಜಿಎಸ್‌ಟಿಐ) ಮುಂಬೈನಲ್ಲಿ ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿತ್ತು. ಮುಂಬೈ ಕೋರ್ಟ್‌ ಆಗಸ್ಟ್‌ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು.

ಮನಮೋಹನ್ ಸಿಂಗ್‌ ರಾಜಕೀಯ ಜೀವನದ ಪ್ರಮುಖ ಘಟ್ಟಗಳನ್ನು ಒಳಗೊಂಡ ಪುಸ್ತಕವನ್ನು ಆಧರಿಸಿ ವಿಜಯ ರತ್ನಾಕರ್‌ ಗುಟ್ಟೆ ಸಿನಿಮಾ ನಿರ್ಮಿಸಿದ್ದಾರೆ. ಸಿನಿಮಾವು ಜನವರಿ 11ರಂದು ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ, ಸಿನಿಮಾಗೆ ಸಂಬಂಧಿಸಿ ರಾಷ್ಟ್ರೀಯ ಪಕ್ಷಗಳ ಪರ–ವಿರೋಧಗಳ ನಡುವೆ ಸಿನಿಮಾ ನಿರ್ದೇಶಕ ವಿಜಯ ರತ್ನಾಕರ್‌ ಗುಟ್ಟೆ ಹಿನ್ನೆಲೆಯೂ ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT