ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮನ ಮನೆ: ಅವಸರಕ್ಕಿಲ್ಲ ಅವಕಾಶ

Last Updated 8 ಮಾರ್ಚ್ 2019, 6:25 IST
ಅಕ್ಷರ ಗಾತ್ರ

ಚಿತ್ರ: ಅಮ್ಮನ ಮನೆ

ನಿರ್ದೇಶನ: ನಿಖಿಲ್ ಮಂಜೂ

ತಾರಾಗಣ: ರಾಘವೇಂದ್ರ ರಾಜ್‌ಕುಮಾರ್, ನಿಖಿಲ್ ಮಂಜೂ, ಮಾನಸಿ, ಶೀತಲ್

ನಿರ್ಮಾಣ: ಆತ್ಮಶ್ರೀ

**
‘ನಿಧಾನ’ಗತಿಗೆ ಒಂದು ವೈಶಿಷ್ಟ್ಯ ಇದೆ. ಅದು ಎಲ್ಲ ಕೆಲಸಗಳನ್ನೂ ಸಾವಧಾನವಾಗಿ, ಆಲೋಚಿಸಿ ಪೂರ್ಣಗೊಳಿಸುವಂತೆ ಮಾಡುತ್ತದೆ. ತಪ್ಪು ಮಾಡುವುದಕ್ಕೆ ಪೂರ್ಣ ಅವಕಾಶ ಕಲ್ಪಿಸುವ ‘ಅವಸರ’ಕ್ಕೆ ವಿರುದ್ಧ ಇದು. ಬದುಕೇ ಅವಸರ ಆಗಿರುವ ಹೊತ್ತಿನಲ್ಲಿ ನಿಧಾನವೆಂಬುದು ಎಲ್ಲರಿಗೂ ರುಚಿಸದಿರಬಹುದು – ಆದರೆ ತನ್ನ ಮಹತ್ವವನ್ನೇನೂ ಕಳೆದುಕೊಳ್ಳುವುದಿಲ್ಲ!

ರಾಘವೇಂದ್ರ ರಾಜ್‌ಕುಮಾರ್ ಅವರನ್ನು ದಶಕದ ನಂತರ ಸಿನಿತೆರೆಗೆ ಮರಳಿ ತಂದಿರುವ ಸಿನಿಮಾ ‘ಅಮ್ಮನ ಮನೆ’. ನಿಧಾನವೇ ಈ ಚಿತ್ರದುದ್ದಕ್ಕೂ ಕಂಡುಬರುವ ಸ್ಥಾಯಿ ಬಿಂದು.

ರಾಜೀವ ಹುಟ್ಟಿನಿಂದಲೇ ತುಸು ಅಂಗವೈಕಲ್ಯಕ್ಕೆ ಒಳಗಾದವ. ಆತನಿಗೆ ಪಟಪಟನೆ ಮಾತನಾಡಲು ಬಾರದು. ಮಾತು ತುಸು ನಿಧಾನ. ಹಾಗೆಯೇ, ಒಂದು ಕೈ ಮತ್ತು ಒಂದು ಕಾಲು ಅಷ್ಟೇನೂ ಸಲೀಸಾಗಿ ಕೆಲಸ ಮಾಡುವುದಿಲ್ಲ. ಇದರ ಪರಿಣಾಮ ಎಂಬಂತೆ ರಾಜೀವ ಕೆಲಸ ಮಾಡುವುದು ಕೂಡ ನಿಧಾನಗತಿಯಲ್ಲಿ.

ಇವನ ಸ್ಥಿತಿ ಕಂಡು ರೋಸಿಹೋಗುವ ಅಪ್ಪ, ಮನೆ ತೊರೆಯುತ್ತಾನೆ. ಅದಾದ ನಂತರ ರಾಜೀವನ ಜಗತ್ತು ಅಂದರೆ ಅವನ ಅಮ್ಮ ಮಾತ್ರ. ರಾಜೀವ ಬೆಳೆದ ನಿಂತು, ಶಾಲಾ ಶಿಕ್ಷಕನಾದ ನಂತರದ ಪಾತ್ರ ನಿಭಾಯಿಸಿರುವುದು ರಾಘವೇಂದ್ರ ರಾಜ್‌ಕುಮಾರ್‌. ದೈಹಿಕ ಮಿತಿಗಳನ್ನು ಹುಟ್ಟಿನಿಂದಲೇ ಪಡೆದುಕೊಂಡ ಬಂದ ರಾಜೀವ ಎಂಬ ಪಾತ್ರ ಬೆಳೆದು ನಿಂತ ನಂತರ ಏನೆಲ್ಲ ಕಷ್ಟಪಡಬೇಕಾಗಬಹುದೋ, ಅವನ್ನೆಲ್ಲ ಅನುಭವಿಸಿ ನಟಿಸಿದಂತಿದೆ ರಾಘವೇಂದ್ರ ರಾಜ್‌ಕುಮಾರ್.

ವೃದ್ಧ, ಕೈಲಾಗದ ತಾಯಿಯನ್ನು ನೋಡಿಕೊಳ್ಳುವ ವಿಚಾರದಲ್ಲಿ ಎರಡು ತಲೆಮಾರುಗಳ ನಡುವೆ ಬರಬಹುದಾದ ಸಂಘರ್ಷ ಕೂಡ ಈ ಚಿತ್ರದ ಕಥೆಯ ಭಾಗ. ಅದರ ಜೊತೆಯಲ್ಲೇ, ಗ್ರಾಹಕನೊಬ್ಬ ತನ್ನ ಹಕ್ಕುಗಳಿಗಾಗಿ ನ್ಯಾಯಾಲಯದ ಮೆಟ್ಟಿಲು ಏರುವುದು, ನ್ಯಾಯಾಲಯ ಆತನ ನೆರವಿಗೆ ಬರುವುದು ಕೂಡ ಸಿನಿಮಾದ ಉದ್ದಕ್ಕೂ ಸಾಗಿಬರುವ ಕಥೆ.

ರಾಜೀವನ ಜಗತ್ತಿನಲ್ಲಿ ಬರುವ ಪಾತ್ರಗಳು ಸಿಟ್ಟು ಮಾಡಿಕೊಳ್ಳುವುದು, ಖುಷಿಪಡುವುದು, ಇನ್ನೊಬ್ಬರ ಮೇಲೆ ಕೈಮಾಡುವುದು ಇದೆ. ಆದರೆ, ರಾಜೀವನ ಪಾತ್ರ ಮಾತ್ರ ಎಲ್ಲ (ಎರಡು ಸನ್ನಿವೇಶಗಳನ್ನು ಹೊರತುಪಡಿಸಿ) ಸಂದರ್ಭಗಳಲ್ಲೂ ಸಮಾಧಾನದಿಂದ ವರ್ತಿಸುವುದು ಚಿತ್ರ ವೀಕ್ಷಕರ ಗಮನಕ್ಕೆ ಬರುವ ಮುಖ್ಯ ಅಂಶ. ಜೀವನದಲ್ಲಿ ಕಳೆದುಕೊಳ್ಳುವುದಕ್ಕೂ, ಪಡೆದುಕೊಳ್ಳುವುದಕ್ಕೂ ಹೆಚ್ಚಿನ ಅರ್ಥವೇನೂ ಇಲ್ಲ ಎಂದು ಹೇಳಲು ರಾಜೀವ ಯತ್ನಿಸುತ್ತಿರಬಹುದೇ?

ತೀರಾ ಬಿಗಿಯಾದ ನಿರೂಪಣೆ, ಒಂದಿಷ್ಟು ಜೋಶ್, ಪಂಚಿಂಗ್‌ ಡೈಲಾಗ್‌ಗಳನ್ನು ಬಯಸಿ ಈ ಚಿತ್ರ ನೋಡಲು ಕುಳಿತರೆ ನಿರಾಸೆ ಎದುರಾಗಬಹುದು. ಆದರೆ, ನಿರ್ದಿಷ್ಟ ಸಂದೇಶ ನೀಡಲು ಮಾಡಿರುವ ಸಿನಿಮಾ ನೋಡಬೇಕೆಂದಿದ್ದರೆ ‘ಅಮ್ಮನ ಮನೆ’ಯ ಬಾಗಿಲು ಬಡಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT