ಮಂಗಳವಾರ, ಫೆಬ್ರವರಿ 7, 2023
25 °C

‘ಬನಾರಸ್‌’ ಸಿನಿಮಾ ವಿಮರ್ಶೆ: ಟೈಂ ಲೂಪ್‌ನಲ್ಲಿ ‘ಬನಾರಸ್‌’ ಲೋಕ

ಅಭಿಲಾಷ್‌ ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಸಿನಿಮಾ: ಬನಾರಸ್‌(ಕನ್ನಡ)

ನಿರ್ದೇಶನ: ಜಯತೀರ್ಥ

ನಿರ್ಮಾಪಕ: ತಿಲಕ್ ರಾಜ್ ಬಲ್ಲಾಳ್

ತಾರಾಗಣ: ಝೈದ್‌ ಖಾನ್‌, ಸೋನಲ್‌ ಮೊಂತೆರೋ, ಸುಜಯ್‌ ಶಾಸ್ತ್ರಿ, ದೇವರಾಜ್‌, ಅಚ್ಯುತ್‌ ಕುಮಾರ್‌, ಸ್ವಪ್ನ ರಾಜ್‌ ಮತ್ತಿತರರು

ಡಗ್‌ ಲೈಮನ್‌ ನಿರ್ದೇಶನದ ‘ಎಡ್ಜ್‌ ಆಫ್‌ ಟುಮಾರೋ’, ಕ್ರಿಸ್ಟೊಫರ್ ನೋಲನ್ ಅವರ ‘ಟೆನೆಟ್‌’, ಮಾರ್ವೆಲ್‌ನ ‘ಡಾಕ್ಟರ್‌ ಸ್ಟ್ರೇಂಜ್‌’, ಕನ್ನಡದ ‘ಲೂಸಿಯಾ’, ಇತ್ತೀಚೆಗಷ್ಟೇ ತೆರೆಕಂಡಿದ್ದ ತಮಿಳಿನ ‘ಮಾನಾಡು’ ಈ ಎಲ್ಲ ಸಿನಿಮಾಗಳು ಸುತ್ತುವುದು ‘ಟೈಂ ಟ್ರಾವೆಲ್‌’ ಹಾಗೂ ‘ಟೈಂ ಲೂಪ್‌’ ಎಂಬ ಸಂಕೀರ್ಣ ವಿಷಯದ ಸುತ್ತ. ಇಂತಹ ಕ್ಲಿಷ್ಟ ವಸ್ತುವನ್ನು ಆಯ್ದುಕೊಂಡೇ ನಿರ್ದೇಶಕ ಜಯತೀರ್ಥ ‘ಬನಾರಸ್‌’ನಲ್ಲೊಂದು ಸುತ್ತು ಹಾಕಿದ್ದಾರೆ.

ಕಥೆಯ ವಸ್ತುವಿನ ಆಯ್ಕೆ ವಿಚಾರದಲ್ಲಿ ತಮ್ಮ ಸಿನಿಪಯಣದಲ್ಲಿ ಜಯತೀರ್ಥ ಅವರು ಧೈರ್ಯದಿಂದ ಹೊಸ ಹೆಜ್ಜೆಯೊಂದನ್ನು ಇಟ್ಟಿದ್ದಾರೆ ಎನ್ನಬಹುದು. ಪ್ರೇಮಕಥೆಯೊಂದಿಗೆ ವಿಜ್ಞಾನವನ್ನು ಬೆರೆಸಿ, ಹಳೆಪಾಕಕ್ಕೆ ಹೊಸರುಚಿ ನೀಡುವ ಪ್ರಯತ್ನ ಇಲ್ಲಿದೆ. ಶ್ರೀಮಂತ ಮನೆಯ ಹುಡುಗ ಸಿದ್ಧಾರ್ಥ್‌ (ಝೈದ್‌ ಖಾನ್‌), ಧನಿ (ಸೋನಲ್‌ ಮೊಂತೆರೋ) ಎಂಬಾಕೆಯೆದುರು ಪ್ರತ್ಯಕ್ಷಗೊಂಡು, ಟೈಂ ಟ್ರಾವೆಲ್‌ ಮೂಲಕ ಭವಿಷ್ಯದಿಂದ ವರ್ತಮಾನಕ್ಕೆ ಬಂದ ನಿನ್ನ ಗಂಡ ಎನ್ನುತ್ತಾ ಆಕೆಯನ್ನು ನಂಬಿಸಲು ಪ್ರಯತ್ನಿಸುತ್ತಾನೆ. ಇಲ್ಲಿಂದ ಕಥೆ ಆರಂಭ. ಸಿದ್ಧಾರ್ಥನೇ ಟೈಂ ಟ್ರಾವೆಲ್‌ನಲ್ಲಿ ಸಿಲುಕಿಕೊಂಡಾಗ ಸಂಭವಿಸುವುದೇ ‘ಬನಾರಸ್‌’. 

ಚಿತ್ರದ ಮೊದಲಾರ್ಧ ಪ‍್ರೇಕ್ಷಕನ ತಾಳ್ಮೆ ಬಯಸುತ್ತದೆ. ಹಲವು ಪಾತ್ರಗಳು, ಸಂಭಾಷಣೆಗಳು ನಿರ್ಜೀವವಾಗಿವೆ. ಹೀಗಿದ್ದರೂ, ‘ಶಂಭು’ವಾಗಿ ಬರುವ ಸುಜಯ್‌ ಶಾಸ್ತ್ರಿ ಪ್ರೇಕ್ಷಕರನ್ನು ಹಿಡಿದಿಡುತ್ತಾರೆ. ಸುಜಯ್‌ ಅವರು ನಗಿಸುವ ಜೊತೆಗೆ ಕಣ್ಣೀರು ತರಿಸುವ ಜವಾಬ್ದಾರಿ ಹೊತ್ತು ತೆರೆಯಲ್ಲಿದ್ದಷ್ಟು ಹೊತ್ತು ‘ಡೆತ್‌ ಫೋಟೊಗ್ರಾಫರ್‌’ ಪಾತ್ರಕ್ಕೆ ಜೀವತುಂಬಿದ್ದಾರೆ. ‘ಕಂಜ್ಯಾಜುಲೇಷನ್‌ ಬ್ರದರ್‌’ ಎನ್ನುತ್ತಾ ಶಾಸಕ ಜಮೀರ್‌ ಅಹಮ್ಮದ್‌ ಅವರೂ ಧ್ವನಿಯಾಗಿ ಬಂದು ಪ್ರೇಕ್ಷಕರನ್ನೊಮ್ಮೆ ನಗಿಸುತ್ತಾರೆ! 

ದ್ವಿತೀಯಾರ್ಧ ಇಡೀ ಚಿತ್ರದ ಆಧಾರಸ್ತಂಭ. ನಿರ್ದೇಶಕರು ಇಟ್ಟ ಹೊಸ ಹೆಜ್ಜೆ ಎಡವದಂತೆ ಇದು ನೋಡಿಕೊಂಡಿದೆ. ಟೈಂ ಲೂಪ್‌ ಇಲ್ಲಿನ ಹೀರೊ. ಈ ದೃಶ್ಯಗಳು ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುತ್ತವೆ. ಮೊದಲಾರ್ಧದ ಹಲವು ಅನಗತ್ಯ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿದ್ದರೆ, ಈ ಟೈಂ ಲೂಪ್‌ನ ಜಟಿಲವಾದ ಸ್ಕ್ರೀನ್‌ಪ್ಲೇಯನ್ನು ಮತ್ತಷ್ಟು ಸೂಕ್ಷ್ಮವಾಗಿ ಹೆಣೆದು ಪ್ರೇಕ್ಷಕನನ್ನು ಸೀಟಿನಂಚಿನಲ್ಲಿ ಕುಳ್ಳರಿಸಬಹುದಿತ್ತು. ಈ ಟೈಂ ಲೂಪ್‌ ಸನ್ನಿವೇಶಗಳು ‘ಎಡ್ಜ್‌ ಆಫ್‌ ಟುಮಾರೋ’ ಸಿನಿಮಾದಲ್ಲಿನ ಚಿತ್ರಕಥೆಗೆ ಸಾಮ್ಯತೆ ಹೊಂದಿದ್ದು, ಸ್ಕ್ರೀನ್‌ಪ್ಲೇಯಲ್ಲಿ ಅಲ್ಲಿಯಷ್ಟು ಕಲಾತ್ಮಕತೆ ಇಲ್ಲಿ ಕಾಣಿಸುವುದಿಲ್ಲ. ಒಂದೊಳ್ಳೆ ಚಿತ್ರಕಥೆಗೆ, ಅನಗತ್ಯ ದೃಶ್ಯಗಳು ಮಾರಕವಾಗಿವೆ.

ಇಷ್ಟೆಲ್ಲದರ ನಡುವೆ ಝೈದ್‌ ಖಾನ್‌ ಅವರಿಗೆ ಚಿತ್ರರಂಗದಲ್ಲಿ ಭವಿಷ್ಯವಿದೆ ಎನ್ನುವುದಕ್ಕೆ ಸಾಕ್ಷ್ಯವಾಗಿ ಅವರ ಮೊದಲ ಚಿತ್ರ ಮೂಡಿಬಂದಿದೆ. ತಮ್ಮ ಮುಗ್ಧ ಮುಖ, ನಟನೆಯಿಂದ ಪ್ರೇಕ್ಷಕರಿಗೆ ಅವರು ಇಷ್ಟವಾಗುತ್ತಾರೆ. ಆದರೆ ನಾಯಕನ ಪಾತ್ರದ ಡಬ್ಬಿಂಗ್‌ನಲ್ಲಿರುವ ನ್ಯೂನತೆಗಳು ಅವರ ಪಾತ್ರದ ಮೇಲೆ ನಕಾರಾತ್ಮಕ ಪರಿಣಾಮ ಬೀರಿವೆ. ಸೋನಲ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅಚ್ಯುತ್‌ ಕುಮಾರ್‌ ಹಾಗೂ ಸ್ವಪ್ನ ರಾಜ್‌ ಜೋಡಿ ಇಲ್ಲಿ ಉಲ್ಲೇಖಾರ್ಹ.  ‘ಮಾಯ ಗಂಗೆ’ ಹಾಗೂ ‘ಬೆಳಕಿನ ಕವಿತೆ’ ಹಾಡುಗಳು ಕಿವಿಗೆ ಇಂಪು, ಕಣ್ಣಿಗೂ ತಂಪು. ಎರಡೂ ಹಾಡುಗಳು ಅದ್ಭುತ ದೃಶ್ಯಕಾವ್ಯ. ಬನಾರಸ್‌ ಪ್ರದೇಶವನ್ನು ತನ್ನೊಳಗೆ ಮೊದಲು ತುಂಬಿಕೊಂಡು ಪ್ರೇಕ್ಷಕರೆದುರಿಗೆ ತಂದಿಟ್ಟಿದ್ದಾರೆ ಸಿನಿಮಾಟೋಗ್ರಫರ್‌ ಅದ್ವೈತ ಗುರುಮೂರ್ತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು