ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ವಿಮರ್ಶೆ: ಭರವಸೆ ಮೂಡಿಸಿದ ಅರೆಭಾಷೆ ಸಿನಿಮಾ ‘ಕೇಸ್ ಪುಸ್ಕ’

Last Updated 11 ಮಾರ್ಚ್ 2022, 8:56 IST
ಅಕ್ಷರ ಗಾತ್ರ

ಮಾರ್ಚ್ 6ರಂದುಸುಳ್ಯದಲ್ಲಿ ಬಿಡುಗಡೆಗೊಂಡ ‘ಕೇಸ್‌ ಪುಸ್ಕ’ಸಿನಿಮಾ ಅರೆಭಾಷೆಗೆ ಮತ್ತು ಸಿನಿರಂಗಕ್ಕೆ ಒಂದು ಉತ್ತಮ ಕೊಡುಗೆ. ಕಲಾಮಾಯೆ ಫಿಲಂಸ್ ಸಂಸ್ಥೆಯ ಸಾರಥ್ಯದಲ್ಲಿ ನಿರ್ಮಾಣಗೊಂಡ ಈ ಸಿನಿಮಾವನ್ನು ಯುವ ನಿರ್ದೇಶಕ ಸುಧೀರ್ ಏನಕಲ್ ನಿರ್ದೇಶಿಸಿದ್ದಾರೆ.

ಕೇಸ್ ಪುಸ್ಕ ಶೀರ್ಷಿಕೆಯ ‘ಡಬ್ಬಲ್ ಗೇಮ್, ಸಿಂಗಲ್ ತೀರ್ಪು’ಟ್ಯಾಗ್ ಲೈನ್ ಹೊಂದಿರುವ ಸುಮಾರು ಒಂದೂ ಕಾಲು ಗಂಟೆಯ ಈ ಚಿತ್ರದ ಚಿತ್ರಣ ಬಲು ಸೊಗಸಾಗಿದೆ. ಸೀಮಿತ ಸಂಪನ್ಮೂಲಗಳಲ್ಲೇ ನಿರ್ಮಾಣವಾದ ಈ ಚಿತ್ರ ಒಂದು ಪರಿಪೂರ್ಣ ಚಿತ್ರವಾಗಿ ಮೂಡಿ ಬಂದಿದೆ. ಸುಳ್ಯ ಸುತ್ತುಮುತ್ತಲ ಪರಿಸರದಲ್ಲಿ ಚಿತ್ರೀಕರಣಗೊಂಡ ಚಿತ್ರಕ್ಕೆ ಪರಿಸರ ಮತ್ತು ಅದನ್ನು ಅಷ್ಟೇ ಚೆನ್ನಾಗಿ ಚಿತ್ರಿಸಿರುವುದು ಮತ್ತು ಸಂಕಲಿಸಿರುವುದು ಚಿತ್ರದ ಪ್ಲಸ್ ಪಾಯಿಂಟ್‌ಗಳಲ್ಲಿ ಒಂದು.

ದಕ್ಷಿಣ ಕನ್ನಡ ಮತ್ತು ಕೊಡಗು ಆಸುಪಾಸಿನಲ್ಲಿ ಪ್ರಚಲಿತದಲ್ಲಿರುವುದು ಅರೆಭಾಷೆ. ಚಿತ್ರದಲ್ಲಿ ಭಾಷೆಯನ್ನು ಚೆನ್ನಾಗಿ ದುಡಿಸಿಕೊಂಡಿರುವುದು ಚಿತ್ರದ ಹೈಲೈಟ್ ಆಗಿದೆ. ಈ ಹಿಂದೆ ಅರೆಭಾಷೆಯ ಕಿರುಚಿತ್ರಗಳು ನಿರ್ಮಾಣವಾಗಿದ್ದರೂ ದೊಡ್ಡ ಪರದೆಯ ದೊಡ್ಡ ಚಿತ್ರ ಇದೇ ಪ್ರಥಮ ಎನ್ನಬಹುದಾಗಿದೆ. ಸ್ಥಳೀಯ ಅಮೆಚೂರ್ ಕಲಾವಿದರನ್ನೇ ಬಳಸಿಕೊಂಡಿರುವುದು ಮತ್ತು ಪರಿಸರ ಮತ್ತು ಭಾಷಾ ಸಂಸ್ಕೃತಿ, ಸಂಪ್ರದಾಯದ ಸೊಗಡನ್ನು ಚಿತ್ರದಲ್ಲಿ ಕಟ್ಟಿಕೊಟ್ಟಿರುವುದು ವೀಕ್ಷಕರಿಗೆ ಚಿತ್ರವನ್ನು ಇನ್ನಷ್ಟು ಆಪ್ಯಾಯಮಾನವಾಗಿಸಿದೆ.

ಚಿತ್ರಕತೆಯ ಬಗ್ಗೆ ಹೇಳುವುದಾದರೆ ಜಮೀನುದಾರರ ಮನೆಯಲ್ಲಿ ಅಕ್ರಮ ಸಂಗ್ರಹದ ಆನೆದಂತ ಇರುತ್ತದೆ. ಇವರ ವಿರೋಧಿಗಳಿಗೆ ಈ ಬಗ್ಗೆ ತಿಳಿದಿರುತ್ತದೆ. ಮನೆಯವರು ಮನೆಗೆ ಬೀಗ ಹಾಕಿ ಹೊರಗಡೆ ಹೋಗಿದ್ದಾಗ ಕೆಲಸದಾಳುವಿನ ಖಚಿತ ಮಾಹಿತಿಯೊಂದಿಗೆ ವಿರೋಧಿಗಳು ದಂತವನ್ನು ಎಗರಿಸಿ ಇನ್ನೊಂದು ಕಡೆ ಬಚ್ಚಿಡುತ್ತಾರೆ. ಕಳ್ಳ ವ್ಯವಹಾರಗಳಲ್ಲಿ ಪಳಗಿದವರೊಂದಿಗೆ ಡೀಲ್ ಕುದುರಿಸಿ ಮಾರಾಟಕ್ಕೆ ಮುಂದಾಗುತ್ತಾರೆ. ಡೀಲ್ ಆಫರ್‌ನಂತೆ ಹೋದರೆ ತಮಗೆ ಪರ್ಸಂಟೇಜ್ ಕಡಿಮೆಯಾಗುತ್ತದೆ, ಬದಲಿಗೆ ನಾವೇ ಅದನ್ನು ಬಚ್ಚಿಟ್ಟ ಜಾಗದಿಂದ ಕದ್ದು ಮಾರಾಟಮಾಡಿದರೆ ತಮಗೆ ಹೆಚ್ಚು ದಕ್ಕುತ್ತದೆಂಬ ದುರಾಸೆಯಿಂದ ಇನ್ಯಾರದೋ ಸಹಾಯದಿಂದ ಅದನ್ನು ಯಾರಿಗೂ ತಿಳಿಯದಂತೆ ಬಚ್ಚಿಟ್ಟಲ್ಲಿಂದ ಹಾರಿಸಲು ಯತ್ನಿಸುತ್ತಾರೆ. ಮತ್ತು ದೊಡ್ಡ ಸ್ಮಗ್ಲರನ್ನು ಸಂಪರ್ಕಿಸಿ ಮಾರಾಟದ ಡೀಲ್ ಕುದುರಿಸುತ್ತಾರೆ. ಚಿತ್ರವು ಹಲವು ತಿರುವುಗಳನ್ನು ಪಡೆದುಕೊಂಡು ಕುತೂಲವನ್ನು ಕಾಯ್ದುಕೊಳ್ಳುವಲ್ಲಿ ಸಫಲವಾಗಿದೆ.
ಕೊನೆಗೆ ದಂತವನ್ನು ಯಾರು ಯಾರಿಗೆ ಮಾರುತ್ತಾರೆ ಮತ್ತು ಅದರ ಲಾಭ ಯಾರಿಗೆ ಸಿಗುತ್ತದೆ ಎಂಬುದು ಕುತೂಹಲದಾಯಕವಾಗಿದೆ ಮತ್ತು ಕ್ಲೈಮಾಕ್ಸ್ ಅನಿರೀಕ್ಷಿತ ತಿರುವು ಪಡೆಯುತ್ತದೆ ಮತ್ತು ಒಂದೊಳ್ಳೆ ಸಂದೇಶವನ್ನು ನೀಡುತ್ತದೆ. ಇದನ್ನು ತೆರೆಯ ಮೇಲೆಯೇ ನೋಡಿ ಆನಂದಿಸಬೇಕು.

ಚಿತ್ರದಲ್ಲಿ ಮನರಂಜನೆಗೆ ಮೋಸವಿಲ್ಲ. ಒಂದೂಕಾಲು ಗಂಟೆಯ ಸಿನಿಮಾ ಆದರೂ ಇದರಲ್ಲಿ ಕ್ರೌರ್ಯ, ಗಾಂಭೀರ್ಯ, ಹಾಸ್ಯ, ಶೃಂಗಾರ, ಕೋಪತಾಪ, ಸಿಟ್ಟು ಸೆಡವು, ಆಕ್ರೋಶ ಹೀಗೆ ನವರಸಗಳು ಮಿಳಿತವಾಗಿದೆ.

ಚಿತ್ರದ ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಸುಧೀರ್ ಏನೇಕಲ್ ಇವರದ್ದು. ಛಾಯಾಗ್ರಾಹಕರಾಗಿ ಯಕ್ಷಿತ್ ಸಿ. ಕಲ್ಲುಗುಂಡಿ, ಪುಷ್ಪರಾಜ್ ಏನೆಕಲ್, ಗೀತ ಸಂಗೀತ ಬಿ.ಎಸ್. ಕಾರಂತ್ ಇಂಚಕ ಮ್ಯೂಸಿಕಲ್ಸ್ ರಾಮಕುಂಜ, ಸಂಕಲನ ಗಿರೀಶ್ ಆಚಾರ್ಯ, ಜೀವನ್ ಕೆರೆಮೂಲೆ, ಗಾಯನ ಜಯಂತ್ ಮೆತ್ತಡ್ಕ ಇವರದ್ದು.

ಚಿತ್ರದಲ್ಲಿ ಕೆ. ಆರ್. ತೇಜಕುಮಾರ್ ಬಡ್ಡಡ್ಕ, ಸುಜಾತ ಗಣೇಶ್ ಸುಬ್ರಮಣ್ಯ, ರಾಮಚಂದ್ರ ಸುಬ್ರಮಣ್ಯ, ಪ್ರಸಾದ್ ಕಾಟೂರು, ಮಿಥುನ್ ಕುಮಾರ್ ಸೋನ, ಸುಶ್ಮಿತಾ ಮೋಹನ್ ಬೆಳ್ಳಿಪ್ಪಾಡಿ, ಜೀವನ್ ಕೆರೆಮೂಲೆ, ಯೋಗಿತಾ ಬಂಗಾರ್‌ಕೋಡಿ, ಅರ್ಪಿತಾ ಕೇನಡ್ಕ, ವಿಜಯ ಕುಮಾರ್ ದೇಂಗೋಡಿ, ಶಮಂತ್ ಕುದುರೆ ಮಜಲು, ಸೌಂದರ್ಯ ಮರ್ದಳ, ಹಿತೇಶ್ ಕಾರ್ಜ, ಅನನ್ಯ ಸುಬ್ರಮಣ್ಯ, ಚೇತನ್ ಗಬ್ಬಲಡ್ಕ, ದೀಕ್ಷಿತ್ ಪೀಚೆಮನ್, ಸುಜಿತ್ ಕಾಯರ, ಜೀವನ್ ಸಂಕಡ್ಕ, ಚರಣ್ ಸಂಕಡ್ಕ, ಮೋಕ್ಷಿತ್ ತಿಮ್ಮಯ್ಯ ಮಡಿಕೇರಿ ಇವರುಗಳು ಅಭಿನಯಿಸಿದ್ದಾರೆ. ರಾಧಿಕಾ ಪ್ರೀತಮ್ ಏನೆಕಲ್ ನಿರ್ವಹಣೆಯಲ್ಲಿ ಸಹಕರಿಸಿದ್ದಾರೆ.

-ಚಂದ್ರಾವತಿ ಬಡ್ಡಡ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT