ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Jailer Cinema Review: ರಜನಿ ಠುಸ್ ಪಟಾಕಿ

Published 10 ಆಗಸ್ಟ್ 2023, 11:28 IST
Last Updated 10 ಆಗಸ್ಟ್ 2023, 11:28 IST
ಅಕ್ಷರ ಗಾತ್ರ

ಚಿತ್ರ: ಜೈಲರ್ (ತಮಿಳಿನಿಂದ ಕನ್ನಡಕ್ಕೆ ಡಬ್ ಆದ ಆವೃತ್ತಿ)

ನಿರ್ಮಾಣ: ಸನ್ ಪಿಕ್ಚರ್ಸ್

ನಿರ್ದೇಶನ: ನೆಲ್ಸನ್

ತಾರಾಗಣ: ರಜನೀಕಾಂತ್, ವಿನಾಯಕನ್, ರಮ್ಯಾಕೃಷ್ಣ, ಶಿವರಾಜ್‌ಕುಮಾರ್, ಜಾಕಿ ಶ್ರಾಫ್, ಮೋಹನ್‌ಲಾಲ್, ಸುನಿಲ್.

ಕೈಗೆ ಬಂದರೆ ಕನ್ನಡಕ, ಎದುರಾಳಿಗೆ ನಡುಕ. ಮೈತುಂಬಾ ಡಿಯೋಡರೆಂಟ್‌ ಪೂಸಿಕೊಂಡು ಹೊರಬಿದ್ದರೆ ಶಸ್ತ್ರಾಸ್ತ್ರಗಳಿಗೆ ರಕ್ತತರ್ಪಣ ಖರೆ. ರಜನೀಕಾಂತ್ ಮಾತು ಕಡಿಮೆ, ಚಟುವಟಿಕೆ ಜಾಸ್ತಿ. ಅದಕ್ಕಿಂತ ಹೆಚ್ಚಾಗಿ ಹಿನ್ನೆಲೆ ಸಂಗೀತಕ್ಕೆ ಕೆಲಸವೋ ಕೆಲಸ.

ನಿರ್ದೇಶಕ ನೆಲ್ಸನ್ ವಿಡಿಯೋಗೇಮ್ ಪ್ರೇಮಿ ಇರಬಹುದು. ಹೀಗಾಗಿಯೇ ಅವರು ಏನೋ ಮಾಡಲು ಹೋಗಿ ಇನ್ನೇನೋ ಮಾಡುತ್ತಾರೆ. ಮಗನ ಕಳೆದುಕೊಂಡ ಒಂದು ಕಾಲದ ಜೈಲರ್ ಈ ಕಾಲದಲ್ಲೂ ಎಂಥ ಪಂಟರ್ ಎನ್ನುವುದು ಚಿತ್ರಕಥಾಹಂದರ. ರಜನೀಕಾಂತ್‌ ಸೂಪರ್‌ಸ್ಟಾರ್‌ ಮೆರುಗನ್ನು ತಿಕ್ಕುವ ಭರದಲ್ಲಿ ಚಿತ್ರಕಥೆಯ ಲಗಾಮನ್ನು ನಿರ್ದೇಶಕರು ಬಿಟ್ಟುಬಿಡುತ್ತಾರೆ. ಖಳರೆಲ್ಲ ಇದ್ದಕ್ಕಿದ್ದಹಾಗೆ ಬಫೂನುಗಳಾಗುತ್ತಾರೆ. ಇದನ್ನು ‘ಡಾರ್ಕ್ ಕಾಮಿಡಿ’ ಎಂದು ಜೀರ್ಣಿಸಿಕೊಳ್ಳಲೂ ಆಗದು.

ಚಿತ್ರದ ಪ್ರವೇಶಿಕೆ ಕುತೂಹಲ ಮೂಡಿಸುವಂತಿದೆ. ಮೊಮ್ಮಗನ ಜತೆ ತಣ್ಣಗೆ ಆಡುತ್ತಾ ಇರುವ ಅಜ್ಜ, ಅವನ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಮಗ, ಶಾಂತಿನಿವಾಸದಂತೆ ಭಾಸವಾಗುವ ಮನೆ... ಇವನ್ನೆಲ್ಲ ತೋರುವ ಕಥೆಗೆ ಥಟ್ಟನೆ ಒಂದು ತಿರುವು ದೊರೆಯುತ್ತದೆ. ಅಜ್ಜ, ಜೈಲರ್‌ ಆಗಿದ್ದಾಗಿನ ತನ್ನ ರೌದ್ರರೂಪ ತಾಳುತ್ತಾನೆ. ಮಗನ ಇಲ್ಲವಾಗಿಸಿದವರ ಸದೆಬಡಿಯುವ ಸಂಕಲ್ಪ. ತೆರೆ ಮೇಲೆಲ್ಲ ರಕ್ತದೋಕುಳಿ.

ಇದೊಂಥರ ಕಳ್ಳ–ಪೊಲೀಸ್ ಆಟ. ಅಲ್ಲಲ್ಲಿ ಮಜಾ, ಕಚಗುಳಿ ಇದ್ದರೂ ದ್ವಿತೀಯಾರ್ಧದಲ್ಲಿ ಕೇಸರೀಭಾತ್‌ನಲ್ಲಿ ಪದೇ ಪದೇ ಉಪ್ಪು ಸಿಕ್ಕಂತಾಗುತ್ತದೆ. ಪ್ರತಿಷ್ಠಿತ ದೇವಸ್ಥಾನವೊಂದರಿಂದ ಕಿರೀಟ ಕದಿಯುವ ಪ್ರಸಂಗವಂತೂ ಅತಿ ಬಾಲಿಶ.  

ರಜನೀಕಾಂತ್ ತಮ್ಮ ಸ್ಟೈಲಿಷ್‌ ಆದ ಆಂಗಿಕ ಚಲನೆಗಳನ್ನು ಆಗೀಗ ತೋರುತ್ತಿರುತ್ತಾರೆ. ಅವರು ಸುಮ್ಮನೆ ಕೂತಿದ್ದರೂ ಯಾರು ಯಾರೋ ಎಲ್ಲಿಂದಲೋ ಖಳರನ್ನು ಇಲ್ಲವಾಗಿಸುವ ತಂತ್ರ ಒಂದು ಮಟ್ಟಕ್ಕೆ ಸರಿ. ಆದರೆ, ಅದೇ ಪುನರಾವರ್ತಿತವಾದಾಗ ಸವಕಲೆನಿಸುತ್ತದೆ.

ಶಿವರಾಜ್‌ಕುಮಾರ್‌ ಸಣ್ಣ ಪಾತ್ರದಲ್ಲಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಜಾಕಿ ಶ್ರಾಫ್, ಮೋಹನ್‌ಲಾಲ್, ಮಕರಂದ್ ದೇಶಪಾಂಡೆ ಇವರೆಲ್ಲ ಚಿತ್ರದಲ್ಲಿ ಇದ್ದಾರಷ್ಟೆ. ನಿರ್ದೇಶಕರಿಗೆ ಅವರ ಪಾತ್ರಗಳನ್ನು ದುಡಿಸಿಕೊಳ್ಳಲು ಕೂಡ ಸಾಧ್ಯವಾಗಿಲ್ಲ. ತೆಲುಗಿನ ಹಾಸ್ಯನಟ ಸುನಿಲ್ ಪಾತ್ರಪೋಷಣೆ ಕಾರ್ಟೂನಿಷ್‌ ಆಗಿದೆ. ‘ಕಾವಾಲಯ್ಯ’ ಹಾಡು ಬಿಟ್ಟರೆ ತಮನ್ನಾ ಇರುವಿಕೆಗೆ ಏನೇನೂ ಅರ್ಥವಿಲ್ಲ. ಸ್ತ್ರೀ ಪಾತ್ರಗಳು ಸಿನಿಮಾದಲ್ಲಿ ಇರಬೇಕೆಂದು ಇವೆಯಷ್ಟೆ. ಸ್ವರ ಸಂಯೋಜಕ ಅನಿರುದ್ಧ್ ರವಿಚಂದರ್ ಹಾಗೂ ಛಾಯಾಚಿತ್ರಗ್ರಾಹಕ ವಿಜಯ್ ಕಾರ್ತಿಕ್ ಕಣ್ಣನ್ ಕೆಲಸಗಳ ರುಜು ಎದ್ದುಕಾಣುತ್ತದೆ.

ಚಿತ್ರಕಥೆಯಲ್ಲಿ ಸೇಡಿನ ಪ್ರಹಸನ ಹಾಗೂ ಅಂತ್ಯದಲ್ಲಿ ಒಂದು ಹೇರಿದಂತಹ ಸಸ್ಪೆನ್ಸ್ ಇದೆ. ಅದರ ಹೊರತಾಗಿ ಗಟ್ಟಿಯಾದ ಏನನ್ನೂ ಚಿತ್ರ ಧ್ವನಿಸುವುದಿಲ್ಲ. ಖಳನಾಯಕ ವಿನಾಯಕನ್ ಅಟ್ಟಹಾಸ, ವಿಲಕ್ಷಣ ವರ್ತನೆ ಕಾಡುತ್ತದಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT