ಬುಧವಾರ, ಫೆಬ್ರವರಿ 8, 2023
16 °C

ಸಲಗ ಚಿತ್ರ ವಿಮರ್ಶೆ: ತುದಿಯಿರದ ನೆತ್ತರ ನದಿ

ಪದ್ಮನಾಭ ಭಟ್‌ Updated:

ಅಕ್ಷರ ಗಾತ್ರ : | |

ಚಿತ್ರ: ಸಲಗ 

ನಿರ್ಮಾಣ: ಕೆ.ಪಿ. ಶ್ರೀಕಾಂತ್

ನಿರ್ದೇಶನ: ದುನಿಯಾ ವಿಜಯ್

ತಾರಾಗಣ: ದುನಿಯಾ ವಿಜಯ್, ಧನಂಜಯ್, ಶ್ರೀಧರ್, ಅಚ್ಯುತ್ ಕುಮಾರ್, ಚನ್ನಕೇಶವ, ಯಶ್‌ ಶೆಟ್ಟಿ, ಸಂಪತ್, ನೀನಾಸಂ ಅಶ್ವತ್ಥ್, ಸಂಜನಾ ಆನಂದ್

ಇದೊಂದು ರೀತಿ ಕಳ್ಳ ಪೊಲೀಸ್ ಆಟ. ಮೊದಲರ್ಧ ದುರುಳರ ಮೆರೆದಾಟ; ದ್ವಿತಿಯಾರ್ಧ ಪೊಲೀಸರ ಆಟ ಮತ್ತು ಕಳ್ಳಾಟ. ಕಥೆ ಇಲ್ಲಿ ನೆಪಕ್ಕೆ ಮಾತ್ರ; ‘ಕಥೆ ಮುಗಿಸುವುದೇ’ ಇದರ ಸೂತ್ರ.

ತಮ್ಮ ಮೊದಲ ನಿರ್ದೇಶನದಲ್ಲಿ ನಟ ದುನಿಯಾ ವಿಜಯ್‌ ತಮ್ಮ ನಟನೆಯ ಹಿಂದಿನೆಲ್ಲ ಸಿನಿಮಾಗಳಿಗಿಂತ ಸಾಕಷ್ಟು ಮುಂದಕ್ಕೆ ಹೋಗಿದ್ದಾರೆ. ಆದರೆ ಹಾಗೆ ಸಾಗಿದ ದಾರಿ ಹೇಗಿದೆಯೆಂದರೆ ಅಲ್ಲಿಂದ ತಿರುಗಿ ಬರಲು ಅವರು ನಡೆಸುವ ಪ್ರಯತ್ನಗಳೂ ಮಸುಕು ಎನಿಸುವಷ್ಟು!

ಆಯುಧಪೂಜೆಯ ದಿನ ಬಿಡುಗಡೆಯಾದ ‘ಸಲಗ‌’, ಪಾತಾಳಲೋಕದ ಸಕಲ ಆಯುಧಗಳನ್ನು, ಅವುಗಳಿಂದ ಸಾಧಿಸಬಹುದಾದ ಕ್ರೌರ್ಯದ ಪರಮಾವಧಿಯನ್ನೂ ಈರುಳ್ಳಿಯ ಹಾಗೆ ಬಿಡಿಸಿಡುತ್ತದೆ. ಒಂದು  ದೃಶ್ಯದಿಂದ ಇನ್ನೊಂದು ದೃಶ್ಯಕ್ಕೆ ಚೆಲ್ಲಾಡುವ ನೆತ್ತರು ಹೆಚ್ಚತ್ತಲೇ ಹೋಗುತ್ತದೆ. ಕೆಂಡ, ಸೂರಿ ಅಣ್ಣ, ಸಲಗ, ಸಾವಿತ್ರಿ ಹೀಗೆ ಹೆಸರುಗಳಷ್ಟೇ ಅಲ್ಲ, ಅವರ ಮುಖ ವರ್ತನೆ ಎಲ್ಲವೂ ವಿಕ್ಷಿಪ್ತವೇ. ಕೆಲವು ಕಡೆಗಳಲ್ಲಿ ತಮಿಳು ಸಿನಿಮಾಲೋಕದಿಂದ ಜಾರಿಬಿದ್ದಂತೆಯೂ, ಸೂರಿ ಸಿನಿಮಾಗಳಿಂದ ದಂಗೆಯೆದ್ದು ಧುಮುಕಿದಂತೆಯೂ ಕಾಣುವ ಪಾತ್ರಗಳು ಹಿಂಸೆಯನ್ನೂ ಕ್ರೌರ್ಯವನ್ನೂ ಮೆರೆಯುವ ರೀತಿ ನಿದ್ದೆಗೆಡಿಸುವಷ್ಟು ಬೀಭತ್ಸವಾಗಿದೆ. 

ಮೊದಲರ್ಧದ ಹಿಂಸೆಗೆ ‘ಸಕಾರಣ ನ್ಯಾಯ’ವೊದಗಿಸುವ ಪ್ರಯತ್ನ ದ್ವಿತೀಯಾರ್ಧದಲ್ಲಿದೆ. ‘ತೊಳ್ಕೊಳ್ಬೇಕಾಗಿರೋದು ಪಾದವನ್ನಲ್ಲ; ಪಾಪವನ್ನು’ ಎನ್ನುವ ಮಾತು ದ್ವಿತೀಯಾರ್ಧದ ಸೂತ್ರವಾಕ್ಯ. ಕತ್ತಲಲ್ಲಿರುವ ಪಾತಕಿಗಳನ್ನು ಬೆಳಕಿನಲ್ಲಿರುವ ವ್ಯವಸ್ಥೆ ಹೇಗೆ ಬೆಳೆಸುತ್ತದೆ, ಬಳಸಿಕೊಳ್ಳುತ್ತದೆ ಎಂಬುದನ್ನು ಕಾಣಿಸುವ ಪ್ರಯತ್ನವೂ ಇದೆ. ಅಷ್ಟೇ ಅಲ್ಲ, ಆ ತೆರೆಮರೆಯಾಟದಲ್ಲಿ ಬಲಿಯಾಗುವ ಅಮಾಯಕರ ಛಿದ್ರ ಜಗತ್ತನ್ನು ಕಾಣಿಸಬೇಕು ಎಂಬ ಹಂಬಲವೂ ನಿರ್ದೇಶಕರಿಗಿದೆ. ಆದರೆ ಮೊದಲರ್ಧದಲ್ಲಿ ಪ್ರೇಕ್ಷಕನ ಮನಸಲ್ಲಿ ಚೆಲ್ಲಿದ ರಕ್ತವನ್ನು ತೊಳೆಯುವುದು ಅಷ್ಟು ಸುಲಭವಲ್ಲ.

ಕೆಂಡನನ್ನು ಕೊಲ್ಲುವ ಮುನ್ನ 'ಬ್ಯಾಟ್ಸ್‌ಮನ್‌'ಗಳು ಉಣ್ಣುವ ಅನ್ನ, ಛಿದ್ರಗೊಂಡ ದೇಹದ ಪೋಸ್ಟ್‌ ಮಾರ್ಟಂ ನೋಡುತ್ತ ಎಸಿಪಿ ಸಾಮ್ರಾಟ್‌ ಉಣ್ಣುವ ಅನ್ನ, ರೌಡಿ ಮಗಳು ಎಂಬ ಹಣೆಪಟ್ಟಿ ಹೊತ್ತುಕೊಳ್ಳಲಾರದೆ ಅವಮಾನದಿಂದ ಸಾಯುವ ಬಾಲಕಿಯ ಡಬ್ಬಿಯಲ್ಲಿ ಅರ್ಧ ತಿಂದುಬಿಟ್ಟ ಅನ್ನ – ಈ ಮೂರು ಇಮೇಜ್‌ಗಳನ್ನು ‘ಸಲಗ’ನ ಜಗತ್ತಿನ ಮೂರು ಕೇಂದ್ರಗಳಾಗಿ ನೋಡಬಹುದು. 

ಬಿಲ್ಡಪ್ಪುಗಳನ್ನು ಉಳಿಸಿಕೊಂಡೂ ವಿಜಯ್‌, ಸಹನಟರಿಗೆ ಸಾಕಷ್ಟು ‘ಸ್ಕ್ರೀನ್‌ಸ್ಪೇಸ್‌’ ಬಿಟ್ಟುಕೊಟ್ಟಿದ್ದಾರೆ. ತೆರೆಯ ಮೇಲೆ ಬರುವ ಒಂದೊಂದು ಪಾತ್ರಗಳೂ ಬೇರೆ ಬೇರೆ ರೀತಿಯಲ್ಲಿ ನಿಮ್ಮ ಮನಸ್ಸಿಗೆ ತಮ್ಮ ಗುರುತಿನ ಚೂರಿಯನ್ನು ಚುಚ್ಚಿಯೇ ಹೋಗುತ್ತವೆ. ಅಚ್ಯುತ್‌ ಕುಮಾರ್ ಅವರಂಥ ನಟನ ಜೊತೆಗೆ ಶ್ರೀಧರ್ ಎಂಬ ಹೊಸ ಪ್ರತಿಭೆಯೂ ಉಜ್ವಲಗೊಳ್ಳಲು ವಿಜಯ್ ಪಕ್ಕ ನಿಂತು ಜಾಗ ಮಾಡಿಕೊಟ್ಟಿದ್ದಾರೆ. ಆದರೆ ನಾಯಕಿ ಸಂಜನಾ ಮಾತ್ರ ಕಷ್ಟಪಟ್ಟು ಬಂದು ಮುಖವನ್ನೊಮ್ಮೆ ತೋರಿಸಿ ಮಾಯವಾಗಿಬಿಡುತ್ತಾರೆ. ರೌಡಿಗಳ ಮಚ್ಚಿನ ಹೊಡೆತ, ಪೊಲೀಸರ ಗುಂಡಿನ ಮೊರೆತ ಮತ್ತು ಮಾಸ್ತಿ ಅವರ ಸಂಭಾಷಣೆಯ ಹರಿತ ಈ ಮೂರೂ ಎಲ್ಲ ಗಡಿರೇಖೆಗಳನ್ನು ಚಿಂದಿಯೆಬ್ಬಿಸಿ ತ್ರಿಕೋನ ಸ್ಪರ್ಧೆಗೆ ಬಿದ್ದಿವೆ. ಒಂದನ್ನಿನ್ನೊಂದು ಮೀರಿಸುವ ಈ ಆಟದಲ್ಲಿ ಗನ್ನು, ಮಚ್ಚಿಗಿಂತ ಪೆನ್ನಿನಿಂದ ಹೊರಟ ಮಾತಿನ ಗುಂಡೇ ಮೇಲುಗೈ ಸಾಧಿಸಿದಂತಿದೆ. ನೆತ್ತರ ವಾಸನೆಗೆ ಜಾನಪದದ ಕಂಪು ಬೆರೆಸುವ ಪ್ರಯತ್ನವನ್ನು ಚರಣ್ ರಾಜ್ ಮಾಡಿದ್ದಾರೆ. ಶಿವ ಸೇನಾ ಕ್ಯಾಮೆರಾ ರೌಡಿಗಳ ಮಚ್ಚಿನಷ್ಟೇ ಜೋರಾಗಿ ಚಲಿಸಿದೆ.

ಕೊನೆಯಲ್ಲಿ ವಿಶೇಷ ಸೂಚನೆಯೊಂದಿದೆ: ಈ ಚಿತ್ರವನ್ನು ನೋಡಿಬಂದ ತಕ್ಷಣ ಊಟ ಮಾಡಬೇಡಿ; ತಿನ್ನುವ ಅನ್ನ ಕೆಂಪಾಗಿ ಕಾಣಿಸುತ್ತದೆ. ನೀರು ಕುಡಿಯಬೇಡಿ; ಬಟ್ಟಲಲ್ಲಿನ ಜಲ ನೆತ್ತರ ವಾಸನೆ ಪೂಸುತ್ತದೆ. ನಿದ್ದೆ ಮಾಡಬೇಡಿ; ದುಃಸ್ವಪ್ನ ಬೆಚ್ಚಿಬೀಳಿಸುತ್ತದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು