ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ನೋಡಿದ ಸಿನಿಮಾ | ತುರುಕಿದ ಸರಕಿನ ನೀರಸ ಅನುಭವ

Published 5 ಆಗಸ್ಟ್ 2023, 0:00 IST
Last Updated 5 ಆಗಸ್ಟ್ 2023, 0:00 IST
ಅಕ್ಷರ ಗಾತ್ರ

ವಿನಾಯಕ ಕೆ.ಎಸ್.

ಚಿತ್ರ: ಶೀಲ (ಮಲಯಾಳಂ ಮೂಲದಿಂದ ಡಬ್‌ ಆದದ್ದು)

ನಿರ್ಮಾಣ: ಡಿ.ಎಂ.ಪಿಳ್ಳೈ

ನಿರ್ದೇಶನ: ಬಾಲು ನಾರಾಯಣನ್

ತಾರಾಗಣ: ರಾಗಿಣಿ, ಶೋಭರಾಜ್, ಅವಿನಾಶ್, ಚಿತ್ರಾ ಶೆಣೈ ಮತ್ತಿರರು

‘ಶೀಲ’ ರೆಸಾರ್ಟ್‌ ಮಾಲಕಿ. ಕೇರಳದಲ್ಲಿ ಅಪ್ಪ ಮಾಡಿಟ್ಟಿರುವ ರೆಸಾರ್ಟ್‌ ಮಾರಬೇಕೆಂದು ಈಕೆ ಬೆಂಗಳೂರಿನಿಂದ ಕೇರಳಕ್ಕೆ ತೆರಳುತ್ತಾಳೆ ಎಂಬಲ್ಲಿಂದ ಕಥೆ ಪ್ರಾರಂಭವಾಗುತ್ತದೆ. ಕೇರಳದ ಟೀ ಎಸ್ಟೇಟ್‌ನ ಸುಂದರ ದೃಶ್ಯಗಳೊಂದಿಗೆ ಛಾಯಾಗ್ರಾಹಕ ಅರುಣ್‌ ಮೊದಲ ಫ್ರೇಮ್‌ನಿಂದಲೇ ಸಿನಿಮಾವನ್ನು ಚೆಂದವಾಗಿಸುತ್ತಾರೆ. ಛಾಯಾಗ್ರಹಣ ಮತ್ತು ಅದಕ್ಕೆ ತಕ್ಕ ಹಿನ್ನೆಲೆ ಸಂಗೀತ ಎರಡೂ ಸಿನಿಮಾದುದ್ದಕ್ಕೂ ಆಪ್ತವೆನಿಸುತ್ತವೆ. 

ಮಲಯಾಳಂನಲ್ಲಿ ಚಿತ್ರೀಕರಣಗೊಂಡು ಕನ್ನಡಕ್ಕೆ ಡಬ್‌ ಆದ ಸಿನಿಮಾ ಇದು. ಮೊದಲ ದೃಶ್ಯದಲ್ಲಿಯೇ ಡಬ್ಬಿಂಗ್‌ ತೀರ ಕಳಪೆಯಾಗಿದೆ ಎಂಬ ಅನುಭವವಾಗುತ್ತದೆ. ರಾಗಿಣಿ ಆಡುವ ಮಾತಿಗೂ ಅವರ ಮುಖದ ಭಾವಕ್ಕೂ ತಾಳೆಯೇ ಆಗುವುದಿಲ್ಲ. ರಾಗಿಣಿ ಹೊರತಾಗಿ ಪ್ರಮುಖ ಪಾತ್ರಧಾರಿಗಳೆಲ್ಲ ಮಲಯಾಳಂನವರು. ಹೀಗಾಗಿ ಅವರ ಹಾವಭಾವಕ್ಕೂ ಆಡುವ ಮಾತಿಗೂ ಎಷ್ಟೋ ಕಡೆ ಸಂಬಂಧವಿಲ್ಲ ಅನ್ನಿಸುತ್ತದೆ. ತುಂಬ ಕಡೆ ಸಿನಿಮಾವನ್ನು ಶೋಭರಾಜ್‌, ಅವಿನಾಶ್‌, ಚಿತ್ರಾ ಶೆಣೈ ಅತಿಥಿ ಪಾತ್ರಧಾರಿಗಳಂತೆ ಆಗೊಮ್ಮೆ, ಈಗೊಮ್ಮೆ ಬರುತ್ತಾರೆ.

ಶೀಲ ಆಗಿ ರಾಗಿಣಿ ಅಭಿನಯಕ್ಕೆ ಹಲವು ಆಯಾಮಗಳಿವೆ. ದುಃಖದ ಸನ್ನಿವೇಶಗಳಲ್ಲಿ, ಅಸಹಾಯಕತೆ ಬಿಂಬಿಸುವ ದೃಶ್ಯಗಳಲ್ಲಿ ಅವರ ಅಭಿನಯ ಇನ್ನಷ್ಟು ಉತ್ತಮವಾಗಬಹುದಿತ್ತು. ಬಡ್ಡಿಗೆ ಸಾಲ ನೀಡುವ ಮೀಟರ್‌ ಮಂಜುನಾಥ್‌ ಪಾತ್ರದಲ್ಲಿ ಶೋಭರಾಜ್‌ ಕಾಣಿಸಿಕೊಂಡಿದ್ದಾರೆ. ಸಿಕ್ಕಿರುವ ಸ್ವಲ್ಪ ಅವಧಿಯಲ್ಲಿಯೇ ಖಡಕ್‌ ಆಗಿ ನಟಿಸಿದ್ದಾರೆ. ಮುಖ್ಯ ಖಳನಾಯಕ ಜಾನ್‌ ಆಗಿ ಕಾಣಿಸಿಕೊಂಡಿರುವ ಮಲಯಾಳಂನ ಮಹೇಶ್‌ ನೆನಪಿನಲ್ಲಿ ಉಳಿಯುವಂತಹ ನಟನೆ ಮಾಡಿದ್ದಾರೆ. ಪೊಲೀಸ್‌ ಕಮಿಷನರ್‌ ಆಗಿ ಅವಿನಾಶ್‌, ಶೀಲಳ ತಾಯಿಯಾಗಿ ಚಿತ್ರಾ ಶೆಣೈ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. 

ಸಾಲ ಮಾಡಿಕೊಂಡ ಶೀಲ ಕೇರಳದಲ್ಲಿನ ರೆಸಾರ್ಟ್‌ ಮಾರಲು ಹೋಗುತ್ತಾಳೆ. ದಾರಿಯಲ್ಲಿ ಕಾರಿಗೆ ಆಟೊ ಅಡ್ಡಬಂದು ಸಣ್ಣ ಜಗಳವಾಗುತ್ತದೆ. ಆಕೆ ರೆಸಾರ್ಟ್‌ ತಲುಪಿದ ನಂತರವೂ ಸ್ವಲ್ಪ ಹೊತ್ತು ಕಥೆ ಕುತೂಹಲಕಾರಿಯಾಗಿಯೇ ಇದೆ. ಕುತೂಹಲ, ಭಯ ಮೂಡಿಸುವ ಫ್ರೇಮ್‌ಗಳನ್ನು ಛಾಯಾಗ್ರಾಹಕ ಅರುಣ್‌ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರದ ಮೊದಲಾರ್ಧದಲ್ಲಿ ಬರುವ ಹಾಡು ಉತ್ತಮವಾಗಿದ್ದು ಮಲಯಾಳಂನಲ್ಲಿಯೇ ಕೇಳಿದ್ದರೆ ಹಿತ ಎನ್ನಿಸುವ ಭಾವ ಮೂಡುತ್ತದೆ. 

ಸ್ಥಳೀಯ ರಾಜಕಾರಣಿ ಜಾನ್‌ ಮತ್ತು ಸಂಗಡಿಗರು ಶೀಲ ಇರುವ ರೆಸಾರ್ಟ್‌ಗೆ ಬಂದ ನಂತರ ಕಥೆ ದಿಕ್ಕು, ದೆಸೆಯಿಲ್ಲದೆ ಸಾಗುತ್ತದೆ. ಶೀಲಳನ್ನು ಪೊಲೀಸ್‌ ಅಧಿಕಾರಿಯೇ ಅತ್ಯಾಚಾರ ಮಾಡುವುದು, ಆಕೆಯ ಬ್ಯಾಗ್‌ನಲ್ಲಿ ಡ್ರಗ್ಸ್‌ ಸಿಗುವುದು, ತನ್ನದಲ್ಲದ ತಪ್ಪಿನಿಂದ ಬ್ಯಾಗ್‌ನೊಳಗೆ ಡ್ರಗ್ಸ್‌ ಸೇರಿದೆ ಎನ್ನುವುದು...ಒಂದಷ್ಟು ವಿಷಯಗಳನ್ನು ಬಲವಂತವಾಗಿ ತುರುಕಿ ಕಥೆ ನೀರಸವಾಗಿಬಿಡುತ್ತದೆ.

ಮೊದಲಾರ್ಧದಲ್ಲಿ ನಡೆದ ಘಟನೆಗಳಿಗೆ ಅಸಲಿ ಕಾರಣವೇನೆಂದು ಹುಡುಕುವ ಯತ್ನ ದ್ವಿತೀಯಾರ್ಧದಲ್ಲಿ ನಡೆಯುತ್ತದೆ. ಆದರೆ ಮೊದಲಾರ್ಧದ ಕಥೆಯಲ್ಲಿಯೇ ಲಾಜಿಕ್‌ ಇಲ್ಲದೆ, ಸರಿಯಾದ ಕಾರಣಗಳಿಲ್ಲದೆ ಕಥೆ ಹಳಿ ತಪ್ಪಿ, ದ್ವಿತಿಯಾರ್ಧವೂ ಸಪ್ಪೆ ಎನ್ನಿಸುತ್ತದೆ. ಒಂದು ಗಟ್ಟಿಯಾದ ಎಳೆಯೇ ಇಲ್ಲದೆ ಯಾವುದೋ ಒಂದಷ್ಟು ಘಟನೆಗಳನ್ನು ಹೇಳಲು, ಯಾರನ್ನೋ ನಿರಪರಾಧಿಗಳೆಂದು ಸಾಬೀತುಪಡಿಸಲು ಹೆಣ್ಣು, ಶೀಲ, ಡ್ರಗ್ಸ್‌ ಎಂಬಿತ್ಯಾದಿ ಅಸ್ತ್ರಗಳನ್ನು ಬಳಸಿಕೊಂಡು ತೆರೆಯ ಮೇಲೆ ತಂದಂತೆ ಭಾಸವಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT