ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿ ಕಾಶ್ಮೀರ್‌ ಫೈಲ್ಸ್‌ ವಿಮರ್ಶೆ: ಕ್ರೌರ್ಯದ ವಿಜೃಂಭಣೆ, ವಿಷಾದದ ನಿಟ್ಟುಸಿರು..!

Last Updated 15 ಮಾರ್ಚ್ 2022, 11:08 IST
ಅಕ್ಷರ ಗಾತ್ರ

ಇತಿಹಾಸದ ದಾಖಲೆಆಧರಿತ ಸಾಕ್ಷ್ಯಚಿತ್ರವೆನ್ನಿ, ಪರ–ವಿರೋಧದ ಕೂಗುಗಳಾಚೆಗೆ ನಿಂತು ಕಾಣುವುದಾದರೆ, ಸರ್ಕಾರಿ ದಾಖಲೆಗಳಾಚೆಗಿನ ವರದಿ ಎಂದು ನೋಡುವುದಾದರೆ, ಕೊನೇ ಪಕ್ಷ ಒಂದು ಸಿನಿಮಾ ಎಂದಷ್ಟೇ ಸಮಚಿತ್ತದಿಂದ ನೋಡುವುದಾದರೂ ಸರಿಯೇ. 1990ರಲ್ಲಿ ಹೀಗಾಗಿತ್ತು... ಎನ್ನುವುದನ್ನು ಭೀಕರವಾಗಿ ತೋರಿಸಿ ಇನ್ನೂ ಹಲವು ಸಶೇಷಗಳ ಸಹಿತ ಕಾಡುವುದೇ ‘ದಿ ಕಾಶ್ಮೀರ್‌ ಫೈಲ್ಸ್‌’.

1990ರ ಕಾಶ್ಮೀರಿ ಪಂಡಿತರ ನರಮೇಧಕ್ಕೆ ಕಾರಣರಾದ ಶಕ್ತಿಗಳನ್ನಷ್ಟೇ ನೇರವಾಗಿ ಅಪರಾಧಿಗಳು ಎಂದು ನೋಡೋಣವೇ? ಅದಕ್ಕೆ ಮೌನ ಸಮ್ಮತಿ ನೀಡಿದ ನಮ್ಮ ವ್ಯವಸ್ಥೆಯೂ (ಪಕ್ಷಾತೀತವಾಗಿ) ಅಷ್ಟೇ ಹೊಣೆಗಾರ ಅಲ್ಲವೇ ಎಂಬ ಪ್ರಶ್ನೆಯೂ ಕಾಡುತ್ತದೆ. ದೇಶದ ಬಗೆಹರಿಯದ ಹಲವಾರು ವಿವಾದಗಳಂತೆಯೇ ಇದನ್ನೂ ಜೀವಂತವಾಗಿಟ್ಟು ಲಾಭ ಪಡೆಯಲು ಎಲ್ಲರೂ ‘ಪ್ರಾಮಾಣಿಕ ಪ್ರಯತ್ನ’ ಮಾಡಿದವರಲ್ಲವೇ ಎಂಬ ಪ್ರಶ್ನೆಯೂ ಇಲ್ಲಿದೆ. ಅಂದಿನ ಪ್ರಶ್ನೆಗಳಿಗೆ ಈ ಚಿತ್ರದ ಉಲ್ಲೇಖ ಇರಿಸಿ ‘ಉತ್ತರಿಸಲು’ ಹೋದರೆ ಮತ್ತೊಂದು ಮೂಲಭೂತವಾದದ ಚಕ್ರ ಉರುಳಬಹುದು. ಆ ಉತ್ತರದ ಗೊಡವೇ ಬೇಡ. ಕೊನೆಗೆ ಒಂದು ವಿಷಾದದ ಮೌನದೊಂದಿಗೆ ಪ್ರೇಕ್ಷಕ ಚಿತ್ರಮಂದಿರದಿಂದ ಹೊರ ಬರುತ್ತಾನೆ.

ಯಾರ ಸಿದ್ಧಾಂತಗಳು ಏನೇ ಇರಲಿ, ಅವುಗಳಿಗೆ ಕೊನೆಗೂ ಬಲಿಯಾಗುವವರು ಸಾಮಾನ್ಯರಲ್ಲಿ ಸಾಮಾನ್ಯರು. ಈ ಚಿತ್ರದಲ್ಲಿ ಶ್ರೀಸಾಮಾನ್ಯರು ಅಂದರೆ ಪಂಡಿತ ಸಮುದಾಯದವರು. ಕ್ರೌರ್ಯಕ್ಕೆ ಬಲಿಯಾಗುವವರಲ್ಲಿ ಬಹುಸಂಖ್ಯಾತರು ಪಂಡಿತ ಸಮುದಾಯದವರೇ. ಆದರೆ ಕೃತಿಯ ತೀವ್ರತೆಯನ್ನು ಹೆಚ್ಚಿಸಲು ಬಲಿಯಾದವರು ಹಿಂದೂಗಳು ಎಂದು ಅಲ್ಲಲ್ಲಿ ವಿಶಾಲ ‘ಕ್ಯಾನ್ವಾಸ್‌’ನಲ್ಲಿ ಹೇಳಲಾಗಿದೆ.

90ರ ಕಾಲಘಟ್ಟದ ಪತ್ರಿಕಾ ವರದಿಗಳು, ಸಾವುನೋವಿನ ಮೌಖಿಕ ಕಥನಗಳು, ಒಂದಿಷ್ಟು ಚರ್ಚೆಗಳ ಆಧಾರದಲ್ಲಿ ಈ ಫೈಲುಗಳು ಸಿದ್ಧವಾಗಿವೆ. ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರ ಅಧ್ಯಯನ, ನಿರೂಪಣೆಯಲ್ಲಿ ನಿರ್ದಾಕ್ಷಿಣ್ಯ, ಧೈರ್ಯದ ಕೃತಿಯಾಗಿ ಈ ಚಿತ್ರ ಎದ್ದು ನಿಂತಿದೆ.

ಮತಾಂತರಗೊಳ್ಳಿ, ಸಾಯಿರಿ ಇಲ್ಲವೇ ಓಡಿಹೋಗಿ ಈ ಘೋಷವಾಕ್ಯವನ್ನೇ ಪದೇ ಪದೇ ಹೇಳುವ ಮೂಲಭೂತವಾದಿಗಳು ಕಾಶ್ಮೀರವನ್ನು ಧರ್ಮದ ನೆಲೆಯಲ್ಲೇ ಬದಲಾಯಿಸಲು ಹೊರಟ ಕ್ರೌರ್ಯ ತೆರೆಯ ಮೇಲೆ ವಿಜೃಂಭಿಸಿದೆ. ಹಿಂಸೆಯ ತೀವ್ರತೆಯನ್ನು ಕಡಿಮೆ ಮಾಡಬಹುದಿತ್ತೇನೋ.

ಕೈಕಟ್ಟಿಕೊಳ್ಳಲೇಬೇಕಾದ ಸ್ಥಿತಿಯಲ್ಲಿ ಅಧಿಕಾರಿ ವರ್ಗ (ಪುನೀತ್‌ ಇಸ್ಸರ್‌, ಮಿಥುನ್‌ ಚಕ್ರವರ್ತಿ), ಬದುಕುವ ಅನಿವಾರ್ಯತೆಯಲ್ಲಿ ಸತ್ಯ ಹೇಳಲಾಗದ ಮಾಧ್ಯಮ (ಅತುಲ್‌ ಶ್ರೀವಾಸ್ತವ), ಅಧಿಕಾರ ದಾಹದಿಂದ ಹಿಂಸೆಗೆ ಮೌನ ಸಮ್ಮತಿ ನೀಡುವ ಕಾಶ್ಮೀರದ ರಾಜಕಾರಣ, ಉರಿಯುವ ಬೆಂಕಿಗೆ ತುಪ್ಪದಂತೆ ವಿದ್ಯಾರ್ಥಿಗಳ (ದರ್ಶನ್‌ ಕುಮಾರ್‌) ತಲೆಗೆ ಕಾಶ್ಮೀರದ ಕುರಿತು ತೀವ್ರ ಚಿಂತನೆ ತುರುಕುವ ವಿಶ್ವವಿದ್ಯಾಲಯದ ಪ್ರೊಫೆಸರ್‌ ರಾಧಿಕಾ ಮೆನನ್‌ (ಪಲ್ಲವಿ ಜೋಷಿ) ಹೀಗೆ ಒಂದು ಹಿಂಸೆ 30 ವರ್ಷಗಳ ಕಾಲ ಕಾವು ಉಳಿಸಿಕೊಂಡು ಹಾಗೇ ಉಳಿಯಲು ಇವೆಲ್ಲವೂ ಕಾರಣಗಳು ಎಂದೆನಿಸುತ್ತದೆ. ಕಾಶ್ಮೀರವನ್ನು ಇನ್ನೂ ಪ್ರತ್ಯೇಕವಾಗಿಯೇ ಉಳಿಸಿಕೊಳ್ಳುವ ಪ್ರಯತ್ನಗಳ ಗುಪ್ತಗಾಮಿನಿಯನ್ನು ಈ ಪಾತ್ರಗಳ ಮೂಲಕ ಢಾಳಾಗಿ ಕಾಣಿಸಿದ್ದಾರೆ ನಿರ್ದೇಶಕರು. ಪಂಡಿತರ ದನಿಯಾಗಿ ಚಿತ್ರದ ಕೊನೆಯವರೆಗೂ ಉಳಿಯುವ ಪುಷ್ಕರನಾಥ ಪಂಡಿತ್‌ (ಅನುಪಮ್‌ ಖೇರ್‌) ಇಡೀ ಘಟನೆಯ ಕಥನಕಾರರಾಗಿ ಕಾಡುತ್ತಾರೆ.

ಕಥೆ ಎರಡು ಪಥಗಳಲ್ಲಿ ಸಾಗುತ್ತದೆ. ಒಂದು 1990ರ ಆಸುಪಾಸಿನ ಕಾಲಘಟ್ಟ. ಇನ್ನೊಂದು 2016ರ ನಂತರದ ಕಾಲಘಟ್ಟ. ಸಂವಿಧಾನದ ಪರಿಚ್ಛೇದ 370ಅನ್ನು ತೆಗೆದುಹಾಕಿದ ಬಳಿಕವೂ ಅಲ್ಲಲ್ಲಿ ಪಂಡಿತರಿಗೆ ಹಾಗೇ ಉಳಿದಿರುವ ಭಯದ ಮನಃಸ್ಥಿತಿ... ಹೀಗೆ ಹಿನ್ನೆಲೆ ಮುನ್ನೆಲೆಯನ್ನು ಪ್ರತ್ಯೇಕ ಬ್ಲಾಕ್‌ಗಳಲ್ಲಿ ಎಲ್ಲಿಯೂ ಏಕತಾನತೆ ಅನಿಸದಂತೆ ಕೊಂಡೊಯ್ಯಲಾಗಿದೆ. ಅಬ್ಬರದ ಸಂಗೀತವಿಲ್ಲದ ಒಂಟಿ ದನಿಯ ಹಾಡುಗಳು ಕಾಡುತ್ತವೆ. ದೃಶ್ಯಗಳಂತೂ ದಯನೀಯತೆಯನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT