ಚಿತ್ರ: ಕ್ಷೇತ್ರಪತಿ (ಕನ್ನಡ)
ನಿರ್ದೇಶನ: ಶ್ರೀಕಾಂತ್ ಕಟಗಿ
ನಿರ್ಮಾಣ: ಆಶ್ರಗ ಕ್ರಿಯೇಷನ್ಸ್
ತಾರಾಗಣ: ನವೀನ್ ಶಂಕರ್, ಅರ್ಚನಾ ಜೋಯಿಸ್, ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ನಾಟ್ಯ ರಂಗ ಮತ್ತಿತರರು
ರೈತರನ್ನು, ಕೃಷಿ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಹಲವು ಸಿನಿಮಾಗಳು ತೆರೆಕಂಡಿವೆ. ಈ ಪ್ರಭೇದದ ಸಿನಿಮಾಗಳಿಗೆ ಕಮರ್ಷಿಯಲ್ ಚೌಕಟ್ಟು ಹಾಕುವುದು ಕಷ್ಟಸಾಧ್ಯ. ಹೀಗಿದ್ದರೂ ಇಂತಹ ಒಂದು ಪ್ರಯತ್ನ ‘ಕ್ಷೇತ್ರಪತಿ’ಯಲ್ಲಿದೆ. ನಾಯಕ ನವೀನ್ ಶಂಕರ್ ಸಮರ್ಥ ನಟನೆಯ ಹೊರತಾಗಿಯೂ ಚಿತ್ರದ ಕಥೆ ಕ್ಲೈಮ್ಯಾಕ್ಸ್ ಹಂತ ತಲುಪುವ ಹೊತ್ತಿಗೆ ದುರ್ಬಲವಾಗಿಬಿಟ್ಟಿದೆ.
ಚಿತ್ರದ ಒನ್‌ಲೈನ್ ಬಹಳ ಸರಳ. ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಮಾಡುತ್ತಿರುವ ರೈತನ ಮಗ ಬಸವ(ನವೀನ್ ಶಂಕರ್) ತನ್ನ ತಂದೆಯ ಆತ್ಮಹತ್ಯೆ ಸುದ್ದಿ ತಿಳಿದು ಊರಿಗೆ ಮರಳುತ್ತಾನೆ. ವಾಸ್ತವದಂತೆ ಈ ಘಟನೆಗೂ ‘ಸಾಲ’ವೇ ಖಳ. ತಂದೆ ಮಾಡಿಟ್ಟ ಸಾಲದ ಬಿಸಿಯನ್ನು ಸಾಹುಕಾರ ವೀರಭದ್ರ(ರಾಹುಲ್ ಐನಾಪುರ್) ಬಸವನ ಕುಟುಂಬಕ್ಕೆ ನೀಡುತ್ತಾನೆ. ಈ ವೀರಭದ್ರ ಆಡಳಿತದಲ್ಲಿರುವ ರಾಜಕೀಯ ಪಕ್ಷದ ಜಿಲ್ಲಾ ಅಧ್ಯಕ್ಷ. ಈ ಕಷ್ಟ ತನ್ನ ತಂದೆಗಷ್ಟೇ ಅಲ್ಲವೆಂದು ಎಂಜಿನಿಯರಿಂಗ್ ಓದನ್ನು ಅರ್ಧದಲ್ಲೇ ಬಿಟ್ಟು, ಊರಿನಲ್ಲಿದ್ದುಕೊಂಡೇ ಸಾಹುಕಾರನನ್ನು ಎದುರು ಹಾಕಿಕೊಂಡು ಒಕ್ಕಲುತನ ಮಾಡಿ ಮುನ್ನಡೆಯುವ ನಿರ್ಧಾರಕ್ಕೆ ಬರುತ್ತಾನೆ ಬಸವ. ಮಾರುಕಟ್ಟೆಯಲ್ಲಿ ತನ್ನ ಬೆಳೆಗೆ ಸೂಕ್ತ ಬೆಲೆ ದೊರೆಯದೇ ಇದ್ದಾಗ ತನ್ನ ಜ್ಞಾನವನ್ನು ಬಳಸಿಕೊಂಡು ಎಪಿಎಂಸಿ ಎದುರಿಗೇ ತಾತ್ಕಾಲಿಕ ಅಂಗಡಿ ತೆರೆದು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಾನೆ. ಇತರರಿಗೂ ಮಾದರಿಯಾಗುತ್ತದೆ ಈ ನಡೆ. ಈ ರೀತಿ ಬೆಳೆದ ಬಸವನನ್ನು ವ್ಯವಸ್ಥೆಯು ವ್ಯವಸ್ಥಿತವಾಗಿ ಹತ್ತಿಕ್ಕುವ ತಂತ್ರಗಳೇ ಚಿತ್ರದ ಮುಂದಿನ ಕಥೆ.
ಚಿತ್ರದ ಕಥೆಗೆ ಮೊದಲಾರ್ಧದಲ್ಲಿ ಗಟ್ಟಿಯಾದ ಅಡಿಪಾಯ ಹಾಕಿಕೊಟ್ಟಿದ್ದಾರೆ ನಿರ್ದೇಶಕ ಶ್ರೀಕಾಂತ್. ಅದರಂತೆ ತಮ್ಮೊಳಗಿನ ನಟನೆಯ ಸಾಮರ್ಥ್ಯವನ್ನೂ ನವೀನ್ ಇಲ್ಲಿ ತೋರ್ಪಡಿಸಿದ್ದಾರೆ. ಅವರದ್ದು ಅದ್ಭುತ ನಟನೆ. ಆಂಬುಲೆನ್ಸ್ ಎದುರು ಓಡುವ ದೃಶ್ಯವೊಂದೇ ಸಾಕು, ನವೀನ್ ಅವರ ನಟನೆಗೆ ಅಂಕ ನೀಡಲು. ತಂದೆಯ ಶವದೆದುರು ಮೌನಿಯಾದಾಗ, ಅದುಮಿಟ್ಟ ದುಃಖ ಸ್ಫೋಟಗೊಂಡಾಗ, ಸಾಹುಕಾರನೆದುರು ಸವಾಲೊಡ್ಡಿ ಕುಳಿತುಕೊಂಡಾಗ, ಸಾಹಸ ದೃಶ್ಯಗಳಲ್ಲಿ ನವೀನ್ ‘ಬಸವ’ನಾಗಿಯೇ ಜೀವಿಸಿದ್ದಾರೆ. ಇಡೀ ಕಥೆಯನ್ನು ಮೊದಲಾರ್ಧ ಅವರೇ ಹೊತ್ತು ಸಾಗುತ್ತಾರೆ.
ಇಡೀ ಸಿನಿಮಾ ಸಂಭಾಷಣೆಯ ಮೇಲೆಯೇ ನಿಂತಿದೆ. ಸಿನಿಮಾದ ಅವಧಿ ಲಂಬಿಸಿರುವುದೂ ಇದೇ ಕಾರಣಕ್ಕೆ. ದ್ವಿತೀಯಾರ್ಧದಲ್ಲಿ ಕಥೆ ಪಕ್ವವಾಗಿಲ್ಲ. ಹೀಗಾಗಿ ಹಲವು ದೃಶ್ಯಗಳು ಅತಿ ಸಿನಿಮೀಯವೆನಿಸುತ್ತವೆ ಜೊತೆಗೆ ಚಿತ್ರಕಥೆಯನ್ನು ಹಿಂಜಿದಂತೆ ಭಾಸವಾಗುತ್ತದೆ. ರೈತನೊಬ್ಬನ ಮನೆಯ ಮೇಲೆ ಐಟಿ ದಾಳಿಯಾಗುತ್ತದೆ, ವಿಭಿನ್ನವಾದ ಕ್ರಾಂತಿ ಮೂಲಕ ಪರಿಹಾರ ನೀಡುವ ಪ್ರಯತ್ನವನ್ನು ನಾಯಕ ಮಾಡುತ್ತಾನೆ. ಸೂಕ್ತ ಎಳೆ ಇಲ್ಲದ ಕಾರಣ ಕಥೆ ಪೇಲವವಾಗುತ್ತಾ ಸಾಗುತ್ತದೆ. ಕೋರ್ಟ್ ದೃಶ್ಯವಂತೂ ನೀರಸ. ಹೀಗಾಗಿ ಕ್ಲೈಮ್ಯಾಕ್ಸ್ ಹಂತ ತಲುಪುತ್ತಾ ಸಿನಿಮಾ ಎಡವುತ್ತದೆ.
ಎಲ್ಲರಿಗೂ ತಿಳಿದಿರುವ ವಿಷಯಗಳಾದ ರೈತರ ಆರ್ಥಿಕ ಸ್ಥಿತಿ, ವ್ಯವಸ್ಥೆಯ ಕುತಂತ್ರಗಳು, ಕಾರ್ಪೊರೇಟ್ ಕಂಪನಿಗಳ ಹಿಡಿತ, ದಲ್ಲಾಳಿಗಳ ಆಟ, ರೈತರಿಗೆ ಸಿಗುವ ಬಿಡಿಗಾಸು ಹೀಗೆ ಹಲವು ವಿಷಯಗಳನ್ನು ಪ್ರಸ್ತಾಪಿಸುತ್ತಾ ಸಾಲ ಮನ್ನಾ, ಬೆಂಬಲ ಬೆಲೆ ಘೋಷಣೆ ಒಂದೇ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ; ಬೆಳೆ ಬೆಳೆಯುವ ಮುನ್ನವೇ ಲಾಭದಾಯಕ ಬೆಲೆ ನಿಗದಿ ಎನ್ನುವ ಕಾನೂನು ಬರಬೇಕು ಎನ್ನುವ ಗಟ್ಟಿಯಾದ ಸಂದೇಶವನ್ನು ಸಿನಿಮಾ ಸಾರುತ್ತದೆ.
ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಈ ಸಿನಿಮಾದಲ್ಲಿ ಸವಿಯಬಹುದು. ಅಲ್ಲಿನ ವಾತಾವರಣವನ್ನು ಶಿವಸಾಗರ್ ಚೆನ್ನಾಗಿ ಸೆರೆಹಿಡಿದಿದ್ದಾರೆ. ಖಳನಾಗಿ ರಾಹುಲ್ ಐನಾಪುರ್ ಅಂಕ ಗಿಟ್ಟಿಸುತ್ತಾರೆ. ಅಚ್ಯುತ್ ಕುಮಾರ್, ಅರ್ಚನಾ ಜೋಯಿಸ್, ಕೃಷ್ಣ ಹೆಬ್ಬಾಳೆ ಪಾತ್ರಕ್ಕೆ ತೂಕವಿಲ್ಲ. ರವಿ ಬಸ್ರೂರ್ ಹಳ್ಳಿಯ ಫೈಟಿಂಗ್‌ಗೂ ಡಿಶುಂ ಡಿಶುಂ ತೂರಿಸಿದ್ದಾರೆ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.