ಮಂಗಳವಾರ, ಫೆಬ್ರವರಿ 18, 2020
29 °C

ನಾನು ಮತ್ತು ಗುಂಡ ಸಿನಿಮಾ ವಿಮರ್ಶೆ: ನೆನಪಲ್ಲಿ ಉಳಿಯುವ ಗುಂಡ

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

Prajavani

ಚಿತ್ರ: ನಾನು ಮತ್ತು ಗುಂಡ ಸಿನಿಮಾ ವಿಮರ್ಶೆ

ನಿರ್ಮಾಪಕ: ರಘು ಹಾಸನ

ನಿರ್ದೇಶನ: ಶ್ರೀನಿವಾಸ್ ತಿಮ್ಮಯ್ಯ

ತಾರಾಗಣ: ಶಿವರಾಜ್ ಕೆ.ಆರ್.ಪೇಟೆ, ಸಂಯುಕ್ತಾ ಹೊರನಾಡು, ಗೋವಿಂದೇಗೌಡ

ಮನುಷ್ಯ ಮತ್ತು ನಾಯಿ ನಡುವಣ ಬಾಂಧವ್ಯವನ್ನು ವಿವರಿಸುವ ಕಥೆಗಳು ಹತ್ತೆಂಟಿವೆ. ತನ್ನ ಒಡೆಯನ ಮೇಲಿನ ಪ್ರೀತಿಯನ್ನು ನಾಯಿ ತೋರುವ ಬಗೆಯ ಬಗ್ಗೆ ಬಹಳಷ್ಟು ವಿವರಣೆಗಳೂ ಇವೆ. ಅಂತಹ ಬಾಂಧವ್ಯದ ಒಂದು ಕಥೆ, ಪ್ರೀತಿಯ ಒಂದು ವಿವರಣೆ ‘ನಾನು ಮತ್ತು ಗುಂಡ’ ಸಿನಿಮಾ.

ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ ಈ ಚಿತ್ರದ ಕಥೆಯಲ್ಲಿ ‘ನಾನು’ ಹಾಗೂ ‘ಗುಂಡ’ ಎನ್ನುವ ಎರಡು ಬಿಂದುಗಳಿವೆ. ‘ನಾನು’ ಎಂಬುದು ಕಥೆಯ ಮುಖ್ಯ ಪಾತ್ರಧಾರಿ ಶಂಕರ (ಶಿವರಾಜ್ ಕೆ.ಆರ್.ಪೇಟೆ). ‘ಗುಂಡ’ನೆಂದರೆ ಕಥೆಯ ಇನ್ನೊಂದು ಮುಖ್ಯ ಪಾತ್ರಧಾರಿ ನಾಯಿ. ಇಡೀ ಕಥೆ ಸುತ್ತುವುದು ಈ ಎರಡು ಬಿಂದುಗಳ ಸುತ್ತ.

ಚಿತ್ರ ಆರಂಭವಾಗುವುದು ಶಂಕರನ ವ್ಯಕ್ತಿತ್ವ ಹಾಗೂ ಆತನ ಜಗತ್ತನ್ನು ಪರಿಚಯಿಸುವ ಮೂಲಕ. ಸಿನಿಮಾ ಶುರುವಾದ ತುಸು ಹೊತ್ತಿನಲ್ಲೇ ಗುಂಡ, ಶಂಕರನಿಗೆ ಸಿಗುತ್ತಾನೆ. ಹೇಳಿಕೊಳ್ಳುವಂಥ ಅಸಾಮಾನ್ಯ ವ್ಯಕ್ತಿತ್ವವನ್ನೇನೂ ಹೊಂದಿರದ ಶಂಕರ, ಗುಂಡನ ಜೊತೆ ಆತ್ಮೀಯ ನಂಟು ಬೆಳೆಸಿಕೊಳ್ಳುತ್ತಾನೆ – ಆ ನಾಯಿಯನ್ನೇ ತನ್ನ ಮಗ ಎಂದು ಭಾವಿಸುವಷ್ಟು.

ಆರಂಭದ ಒಂದೆರಡು ದ್ವಂದ್ವಾರ್ಥದ ಸಂಭಾಷಣೆಗಳು ಸಿನಿಮಾ ಓಟಕ್ಕೆ ಪೂರಕವಾಗಿಲ್ಲ. ಆದರೆ, ಚಿತ್ರವು ತಮಾಷೆ ಮತ್ತು ಪ್ರೀತಿಯ ಹಳಿಗೆ ಬಂದ ನಂತರ ವೀಕ್ಷಣೆಗೆ ಅಡಚಣೆ ಉಂಟುಮಾಡುವ ಅಂಶಗಳು ಕಾಣುವುದಿಲ್ಲ. ನಾಯಿಯ ಜೊತೆಗಿನ ಅಭಿನಯದ ಬಂಡಿಯನ್ನು ಕೃತಕವಾಗಿಸದೆ ಎಳೆದಿರುವುದು ಶಿವರಾಜ್ ಅವರ ಕೌಶಲಕ್ಕೆ ಸಾಕ್ಷಿ.

ಶಂಕರ ಮತ್ತು ಗುಂಡನ ನಂಟಿಗೆ ಒಂದಿಷ್ಟು ಸಿನಿಮೀಯ ತಿರುವುಗಳನ್ನು ನೀಡಲಾಗಿದೆ. ಆ ತಿರುವುಗಳ ಭಾಗವಾಗಿ ಶಂಕರನ ಪತ್ನಿಯು ಗುಂಡನ ಮೇಲೆ ಸಿಟ್ಟಾಗುವ, ಗುಂಡ ಒಂದು ಬೆಳಿಗ್ಗೆ ಕಣ್ಮರೆಯಾಗುವ ಸನ್ನಿವೇಶಗಳು ಇವೆ. ಶಂಕರ ಮತ್ತು ಗುಂಡನ ನಡುವಿನ ಪ್ರೀತಿಯ ತೀವ್ರತೆ ಏನು ಎಂಬುದನ್ನು ವೀಕ್ಷಕರಿಗೆ ಪರಿಣಾಮಕಾರಿಯಾಗಿ ತಿಳಿಸಿರುವುದು ನಿರ್ದೇಶಕರ ಹೆಚ್ಚುಗಾರಿಕೆ.

ಹಾಸ್ಯ–ತಮಾಷೆಯ ಬಂಡಿಯ ಮೇಲೆ ಸಾಗುತ್ತಿದ್ದ ಕಥೆಯು ಚಿತ್ರಕ್ಕೆ ಸಿನಿಮೀಯ ತಿರುವು ದೊರೆತ ನಂತರ ದೃಶ್ಯಗಳು ತೀರಾ ಭಾವುಕವಾಗುತ್ತವೆ. ಖುಷಿಯ ಹಳಿಯ ಮೇಲೆ ಸಾಗುತ್ತಿದ್ದ ಚಿತ್ರಕ್ಕೆ ಭಾವುಕ ತಿರುವು ನೀಡುವುದು ಕಥೆಗೆ ಅಂತ್ಯ ಹಾಡಲು ಅನಿವಾರ್ಯ ಎನ್ನಬಹುದಾದರೂ, ಅದು ವೀಕ್ಷಕರನ್ನು ತಬ್ಬಿಬ್ಬುಗೊಳಿಸಬಹುದು.

ಶಂಕರನ ಪತ್ನಿಯ ಪಾತ್ರದಲ್ಲಿ ಸಂಯುಕ್ತಾ ಹೊರನಾಡು ಕಾಣಿಸಿಕೊಂಡಿದ್ದಾರೆ. ಶಂಕರನ ಆಪ್ತ ಸ್ನೇಹಿತನ ಪಾತ್ರದಲ್ಲಿ ಗೋವಿಂದೇಗೌಡ ನಟಿಸಿದ್ದಾರೆ. ಇಬ್ಬರದೂ ನೆನಪಿನಲ್ಲಿ ಉಳಿಯುವ ನಟನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು