ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರತ್ನ ಸಿನಿಮಾ ವಿಮರ್ಶೆ: ವಿಭಿನ್ನ ಗುರಿಯ ನಿಗೂಢ ಪಯಣ

Last Updated 14 ಫೆಬ್ರುವರಿ 2020, 12:13 IST
ಅಕ್ಷರ ಗಾತ್ರ

ಚಿತ್ರ: ನವರತ್ನ
ನಿರ್ದೇಶನ: ಪ್ರತಾಪ್‌ರಾಜ್
ನಿರ್ಮಾಪಕ: ಚಂದ್ರಶೇಖರ್ ಸಿ.ಪಿ
ತಾರಾಗಣ: ಪ್ರತಾಪ್‌ರಾಜ್, ಮೋಕ್ಷಾ ಕುಶಾಲ್, ಅಮಿತ್

ಸಸ್ಪೆನ್ಸ್‌, ಆ್ಯಕ್ಷನ್ಥ್ರಿ, ಥ್ರಿಲ್ಲರ್ ಕಥಾಹಂದರದ ‘ನವರತ್ನ’ ಸಿನಿಮಾಗೆ ಹಾಸ್ಯದ ಹದ ಬೆರೆಸಿ, ತೆರೆ ಮೇಲೆ ತಂದಿದ್ದಾರೆ ನಿರ್ದೇಶಕ ಹಾಗೂ ಚಿತ್ರದ ನಾಯಕ ನಟರೂ ಆಗಿರುವ ಪ್ರತಾಪ್ ರಾಜ್. ಕಾಡಿನಲ್ಲಿ ಸಾಗುವ ಕಥೆಯ ಹಾದಿ ತಪ್ಪದಂತೆ ಹಿಡಿದಿಟ್ಟುಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ನಾಯಕ–ನಾಯಕಿಯರಿಬ್ಬರ ಪಯಣದ ದಿಕ್ಕು ಒಂದೇ ಆದರೂ, ಗುರಿ ಮಾತ್ರ ಬೇರೆ. ಅವರಿಬ್ಬರ ಹಾದಿ ದಟ್ಟಾರಣ್ಯದ ‘ರತ್ನವನ’. ಆ ಜಾಗಕ್ಕೆ ಹೋದವರು ವಾಪಸ್ ಬರುವುದಿಲ್ಲ ಎಂಬ ಪ್ರತೀತಿ. ಆದರೂ, ಸಾವು–ಬದುಕಿನ ನಡುವೆ ಸೆಣಸುತ್ತಿರುವ ತಂದೆಯನ್ನು ಉಳಿಸಿಕೊಳ್ಳಲು, ಅದೇ ಸ್ಥಳದಲ್ಲಿರುವ ಶಿವಲಿಂಗಕ್ಕೆ ನವರತ್ನದ ಹಾರ ಹಾಕಲು ನಾಯಕಿ ಬರುತ್ತಾಳೆ.

ಈ ಪ್ರದೇಶಕ್ಕೆ ಬಂದು ಕಣ್ಮರೆಯಾದವರ ಪ್ರಕರಣದ ಬೆನ್ನು ಹತ್ತಿ ಬರುವ ನಾಯಕ, ಇಲ್ಲಿ ’ಅಂಡರ್ ಕವರ್’ ಪೊಲೀಸ್ ಅಧಿಕಾರಿ. ಕಾನನದಲ್ಲಿ ನಡೆಯುವ ಈ ಇಬ್ಬರ ಎರಡು ತಾಸು ಹದಿನೆಂಟು ನಿಮಿಷದ ಪಯಣ ಎಲ್ಲೂ ಬೋರ್ ಎನಿಸದಂತೆ ಮಾಡುವುದು ಅಮಿತ್ ಹಾಸ್ಯ. ಸಸ್ಪೆನ್ಸ್ ಹಾದಿಯಲ್ಲಿ ಸಾಗುವ ಕಥೆ ಮಧ್ಯೆ ತೂರಿ ಬರುವ ಹಾಡುಗಳು ಅಭಾಸವೆನಿಸುತ್ತವೆ. ಹಾಗೆಯೇ ಚಿತ್ರದಲ್ಲಿ ಹೇಳಿರುವ ಚರಿತ್ರೆಯ ಎಳೆ ಕಥೆಯ ವರ್ತಮಾನಕ್ಕೆ ಹೊಂದಿಕೊಳ್ಳುವುದಿಲ್ಲ.

ಸಹ್ಯಾದ್ರಿ ಸಾಲಿನ ಅರಣ್ಯ ಹಾಗೂ ಹಾಡುಗಳ ದೃಶ್ಯಗಳು ರಿಜೊ ಪಿ.ಜಾನ್–ಲಕ್ಷ್ಮಿರಾಜ್ ಛಾಯಾಗ್ರಹಣದಲ್ಲಿ ಚನ್ನಾಗಿ ಮೂಡಿ ಬಂದಿವೆ. ವೆಂಗಿ ಸಂಗೀತ ಅದಕ್ಕೆ ಸಾಥ್ ನೀಡಿದೆ. ಪ್ರತಾಪ್‌ ರಾಜ್ ನಟನೆ ಮತ್ತು ಆ್ಯಕ್ಷನ್ ಕಟ್ ಭರವಸೆ ಮೂಡಿಸುತ್ತದೆ. ನಟನೆಗಿಂತ ಹೆಚ್ಚಾಗಿ ಮೋಕ್ಷಾ ಅವರು ಬೋಲ್ಡ್‌ ಆಗಿ ಗಮನ ಸೆಳೆಯುತ್ತಾರೆ. ಸಿನಿಮಾವನ್ನು ಮತ್ತಷ್ಟು ಥ್ರಿಲ್ಲರ್ ಆಗಿಸುವ ಅವಕಾಶ ಸಂಕಲನಕಾರ ವಿಷ್ಣು ಎಸ್. ಅವರಿಗೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT