ಮಂಗಳವಾರ, ಫೆಬ್ರವರಿ 18, 2020
16 °C

ಪಂಗಾ ಸಿನಿಮಾ: ಕನಸು ಎಟುಕಿಸಿಕೊಳ್ಳುವ ತಾಯಿಯ ಕಥನ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಚಿತ್ರ: ಪಂಗಾ (ಹಿಂದಿ)
ನಿರ್ಮಾಣ: ಫಾಕ್ಸ್ ಸ್ಟಾರ್ ಸ್ಟುಡಿಯೋಸ್
ನಿರ್ದೇಶನ: ಅಶ್ವಿನಿ ಅಯ್ಯರ್ ತಿವಾರಿ
ತಾರಾಗಣ: ಕಂಗನಾ ರನೋಟ್, ಜೆಸ್ಸಿ ಗಿಲ್, ರಿಚಾ ಚಡ್ಡಾ, ನೀನಾ ಗುಪ್ತಾ

ಇನ್‌ಕ್ಯುಬೇಟರ್‌ನಲ್ಲಿ ಇಟ್ಟ ಮಗುವನ್ನು ನೋಡುತ್ತಾ ತಾಯಿ ಹೇಳುತ್ತಾಳೆ: ‘ನಾನು ನಿನ್ನ ಆರೈಕೆ ಮಾಡುವೆ, ಸದಾ ನಿನ್ನ ಜತೆಗಿರುವೆ’. ಎಲ್ಲ ಅಮ್ಮಂದಿರೂ ಹೀಗೇ ಅಲ್ಲವೇ ಹೇಳುವುದು? ಆದರೆ, ಈ ಅಮ್ಮ ಮಗುವಿನ ಆರೈಕೆಗಾಗಿ ತನ್ನ ಪಂಚಪ್ರಾಣವಾದ ಕಬಡ್ಡಿಯನ್ನೇ ಬದಿಗಿರಿಸಿರುತ್ತಾಳೆ.

ಹೀಗೊಂದು ಪ್ರಕರಣವನ್ನು ಅಪ್ಪನು ಮಗನಿಗೆ ಚಂದಮಾಮ ಕಥೆಯಷ್ಟೇ ಆಪ್ತವಾಗಿ ಹೇಳುತ್ತಾನೆ. ಆ ಕಬಡ್ಡಿ ಆಟಗಾರ್ತಿ ಅವನ ಹೆಂಡತಿ. ‘ಪಂಗಾ’ ಸಿನಿಮಾ ಸರಳ ಸುಂದರವಾಗಿ ವ್ಯಕ್ತಗೊಳ್ಳುವುದಕ್ಕೆ ಇದೊಂದು ಸಣ್ಣ ನಿದರ್ಶನ.

ರೋಗನಿರೋಧಕ ಶಕ್ತಿ ಕಡಿಮೆ ಇರುವ ಏಳು  ವರ್ಷದ ಮಗ, ಪ್ರೀತಿಯ ಅಮೃತ ಉಣಿಸುವ ಗಂಡ, ಗೇಲಿ ಮಾಡುತ್ತಲೇ ಮಗಳು ಕಬಡ್ಡಿ ಆಡಲಿ ಎಂದು ಬಯಸುವ ತಾಯಿ...ಇವರ ಮೇಲಿನ ಕಕ್ಕುಲತೆಯಿಂದ ಕಬಡ್ಡಿಯ ಕನಸನ್ನು ಕಣ್ಣೊಳಗೇ ಅದುಮಿಟ್ಟ ಮಹಾತಾಯಿ ಅವಳು. ಆ ಮಗನೇ ಅವಳ ಕಣ್ಣ ಕನಸನ್ನು ಹೊರಗೆಳೆಯುತ್ತಾನೆ. ಅದು ನನಸಾಗಲು ಅಗತ್ಯವಿರುವ ಇಂಧನವೇ ಆಗುತ್ತಾನೆ.

ಹೆಣ್ಣುಮಗಳೊಬ್ಬಳ ವೈವಾಹಿಕ ಬದುಕು ದಮನಗೊಳಿಸುವ ಕನಸಿಗೆ ಮರುಜೀವ ಕೊಡುವ ಪ್ರೇರಣಾಕಥನದ ಸಿನಿಮಾ ಅನಗತ್ಯವಾದ ಒಂದೂ ದೃಶ್ಯವನ್ನು ಕಾಣಿಸುವುದಿಲ್ಲ. ನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ ತುಂಬಾ ಸರಳಜೀವಿ. ನಿರೂಪಣೆಯಲ್ಲಿ ವಿಪರೀತ ಪ್ರಯೋಗಿಯಾಗಿಲ್ಲ. ಮಾತಿನಲ್ಲೂ ಮಿತವ್ಯಯಿ. ಅಲ್ಲಲ್ಲಿಯಷ್ಟೇ ಹಿನ್ನೆಲೆ ಸಂಗೀತದ ಚರ್ಮವಾದ್ಯ, ವಯೊಲಿನ್ ನಾದ (ಶಂಕರ್-ಎಹಸಾನ್-ಲಾಯ್) ಹೊಮ್ಮಬೇಕೆನ್ನುವ ಎಚ್ಚರಿಕೆ ಅಡಿಗಡಿಗೆ.

ಅಮ್ಮನ ಕಬಡ್ಡಿ ಕನಸು ನನಸಾಗುವುದನ್ನು ಮಗ ಕಣ್ತುಂಬಿಕೊಳ್ಳುವ ಕೊನೆಯ ಗಳಿಗೆಗೆ ಇರಲಿ ಎಂದು ಜತನವಾಗಿ ಮೆಲೋಡ್ರಾಮಾವನ್ನು ತಂದಿಡುವ ನಿರ್ದೇಶಕಿ, ತಗ್ಗಿದ ದನಿಯಲ್ಲೇ ಸಾಕಷ್ಟು ವಸ್ತುವಿಷವನ್ನು ದಾಟಿಸುತ್ತಾರೆ.

ದ್ರಪಾತ್ರದಲ್ಲಿನ ಕಂಗನಾ ರನೋಟ್ ಕೆನ್ನೆಮೇಲೆ ಮೇಕಪ್‌ನ ದೊಡ್ಡ ಪದರವಿಲ್ಲ. ಅದರ ಮೇಲಿನ ಗುಳಿಗಳಲ್ಲಿ ತಾಯ್ತನದ ಬನಿ. ಕಾಡಿಗೆ ಚೌಕಟ್ಟಿನ ಕಣ್ಣುಗಳಲ್ಲಿ ಅದುಮಿಟ್ಟ ಕನಸಿನ ಕೊಳ. ಅದರ ಮೇಲೆ ಮಾತೃತ್ವದ ದೋಣಿ. ಮಗನ ಪಾತ್ರಧಾರಿ ಯಜ್ಞ ಭಾಸಿನ್ ನಿರ್ಭಾವುಕವಾಗಿ ನಟಿಸಿದರೂ, ಮುಗ್ಧತೆಯ ಕಾರಣಕ್ಕೆ ಇಷ್ಟವಾಗುತ್ತಾನೆ. ಕಂಗನಾ ಪತಿಯಾಗಿ ಜೆಸ್ಸಿ ಗಿಲ್ ನಟನೆ ತೂಕದ್ದು. ಸ್ನೇಹಿತೆಯ ಪಾತ್ರದಲ್ಲಿ ರಿಚಾ ಚಡ್ಡಾ ಸಣ್ಣ ‘ರಿಲೀಫ್’.

ಹೆಣ್ಣುಮಕ್ಕಳ ಭಾವಲೋಕವನ್ನೇ ಪ್ರಧಾನವಾಗಿಸಿದ ಇಂಥ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಸ್ವಾಗತಾರ್ಹವಂತೂ ಹೌದು.

ಇದನ್ನೂ ಓದಿ: ಪಂಗಾ: ತಂದೀತೇ ಬದಲಾವಣೆ?!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು