ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಕೋಟಿ’ ಸಿನಿಮಾ ವಿಮರ್ಶೆ: ಸರಳ ಕಥೆಯಲ್ಲಿ ಸುದೀರ್ಘ ಪಯಣ

Published 14 ಜೂನ್ 2024, 12:28 IST
Last Updated 14 ಜೂನ್ 2024, 12:28 IST
ಅಕ್ಷರ ಗಾತ್ರ
ಚಿತ್ರ ವಿಮರ್ಶೆ : ಕೋಟಿ
ನಿರ್ಮಾಪಕರು:ಜ್ಯೋತಿದೇಶಪಾಂಡೆ
ನಿರ್ದೇಶಕ:ಪರಮ್‌
ಪಾತ್ರವರ್ಗ:ಧನಂಜಯ, ಮೋಕ್ಷ ಕುಶಾಲ್‌, ತಾರಾ, ರಮೇಶ್‌ ಇಂದಿರಾ ಮತ್ತಿತರರು

‘ಎಲ್ಲರೂ ಬೆತ್ತಲೆಯಾಗಿರುವ ಸಮಾಜದಲ್ಲಿ ಬಟ್ಟೆ ಹಾಕಿಕೊಂಡವನಿಗೆ ನಾಚಿಕೆ ಆಗಬೇಕು...’

ಇದು ‘ಕೋಟಿ’ ಚಿತ್ರದಲ್ಲಿ ರಾಮಣ್ಣ ಎಂಬುವ ಪಾತ್ರ ನಾಯಕ ‘ಕೋಟಿ’ಗೆ ಹೇಳುವ ಡೈಲಾಗ್‌. ಇಡೀ ಸಿನಿಮಾದ ಒನ್‌ಲೈನ್‌ ಸ್ಟೋರಿಯನ್ನು ಇದು ಉಲ್ಲೇಖಿಸುತ್ತದೆ. ಬಡ ಕುಟುಂಬದಿಂದ ಬಂದು ನಿಯತ್ತಿನಲ್ಲೇ ಬದುಕುತ್ತಿರುವ ನಾಯಕ ‘ಕೋಟಿ’ ಈ ಹಾದಿಯಲ್ಲೇ ಹೆಜ್ಜೆ ಹಾಕುತ್ತಾನೋ ಅಥವಾ ಬೆತ್ತಲಾಗಿರುವ ಸಮಾಜದಲ್ಲಿ ತಾನೂ ಬೆತ್ತಲಾಗುತ್ತಾನೋ ಎನ್ನುವುದು ಚಿತ್ರದ ಕಥೆ.

ನಾಯಕ ಕೋಟಿ (ಧನಂಜಯ) ತನ್ನ ತಾಯಿ(ತಾರಾ), ತಂಗಿ(ತನುಜಾ) ಹಾಗೂ ತಮ್ಮನ (ಪೃಥ್ವಿ) ಜೊತೆ ಜನತಾ ಸಿಟಿಯಲ್ಲಿ ಬದುಕುವಾತ. ಲಾರಿಯೊಂದನ್ನು ಬಾಡಿಗೆಗೆ ಪಡೆದು ಮನೆ ಶಿಫ್ಟಿಂಗ್‌ ಕೆಲಸ ಮಾಡಿಕೊಂಡಿದ್ದಾನೆ. ಈ ಕೆಲಸವಿಲ್ಲದೇ ಇದ್ದಾಗ ಬಾಡಿಗೆಗೆ ಕಾರು ಒಡಿಸುತ್ತಾನೆ. ಈ ವ್ಯವಹಾರಗಳಿಗೆ ‘ದೀನೂ ಸಾವ್ಕಾರ್’ನಿಂದ ಹಣಕಾಸು ಸಹಾಯ ಪಡೆಯುತ್ತಿರುತ್ತಾನೆ. ತಮ್ಮನೊಂದಿಗೆ ಸೇರಿ ತನ್ನದೇ ಕ್ಯಾಬ್‌ ಸೇವೆ ಆರಂಭಿಸಬೇಕೆಂಬ ಕನಸು ಕಟ್ಟಿಕೊಂಡಿರುವ ಕೋಟಿ ಮುಂದೊಂದು ದಿನ ನಿಯತ್ತಿನಲ್ಲೇ ಕೋಟಿ ರೂಪಾಯಿ ದುಡಿಯುವ ಕನಸು ಹೊತ್ತಾತ. ಕಾರು ಖರೀದಿಸಲು ದೀನೂ ಸಾವ್ಕಾರ್‌ನಿಂದ 9 ಲಕ್ಷ ಸಾಲ ಪಡೆದುಕೊಳ್ಳುತ್ತಾನೆ. ಈ ಸಾಲವೇ ‘ಕೋಟಿ’ಗೆ ಶೂಲವಾಗಿ ಮಾರ್ಪಟ್ಟಾಗ ಕೋಟಿ ಬದಲಾಗುತ್ತಾನೆಯೇ ಎನ್ನುವುದು ಮುಂದಿನ ಕಥೆ. 

ಧನಂಜಯ ಇಲ್ಲಿ ‘ಕೋಟಿ’ಯಾಗಿ ಜೀವಿಸಿದ್ದಾರೆ. ಕುಟುಂಬವನ್ನು ಸಲಹುವ ಜವಾಬ್ದಾರಿ ಹೊತ್ತ ಒಬ್ಬ ಮಧ್ಯಮವರ್ಗದ ಯುವಕನಾಗಿ ಅವರಿಲ್ಲಿ ಅಂಕ ಗಿಟ್ಟಿಸುತ್ತಾರೆ. ‘ಕೋಟಿ’ಯ ಪರದಾಟ, ಒದ್ದಾಟ, ತಳಮಳವನ್ನು ಸಮಪರ್ಕವಾಗಿ ನಿಭಾಯಿಸಿದ್ದಾರೆ. ನಾಯಕಿಯಾಗಿ ಮೋಕ್ಷಾ ಕುಶಾಲ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ತಾಯಿ ಪಾತ್ರದಲ್ಲಿ ತಾರಾ ಎಂದಿನಂತೆ ಭಾವನಾತ್ಮಕ ದೃಶ್ಯಗಳಲ್ಲಿ ಕಣ್ಣಂಚು ಒದ್ದೆ ಮಾಡುತ್ತಾರೆ. ನಟ ದುನಿಯಾ ವಿಜಯ್‌ ನಾಯಕನ ತಂದೆಯ ಪಾತ್ರದಲ್ಲಿ ಒಂದೈದು ನಿಮಿಷವಷ್ಟೇ ಕಾಣಿಸಿಕೊಂಡರೂ ಆ ದೃಶ್ಯಗಳು ಪರಿಣಾಮಕಾರಿಯಾಗಿ ಮೂಡಿಬಂದಿದೆ. ತಮ್ಮ ಸ್ಟೈಲ್‌ ಹಾಗೂ ಡೈಲಾಗ್‌ ಡೆಲಿವರಿ ಕಾರಣದಿಂದಲೇ ನಟ ರಮೇಶ್‌ ಇಂದಿರಾ ಅವರು ಮತ್ತೆ ಮತ್ತೆ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದ್ದಾರೆ. ದೀನೂ ಸಾವ್ಕರ್‌ ಪಾತ್ರದಲ್ಲಿ ಅವರ ನಟನೆಗೆ ಪೂರ್ಣ ಅಂಕ. 

ಪರಮ್‌ ಅವರ ನಿರ್ದೇಶನದ ಮೊದಲ ಸಿನಿಮಾ ಇದು. ನಿರ್ದೇಶನದಲ್ಲಿ ಅವರು ಪಳಗಿದಂತೆ ಕಾಣುತ್ತಾರೆ. ಆದರೆ ಒಂದು ನಿಗದಿತ ಅವಧಿಯ ಚೌಕಟ್ಟಿನೊಳಗೆ ಸಿನಿಮಾವನ್ನು ಕಟ್ಟಿಕೊಡುವಲ್ಲಿ ಅವರು ವಿಫಲರಾಗುತ್ತಾರೆ. ಹಲವೆಡೆ ದೃಶ್ಯಗಳನ್ನು ಮತ್ತಷ್ಟು ಹದಗೊಳಿಸಬಹುದಿತ್ತು. ಕ್ಲೈಮ್ಯಾಕ್ಸ್‌ ದೃಶ್ಯಗಳು ಎಳೆದಾಡಿದ ಅನುಭವ ನೀಡುತ್ತದೆ. ಕೆಲವು ಕಡೆಗಳಲ್ಲಿ ಬರವಣಿಗೆ ಪೇಲವವಾದಂತಿದೆ. ತನ್ನ ಕೋಟಿ ರೂಪಾಯಿ ಹಣ ಕಳವಾದ ಮರುದಿನವೇ ನಾಯಕ ‘ಕೋಟಿ’ ಏಕಾಏಕಿ ಲಕ್ಷಾಂತರ ರೂಪಾಯಿ ಮುಂದಿಟ್ಟಾಗ ಖಳನಾಯಕ ಆಶ್ಚರ್ಯಪಡದೇ ಸ್ವೀಕರಿಸಿದ ದೃಶ್ಯ ಇದಕ್ಕೊಂದು ನಿದರ್ಶನ. ಹಾಡುಗಳು ಇಂಪಾಗಿವೆ. ಸಿಂಕ್‌ ಸೌಂಡ್‌ ಮಾಡಿರುವ ಕಾರಣದಿಂದ ಹಲವು ದೃಶ್ಯಗಳಲ್ಲಿ ಇರಬೇಕಾಗಿದ್ದ ಸಂಭಾಷಣೆಯ ತೀವ್ರತೆ ಕಾಣಿಸುವುದಿಲ್ಲ. ಇಷ್ಟಪಟ್ಟು ನಾಲ್ಕೈದು ಐಸ್‌ಕ್ಯಾಂಡಿ ತಿನ್ನುತ್ತಿದ್ದ ‘ಕೋಟಿ’, ಕ್ಲೈಮ್ಯಾಕ್ಸ್‌ನಲ್ಲಿ ಐಸ್‌ಕ್ಯಾಂಡಿಯನ್ನು ತಿರಸ್ಕರಿಸುವುದು ಎರಡನೇ ಭಾಗಕ್ಕೆ ಮುನ್ನುಡಿಯೇ? 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT