ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಟರ್ಬೊ’ ಸಿನಿಮಾ ವಿಮರ್ಶೆ: ಕಥೆ ಅಲ್ಪ, ಆ್ಯಕ್ಷನ್‌ ಸರ್ವತ್ರ!

Published 23 ಮೇ 2024, 13:06 IST
Last Updated 23 ಮೇ 2024, 13:06 IST
ಅಕ್ಷರ ಗಾತ್ರ
ಚಿತ್ರ ವಿಮರ್ಶೆ : ಟರ್ಬೊ (ಮಲಯಾಳ)
ನಿರ್ದೇಶಕ:ವೈಶಾಕ್‌, ನಿರ್ಮಾಪಕರು: ಮಮ್ಮುಟ್ಟಿ ಕಂಪನಿ 
ಪಾತ್ರವರ್ಗ:ಮಮ್ಮುಟ್ಟಿ, ರಾಜ್ ಬಿ.ಶೆಟ್ಟಿ, ಸುನೀಲ್‌, ಅಂಜನ ಜಯಪ್ರಕಾಶ್‌, ಬಿಂದು ಪಣಿಕ್ಕರ್‌, ಶಬರೀಶ್‌ ವರ್ಮಾ ಮತ್ತಿತರರು ‌

‘ಪೋಕಿರಿ ರಾಜಾ’, ‘ಪುಲಿಮುರುಗನ್‌’, ‘ಮಲ್ಲು ಸಿಂಗ್‌’–ಹೀಗೆ ಆ್ಯಕ್ಷನ್‌ ಜಾನರ್‌ ಮಾದರಿಯ ಸಿನಿಮಾಗಳಿಗೆ ಆ್ಯಕ್ಷನ್‌ ಕಟ್‌ ಹೇಳಿರುವ ನಿರ್ದೇಶಕ ವೈಶಾಕ್‌ ಅವರ ಹೊಸ ಸಿನಿಮಾ ಇದು. ಮಲಯಾಳದ ಹಿಟ್‌ ಹಾಸ್ಯಪ್ರಧಾನ ಚಿತ್ರ ‘ಆಡು’ ಸರಣಿಯ ನಿರ್ದೇಶಕ ಮಿಥುನ್‌ ಮ್ಯಾನುವಲ್‌ ಥಾಮಸ್‌ ಈ ಸಿನಿಮಾಗೆ ಕಥೆ ಬರೆದಿದ್ದಾರೆ. ಹೀಗಾಗಿ ಕಾಮಿಡಿ–ಆ್ಯಕ್ಷನ್‌ನ ಸಮಾಗಮ ಈ ‘ಟರ್ಬೊ’. 

ಸಿನಿಮಾದ ಕಥೆ ಕೇರಳ–ತಮಿಳುನಾಡಿನಲ್ಲಿ ನಡೆಯುತ್ತದೆ. ಜೋಸ್‌(ಮಮ್ಮುಟ್ಟಿ) ತನ್ನ ಊರಿನಲ್ಲಿ ‘ಟರ್ಬೊ ಜೋಸ್‌’ ಎಂದೇ ಖ್ಯಾತಿ ಪಡೆದಾತ. ಊರಿನ ಚರ್ಚ್‌ನ ವಾರ್ಷಿಕ ಜಾತ್ರೆಯಲ್ಲಿ ಜೋಸ್‌ ಸಮ್ಮುಖದಲ್ಲಿ ಒಂದು ಹೊಡೆದಾಟ ನಿಶ್ಚಿತ. ಇಂತಹ ಸಂದರ್ಭದಲ್ಲಿ ಅದೇ ಊರಿನ ‘ಜೆರ್ರಿ’ ಎಂಬ ಕ್ರಿಶ್ಚಿಯನ್‌ ಹುಡುಗನಿಗೆ ‘ಇಂದುಲೇಖ’ ಎನ್ನುವ ಹಿಂದೂ ಹುಡುಗಿಯ ಮೇಲೆ ಪ್ರೀತಿ. ‘ಜೆರ್‍ರಿ’ಯನ್ನು ತನ್ನ ತಮ್ಮನಂತೆ ಪರಿಗಣಿಸಿರುವ ಜೋಸ್‌, ಈ ಪ್ರೇಮಕಥೆಯನ್ನು ಪೂರ್ಣಗೊಳಿಸಲು ಹೋಗಿ ತಾನೇ ಸಮಸ್ಯೆಗೆ ಸಿಲುಕಿಕೊಳ್ಳುತ್ತಾನೆ. ಇದರಿಂದಾಗಿ ಊರು ತೊರೆದು ತಮಿಳುನಾಡು ಸೇರುವ ಸ್ಥಿತಿಗೆ ಜೋಸ್‌ ತಲುಪುತ್ತಾನೆ. ಅಲ್ಲಿ ‘ವೆಟ್ರಿವೇಲ್‌ ಶಣ್ಮುಗ ಸುಂದರಂ’(ರಾಜ್‌ ಬಿ.ಶೆಟ್ಟಿ) ಎಂಬ ಪಾತ್ರದ ಪ್ರವೇಶದಿಂದ ‘ಜೆರ್‍ರಿ’, ‘ಇಂದುಲೇಖ’ ಹಾಗೂ ‘ಜೋಸ್‌’ ಜೀವನದಲ್ಲಿ ತಿರುವು, ಕಥೆಗೆ ವೇಗ.

ಎಪತ್ತರ ಹೊಸ್ತಿಲು ದಾಟಿರುವ ಮಮ್ಮುಟ್ಟಿ ಇಲ್ಲಿ ಯುವನಟರೂ ನಾಚುವಂತೆ ಫೈಟ್ಸ್‌ ಮಾಡಿದ್ದಾರೆ. ಅಮ್ಮನಿಗಷ್ಟೇ ಹೆದರುವ ಮುದ್ದಿನ ಮಗನಾಗಿಯೂ ಮುಗ್ಧವಾದ ನಟನೆ ಮೂಲಕ ಗಮನಸೆಳೆಯುತ್ತಾರೆ. ಅಮ್ಮನ ಪ್ರೀತಿಯನ್ನು ‘ಜೋಸ್‌’ ವಿವರಿಸುವಾಗ ಕಣ್ಣಂಚು ಒದ್ದೆಯಾಗುತ್ತದೆ. ಆ್ಯಕ್ಷನ್‌ ದೃಶ್ಯಗಳಲ್ಲಿ ಎಲ್ಲಿಯೂ ಮಮ್ಮುಟ್ಟಿ ಮುಖ ಮರೆಯಾಗುವುದಿಲ್ಲ ಎನ್ನುವುದನ್ನು ಗಮನಿಸಬೇಕು. ಖಳನಟನಿಗೆ, ಆತನ ಸಹಚರರಿಗೆ ಆಳೆತ್ತರಕ್ಕೆ ಕಾಲೆತ್ತಿ ಒದೆಯುವಾಗ ‘ಎಪ್ಪತ್ತಾಯಿತೇ’ ಎನ್ನುವ ಪ್ರಶ್ನೆ ಮೂಡುವುದು ಸಹಜ. ಮಲಯಾಳ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಟ್ಟಿರುವ ರಾಜ್‌ ಬಿ.ಶೆಟ್ಟಿ ಹೊಸ ಸ್ಟೈಲ್‌ನಲ್ಲಿ ಪ್ರೇಕ್ಷಕರೆದುರಿಗೆ ಬಂದಿದ್ದಾರೆ. ಕನ್ನಡದಲ್ಲಿನ ಅವರ ಈ ಹಿಂದಿನ ಪಾತ್ರಗಳಿಗಿಂತ ಭಿನ್ನವಾದ ಪಾತ್ರ ಇದು. ತಮಿಳು–ಮಲಯಾಳ–ಇಂಗ್ಲಿಷ್‌ ಮಿಶ್ರಿತ ಭಾಷೆಯಲ್ಲಿ ರಾಜ್‌ ಗಮನಸೆಳೆಯುತ್ತಾರೆ. ಅವರ ದೈಹಿಕ ರೂಪಕ್ಕೆ ತದ್ವಿರುದ್ಧವಾದ ಶಕ್ತಿಯುಳ್ಳ ಪಾತ್ರ ಇದರಲ್ಲಿದೆ. ಆಧುನಿಕ ಯುಗದ ಅಮ್ಮನಾಗಿ ಬಿಂದು ಪಣಿಕ್ಕರ್‌ ಪ್ರೇಕ್ಷಕರನ್ನು ನಗಿಸುತ್ತಾರೆ.      

ಪಕ್ಕಾ ಕಮರ್ಷಿಯಲ್‌ ಚಿತ್ರವಾದ ‘ಟರ್ಬೊ’ದ ಚಿತ್ರಕಥೆಯಲ್ಲಿ ಕೆಲವೆಡೆ ಲಾಜಿಕ್‌ ಇಲ್ಲದ ದೃಶ್ಯಗಳಿವೆ. ಕಥೆಯ ಎಳೆ ಸಣ್ಣದಾಗಿದೆ. ಆ್ಯಕ್ಷನ್‌ ಭರಪೂರವಾಗಿದೆ. ಹೀರೊನ ಪ್ರತಿ ಫೈಟ್‌ನಲ್ಲಿ ಟರ್ಬೊ ಎಂಜಿನ್‌ನ ಹಿನ್ನೆಲೆ ಸಂಗೀತ ಕೊಂಚ ಹೊತ್ತು ಸಹಿಸಿಕೊಳ್ಳಬಹುದಾದರೂ ನಂತರ ಕಿರಿಕಿರಿಯಾಗುತ್ತದೆ. ಸಿದ್ಧಸೂತ್ರವನ್ನು ಬಿಟ್ಟು ಕಥೆ ಹೆಣೆಯಲಾಗಿದ್ದು, ಸಿನಿಮಾದಲ್ಲಿ ಹಾಡಿಲ್ಲ, ಹೀರೊಯಿನ್‌ ಇಲ್ಲ. ಕ್ಲೈಮ್ಯಾಕ್ಸ್‌ನ ಫೈಟ್‌ ದೃಶ್ಯಗಳನ್ನು ಎಳೆದಾಡಿದಂತಿದೆ. ಆದರೂ ಮಮ್ಮುಟ್ಟಿ ಫ್ಯಾನ್ಸ್‌ಗೆ ‘ಟರ್ಬೊ’ ಹಬ್ಬವಾಗಲಿದೆ ಎಂದರೆ ಅತಿಶಯೋಕ್ತಿಯಲ್ಲ. ‘ಟರ್ಬೊ–2’ ಸೆಟ್ಟೇರುವ ಮುನ್ಸೂಚನೆ ಕ್ಲೈಮ್ಯಾಕ್ಸ್‌ನಲ್ಲಿದ್ದು, ಅದರ ಖಳನಾಯಕ ಯಾರೆಂಬುದನ್ನು ಧ್ವನಿಯಲ್ಲೇ ಊಹಿಸಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT