ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಬೆಳಕಿಲ್ಲ

Last Updated 10 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಭಾರತದ ಜನಪ್ರಿಯ ಚಿತ್ರಗಳ ಧಾಟಿಯನ್ನು ಗುರುತಿಸಿ ಮೂರು ವರ್ಷದ ಹಿಂದೆ ಚೀನಾದ ಹೆಸರಾಂತ ನಿರ್ದೇಶಕ ಪೀಟರ್ ಚಾನ್ ಒಂದು ಮಾತು ಹೇಳಿದ್ದರು. ಅದೇನೆಂದರೆ- ‘ಮೋಸ್ಟ್ ಆಫ್ ದಿ ಇಂಡಿಯನ್ ಪಾಪ್ಯುಲರ್ ಫಿಲ್ಮ್ಸ್ ಆರ್ ಬ್ಯೂಟಿಫುಲಿ ಮೇಡ್ ಸ್ಟುಪಿಡ್ ಮೂವೀಸ್’ (ಭಾರತದ ಬಹುತೇಕ ಜನಪ್ರಿಯ ಚಿತ್ರಗಳು ಸುಂದರವಾಗಿ ಚಿತ್ರಿಸಿದ ಬಾಲಿಶ ಸಿನಿಮಾಗಳು). ಆ ಮಾತನ್ನು ಸಮರ್ಥಿಸುವ ಚಿತ್ರ ‘ಪ್ರೇಮಚಂದ್ರಮ’.

ಚಿತ್ರವನ್ನು ಅಂದಗಾಣಿಸುವುದಷ್ಟನ್ನೇ ನಿರ್ದೇಶನ ಎಂದುಕೊಂಡವರ ಸಂಖ್ಯೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚುತ್ತಿದೆ. ಶಾಹುರಾಜ್ ಶಿಂಧೆ ಕೂಡ ಅದೇ ಸಾಲಿಗೆ ಸೇರುತ್ತಾರೆ. ಸದ್ಯಕ್ಕೆ ವಿಪರೀತ ಬೇಡಿಕೆಯಲ್ಲಿರುವ ಹರಿಕೃಷ್ಣ ಅವರಿಂದ ಸಂಗೀತ ಸಂಯೋಜನೆ ಮಾಡಿಸಿ, ಹಾಡುಗಳನ್ನು ದೃಶ್ಯ ಮನೋಹರವಾದ ಸ್ಥಳಗಳಲ್ಲಿ ಚಿತ್ರಿಸಿರುವ ನಿರ್ದೇಶಕರು ಕಥನಗಳನ್ನು ಗಟ್ಟಿಗೊಳಿಸಲು ಹೋಗಿಲ್ಲ. ಸಿನಿಮಾ ಕೇವಲ ಹಾಡುಗಳ ಆಲ್ಬಂ ಅಲ್ಲ ಎಂಬ ಸತ್ಯ ಶಾಹುರಾಜ್ ಸೇರಿದಂತೆ ಈಗಿನ ಅನೇಕ ನಿರ್ದೇಶಕರಿಗೆ ಅರಿವಾಗಬೇಕಿದೆ.

1992ರಲ್ಲಿ ಶಾರುಖ್ ಖಾನ್, ರಿಶಿ ಕಪೂರ್ ಹಾಗೂ ದಿವ್ಯಾ ಭಾರತಿ ಅಭಿನಯಿಸಿದ ‘ದೀವಾನಾ’ ಎಂಬ ಹಿಂದಿ ಚಿತ್ರ ಬಂದಿತ್ತು. ಆ ಕಥೆಯನ್ನು ‘ಪ್ರೇಮಚಂದ್ರಮ’ ನೆನಪಿಸುತ್ತದೆಯಾದರೂ ಅದರ ಸಂಪೂರ್ಣ ನಕಲು ಅಲ್ಲ. ಚಿತ್ರಕ್ಕೆ ವೈದ್ಯಕೀಯ ವಿಜ್ಞಾನದ ಚೌಕಟ್ಟನ್ನು ತೊಡಿಸಲಾಗಿದೆ. ಒಂದೇ ರೀತಿ ಇರುವ ಇಬ್ಬರು ವ್ಯಕ್ತಿಗಳ ಮೆದುಳಿನ ಕುರಿತು ಚಿತ್ರದ ಒಬ್ಬ ನಾಯಕ ಸಂಶೋಧನೆ ನಡೆಸುವ ಆಯಾಮ ಅದು. ಅದಕ್ಕೆ ಸ್ಪಷ್ಟವಾದ ಸಿನಿಮೀಯ ತರ್ಕವೂ ಇದ್ದಿದ್ದರೆ ಶಾಹುರಾಜ್ ಉದ್ದೇಶ ಸಫಲವಾಗುತ್ತಿತ್ತು. ಅದು ಮಾಯವಾಗಿ ಮೆಲೋಡ್ರಾಮಾಗಳೇ ವಿಜೃಂಭಿಸುವುದರಿಂದ ‘ಪ್ರೇಮಚಂದ್ರಮ’ನದ್ದು ಹೊಸಬೆಳಕಲ್ಲ.

ಇದು ನಾಯಕಿ ಕೇಂದ್ರಿತ ಚಿತ್ರ. ಹಾಗಾಗಿ ನಟಿಸಲು ರೇಖಾ ಅವರಿಗ ಅಪರೂಪಕ್ಕೆಂಬಂತೆ ವಿಶಾಲ ವ್ಯಾಪ್ತಿಯ ಪಾತ್ರ ಸಿಕ್ಕಿದೆ. ಆದರೆ, ಅದನ್ನು ನಿಭಾಯಿಸುವಲ್ಲಿ ಅವರು ಸೋತಿದ್ದಾರೆ. ಅಭಿನಯ, ಗ್ಲಾಮರ್ ಎರಡೂ ವಿಷಯಗಳಲ್ಲಿ ನಿವೃತ್ತಿಯ ಅಂಚಿನಲ್ಲಿರುವ ನಟಿಯಂತೆ ಕಾಣುವ ರೇಖಾ ಚಿತ್ರಕ್ಕೆ ಜೀವಾನಿಲ ತುಂಬಲು ಸಾಧ್ಯವಾಗಿಲ್ಲ. ರಘು ಮುಖರ್ಜಿ ಹಾಗೂ ಕಿರಣ್ ಕೂಡ ಅಭಿನಯದ ವಿಷಯದಲ್ಲಿ ಸಾಕಷ್ಟು ಹಿಂದುಳಿದಿದ್ದಾರೆ. ಹಾಡುಗಳ ನೃತ್ಯ ನಿರ್ದೇಶನ ಕೂಡ ನಗೆ ತರಿಸುವ ಹಾಗಿದೆ.

ಭಾವಕ್ಕಿಂತ ದೃಶ್ಯಗಳನ್ನು ಸುಂದರಗೊಳಿಸುವ ಉದ್ದೇಶದಿಂದ ಎಚ್.ಸಿ.ವೇಣು ಕ್ಯಾಮೆರಾ ಹಿಂದೆ ಕೆಲಸ ಮಾಡಿರುವುದು ಸ್ಪಷ್ಟ. ಅವರ ಕ್ಯಾಮೆರಾ ಕಣ್ಣು ಪದೇಪದೇ ಅನಗತ್ಯವಾಗಿ ನಾಯಕಿಯ ಹಣೆಯ ಮೇಲಿನ ಮೊಡವೆಗಳನ್ನೇ ತೋರಿಸಿರುವುದಕ್ಕೆ ದೃಶ್ಯಗಳಲ್ಲಿ ಅರ್ಥವೇ ಸಿಗುವುದಿಲ್ಲ.
 
ಹರಿಕೃಷ್ಣ ಹಾಡುಗಳಿಗೆ ಎಂದಿನ ಅವರ ಮುದ್ರೆಯೇನೋ ಇದೆ. ಆದರೆ, ಚಿತ್ರದ ಮೈಕಟ್ಟಿನಿಂದ ಸಂಪೂರ್ಣ ಭಿನ್ನವಾದಂತೆ ಅವು ಕಾಣುವುದರಿಂದ ಸಿನಿಮಾಗೆ ಏನೂ ಉಪಯೋಗವಾಗಿಲ್ಲ. ಶಶಿಧರ್ ಭಟ್ ಅತಿ ಗ್ರಾಂಥಿಕ ಸಂಭಾಷಣೆ ಬರೆದಿದ್ದಾರೆ. ಹಾಡಿನಲ್ಲಿ ಬರುವ ‘ಕೆನ್ನೆ ಮೇಲೆ ಉಷ್ಣಾಂಶ ತುಟಿಯ ಮೇಲೆ ಶೀತಾಂಶ’ ಎಂಬ ಸಾಲು ಚಿತ್ರದಲ್ಲಿ ಕಾಣಸಿಗುವ ಏಕೈಕ ಹಾಸ್ಯ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT