ಶನಿವಾರ, ಜನವರಿ 22, 2022
16 °C

ಅಂಗೈಯಲ್ಲೇ ಸಿನಿ ಹಾಡಿನ ಸಾಹಿತ್ಯ ಭಂಡಾರ

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಡಿಜಿಟಲ್‌ ಯುಗದಲ್ಲಿ ಬಹುತೇಕ ಎಲ್ಲವೂ ಅಂಗೈಯಲ್ಲಿರುವ ಮೊಬೈಲ್‌ನಲ್ಲೇ ಲಭ್ಯ! ದೊಡ್ಡ ಪರದೆಯ ಮೇಲೆ ವಿಜೃಂಭಿಸುತ್ತಿದ್ದ ಸಿನಿಮಾಗಳೇ ಇದೀಗ ಒಟಿಟಿ ವೇದಿಕೆ ಮುಖಾಂತರ ಅಂಗೈಯಲ್ಲಿ ಕುಳಿತಿವೆ. ಲಕ್ಷಗಟ್ಟಲೆ ಹಾಡುಗಳು ಇಂಚಿನುದ್ದದ ಮೆಮೊರಿ ಕಾರ್ಡ್‌ಗಳಲ್ಲಿ ಅಡಗಿವೆ. 

ಅಂದೊಂದು ಕಾಲವಿತ್ತು. ಕನ್ನಡ ಚಿತ್ರಗೀತೆಗಳ ಪುಸ್ತಕವನ್ನು ಖರೀದಿಸಿ ಹಾಡುಗಳನ್ನು ಗುನುಗುತ್ತಿದ್ದ ಕಾಲ. 87 ವರ್ಷಗಳ ಇತಿಹಾಸ ಇರುವ ಕನ್ನಡ ಚಿತ್ರರಂಗದಲ್ಲಿ ಲಕ್ಷಾಂತರ ಹಾಡುಗಳು ಬಂದಿವೆ. ಅವುಗಳಲ್ಲಿ ನೆಚ್ಚಿನ ಚಿತ್ರಗೀತೆಗಳನ್ನು ಕೇಳುವ ಮತ್ತು ತಾವೇ ಹೇಳುವ ಮೂಲಕ ಆನಂದಿಸುವ ಜನರಿದ್ದಾರೆ. ಹಲವರಿಗೆ ಗೀತೆಗಳ ಸಾಹಿತ್ಯ ಮೆಲುಕು ಹಾಕುವ ಹಂಬಲವಿರುತ್ತದೆ. ಕಾಲ ಬದಲಾಗಿದ್ದು, ಹಾಡಿನ ಸಾಹಿತ್ಯವಿರುವ ಪುಸ್ತಕ ಖರೀದಿಸಿ ಅದನ್ನು ಆಸ್ವಾದಿಸುವಷ್ಟು ಸಮಯವೂ ತಾಳ್ಮೆಯೂ ಜನರಲ್ಲಿ ಇಲ್ಲ. ಡಿಜಿಟಲ್‌ ಯುಗದಲ್ಲಿ ಅಂತರ್ಜಾಲದಲ್ಲೇ ಬಹುತೇಕ ಎಲ್ಲ ಹಾಡುಗಳ ಸಾಹಿತ್ಯ ಲಭ್ಯವಿದೆ. ಯೂಟ್ಯೂಬ್‌ನಲ್ಲಿ ಆಯಾ ಹಾಡಿನ ಕರೋಕೆಗಳೂ ಲಭ್ಯವಿವೆ. ಆದರೆ 80–90ರ ದಶಕದ ಅಥವಾ ಅದಕ್ಕಿಂತಲೂ ಹಿಂದಿನ ಕನ್ನಡ ಸಿನಿಮಾಗಳ ಹಾಡಿನ ಸಾಹಿತ್ಯ ಸಿಗುವುದು ವಿರಳ.

ಡಿಜಿಟಲ್ ಯುಗದ ಜನರಿಗೆ ಕನ್ನಡ ಚಿತ್ರಗಳ ಗೀತ ಸಾಹಿತ್ಯವನ್ನು ಮೊಬೈಲ್ ಆ್ಯಪ್‌ನಲ್ಲಿ ಸಂಗ್ರಹಿಸಿಕೊಡುವ ಕೆಲಸವನ್ನು ಲಿರಿಕಲ್ ಟ್ರೀ ಪ್ರೈವೇಟ್ ಲಿಮಿಟೆಡ್ ಎಂಬ ನವೋದ್ಯಮ ಸಂಸ್ಥೆಯೊಂದು ಕೈಗೆತ್ತಿಕೊಂಡಿದೆ. 20 ಸಾವಿರ ಹಾಡುಗಳ ಪಟ್ಟಿ ಮತ್ತು 5,500 ಚಿತ್ರಗೀತೆಗಳ ಸಾಹಿತ್ಯವನ್ನು ಆ್ಯಪ್‌ ಮತ್ತು ವೆಬ್‌ಸೈಟ್‌ನಲ್ಲಿ (https://kannadafilmlyrics.com) ಅಡಕಗೊಳಿಸಿದೆ ಲಿರಿಕಲ್ ಟ್ರೀ ಸಂಸ್ಥೆ.

ವೆಬ್‌ಸೈಟ್ ಅಥವಾ ಆ್ಯಪ್‌ನಲ್ಲಿ ‘ಹಾಡು’ ಎಂದು ಆಯ್ಕೆ ಮಾಡಿದರೆ ಚಲನಚಿತ್ರ ಅಥವಾ ಹಾಡಿನ ಹೆಸರು, ಸಂಗೀತ ನಿರ್ದೇಶಕ, ಗೀತ ರಚನೆಕಾರ, ಗಾಯಕರ ಹೆಸರು, ಚಿತ್ರ ಬಿಡುಗಡೆಯಾದ ವರ್ಷ ಎಂಬ ಆಯ್ಕೆಗಳು ತೆರೆದುಕೊಳ್ಳುತ್ತವೆ. ಅವುಗಳಲ್ಲಿ ಯಾವುದಾದರೂ ಒಂದನ್ನು ನಮೂದಿಸಿದರೆ ಚಲನಚಿತ್ರದ ಹೆಸರಿನ ಚಿತ್ರದೊಂದಿಗೆ ಗೀತೆ ತೆರೆದುಕೊಳ್ಳುತ್ತದೆ.

ಇದರೊಂದಿಗೆ 1934ರಿಂದ ಬಿಡುಗಡೆಯಾದ 4,800ಕ್ಕೂ ಹೆಚ್ಚು ಚಲನಚಿತ್ರಗಳ ಮಾಹಿತಿಯನ್ನೂ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಚಿತ್ರಕೋಶದಲ್ಲಿ ಚಲನಚಿತ್ರದ ಹೆಸರು, ನಟರ ಹೆಸರು, ನಿರ್ದೇಶಕರು, ನಿರ್ಮಾಪಕರು ಮತ್ತು ಚಿತ್ರ ಬಿಡುಗಡೆಯಾದ ವರ್ಷ ಎಂಬ ಆಯ್ಕೆಗಳನ್ನು ನೀಡಲಾಗಿದೆ. ಅದರಲ್ಲಿ ತಮಗೆ ಬೇಕಾದ ಆಯ್ಕೆಗಳನ್ನು ಆಯ್ಕೆ ಮಾಡಿಕೊಂಡು ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು.

ಉದಾಹರಣೆಗೆ ನಟರ ಹೆಸರಿನ ಜಾಗದಲ್ಲಿ ರಾಜ್‌ಕುಮಾರ್ ಎಂದು ನಮೂದಿಸಿದರೆ ‘ಬೇಡರ ಕಣ್ಣಪ್ಪ’ ಚಿತ್ರದಿಂದ ‘ಶಬ್ದವೇದಿ’ ತನಕದ 209 ಸಿನಿಮಾಗಳ ಪಟ್ಟಿ ಚಿತ್ರ ಸಹಿತ ತೆರೆದುಕೊಳ್ಳುತ್ತದೆ. ಚಿತ್ರದ ಹೆಸರು, ನಟ, ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ, ಚಿತ್ರ ಬಿಡುಗಡೆಯಾದ ವರ್ಷ ಸೇರಿ 25ಕ್ಕೂ ಹೆಚ್ಚು ಅಂಶಗಳನ್ನು ಒಳಗೊಂಡ ಮಾಹಿತಿ ದೊರೆಯುತ್ತದೆ.

‘ಕನ್ನಡ ಸಾಹಿತ್ಯಾಸಕ್ತರಿಗೆ ಬೇಕಾದ ಎಲ್ಲ ಪುಸ್ತಕಗಳು ಗ್ರಂಥಾಲಯಗಳಲ್ಲಿ ಒಂದೆಡೆ ಸಿಗುತ್ತವೆ. ಚಿತ್ರಗೀತೆಗಳ ಸಾಹಿತ್ಯ ಭಂಡಾರ ನಿರ್ಮಿಸುವ ಹೊಸ ಪ್ರಯತ್ನ ಮಾಡಲಾಗಿದೆ’ ಎಂದು ಲಿರಿಕಲ್ ಟ್ರೀ ತಂಡ ತಿಳಿಸಿದೆ.

‘ಕನ್ನಡ ಚಿತ್ರಗೀತೆಗಳನ್ನು ಹುಚ್ಚರಂತೆ ಪ್ರೀತಿಸುವ ಜನರಿದ್ದಾರೆ. ಅವರಿಗೆ ಡಿಜಿಟಲ್ ರೂಪದಲ್ಲಿ ಗೀತ ಸಾಹಿತ್ಯ ಒದಗಿಸಿಕೊಡುವ ಆಲೋಚನೆಯೊಂದಿಗೆ ಈ ವೆಬ್‌ಸೈಟ್ ಮತ್ತು ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಕನ್ನಡದ ಹಾಡಿನ ಗಂಟು ಒಂದು ಆಸ್ತಿಯಾಗಿ ಮುಂದಿನ ತಲೆಮಾರಿಗೂ ತಲುಪಲು ಅನುಕೂಲ ಆಗಲಿದೆ. ಚಲನಚಿತ್ರ ಪ್ರಿಯರು ಉಚಿತವಾಗಿ ಪಡೆದುಕೊಳ್ಳಬಹುದು’ ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು