ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್‌ಫ್ಲಿಕ್ಸ್‌ ವೆಬ್‌ ಸಿರೀಸ್‌: ಮಸಾಬಾ ಮಸಾಬಾ... ನೀನಾ ಕಥನ

Last Updated 3 ಸೆಪ್ಟೆಂಬರ್ 2020, 2:01 IST
ಅಕ್ಷರ ಗಾತ್ರ

ಮಸಾಬಾ ಮಸಾಬಾ..

ನಿರ್ದೇಶನ: ಸೋನಂ ನಯ್ಯರ್‌

ತಾರಾಗಣ: ನೀನಾ ಗುಪ್ತಾ, ಮಸಾಬಾ ಗುಪ್ತಾ

ನೆಟ್‌ಫ್ಲಿಕ್ಸ್‌ ವೆಬ್‌ ಸಿರೀಸ್‌

"ನೀ ಬಿಡು ಗಟ್ಟಿಗಿತ್ತಿ, ಧೈರ್ಯವಂತೆ, ಅಂತೂ ಮಗಳನ್ನ ಪಡೆದೆ, ಬೆಳೆಸಿದೆ.. ಅಂತ ಆಗಾಗ ಎಲ್ಲರೂ ಹೇಳ್ತಾನೆ ಇರ್ತಾರೆ. ಆ ಮಾತುಗಳು ನಿಮ್ಮನ್ನು ನಿಜವಾಗಿಯೂ ಆ ಪಾತ್ರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿಬಿಡುತ್ತವೆ. ಆದರೆ ಕೊನೆಗೂ ಈ ಹಾಡಿಹೊಗಳುವವರು, ಬೆಂಬಲ ಸೂಚಿಸುವಂತೆ ಮಾತನಾಡುವವರು ಎಷ್ಟೇ ಇರಲಿ, ನಮ್ಮ ಸಂಘರ್ಷ ನಮ್ಮೊಂದಿಗೇ ಇರ್ತದೆ. ನಮ್ಮ ಸಮರದಲ್ಲಿ ನಾವೇ ಸೇನಾನಿಗಳು’

‘ಅಮ್ಮಾ... ನೀನಂತೂ ಆ ದಿನಗಳಲ್ಲಿ ನನ್ನನ್ನು ಪಡೆದೆ. ಎಷ್ಟೆಲ್ಲ ಒತ್ತಡ ಸಹಿಸಿರಬಹುದಲ್ಲ ನೀ...?’ ಎಂಬ ಮಸಾಬಾ ಪ್ರಶ್ನೆಗೆ ನೀನಾ ಗುಪ್ತಾ ನೀಡಿದ ಉತ್ತರವಿದು.

ಗಟ್ಟಿಗಿತ್ತಿ ಎಂದೇ ಬಿಂಬಿತವಾಗಿರುವ ನೀನಾ ಗುಪ್ತಾ ಮತ್ತು ಮಗಳು ಮಸಾಬಾ ಗುಪ್ತಾಳ ಆತ್ಮಕಥನದಂತಿರುವ ಮಸಾಬಾ ಮಸಾಬಾ ವೆಬ್‌ಸಿರೀಸ್‌ನ ಸಂಭಾಷಣೆಗಳಿವು.

ಭಾರತೀಯ ಫ್ಯಾಷನ್‌ ಲೋಕದಲ್ಲಿ ತನ್ನದೇ ಹೆಸರಿನ ಬ್ರ್ಯಾಂಡ್‌ ಸೃಷ್ಟಿಸಿರುವ ವಸ್ತ್ರವಿನ್ಯಾಸಕಿ ಮಸಾಬಾ ಕತೆ ಸಾಕಷ್ಟು ಏರಿಳಿತಗಳಿಂದ ಕೂಡಿದೆ. ಸ್ನೇಹಿತರ ಸಾಂಗತ್ಯ ಇಲ್ಲದಿದ್ದಲ್ಲಿ ಮಸಾಬಾ ಬಾಲಿವುಡ್‌ನ ಸಮುದ್ರದಲ್ಲಿ ಕಳೆದೇಹೋಗುತ್ತಿದ್ದಳೇನೊ.. ಆದರೆ ಹಾಗಾಗಲಿಲ್ಲ. ಹಾಗಾಗಗೊಡಲಿಲ್ಲ. ಅಮ್ಮ ನೀನಾ, ಕೈಜೋಡಿಸಿ ನಿಂತರು.

ತಮ್ಮ 60ರ ಹರೆಯದಲ್ಲಿ ಬಧಾಯಿ ಹೋ ಬಧಾಯಿಗೆ ಆಯ್ಕೆಯಾಗಿದ್ದು, ಪ್ರತಿಭೆಯಿದ್ದರೂ ಬಾಲಿವುಡ್‌ನಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಪರಿತಪಿಸಿದ್ದು, ನವದೆಹಲಿಯಿಂದ ಮುಂಬೈಗೆ ಬಂದು ಉಳಿದಿದ್ದು, ಅವಕಾಶಗಳು ಸಿಕ್ಕಾಗ ಅವನ್ನು ಬಳಸಿಕೊಂಡಿದ್ದು, ಇವೆಲ್ಲ ಮಸಾಬಾಗೆ ಪಾಠಗಳಾಗುತ್ತಲೇ ಹೋದವು.

ಒಂದು ಬಾಂಧವ್ಯ ಮುರಿದಾಗ, ಅಮ್ಮನನ್ನು ಪ್ರಶ್ನಿಸುವ ಮಸಾಬಾಳಲ್ಲಿ ಆಗಾಗ ಪುಟ್ಟ ಬಾಲಕಿ ಇರುವುದನ್ನು ತೋರುತ್ತಲೇ ಹೋಗುತ್ತಾರೆ.

ಒಂದಿನಿತು ಪ್ರೀತಿಗಾಗಿ ತಹತಹಿಸುತ್ತಲೇ ಸ್ನೇಹಿತರಿಗಾಗಿ ತನ್ನನ್ನು ಕೊಟ್ಟುಕೊಳ್ಳುವ, ಖಿನ್ನತೆಯನ್ನು ಎದುರಿಸುತ್ತಲೇ ಸೃಜನಶೀಲ ಮನಸನ್ನು, ಕ್ರಿಯಾಶೀಲವಾಗಿ ಬದಲಿಸುವಲ್ಲಿ ಎದುರಾಗುವ ಸಮಸ್ಯೆಗಳು, ಇವೆಲ್ಲವೂ ಸೋನಮ್‌ ನಯ್ಯರ್‌ ಚಂದಗೊಳಿಸಿ, ತೆರೆಯ ಮೇಲೆ ಮೂಡಿಸಿದ್ದಾರೆ.

ಮಸಾಬಾ ವಿನ್ಯಾಸಗಳು ಪೈರಸಿ ಆಗಿ ಮಾರುಕಟ್ಟೆಗೆ ಬರುವುದು, ವಿನ್ಯಾಸಗಳು ನಕಲಾಗುವುದು, ಅದನ್ನು ಮಸಾಬಾ ಎದುರಿಸುವುದು, ನಿಭಾಯಿಸುವುದು ಎಲ್ಲವೂ ಅಷ್ಟಷ್ಟರಲ್ಲಿ ಪರಿಣಾಮಕಾರಿ ಮುಗಿಸಿಬಿಡುತ್ತಾರೆ.

ಅಮ್ಮ ಮಗಳು ಇಬ್ಬರೂ ತಮ್ಮ ಪಾತ್ರಗಳನ್ನು ತಾವೇ ನಿರ್ವಹಿಸಿದ್ದಾರೆ. ತಮ್ಮ ಅಸ್ಮಿತೆಗಾಗಿ ತಾವು ಎದುರಿಸಿದ ಕಷ್ಟಗಳನ್ನು ಮರು ಜೀವಿಸಿದಂತೆ ನಿಭಾಯಿಸಿದ್ದಾರೆ. ಕಿಯಾರಾ ಅಡ್ವಾಣಿ, ಶರ್ಮನ್ ಸಾಹು, ನೀಲ್‌ ಭೋಪಾಲಮ್‌, ಸುನೀತಾ ರಾಜವಾಡ ಮುಂತಾದವರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಮಸಾಬಾ ಮತ್ತು ನೀನಾ ಅವರ ನಡುವಿನ ಬಾಂಧವ್ಯಗಳಲ್ಲಿ ಬರುವ ಮುನಿಸು, ಪರಸ್ಪರ ಅವಲಂಬನೆ, ನೀನಾ ಗುಪ್ತಾ ಅವರಿಂದ ಬಿಡಿಯಾಗಿ ಬದುಕಬೇಕೆನ್ನುವ ಹಟ, ಛಲ, ನೋವಾದಾಗ ಮತ್ತೆ ಅಮ್ಮನ ಮಡಿಲು ಅರಸಿಬರುವ ಮಗಳು. ಇಡೀ ಸಿರೀಸ್‌ ಅನ್ನು ಒಂದೇ ದಿನ ನೋಡಿ ಮುಗಿಸುವಂತೆ ಮಾಡುತ್ತದೆ.

ನೆಟ್‌ಫ್ಲಿಕ್ಸ್‌ ಮಸಾಬಾ ಮಸಾಬಾ ಟ್ರೇಲರ್‌ ನೋಡಲು:

https://www.youtube.com/watch?v=INzU-gFx_gA

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT