ಗುರುವಾರ , ಫೆಬ್ರವರಿ 25, 2021
28 °C

'ತಾಂಡವ್‌' ನಂತರ ವಿವಾದದ ಸುಳಿಯಲ್ಲಿ 'ಮಿರ್ಜಾಪುರ್‌': ಸುಪ್ರೀಂ ನೋಟಿಸ್

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಅಮೆಜಾನ್‌ ಪ್ರೈಮ್‌ ವಿಡಿಯೊದಲ್ಲಿ ಬಿಡುಗಡೆಯಾಗಿರುವ ವೆಬ್‌ ಸರಣಿ 'ಮಿರ್ಜಾಪುರ್‌' ನಿರ್ಮಾಪಕರಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ.

ಈ ವೆಬ್‌ ಸರಣಿಯು ಉತ್ತರ ಪ್ರದೇಶದ ಮಿರ್ಜಾಪುರ್‌ನ ಹೆಸರಿಗೆ ಧಕ್ಕೆಯುಂಟು ಮಾಡಿದೆ ಎಂದು ಆರೋಪಿಸಿ ಸುಜೀತ್‌ ಕುಮಾರ್‌ ಸಿಂಗ್‌ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.

'ಮಿರ್ಜಾಪುರ್‌ ನಗರವು ಶ್ರೀಮಂತ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಹೊಂದಿದೆ. ಆದರೆ 2018 ರಲ್ಲಿ ಬಿಡುಗಡೆಯಾದ ವೆಬ್ ಸರಣಿಯು ಜಿಲ್ಲೆಯ ಹೆಸರಿಗೆ ಧಕ್ಕೆ ತಂದಿದೆ. ಈ ಸರಣಿಯಲ್ಲಿ ಮಿರ್ಜಾಪುರವನ್ನು ಗೂಂಡಾಗಳು ಮತ್ತು ವ್ಯಭಿಚಾರಿಗಳ ನಗರವೆಂದು ಬಿಂಬಿಸಲಾಗಿದೆ' ಎಂದು ಸುಜೀತ್‌ ಕುಮಾರ್‌ ಸಿಂಗ್‌ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.

ಈ ಅರ್ಜಿಯ ವಿಚಾರಣೆಯನ್ನು ಗುರುವಾರ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌ ಮಿರ್ಜಾಪುರ್‌ ನಿರ್ಮಾಪಕರಿಗೆ ನೋಟಿಸ್‌ ನೀಡಿದೆ.

ಅಧಿಕಾರಕ್ಕಾಗಿ ಭ್ರಮಾಧೀನರಾಗುವ ಸಹೋದರರಿಬ್ಬರ ಕಥೆಯಾದ ‘ವಿರ್ಜಾಪುರ್‌’ನಲ್ಲಿ, ಭಾರತದ ಹೃದಯಭಾಗದ ಹಾಗೂ ಯುವಕರ ಚಿತ್ರಣವನ್ನು ಇದರಲ್ಲಿ ಪ್ರಸ್ತಾಪಿಸಲಾಗಿದೆ. ಉದ್ದೀಪನ ಔಷಧಗಳು, ಗನ್‍ಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳಿಂದ ಕೂಡಿದ ಸಮಾಜದಲ್ಲಿ ಜಾತಿ, ಅಧಿಕಾರ, ಪ್ರತಿಷ್ಠೆ ಮತ್ತು ಸಿಡುಕುತನ ಒಂದಾಗಿ ಹಿಂಸಾಚಾರ ಹೇಗೆ ಜೀವನದ ಮಾರ್ಗವಾಗುತ್ತದೆ ಎಂಬುದನ್ನು ಚಿತ್ರೀಕರಿಸಲಾಗಿದೆ.

ಕರಣ್ ಅನ್ಶುಮಾನ್ ಮತ್ತು ಪುನೀತ್ ಕೃಷ್ಣ ಅವರ ರಚನೆ ಮತ್ತು ಗುರ್ಮೀತ್ ಸಿಂಗ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಮಿರ್ಜಾಪುರ್, ಒಟ್ಟು 9 ಎಪಿಸೋಡ್‌ಗಳನ್ನು ಹೊಂದಿದೆ.

‘ಮಿರ್ಜಾಪುರ್‌’ನಲ್ಲಿ ಪಂಕಜ್ ತ್ರಿಪಾಠಿ ಪ್ರಮುಖ ಪಾತ್ರವನ್ನು ಮಾಡಿದ್ದಾರೆ. ಅವರೊಂದಿಗೆ ಅಲಿ ಫಜಲ್, ವಿಕ್ರಾಂತ್ ಮ್ಯಾಸ್ಸೆ, ದಿವ್ಯೇಂದು ಶರ್ಮಾ, ಕುಲಭೂಷಣ್ ಖರ್ಬಾಂಡಾ, ಶ್ವೇತಾ ತ್ರಿಪಾಠಿ, ಶ್ರಿಯಾ ಪಿಳ್ಗಾಂವ್‍ಕರ್, ರಸಿಕಾ ದುಗಲ್, ಹರ್ಷಿತಾ ಗೌರ್, ಮತ್ತು ಅಮಿತ್ ಸಿಯಾಲ್ ಸಹ ನಟಿಸಿದ್ದಾರೆ.

ತಾಂಡವ್‌ ವಿವಾದ: ಕ್ಷಮೆ ಯಾಚಿಸಿದ ನಿರ್ದೇಶಕ

ಸೈಫ್‌ ಅಲಿ ಖಾನ್‌ ಹಾಗೂ ಡಿಂಪಲ್‌ ಕಪಾಡಿಯಾ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ತಾಂಡವ್‌ ವೆಬ್‌ ಸರಣಿಯು ಕಳೆದ ವಾರ ವಿವಾದಕ್ಕೆ ಗ್ರಾಸವಾಗಿತ್ತು. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಹಿಂದೂ ದೇವತೆಗಳನ್ನು ಅವಮಾನ ಮಾಡಿರುವ ಆರೋಪದಡಿ ಈ ಚಿತ್ರದ ವಿರುದ್ಧ ದೇಶದ ವಿವಿಧೆಡೆ ಪ್ರತಿಭಟನೆ ನಡೆಸಲಾಗುತ್ತಿದೆ. ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಬುಧವಾರ ಚಿತ್ರ ನಿರ್ಮಾತೃಗಳ ವಿರುದ್ಧ ಮತ್ತೆರಡು ಎಫ್‌ಐಆರ್‌ ದಾಖಲಾಗಿತ್ತು. ‘ತಾಂಡವ್‌’ ವೆಬ್‌ ಸರಣಿಯ ಎರಡು ದೃಶ್ಯಗಳಿಗೆ ಕತ್ತರಿ ಹಾಕಿರುವ ಚಿತ್ರತಂಡ ಕ್ಷಮೆಯನ್ನೂ ಯಾಚಿಸಿತ್ತು. ‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು