ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲೂ ‘ಸಿದ್ಧಿ ಸೀರೆ’ ಸದ್ದು

Last Updated 10 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ನಿರ್ದೇಶಕರಾದ ಬ್ರಹ್ಮಾನಂದರೆಡ್ಡಿ ಮತ್ತು ಕೆ.ಎನ್‌.ಕೃಷ್ಣಕುಮಾರ್‌ ನೈಜ ಘಟನೆ ಆಧರಿಸಿ ನಿರ್ದೇಶಿಸಿರುವ ಚಿತ್ರ ‘ಸಿದ್ಧಿ ಸೀರೆ’. ಇದು ಅಮೆರಿಕದ ನ್ಯೂಯಾರ್ಕ್‌ LIFTOFF ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ, ವಿಶ್ವದ ಎಲ್ಲೆಡೆಗಳಿಂದ ಸ್ವರ್ಧೆಗೆ ಬಂದಿದ್ದ 250 ಸಿನಿಮಾಗಳಲ್ಲಿ ಪೈಕಿ 9ನೇ ಸ್ಥಾನ ಪಡೆದಿದೆ.‘ಗ್ರೇಟ್ ಕ್ಲಾಸಿಕ್ ಕಲೆಕ್ಷನ್’ ವಿಭಾಗದಲ್ಲಿಭಾರತದ ಮೊದಲ ಚಿತ್ರವಾಗಿ ಕೂಡ ಆಯ್ಕೆಯಾಗಿದೆ.

ಹಾಲಿವುಡ್‌ನ ರೇಲಿ ಸ್ಟುಡಿಯೊದಲ್ಲೂ ಪ್ರದರ್ಶನ ಕಂಡಿರುವ ಈ ಚಿತ್ರ ಹಾಲಿವುಡ್‌ ಚಿತ್ರ ನಿರ್ದೇಶಕರ ಗಮನವನ್ನೂ ಸೆಳೆದಿದೆ.ಹಾಲಿವುಡ್ ನಟ ಫಿಲಿಪ್ ವಾಕರ್‌ ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಚಿತ್ರದಲ್ಲಿ ತೋರಿಸಿರುವ ಹಳ್ಳಿಯನ್ನು ಕಣ್ಣಾರೆ ನೋಡಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದಾರಂತೆ. ಹಾಗೆಯೇ ಇದೇ 15ರಂದು ನಡೆಯಲಿರುವಜಾರ್ಖಂಡ್‌ ಫಿಲ್ಮ್‌ ಫೆಸ್ಟಿವಲ್‌ಗೂ ಈ ಚಿತ್ರ ನಾಮನಿರ್ದೇಶನಗೊಂಡಿದೆ.

ಬೆಂಗಳೂರಿನ ಕಾಡುಗೋಡಿಯಲ್ಲಿರುವಕೆನಡಾ ಮೂಲದ ಕೈರೊ ವ್ಯಾಲಿ ಕಾಲೇಜಿನಲ್ಲಿ ಸಿನಿಮಾ ನಿರ್ಮಾಣ ಮತ್ತು ಆ್ಯನಿಮೇಷನ್‌ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಉಪ‍ನ್ಯಾಸಕರೂ ಆದ ಬ್ರಹ್ಮಾನಂದರೆಡ್ಡಿ ‘ಸಿದ್ಧಿ ಸೀರೆ’ ಬಗ್ಗೆ ಹಲವು ಮಾಹಿತಿಗಳನ್ನು ‘ಸಿನಿಮಾ ಪುರವಣಿ’ ಜತೆಗೆ ತೆರೆದಿಟ್ಟಿದ್ದಾರೆ.

ಈ ಚಿತ್ರದ ಕಥೆಯ ಎಳೆ ಏನು?

ಮೈಸೂರು ಜಿಲ್ಲೆಯ ‌ಮಿರ್ಲೆಯಲ್ಲಿ ಹೆಂಡತಿ ಸತ್ತಾಗ ಗಂಡನನ್ನು ಹೆಣದ ಪಕ್ಕ ಕುಳ್ಳಿರಿಸಿ, ಗಂಡನಿಂದ ಕೊನೆ ಪೂಜೆ ಮಾಡಿಸುವ ಆಚರಣೆ ಇದೆ. ಶವ ಸಂಸ್ಕಾರಕ್ಕೂ ಮೊದಲು ಶವಕ್ಕೆ ಹೊಸ ಸೀರೆ ಉಡಿಸುವ ಪದ್ಧತಿ ಇದೆ. ತಳವರ್ಗದ ಸಮುದಾಯದಲ್ಲಿನ ಸಿದ್ಧಿ ತನ್ನ ಅಂತಿಮ ಯಾತ್ರೆಗೆ ಬೇಕಾಗುವ ಸೀರೆಯನ್ನು ಸಿದ್ದಿಸಿಕೊಳ್ಳಲು ನಡೆಸುವ ಹೋರಾಟದ ಕಥೆಯೇ ಈ ಚಿತ್ರದ ಜೀವಾಳ.

ಸಿದ್ಧಿಗೆ ಆರಂಭದಲ್ಲಿ ತಾನೊಬ್ಬಳು ಸ್ವಾತಂತ್ರ್ಯ ಹೋರಾಟಗಾರನ ಮಗಳೆನ್ನುವುದೇ ಗೊತ್ತಿರುವುದಿಲ್ಲ. ಭಿಕ್ಷೆ ಬೇಡಿ ಬದುಕುತ್ತಿರುತ್ತಾಳೆ. ಆಕೆಗೆ ಬದುಕಿನಲ್ಲಿ ಆಕಸ್ಮಿಕವಾಗಿ ಗುರು ದೀಕ್ಷೆಯೂ ಸಿಕ್ಕಿಬಿಡುತ್ತದೆ. ಸ್ವರ್ಗ ಬೇಗ ಸೇರಲೆಂದು ಶವಕ್ಕೆ ಹೆಚ್ಚು ಬೆಲೆ ಬಾಳುವ ಹೊಸ ಸೀರೆ ಉಡಿಸುತ್ತಾರೆ ಎನ್ನುವ ಮಾತು ನಂಬಿ ಆಕೆ ಸಾಧ್ಯವಾದಷ್ಟು ದುಬಾರಿ ಸೀರೆ ಸಂಪಾದಿಸಿಕೊಳ್ಳಲು ಬದುಕಿನ ವ್ಯಾಪಾರ ನಡೆಸುತ್ತಾಳೆ. ಸಿದ್ಧಿ ಬದುಕಿನಲ್ಲಿ ಕ್ರಮೇಣ ತನಗರಿವಿಲ್ಲದಂತೆ ಎಲ್ಲವನ್ನೂ ಕಳೆದುಕೊಳ್ಳುತ್ತಾ ಅಂದರೆ ತ್ಯಜಿಸುತ್ತಾ ನಿಜಶರಣೆಯಾಗುತ್ತಾ ಸಾಗುತ್ತಾಳೆ. ಕೊನೆಗೂ ಆಕೆ ಆ ಸೀರೆಯನ್ನು ಸಂಪಾದಿಸುತ್ತಾಳಾ ಅಥವಾ ಇಲ್ಲವೇ ಎನ್ನುವುದು ಈ ಚಿತ್ರದ ಕಥೆ.

ಕಥೆ ಹುಟ್ಟಿದ್ದು ಹೇಗೆ?

ಮೈಸೂರು ಸಮೀಪದ ಮಿರ್ಲೆಯಲ್ಲಿ ನಡೆದಿದ್ದ ಸತ್ಯ ಘಟನೆ ಆಧರಿಸಿದ ಕಥೆ ಇದು. 25 ವರ್ಷಗಳ ಹಿಂದೆ ಸಂಭವಿಸಿತ್ತು. ಇದನ್ನು ಅದೇ ಊರಿನ ಲೇಖಕ ರವಿಶಂಕರ್‌ ಮಿರ್ಲೆ18 ವರ್ಷಗಳ ಹಿಂದೆ ಕಾದಂಬರಿಯಾಗಿ ಬರೆದಿಟ್ಟಿದ್ದರು. ಅದು ಪ್ರಕಟವಾಗಿರಲಿಲ್ಲ. 2000ರಲ್ಲಿ ನನಗೆ ಈ ಕಥೆಯನ್ನು ಅವರು ಹೇಳಿದ್ದರು.ಹಿಂದೊಮ್ಮೆ ಸಿನಿಮಾ ಮಾಡುವ ಬಗ್ಗೆ ಚರ್ಚೆಯಾದರೂ ಅದು ಕೈಗೂಡಿರಲಿಲ್ಲ. ಆದರೆ, ಇದನ್ನು ಸಿನಿಮಾ ಮಾಡುವ ಕನಸು ಕೈಬಿಟ್ಟಿರಲಿಲ್ಲ ನಾವು.

ಸಿನಿಮಾ ಸಾಕಾರಗೊಂಡಿದ್ದು ಹೇಗೆ?

ಮೇರಿಕೋಮ್‌ನಂತಹ ಅನೇಕ ಸಾಧಕಿಯರ ಬಗ್ಗೆಸಿನಿಮಾ ಮಾಡುವುದು ಸಹಜ. ಸಿದ್ಧಿಒಬ್ಬ ‘ಅನ್‌ಸಂಗ್‌ ಹೀರೊಯಿನ್‌’. ಶರಣರು ಎಂದರೆ ತ್ಯಾಗಿಗಳು. ಕಾಯಕ ಮತ್ತು ದೈವದ ಕಡೆಗೆ ನಂಬಿಕೆ ಇಡುವುದೇ ಶರಣ ಧರ್ಮ. ಸಿದ್ಧಿಯೇ ನಿಜವಾದ ಶರಣೆ ಎನ್ನುವುದನ್ನು ತೆರೆ ಮೇಲೆ ತೋರಿಸುವತುಡಿತ ಇತ್ತು.2017ರಲ್ಲಿ ರವಿಶಂಕರ್‌ ಮಿರ್ಲೆ ಅವರನ್ನು ಆಕಸ್ಮಿಕವಾಗಿ ಭೇಟಿಯಾದೆ. ಆಗ ಸಿನಿಮಾ ಕನಸು ಮತ್ತೆ ಚಿಗುರೊಡೆಯಿತು. ‘ಸಿದ್ಧಿಸೀರೆ’ ಕೈಗೆತ್ತಿಕೊಂಡೆವು. ಕಿಸ್‌ ಇಂಟರ್‌ನ್ಯಾಷನಲ್‌ ವಿಎಫ್‌ಎಕ್ಸ್‌ ಕಂಪನಿ ಮೂಲಕ ಅದು ಸಾಧ್ಯವಾಯಿತು.

ನಿರ್ದೇಶಕನ ಟೊಪ್ಪಿ ಧರಿಸಿದ್ದು ಹೇಗೆ?

ನಾನು 1999–2000ರಲ್ಲಿ ದೂರದರ್ಶನಕ್ಕೆ ‘ಅಪಶ್ರುತಿ’ ಧಾರಾವಾಹಿ ನಿರ್ದೇಶಿಸಿದ್ದೆ. 35 ಎಪಿಸೋಡ್‌ ಪ್ರಸಾರವಾಯಿತು. ಅದಕ್ಕೆ ಸಂಗೀತವನ್ನೂ ನಾನೇ ಸಂಯೋಜಿಸಿದ್ದೆ. ಮೊದಲ ಬಾರಿಗೆ ಹಾಡುಗಳನ್ನು ಪರಿಚಯಿಸಿದಧಾರಾವಾಹಿ ಎನ್ನುವ ಶ್ರೇಯವೂ ‘ಅಪಶ್ರುತಿ’ಗೆ ಇದೆ. ಇದರಲ್ಲಿ ಎಂಟು ಹಾಡುಗಳು ಇದ್ದವು. ಇದಾದ ನಂತರ ಸಿನಿಮಾ ಬಗ್ಗೆ ಇನ್ನಷ್ಟು ಕಲಿಯಬೇಕೆನ್ನುವ ಹಸಿವು ನನ್ನಲ್ಲಿ ಕಾಣಿಸಿತು. ಸಿನಿಮಾ ನಿರ್ಮಾಣವನ್ನುತಾಂತ್ರಿಕವಾಗಿ ಅರ್ಥಮಾಡಿಕೊಳ್ಳಲು ಮುಂಬೈನಲ್ಲಿ ಆ್ಯನಿಮೇಷನ್‌ ಸ್ಟುಡಿಯೊ ಸೇರಿದೆ. ಟಾಮ್‌ ಅಂಡ್‌ ಜೆರ್‍ರಿ ಕಾರ್ಟೂನ್‌ನ ಟಾಮ್‌ ಕ್ಯಾರೆಕ್ಟರ್‌ ಸೃಷ್ಟಿಕರ್ತ ಫಿಲಿಪ್ಪೀನ್ಸ್‌ನ ಡೀನೂ ಕೊರಿಡಿರೊ ಅವರ ಬಳಿ ಸಹಾಯಕ ನಿರ್ದೇಶಕನಾಗಿ ತರಬೇತಿ ಪಡೆದೆ. ಜತೆಗೆ ಡಿಸ್ನಿ ಶೈಲಿ ಆ್ಯನಿಮೇಷನ್‌ ಕೂಡ ಕಲಿತೆ.

ಚಿತ್ರಕ್ಕೆ ಕಲಾವಿದರ ಆಯ್ಕೆ ಹೇಗಿತ್ತು

ಕಲಾವಿದರಾದ ಬಿ. ಜಯಶ್ರೀ, ತಾರಾ, ಉಮಾಶ್ರೀ, ಶ್ರುತಿ ಅವರನ್ನು ಈ ಪಾತ್ರಕ್ಕೆ ಸಂಪರ್ಕಿಸಿದೆವು. ಆದರೆ, ಸಮಯ ಹೊಂದಿಕೆಯಾಗಲಿಲ್ಲ. ಕೊನೆಗೆ ಈ ಪಾತ್ರಕ್ಕೆ ಮತ್ತು ನಮ್ಮ ಸಮಯಕ್ಕೆ ಸುಧಾ ನರಸಿಂಹರಾಜು ಸಿಕ್ಕಿದರು. ಪಾತ್ರಕ್ಕೆ ಬೇಕಾದ ಪೆದ್ದುಕಳೆ ಸುಧಾ ಅವರಲ್ಲಿ ಕಾಣಿಸಿದ್ದು, ನಮ್ಮ ಕೆಲಸವನ್ನು ಇನ್ನಷ್ಟು ಸುಲಭಗೊಳಿಸಿತು. ಸಿದ್ಧಿಮಗಳ ಪಾತ್ರಕ್ಕೆ ನಟಿ ಮಹಾಲಕ್ಷ್ಮಿ ಅರಸ್‌ ಜೀವ ತುಂಬಿದ್ದಾರೆ. ಸಿದ್ಧಿಯ ತಮ್ಮನ ಪಾತ್ರದಲ್ಲಿ ಸ್ವರ್ಣಚಂದ್ರ, ಗುರುಗಳ ಪಾತ್ರದಲ್ಲಿ ರವಿಶಂಕರ್‌ ಮಿರ್ಲೆ, ಗ್ರಾಮದ ಗೌಡರ ಪಾತ್ರಗಳಲ್ಲಿ ಸುಕುಮಾರ ಮತ್ತು ಹರ್ಷವರ್ಧನ್‌ ಜೀವಿಸಿದ್ದಾರೆ. ಇನ್ನೊಂದು ಪ್ರಮುಖ ಪಾತ್ರವಾದ ಕೆಂಪಿ ಪಾತ್ರದಲ್ಲಿ ಕೀರ್ತಿ ರೆಡ್ಡಿ ನಟಿಸಿದ್ದಾರೆ.

ಚಿತ್ರೀಕರಣದ ಬಗ್ಗೆ ಹೇಳಿ...

ಕನಕಪುರದ ಬೊಮ್ಮನಹಳ್ಳಿಯಲ್ಲಿ ಸೆಟ್‌ ನಿರ್ಮಿಸಿ, ಚಿತ್ರೀಕರಣ ಮಾಡಲಾಯಿತು. ಒಂದೇ ಶೆಡ್ಯೂಲ್‌ನಲ್ಲಿ 11 ದಿನಗಳಲ್ಲಿ ಚಿತ್ರೀಕರಣ ಮುಗಿಸಿದೆವು.ಕಲಾವಿದರಿಗೆ ಲೈವ್‌ನಲ್ಲಿ ಮೇಕಪ್‌ ಮಾಡಿರಲಿಲ್ಲ. ಆದರೆ, ಡಿಜಿಟಲ್‌ ಮೇಕಪ್‌ ಮಾಡಿದ್ದೇವೆ.ಕಂಪ್ಯೂಟರ್‌ ಗ್ರಾಫಿಕ್‌ನಲ್ಲಿ ಮಾಡಿರುವ ಡಿಜಿಟಲ್‌ ಮೇಕಪ್‌ ಇದು.ವಿ ಎಫೆಕ್ಟ್‌ಸೂಪರ್‌ವೈಸರ್‌ ಆಗಿ ಜೈ ಕೃಪಲಾನಿ ಕೆಲಸ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT