ಗುರುವಾರ , ಫೆಬ್ರವರಿ 25, 2021
20 °C

ಸಿನಿಮೋತ್ಸವಕ್ಕೆ ಅಂತರರಾಷ್ಟ್ರೀಯ ಮಾನ್ಯತೆಯೆಂಬ ಮರೀಚಿಕೆ

ಜಗದೀಶ್ ಅಂಗಡಿ Updated:

ಅಕ್ಷರ ಗಾತ್ರ : | |

ಹತ್ತು ಚಲನಚಿತ್ರೋತ್ಸವಗಳನ್ನು ಯಶಸ್ವಿಯಾಗಿ ಆಯೋಜಿಸಿ ದೇಶದ ಗಮನಸೆಳೆದರೂ, ಬೆಂಗಳೂರು ಚಲನಚಿತ್ರೋತ್ಸವಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ಇನ್ನೂ ಮರಿಚಿಕೆಯಾಗಿಯೇ ಉಳಿದಿದೆ. ಮಾನ್ಯತೆಯಿಲ್ಲದ ಕಾರಣಕ್ಕೆ ಚಲನಚಿತ್ರೋತ್ಸವ ಅನೇಕ ಸದವಕಾಶಗಳಿಂದ ವಂಚಿತವಾಗಿಯೇ ಉಳಿದುಬಿಟ್ಟಿದೆ.

ಫ್ರಾನ್ಸ್‌ನ ಪ್ಯಾರಿಸ್‍ನಲ್ಲಿ ಕಚೇರಿ ಹೊಂದಿರುವ ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಫಿಲ್ಮ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ (ಎಫ್‍ಐಏಪಿಎಫ್) ಪ್ರಪಂಚದೆಲ್ಲೆಡೆ ಆಯೋಜನೆಗೊಳ್ಳುವ ಚಲನಚಿತ್ರೋತ್ಸವಗಳಿಗೆ ಅಂತರರಾಷ್ಟ್ರೀಯ ಮಾನ್ಯತೆ ನೀಡುವ ಅಧಿಕೃತ ಸಂಸ್ಥೆ. ಮಾನ್ಯತೆಗಾಗಿ ಎಫ್‍ಐಏಪಿಎಫ್ ಸದಸ್ಯತ್ವ ಕಡ್ಡಾಯ. ಸದಸ್ಯತ್ವ ಪಡೆಯುವ ಚಿತ್ರೋತ್ಸವಗಳು ವಾರ್ಷಿಕ ಚಂದಾ ಪಾವತಿಸಬೇಕು.

ಭಾರತದಲ್ಲಿ ಕೇವಲ ನಾಲ್ಕು ಚಲನಚಿತ್ರೋತ್ಸವಕ್ಕೆ ಮಾತ್ರ ಎಫ್‍ಐಏಪಿಎಫ್ ಮಾನ್ಯತೆ ನೀಡಿದೆ. ಕೇಂದ್ರ ಸರ್ಕಾರ ಆಯೋಜನೆ ಮಾಡುವ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಪಶ್ಷಿಮ ಬಂಗಾಳ ಸರ್ಕಾರ ನಡೆಸುವ ಕೋಲ್ಕತ್ತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಕೇರಳ ಸರ್ಕಾರದ ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಮುಂಬೈ ಅಕಾಡೆಮಿ ಆಫ್ ದಿ ಮೂವಿಂಗ್ ಇಮೇಜ್ (ಮಾಮಿ) ಖಾಸಗಿಯಾಗಿ ನೆಡೆಸುವ ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳು ಮಾತ್ರ ಮಾನ್ಯತೆ ಹೊಂದಿವೆ.

ಮಾನ್ಯತೆಗಾಗಿ ಕೆಲ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಮೂರು ಪ್ರಮುಖ ಮಾನದಂಡಗಳೆಂದರೆ, ಕಡ್ಡಾಯವಾಗಿ ನಿಗದಿ ಪಡಿಸಿದ ದಿನಗಳಂದೇ ಪ್ರತಿವರ್ಷ ಚಲನಚಿತ್ರೋತ್ಸವಗಳು ಆಯೋಜನೆಗೊಳ್ಳಬೇಕು. ವಾರ್ಷಿಕ ಚಟುವಟಿಕೆಗಳ ವೇಳಾಪಟ್ಟಿ ಹೊಂದಿರಬೇಕು. ನಿಗದಿಪಡಿಸಿದ ನಗರದಲ್ಲಿಯೇ ಚಲನಚಿತ್ರೋತ್ಸವಗಳು ಆಯೋಜನೆಗೊಳ್ಳಬೇಕು.

ಬೇರೆ ದೇಶಗಳ ಚಿತ್ರಕರ್ಮಿಗಳಿಗೆ ತಮ್ಮ ಚಿತ್ರಗಳನ್ನು ಉತ್ಸವಗಳಿಗೆ ಕಳುಹಿಸಲು ಸುಲಭ ಸಾಧ್ಯವಾಗಬೇಕು. ಆಯೋಜಕರಿಗೆ ಪೂರ್ವಭಾವಿಯಾಗಿ ಯಾವ ಭಾಷೆಗಳ, ಯಾವ ದೇಶಗಳ ಹಾಗೂ ಎಷ್ಟು ಚಿತ್ರಗಳು ಉತ್ಸವಕ್ಕೆ ಪ್ರವೇಶ ಪಡೆಯುತ್ತವೆ ಎಂಬುದು ಸುಲಭವಾಗಿ ತಿಳಿಯುವಂತಿರಬೇಕು. ಹೀಗಾಗಿ ಈ ಮಾನದಂಡಗಳನ್ನು ಕಡ್ಡಾಯ.

ಕಾರಣಾಂತರಗಳಿಂದಾಗಿ ಹನ್ನೊಂದು ವರ್ಷಗಳಾದರೂ ಬೆಂಗಳೂರು ಚಲನಚಿತ್ರೋತ್ಸವ ಈ ಮಾನದಂಡಗಳನ್ನು ಪಾಲಿಸಲು ಇಲ್ಲಿಯ ತನಕ ಸಾಧ್ಯವೇ ಆಗಿಲ್ಲ.

ನಿರ್ದೇಶಕ ಡಿ ರಾಜೇಂದ್ರ ಸಿಂಗ್ ಬಾಬು ಹೇಳುವಂತೆ ‘ರಾಜಕೀಯ ಅನಿವಾರ್ಯತೆಗಳು ಹಾಗೂ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ನಡುವೆ ಹೊಂದಾಣಿಕೆಯಿರದ ಕಾರಣಗಳಿಂದಾಗಿ ಸ್ಪಷ್ಟ ದಿನಾಂಕದ ನಿಗದಿ ಹಾಗೂ ವಾರ್ಷಿಕ ಚಟುವಟಿಕೆಗಳ ವೇಳಾಪಟ್ಟಿ ತಯಾರಿಸುವುದು ಸಾಧ್ಯವಾಗುತ್ತಿಲ್ಲ. ಅಕಾಡೆಮಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತದೆ. ಸ್ಷತಂತ್ರ ನಿರ್ಧಾರ ಕೈಗೊಳ್ಳುವ ಅಧಿಕಾರ ಅಕಾಡೆಮಿಗೆ ಪ್ರಾಪ್ತವಾದಾಗ ಮಾತ್ರ ಈ ಕೆಲಸಗಳು ಸುಲಭ’.

ಆಯೋಜನೆಗೊಳ್ಳುವ ಕೇವಲ ಮೂರ್ನಾಲ್ಕು ತಿಂಗಳ ಮೊದಲು ಮಾತ್ರ ಚಟುವಟಿಕೆಗಳು ಬೆಂಗಳೂರಿನಲ್ಲಿ ಆರಂಭಗೊಳ್ಳುತ್ತವೆ. ಉತ್ಸವಕ್ಕಾಗಿ ಒಂದು ಕಚೇರಿಯನ್ನು ತೆರೆಯಲಾಗುತ್ತದೆ. ವ್ಯವಸ್ಥಿತವಾಗಿ ವರ್ಷವಿಡಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಬೆಂಗಳೂರು ಚಲನಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್.ಎಸ್.ವಿದ್ಯಾಶಂಕರ್ ಅವರ ಅಭಿಮತ.

ಪ್ರಪಂಚದಾದ್ಯಂತ ಸಾವಿರಾರು ಚಲನಚಿತ್ರೋತ್ಸವ ವರ್ಷವಿಡೀ ಆಯೋಜನೆಗೊಳ್ಳುತ್ತವೆ. ಅವೆಲ್ಲವೂಗಳಿಗೂ ಮಾನ್ಯತೆ ಇಲ್ಲ. ಹಾಗೇ ನೋಡಿದರೆ, ಮಾನ್ಯತೆ ಚಲನಚಿತ್ರೋತ್ಸವ ಪರದಿ ಹಾಗೂ ವ್ಯಾಪ್ತಿ ದೃಷ್ಟಿಯಿಂದ ಅಷ್ಟೊಂದು ಪರಿಣಾಮ ಬೀರದು. ಚಲನಚಿತ್ರೋತ್ಸವ ಪರೀಧಿ ಹಾಗೂ ವ್ಯಾಪ್ತಿ ಆಯೋಜಕರು ವಿನಿಯೊಗಿಸುವ ಹಣಕಾಸನ್ನು ಅವಲಂಬಿಸಿರುತ್ತದೆ ಎಂದು ವಿದ್ಯಾಶಂಕರ್ ಹೇಳುತ್ತಾರೆ.

‘ನಗರಗಳ ಹೆಸರಿನಿಂದಲೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳನ್ನು ಗುರುತಿಸಲಾಗುತ್ತದೆ. ಉದಾಹರಣೆಗೆ ಕಾನ್ಸ್, ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳು. ಬೆಂಗಳೂರು ಚಲನಚಿತ್ರೋತ್ಸವ ಬೆಂಗಳೂರಿನಲ್ಲಿ ಮಾತ್ರವೇ ಆಯೋಜನೆಗೊಳ್ಳಬೇಕು’ ಎಂಬುದು ಅವರ ನಿಲುವು.

‘ಇದರ ಅರ್ಥ ಅತ್ಯುತ್ತಮ ಚಿತ್ರಗಳು ಕೇವಲ ಚಲನಚಿತ್ರೋತ್ಸವದಲ್ಲಿ ಮಾತ್ರವೇ ಪ್ರದರ್ಶನಗೊಳ್ಳಬೇಕೆಂದಿಲ್ಲ. ಇಲ್ಲಿ ಪ್ರದರ್ಶನಗೊಳ್ಳುವ ಚಿತ್ರಗಳನ್ನು ರಾಜ್ಯದ ಬೆರೆ ನಗರಗಳಲ್ಲಿಯೂ ಪ್ರದರ್ಶಿಸಬಹುದು. ಈ ನಿಟ್ಟಿನಲ್ಲಿ ಬೆಂಗಳೂರು ಚಲನಚಿತ್ರೋತ್ಸವ ಪ್ರದರ್ಶನಗೊಳ್ಳುವ ಚಿತ್ರಗಳನ್ನು ಧಾರವಾಡ, ಕಲಬುರ್ಗಿಗಳಲ್ಲಿಯೂ ಪ್ರದರ್ಶಿಸುವ ಇರಾದೆ ಅಕಾಡೆಮಿಗೆ ಇದೆ’ ಎನ್ನುತ್ತಾರೆ ವಿದ್ಯಾಶಂಕರ್.

ಅವರ ಪ್ರಕಾರ ಬೆಂಗಳೂರು ಚಲನಚಿತ್ರೋತ್ಸವಕ್ಕೆ ಮಾನ್ಯತೆ ಸಿಗುವ ಎಲ್ಲಾ ಅರ್ಹತೆಗಳಿವೆ. ಈಗ ಅಕಾಡೆಮಿ ಸ್ವಂತ ಕಟ್ಟಡ ಹಾಗೂ ಉನ್ನತ ಸೌಲಭ್ಯಗಳನ್ನು ಹೊಂದಿದೆ. ಸಿಗಬಹುದಾದ ಮಾನ್ಯತೆ ಚಿತ್ರೋತ್ಸವದ ಮಹತ್ವವನ್ನು ಖಂಡಿತ ಹೆಚ್ಚಿಸಬಲ್ಲುದು.

‘ಹೆಚ್ಚಿನ ಸಹಾಯಧನಕ್ಕಾಗಿ ಮಾನ್ಯತೆ ಹೊಂದಿದ ದೇಶದ ನಾಲ್ಕು ಚಲನಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳು ಪ್ರದರ್ಶನವಾಗುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಹೀಗಿರುವಾಗ, ಕನ್ನಡ ಚಿತ್ರಗಳ ಹಾಗೂ ಹೆಚ್ಚಿನ ಸಹಾಯಧನದ ದ್ರಷ್ಟಿಯಿಂದ ಮಾನ್ಯತೆ ತೀರಾ ಅಗತ್ಯವಾಗಿದೆ’ ಎಂದು ಒತ್ತಿ ಹೇಳುತ್ತಾರೆ.

ಸುಚಿತ್ರ ಬೆಂಗಳೂರು ಚಲನಚಿತ್ರೋತ್ಸವ

ಸುಚಿತ್ರ ಬೆಂಗಳೂರು ಚಲನಚಿತ್ರೋತ್ಸವ 1996 ಅಸ್ತಿತ್ವಕ್ಕೆ ಬಂದಿತು. ಮೊದಲನೆ ಚಲನಚಿತ್ರೋತ್ಸವ ಸುಚಿತ್ರ ಫಿಲ್ಮ ಸೊಸೈಟಿಯ ಸಹಯೊಗದಲ್ಲಿ ನಡೆಯಿತು. ಎರಡು ವರ್ಷದ ವಿರಾಮದ ಬಳಿಕ, ಎರಡನೇ ಚಿತ್ರೋತ್ಸವ ಆಯೋಜನೆಗೊಂಡಿತು. 2007, 2010 ಹಾಗೂ 2015ರಲ್ಲಿ ಚಿತ್ರೋತ್ಸವ ಕಾರಣಾಂತರಗಳಿಂದಾಗಿ ಆಯೋಜನೆಗೊಳ್ಳಲಿಲ್ಲ. ಒಂಬತ್ತನೇ ಚಿತ್ರೋತ್ಸವ ಜಂಟಿಯಾಗಿ ಬೆಂಗಳೂರು ಹಾಗೂ ಮೈಸೂರಿನಲ್ಲಿ ಆಯೋಜನೆಗೊಂಡಿತು. ಮೈಸೂರಿನಲ್ಲಿ ಸಿಕ್ಕ ನೀರಸ ಪ್ರತಿಕ್ರಿಯೆಯಿಂದಾಗಿ 2018ರಲ್ಲಿ ಚಿತ್ರೋತ್ಸವದಿಂದ ಮೈಸೂರನ್ನು ಕೈಬಿಡಲಾಯಿತು.

ಚಲನಚಿತ್ರಗಳ ಬಗ್ಗೆ ಮಾತ್ರ ಗಮನಹರಿಸಬೇಕು

ಉದ್ಘಾಟನೆ, ಸಮಾರೋಪ ಅಥವಾ ಇತರೆ ಚಟುವಟಿಕೆಗಳ ಬಗ್ಗೆ ಗಮನ ಕೇಂದ್ರೀಕರಿಸುವ ಬದಲು, ಬೆಂಗಳೂರು ಚಲನಚಿತ್ರೋತ್ಸವ ಕೇವಲ ಚಲನಚಿತ್ರಗಳ ಬಗ್ಗೆ ಮಾತ್ರ ಗಮನಹರಿಸಬೇಕು. ಮಾರುಕಟ್ಟೆ ದೃಷ್ಟಿಯಿಂದ ಮಾನ್ಯತೆ ತೀರಾ ಮಹತ್ವದ್ದು. ಚಿತ್ರ ಮಾರಾಟಗಾರರನ್ನು ಹಾಗೂ ಕೊಳ್ಳುವವರನ್ನು ಮಾನ್ಯತೆ ಒಂದೇ ವೇದಿಕೆಯಡಿಗೆ ತರುತ್ತದೆ. ಮಾನ್ಯತೆ ಸಿಕ್ಕರೆ ಕನ್ನಡ ಚಿತ್ರಗಳು ಅಂತರರಾಷ್ಟ್ರೀಯವಾಗಿ ಇನ್ನೂ ಹೆಚ್ಚಿನ ಜನರನ್ನು ತಲುಪುತ್ತವೆ.

ಟಿ.ಎಸ್.ನಾಗಾಭರಣ, ನಟ-ನಿರ್ದೇಶಕ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಮಾಜಿ ಅದ್ಯಕ್ಷ

***

ದೇಶದ ಗಮನ ಸೆಳೆದಿವೆ

ಈಗಾಗಲೇ ನಾವು ಹತ್ತು ಚಿತ್ರೋತ್ಸವಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಕಳೆದ ಮೂರು ಚಿತ್ರೋತ್ಸವಗಳ ವೈಭವ ಹಾಗೂ ಗುಣಮಟ್ಟ ಇಡೀ ದೇಶದ ಗಮನ ಸೆಳೆದಿವೆ. ಇವುಗಳ ಮಾದರಿ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕಿಂತಲೂ ಉತ್ಕೃಷ್ಟವಾಗಿದ್ದವು ಎಂಬುದರಲ್ಲಿ ಎರಡು ಮಾತಿಲ್ಲ. ಅಂತರರಾಷ್ಟ್ರೀಯ ಚಲನಚಿತ್ರರಂಗದೊಡನೆ ಒಡನಾಟ ಹಾಗೂ ವೈಚಾರಿಕ ವಿನಿಮಯಕ್ಕಾಗಿ ಮಾನ್ಯತೆ ಅತ್ಯಂತ ಅಗತ್ಯವಾಗಿದೆ.

ಡಿ ರಾಜೇಂದ್ರ ಸಿಂಗ್ ಬಾಬು, ನಿರ್ದೇಶಕ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಮಾಜಿ ಅದ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು