ಸೋಮವಾರ, ಏಪ್ರಿಲ್ 19, 2021
23 °C

ರೈತ ಚಳವಳಿಯ ರಂಗಬಿಂಬ ನೀಲದರ್ಪಣ

ಪ್ರಕಾಶ ಗರುಡ  Updated:

ಅಕ್ಷರ ಗಾತ್ರ : | |

Prajavani

ರಂಗಭೂಮಿಯ ಪ್ರಯೋಗಗಳು ಆಯಾ ಕಾಲದ ಸಮಕಾಲೀನ ರಾಜಕೀಯ ಮತ್ತು ಸಾಂಸ್ಕೃತಿಕ ದಾಖಲೆಗಳಾಗಿವೆ. ‘ನೀಲದರ್ಪಣ’ ನಾಟಕ ಅಂತಹ ಸಾಂಸ್ಕೃತಿಕ ದಾಖಲೆಯ ಒಂದು ಮಹತ್ವದ ಕೃತಿ. ಸ್ವಾತಂತ್ರ್ಯಪೂರ್ವದಲ್ಲಿ ಈ ನಾಟಕದ ರಂಗಪ್ರಯೋಗದಿಂದಾಗಿ, ಬ್ರಿಟಿಷರ ವಿರುದ್ಧ ಬಂಡೆದ್ದ ರೈತ ಚಳವಳಿ ತೀವ್ರಗೊಂಡಿತು. 150 ವರುಷಗಳಷ್ಟು ಹಿಂದೆ ನಡೆದ ರೈತ ಚಳವಳಿಯ ಇತಿಹಾಸವನ್ನು ನೀಲದರ್ಪಣ ನಾಟಕದ ಮೂಲಕ ಅವಲೋಕಿಸುತ್ತಾ ಸ್ವಾತಂತ್ರ್ಯೋತ್ತರದ ಭಾರತದಲ್ಲಿ ಅಷ್ಟೇ ತೀವ್ರವಾಗಿ ಈಗ ನಡೆಯುತ್ತಿರುವ ರೈತ ಚಳವಳಿಗೆ ಈ ಲೇಖನ ಒಬ್ಬ ರಂಗಕರ್ಮಿಯ ಸಹ ಸ್ಪಂದನವಾಗಿದೆ.

ನೀಲಿ (indigofera tinctoria) ಇದೊಂದು ವಿದೇಶಿ ಬೆಳೆ. 1777ರಲ್ಲಿ ಫ್ರಾನ್ಸ್‌ ದೇಶದ ಲೂಯಿಸ್ ಬೊನಾರ್ಡ್‌ ಎಂಬಾತ ಭಾರತಕ್ಕೆ ಈ ಬೆಳೆಯನ್ನು ಹೊತ್ತು ತಂದ. ಕೈಗಾರಿಕೆ ಕ್ರಾಂತಿಯ ನಂತರ ಯುರೋಪ್‌ನ ದೊಡ್ಡ ದೊಡ್ಡ ಬಟ್ಟೆ ಗಿರಣಿಗಳಲ್ಲಿ ತಯಾರಾಗುತ್ತಿದ್ದ ಬೃಹತ್ ಪ್ರಮಾಣದ ಬಟ್ಟೆಗೆ ನೀಲಿಬಣ್ಣ ಹಾಕಲು ಬೇಕಾದ ನೀಲಿ ಬಣ್ಣ ಹೊರಡಿಸುವ ನೀಲಿಬೆಳೆಗೆ ಭಾರಿ ಬೇಡಿಕೆ ಇತ್ತು. ಭಾರತದಲ್ಲಿದ್ದ ಬ್ರಿಟಿಷ್ ಪ್ಲಾಂಟರ್‌ಗಳು ಕಡಿಮೆ ಕೂಲಿಯಲ್ಲಿ ಹೆಚ್ಚಿನ ಉತ್ಪನ್ನ ನೀಡುವ ನೀಲಿ ಬೆಳೆಯನ್ನು ಬೆಳೆಯಲು ಇಲ್ಲಿನ ಕೃಷಿಕರ ಮೇಲೆ ಒತ್ತಡ ಹೇರುತ್ತಿದ್ದರು. ಅದು ದಬ್ಬಾಳಿಕೆಯ ರೂಪವನ್ನೂ ಪಡೆದಿತ್ತು. ಆಹಾರ ಬೆಳೆಯುವ ಕೃಷಿ ಭೂಮಿಯಲ್ಲಿ ಬಂಡವಾಳಶಾಹಿಗಳ ಲಾಭ ಮತ್ತು ಒತ್ತಾಯಕ್ಕೆ ನೀಲಿಬೆಳೆಯನ್ನು ಬೆಳೆಯುತ್ತ ಹೋದಂತೆ ಭೂಮಿ ಬರಡಾಗುತ್ತಾ ಹೋಯಿತು. ತಮಗೆ ಬೇಕಾದ ಆಹಾರ ಧಾನ್ಯ ಬೆಳೆಯುವ ಸ್ವಾತಂತ್ರ್ಯವನ್ನೂ ಬಿಹಾರ, ಬಂಗಾಲ ಮತ್ತು ಅದರ ಸುತ್ತಮುತ್ತಲಿನ ಪ್ರಾಂತ್ಯದ ಕೃಷಿ ಕಾರ್ಮಿಕರು ಕಳೆದುಕೊಂಡಿದ್ದರು. ಅವರ ದುಡಿಮೆಗೆ ನ್ಯಾಯವಾಗಿ ಸಿಗಬೇಕಾದ ಕೂಲಿಯೂ ಸಿಗುತ್ತಿರಲಿಲ್ಲ. ಬಡ ಕೃಷಿಕರಿಗೆ ದೊಡ್ಡಮೊತ್ತದ ಬಡ್ಡಿಯಲ್ಲಿ ಸಾಲ ನೀಡಿ ಅವರಿಗೆ ಯಾವತ್ತೂ ಸಾಲದಿಂದ ಮುಕ್ತಿ ಸಿಗದಂತೆ ಮಾಡಿ, ನೀಲಿಬೆಳೆಯನ್ನೇ ಬೆಳೆಯುವ ಅನಿವಾರ್ಯತೆಗೆ ನೂಕಿ ಶೋಷಿಸಲಾಗುತ್ತಿತ್ತು.

1833ರಲ್ಲಿ ಈಸ್ಟ್‌ ಇಂಡಿಯಾ ಕಂಪನಿಯವರು ಮಾಡಿದ ಒಂದು ಕೃಷಿ ಕಾಯ್ದೆಯಿಂದಾಗಿ ನೀಲಿ ಪ್ಲಾಂಟರ್‌ಗಳಿಗೆ ಬೆಳೆಗಾರರನ್ನು ಇನ್ನಷ್ಟು ಶೋಷಿಸಲು ಹಸಿರು ನಿಶಾನೆ ಸಿಕ್ಕಂತಾಯಿತು. ನೀಲಿ ಬೆಳೆಯ ಹಿಂದಿರುವ ಈ ಲಾಭಕೋರತನದ ರಾಜಕೀಯ ಮತ್ತು ಅವೈಜ್ಞಾನಿಕತೆಯನ್ನು ಅರಿತ ಶೋಷಿತ ಕೃಷಿಕರು ನೀಲಿ ಬೆಳೆ ಬೆಳೆಯಬೇಕೆಂದು ಒತ್ತಾಯಿಸುತ್ತಿದ್ದ ಬ್ರಿಟಿಷ್‌ ಪ್ಲಾಂಟರ್‌ಗಳ ವಿರುದ್ಧ ಬಂಡೆದ್ದರು. 1859ರಲ್ಲಿ ಬಂಗಾಲದ ಗೋಬಿಂದಾಪುರ ಚುಗಚಾ, ಕೃಷ್ಣಾನಗರ, ನಡಿಯಾ ಜಿಲ್ಲೆಗಳ ಹಳ್ಳಿಗಳಲ್ಲಿ ನೀಲಿ ಬೆಳೆಯನ್ನು ಬೆಳೆಯುವುದನ್ನು ವಿರೋಧಿಸಿ ನೀಲಿ ಪ್ಲಾಂಟರ್‌ಗಳ ವಿರುದ್ಧ ಚಳವಳಿ ಆರಂಭವಾಯಿತು. ಬಿಶ್ಣುಚರಣ ಬಿಶ್ವಾಸ್ ಮತ್ತು ದಿಗಂಬರ ಬಿಶ್ವಾಸ್ ಎಂಬುವವರು ಇದರ ಮುಂಚೂಣಿಯಲ್ಲಿದ್ದರು. ಚಳವಳಿ ಬಂಗಾಲ ಮತ್ತು ಬಿಹಾರದ ಹಲವಾರು ಪ್ರಾಂತಗಳಲ್ಲಿ ಬಹುಬೇಗ  ತೀವ್ರ ಸ್ವರೂಪವನ್ನು ಪಡೆಯಿತು. ನೂರಾರು ರೈತರನ್ನು ಮಿಲಿಟರಿ ಮತ್ತು ಪೊಲೀಸ್‌ ಕಾರ್ಯಾಚರಣೆಯಲ್ಲಿ ಕೊಲ್ಲಲಾಯಿತು. ಚಳವಳಿ ತೀವ್ರ ಸ್ವರೂಪ ಪಡೆಯುತ್ತಿರುವ ಕಾಲದಲ್ಲೇ ಬಂಗಾಲಿ ಲೇಖಕ ದೀನಬಂಧು ಮಿತ್ರ (1830-1873) ‘ನೀಲದರ್ಪಣ’ ನಾಟಕ ರಚಿಸಿದರು. ಬಂಗಾಲಿ ಭಾಷೆಯಲ್ಲಿ ಬರೆದ ಈ ನಾಟಕವೇ ಭಾರತೀಯ ನಾಟಕ ಸಾಹಿತ್ಯದ ಇತಿಹಾಸದಲ್ಲಿ ಸಮಕಾಲೀನ ರಾಜಕೀಯ ವಸ್ತುವನ್ನು ಇಟ್ಟುಕೊಂಡು ಬರೆದ ಮೊದಲ ವಾಸ್ತವವಾದಿ ಸಾಮಾಜಿಕ ನಾಟಕ. ಅಲ್ಲದೆ ನಾಟಕದ ಪ್ರದರ್ಶನವನ್ನು ಪ್ರವೇಶಧನ ನೀಡಿ ನೋಡುವ ರೂಢಿ ಈ ನಾಟಕದ ಪ್ರದರ್ಶನದಿಂದಲೇ ಪ್ರಾರಂಭವಾಯಿತು. ಹೀಗಾಗಿ ಭಾರತದಲ್ಲಿ ನಡೆದ ಪ್ರಥಮ ಕೃಷಿ ಚಳವಳಿಗೆ ರಂಗಕನ್ನಡಿ ಹಿಡಿದ ಒಂದು ಪ್ರಮುಖ ದಾಖಲೆಯ ಕೃತಿ ಇದಾಗಿದೆ.

ಕೃಷಿ ಚಳವಳಿ ಜೋರಾಗಿದ್ದ ಆ ಕಾಲಘಟ್ಟದಲ್ಲಿ ಬಂಗಾಲದ ಎಲ್ಲ ಪ್ರದೇಶಗಳಲ್ಲಿ ಈ ನಾಟಕ ಪ್ರದರ್ಶನಗೊಂಡಿತು. ಚಳವಳಿ ತೀವ್ರವಾಗಲು ಈ ನಾಟಕವೇ ಕಾರಣ. ಹೀಗಾಗಿ ಆಗಿನ ಬ್ರಿಟಿಷ್ ಸರ್ಕಾರ ಈ ನಾಟಕದ ಪ್ರದರ್ಶನವನ್ನು ರದ್ದುಮಾಡಿತು. ಈ ನಾಟಕದ ಪ್ರದರ್ಶನದಿಂದಾಗಿಯೇ ಪ್ರದರ್ಶಕ ಕಲೆಗಳನ್ನು ಸೆನ್ಸಾರ್ ಮಾಡಲು ಬ್ರಿಟಿಷ್ ಸರ್ಕಾರ 1876ರಲ್ಲಿ ಡ್ರಾಮೆಟಿಕ್ ಪರ್ಫಾರ್ಮಿಂಗ್ ಆ್ಯಕ್ಟ್‌ ಜಾರಿಮಾಡಿತು. ರಂಗಭೂಮಿಯ ಪ್ರದರ್ಶನಗಳ ಮೇಲೆ ಬಿಗಿಹಿಡಿತ ಸಾಧಿಸಲು ಸರ್ಕಾರ ಈಗಲೂ ಆ ಕಾಯ್ದೆಯಲ್ಲಿ ಅಲ್ಪಸ್ವಲ್ಪ ತಿದ್ದುಪಡಿ ತಂದು ಮುಂದುವರಿಸಿದೆ. ‘ನೀಲದರ್ಪಣ’ ನಾಟಕದ  ಪ್ರವೇಶದಿಂದಾಗಿ ನೀಲಿಬೆಳೆಯ ಚಳವಳಿಯಿಂದ ಆವರೆಗೆ ನಿರ್ಲಿಪ್ತರಾಗಿದ್ದ ಸಾಹಿತಿಗಳು, ಆಂದೋಲನಕಾರರು ಕೃಷಿ ಚಳವಳಿಯಲ್ಲಿ ಸಕ್ರಿಯರಾದರು.

‘ನೀಲದರ್ಪಣ’ ನಾಟಕದ ಪಾತ್ರ ಮತ್ತು ಅದರ ಸ್ವರೂಪ ಇತ್ಯಾದಿ ಅಂಶಗಳ ಚರ್ಚೆ ವ್ಯಾಪಕವಾದದ್ದು. ಸುಮಾರು 20 ವಿಭಿನ್ನ ಪಾತ್ರಗಳುಳ್ಳ ಐದು ಅಂಕಗಳ ಪೂರ್ಣಾವಧಿ ಮೆಲೊಡ್ರಾಮಾ ಮತ್ತು ಬ್ಲ್ಯಾಕ್ ಕಾಮಿಡಿ ನಾಟಕ ಇದಾಗಿದೆ. ಅದರ ವಿವರವಾದ ಚರ್ಚೆ ಈ ಲೇಖನದ ವ್ಯಾಪ್ತಿಯಲ್ಲಿ ಅಸಾಧ್ಯ. ಆದರೆ ನಾಟಕ ಮತ್ತು ಅದು ಆಗ ಜನತೆಯಲ್ಲಿ ಸೃಷ್ಟಿಸಿದ ಸಾಮಾಜಿಕ ಎಚ್ಚರ, ಮೂಡಿಸಿದ ಸಂಚಲನದ ಇತಿಹಾಸವನ್ನು ಅವಲೋಕಿಸಿದಾಗ ನಾಟಕಕಾರನ ಉದ್ದೇಶ ಸ್ಪಷ್ಟ; ಆತ ತನ್ನ ಈ ನಾಟಕ ಕೃತಿಯಿಂದ ಶೋಷಿತ ನೀಲಿ ಬೆಳೆಗಾರರ ಕೃಷಿ ಚಳವಳಿಯನ್ನು ಬೆಂಬಲಿಸುತ್ತಾನೆ ಮತ್ತು ಶೋಷಣೆ ಮಾಡುತ್ತಿರುವ ಆಗಿನ ಬ್ರಿಟಿಷರ ಆಕ್ರಮಣಕಾರಿ ಮನೋಧರ್ಮದ ವ್ಯವಸ್ಥೆಯನ್ನು ಎಚ್ಚರಿಸುತ್ತಾನೆ. ಮತ್ತು ಆತನ ಉದ್ದೇಶ ಸಫಲವೂ ಆಗಿದೆ.


ಬಂಗಾಳದ ವಿಲಿಯಂ ಸಿಂಪ್ಸನ್‌ ಇಂಡಿಗೊ ಫ್ಯಾಕ್ಟರಿಯ ನೋಟ... ಚಿತ್ರಕೃಪೆ: ವಿಕಿಕಾಮನ್ಸ್

ಈ ನಾಟಕವನ್ನು ಬಂಗಾಲದ ಇನ್ನೊಬ್ಬ ಪ್ರಸಿದ್ಧ ನಾಟಕಕಾರ ಮೈಕೆಲ್ ಮಧುಸೂದನ್ ದತ್ತ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ರೆವರೆಂಡ್ ಜೇಮ್ಸ್ ಲಾಂಗ್ ಅವರು ಅದನ್ನು ಪ್ರಕಟಿಸಿದರು. ಬ್ರಿಟಿಷ್ ವ್ಯಾಪಾರ ಸಮುದಾಯ ಮತ್ತು ಸರ್ಕಾರವು ಅನ್ಯಾಯವಾಗಿ ಮತ್ತು ದಬ್ಬಾಳಿಕೆಯಿಂದ ಇಂಡಿಗೊ ಕೃಷಿಕರನ್ನು ಶೋಷಿಸುತ್ತಿದೆ ಎಂದು ಜೇಮ್ಸ್ ಲಾಂಗ್ ನಂಬಿದ್ದರು. ಈ ನಾಟಕದ ಪ್ರದರ್ಶನ ಸೃಷ್ಟಿಸಿದ ಸಂಚಲನದಿಂದಾಗಿ ಇಂಗ್ಲೆಂಡಿನ ಸಭ್ಯ ಜನತೆ ಭಾರತದಲ್ಲಿ ತಮ್ಮ ಸರ್ಕಾರದಿಂದ ನೀಲಿ ಬೆಳೆಗಾರರ ಮೇಲೆ ಆಗುತ್ತಿರುವ ದಬ್ಬಾಳಿಕೆಗಾಗಿ ನೊಂದುಕೊಂಡರು ಮತ್ತು ಸರ್ಕಾರವನ್ನು ಖಂಡಿಸಿದರು. ಇದನ್ನು ಪ್ರಕಟಿಸಿದ್ದಕ್ಕಾಗಿ ರೆವರೆಂಡ್ ಜೇಮ್ಸ್‌ ಲಾಂಗ್ ಅವರಿಗೆ ದೇಶದ್ರೋಹದ ಆರೋಪ ಹೊರಿಸಿ ಜೈಲುಶಿಕ್ಷೆ ವಿಧಿಸಲಾಯಿತು.

ಕುತೂಹಲದ ಅಂಶವೆಂದರೆ ಆಗಿನ ನೀಲಿಬೆಳೆಗಾರರ ಚಳವಳಿ ಅಹಿಂಸಾತ್ಮಕವಾಗಿತ್ತು. ಗಾಂಧೀಜಿಯವರಿಗೆ ತಮ್ಮ ಮುಂದಿನ ಅಹಿಂಸಾತ್ಮಕ ಚಳವಳಿಗೆ ಬಂಗಾಲದಲ್ಲಿ ನಡೆದ ರೈತರ ಈ ಚಳವಳಿ ಪ್ರೇರಣೆ ನೀಡಿದೆಯಂತೆ. ಈ  ನಾಟಕದಿಂದಾಗಿ ಸ್ವದೇಶದಲ್ಲಿ ಮತ್ತು ಇಂಗ್ಲೆಂಡಿನಲ್ಲಿ ಬ್ರಿಟಿಷರ ಕೃಷಿನೀತಿಯ ವಿರುದ್ಧ  ಜೋರು ಚರ್ಚೆ ನಡೆದು ಕೊನೆಗೆ ಈ ಸಮಸ್ಯೆ ಬಗೆಹರಿಸಲು ಬಂಗಾಲದ ಸಾಮಾಜಿಕ ಕಾರ್ಯಕರ್ತ ಮತ್ತು ಶಿಕ್ಷಣತಜ್ಞ, ಇಂಡಿಗೊ ಬೆಳೆಯುವ ರೈತರ ಸಮಸ್ಯೆ ಅರಿತ ನವಾಬ್ ಅಬ್ದುಲ್ ಲತೀಫ್ ಎಂಬುವವರ ಸಲಹೆ ಮೇರೆಗೆ  ಬ್ರಿಟಿಷ್ ಸರ್ಕಾರ 1860ರಲ್ಲಿ ಇಂಡಿಗೊ ಕಮಿಶನ್ ಎಂಬ ಒಂದು ಸಮಿತಿ ರಚಿಸಿತು. ಸಮಿತಿಯ ವರದಿಯಲ್ಲಿ ಇಎಮ್‌ಐ ಟವರ್ ಎಂಬಾತ ‘ಮನುಷ್ಯನ ರಕ್ತಸಿಕ್ತವಾಗದೇ ಇಂಗ್ಲೆಂಡಿಗೆ  ನೀಲಿಬೆಳೆಯ ಯಾವ ಪೆಟ್ಟಿಗೆಯೂ ಬಂದಿಲ್ಲ’ ಎಂದು ತಿಳಿಸುತ್ತಾನೆ. ಈ ವರದಿಯಿಂದ ಎಚ್ಚೆತ್ತ ಬ್ರಿಟಿಷ್ ಸರ್ಕಾರ ಭಾರತದಲ್ಲಿ ಇಂಡಿಗೊ ಪ್ಲಾಂಟರ್‌ಗಳು ರೈತರ ಮೇಲೆ ಮಾಡುತ್ತಿರುವ ದಬ್ಬಾಳಿಕೆ ಅಪರಾಧ ಎಂದು ಅರಿತುಕೊಂಡು ನೀಲಿ ಬೆಳೆಯನ್ನು ಕಡ್ಡಾಯವಾಗಿ ಬೆಳೆಯಲು ರೈತರ ಮೇಲೆ ಹೇರಿದ ಒತ್ತಾಯದ ನೀತಿಯನ್ನು ಹಿಂತೆಗೆದುಕೊಳ್ಳುತ್ತದೆ.

‘ನೀಲದರ್ಪಣ’ ನಾಟಕದಿಂದ ಪ್ರೇರಣೆ ಪಡೆದು ಮುಂದೆ ಬಂಗಾಲಿಯಲ್ಲಿ ಹಲವು ದರ್ಪಣ ನಾಟಕಗಳು ರಚನೆಗೊಂಡವು. ಉದಾಹರಣೆಗೆ ಪ್ರಸನ್ನ ಮುಖ್ಯೋಪಾಧ್ಯಾಯರ ಪಲ್ಲಿಗ್ರಾಮ ದರ್ಪಣ (ಗ್ರಾಮೀಣ ಜೀವನದ ಕನ್ನಡಿ 1873), ಮೀರ್ ಮುಷರಫ್ ಹುಸೈನ್ ಅವರ ಜಮೀನ್ದಾರರ ದರ್ಪಣ (ಜಮೀನ್ದಾರರ ಕನ್ನಡಿ 1873), ಜೋಗೇಂದ್ರ ಘೋಶ್ ಅವರ ಕೆರಾನಿ ದರ್ಪಣ (ಕಾರಕೂನನ ಕನ್ನಡಿ 1873,). ದಕ್ಷಿಣಾಚಾರ್ ಚಟ್ಟೋಪಾಧ್ಯಾಯರ ಜೈಲು ದರ್ಪಣ (1876) ಇವೆಲ್ಲ ಒಂದಲ್ಲಾ ಒಂದುರೀತಿ ಶೋಷಿತ ವರ್ಗದ  ಪರ ಮತ್ತು ಬ್ರಿಟಿಷ್ ಆಡಳಿತದ ವಿರುದ್ಧ ದನಿಎತ್ತಿದ ನಾಟಕಗಳು.

ಸರ್ಕಾರವು ರೂಪಿಸಿದ ಒಂದು ನೀತಿಯನ್ನು ಜನರು ಪ್ರಶ್ನಿಸಿ ಅದು ಚಳವಳಿಯ ರೂಪ ಪಡೆದಾಗ ಸರ್ಕಾರವು ಆ ನೀತಿಯ ಬಗ್ಗೆ ಜನರಿಗೆ ಇರುವ ಅನುಮಾನವನ್ನು ನಿವಾರಿಸಿ ವ್ಯಾಪಕ ಅರಿವು ಮೂಡಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪೇಕ್ಷಣೀಯ. ಅದರಲ್ಲೂ ಕೃಷಿ ನೀತಿಯನ್ನು ರೂಪಿಸುವಾಗ ಗ್ರಾಮೀಣ ಮಟ್ಟದಲ್ಲೂ ಚರ್ಚೆ ನಡೆಯಬೇಕಾಗುತ್ತದೆ. ಸರ್ಕಾರವು ಜಾರಿಗೆ ತರುವ ನೀತಿಗಳು ಜನತೆಗೆ ಒಳಿತು ಮಾಡುತ್ತವೆ ಅಂದುಕೊಂಡರೂ ಅವನ್ನು ಜಾರಿಗೆ ತರುವಾಗ ಅಹಂಕಾರದ ವರ್ತನೆ ಸಲ್ಲದು. ಕಾರ್ನಾಡರ ತುಘಲಕ್ ನಾಟಕದ ನಾಯಕ ತುಘಲಕ್ ದಿಲ್ಲಿಯಿಂದ ದೌಲತಾಬಾದಿಗೆ ತನ್ನ ರಾಜಧಾನಿಯನ್ನು ವರ್ಗಾಯಿಸಲು ಎಷ್ಟೇ ಸಮಂಜಸ ಕಾರಣ ನೀಡಿದರೂ ಅದು ಆತನ ಕನಸಿನ ಮಟ್ಟಿಗೆ ಮಾತ್ರ ಉಳಿಯುತ್ತದೆ. ತಾನು ಮಾಡಿದ ಕಾನೂನನ್ನು  ಜನರಿಗೆ ಮನವರಿಕೆ ಮಾಡಿಕೊಡುವುದರಲ್ಲಿ ವಿಫಲನಾಗುತ್ತಾನೆ. ಮುಂದೆ ಒತ್ತಾಯದಿಂದ ದೌಲತಾಬಾದಿಗೆ ರಾಜಧಾನಿಯನ್ನು ವರ್ಗಾಯಿಸಿದಾಗ ಮಾರ್ಗದುದ್ದಕ್ಕೂ ಕೊಲೆಸುಲಿಗೆಗಳು ನಡೆದು ಆತನ ಕಾನೂನು ಅಮಾಯಕರನ್ನು ಶೋಷಿಸಲು ಭ್ರಷ್ಟರಿಗೆ ದಾರಿ ಮಾಡಿಕೊಡುತ್ತದೆ. ದುರಹಂಕಾರವೇ ಅವನ ಆಡಳಿತದ ದುರಂತಕ್ಕೆ ಕಾರಣವಾಗುತ್ತದೆ.


ಬ್ರಿಟಿಷರು, ಭಾರತೀಯ ರೈತರ ಮೇಲೆ ಒತ್ತಡ ಹೇರಿ ನೀಲಿ ಬೆಳೆಯನ್ನು ಬೆಳೆಸುತ್ತಿದ್ದ ಪರಿ

ಶೇಕ್ಸ್‌ಪಿಯರನ ಕೋರಿಯೊಲೊನಸ್ ನಾಟಕದ ನಾಯಕ ಕೋರಿಯೊಲನಸ್ ರೋಮ್ ದೇಶದ ಭಕ್ತನಾಗಿ ದೇಶಕ್ಕಾಗಿ ಎಷ್ಟೇ ಯುದ್ಧ ಮಾಡಿದ್ದರೂ ಆತನಿಗೆ ಬಡಜನರ ಹಸಿವನ್ನು ಅರ್ಥಮಾಡಿಕೊಳ್ಳಲಾಗಲಿಲ್ಲ. ಅಪ್ಪಟ ದೇಶಪ್ರೇಮಿ ಎಂದೆನಿಸಿಕೊಂಡಾತ ದುರಹಂಕಾರದ ಪ್ರವೃತ್ತಿಯಿಂದಾಗಿಯೇ ದೇಶಭ್ರಷ್ಟನಾಗುವ ದಾರಿಯನ್ನು ಆಯ್ದುಕೊಂಡು ದುರಂತ ನಾಯಕನಾಗುತ್ತಾನೆ. ಕೋರಿಯೊಲನಸ್, ಸೀಜರ್ ಇವರೆಲ್ಲ ಬಹು ಜನಪ್ರಿಯ ನಾಯಕರೇ. ರಾಜಕೀಯ ನಾಯಕರು ಪಡೆಯುವ ಜನಪ್ರಿಯತೆ, ಬಹುಮತ ಎಂಬ ಅಮಲಿನಿಂದ ಅವರಲ್ಲಿ ದುರಹಂಕಾರದ ದೋಷ ಸೇರಿಕೊಂಡು ಜನ ವಿರೋಧಿಗಳಾಗುತ್ತಾರೆ. ಅಂದರೆ ನೀಲಿ ರಕ್ತದವರಾಗುತ್ತಾರೆ. ನೀಲಿ ಬೆಳೆಗಾರರ ಸಮಸ್ಯೆಗೆ ರಂಗಕನ್ನಡಿ ಹಿಡಿಯುತ್ತಲೇ ನೀಲಿ ರಕ್ತದ ಅರ್ಥಾತ್ ಉಚ್ಚತನ, ಶ್ರೇಷ್ಠತೆಯ ಅಮಲಿನಿಂದಾಗುವ ದಬ್ಬಾಳಿಕೆಯನ್ನು ನೀಲದರ್ಪಣ ನಾಟಕ ಧ್ವನಿಸುತ್ತದೆ. 

ಕನ್ನಡದಲ್ಲಿ ರೈತರ ಸಮಸ್ಯೆ, ಅವರ ಬವಣೆಯ ಹಿನ್ನೆಲೆ ವಸ್ತು ಇಟ್ಟುಕೊಂಡು ಹಲವಾರು ನಾಟಕಗಳು ಬಂದಿವೆ. ರೈತರ ಆತ್ಮಹತ್ಯೆ ಕುರಿತು ಬೀದಿ ನಾಟಕಗಳನ್ನೂ ಆಡಿದ್ದಾರೆ. ಪಿ ಸಾಯಿನಾಥ ಅವರು ರೈತರ ಆತ್ಮಹತ್ಯೆ ಕುರಿತಾದ ಲೇಖನಗಳನ್ನು ಇಟ್ಟುಕೊಂಡು ನಾಟಕಮಾಡಿದ್ದಾರೆ. ನಾಟಕಕಾರ ಡಿ.ಎಸ್. ಚೌಗಲೆ ದಶಕದ ಹಿಂದೆ ಬರೆದ ‘ಉದ್ವಸ್ಥ’ ಎಂಬ ನಾಟಕದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ರೈತರ ಭೂಮಿಯನ್ನು ಕಬಳಿಸುವ ಚಿತ್ರಣವನ್ನೂ ರೈತ ಸಿಡಿದೇಳುವುದನ್ನೂ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಅದರೆ ಈ ತರಹದ ನಾಟಕಗಳಾಗಲಿ ರಂಗ ಪ್ರಯೋಗಗಳಾಗಲಿ ಸರ್ಕಾರವು ರೈತರಿಗಾಗಿ ಮಾಡಿದ ಒಂದು ನೀತಿ, ಕಾನೂನನ್ನು ನೇರವಾಗಿ ವಸ್ತುವಾಗಿ ಮಾಡಿಕೊಂಡವುಗಳಲ್ಲ. ‘ನೀಲದರ್ಪಣ’ ನಾಟಕ ಬ್ರಿಟಿಷ್ ಸರ್ಕಾರದ  ಕೃಷಿ ನೀತಿಯನ್ನೇ ಪ್ರಶ್ನಿಸುವ ವಸ್ತು ಹೊಂದಿದೆ.

ಒಮ್ಮೆ ಜರ್ಮನ್ ಅಧಿಕಾರಿಯೊಬ್ಬ ಎರಡನೆಯ ಮಹಾಯುದ್ಧದ ಸಮಯದಲ್ಲಿ ಮಹಾನ್ ಚಿತ್ರಕಾರ ಪ್ಯಾಬ್ಲೊ ಪಿಕಾಸೊನ ಸ್ಟುಡಿಯೊಕ್ಕೆ ಆತನ ಚಿತ್ರಗಳನ್ನು ನೋಡಲು ಭೇಟಿ ಕೊಟ್ಟಿದ್ದನಂತೆ. ಆತ ಪಿಕಾಸೊನ ಪ್ರಸಿದ್ಧ ತೈಲಚಿತ್ರ ಗುರ್ನಿಕಾ ಎಂಬುದನ್ನು ನೋಡಿ ಅದರ ಸ್ಪಷ್ಟ ಪ್ರತಿನಿಧೀಕರಣಕ್ಕೆ ಗಾಬರಿಯಾದನಂತೆ. ಏಕೆಂದರೆ ಆಗತಾನೆ ಜರ್ಮನ್ನರು ಗುರ್ನಿಕಾ ಪ್ರದೇಶದ ಮೇಲೆ ಬಾಂಬ್ ಹಾಕಿದ್ದರಂತೆ. ಆಗ ಆ ಜರ್ಮನ್ ಅಧಿಕಾರಿ ಸ್ವಲ್ಪ ಅಸಮಾಧಾನದಿಂದಲೇ ಪಿಕಾಸೊನನ್ನು ‘ಈ ಚಿತ್ರವನ್ನು ನೀವು ಮಾಡಿದಿರಾ’ ಎಂದು ಕೇಳಿದನಂತೆ. ಆಗ ಪಿಕಾಸೊ ‘ಇಲ್ಲ, ಇದನ್ನು ನೀವೇ ಮಾಡಿದ್ದು’ ಎಂದನಂತೆ. ವ್ಯವಸ್ಥೆಯಲ್ಲಿ ನಡೆಯುವ ವಿದ್ಯಮಾನಗಳು ಸಾಹಿತ್ಯ ಮತ್ತು ಕಲಾಕೃತಿಗಳಲ್ಲಿ ಹೀಗೆ ಪ್ರತಿನಿಧೀಕರಣದ ರಾಜಕೀಯಕ್ಕೆ ಒಳಪಟ್ಟಿರುತ್ತವೆ. ಹಾಗೆ ‘ನೀಲದರ್ಪಣ’ ಕೂಡ ಅಂತಹ ಒಂದು ರಾಜಕೀಯ ನಾಟಕ ಕೃತಿ. 

ಪೂರಕ ಮಾಹಿತಿ: ಸುದೀಪ್ ಚಟರ್ಜಿ ಅವರ ‘ದಿ ಥಿಯೇಟರ್ ಇನ್ ಕೊಲೊನಿಯಲ್ ಸ್ಟೇಜ್’, ನಂದಿ ಭಾಟಿಯಾ ಅವರ ‘ಮಾಡರ್ನ್‌ ಇಂಡಿಯನ್ ಥಿಯೇಟರ್’

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.