ಬುಧವಾರ, ಸೆಪ್ಟೆಂಬರ್ 23, 2020
23 °C

ಈ ನಾಟಕ ಮಾನವೀಯ ಸೆಲೆಗಳ ಜೀವನದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಜಿಸ್‌ ಲಾಹೋರ್‌ ನೈ ದೇಖ್ಯಾ ವೋ ಜನ್ಮ್ಯಾಹೀ ನೈ’ (ಯಾರು ಲಾಹೋರ್‌ ಕಂಡಿಲ್ಲವೋ ಅವರು ಹುಟ್ಟೇ ಇಲ್ಲ) ಎನ್ನುವ ನಾಟಕ ಭಾರತೀಯ ರಂಗ ಇತಿಹಾಸದಲ್ಲಿ ಪ್ರಮುಖ ಪ್ರಯೋಗ. ಮಾನವೀಯ ಘನತೆಯ ಸೂಚಕ.

ಲಾಹೋರ್‌ ಅನ್ನೇ ನೋಡಿಲ್ಲ ಅಂದರೆ ಹುಟ್ಟಿಯೂ ವ್ಯರ್ಥ ಎಂಬರ್ಥದಲ್ಲಿ ಒಂದು ಪ್ರದೇಶದ ಭವ್ಯ ನಾಗರಿಕತೆಯ ಪಲ್ಲಟದ ಕ್ಷಣವನ್ನು ದೇಶ ವಿಭಜನೆಯ ತಕ್ಷಣದ ಪರಿಣಾಮದಲ್ಲಿ ಕಟ್ಟಿಕೊಡುವ ಅದ್ಭುತ ಪ್ರಯತ್ನ. ಹಿಂದಿ ಲೇಖಕ ಅಸಗರ್‌ ವಜಾಹತ್‌ ಅವರ ಪೂರ್ಣ ಹೆಸರು ಸಯಿದ್‌ ಅಸಗರ್‌ ವಜಾಹತ್‌. ಈ ನಾಟಕಕಾರ ಮತ್ತು ಕಾದಂಬರಿಕಾರ ನವದೆಹಲಿಯ ಜಾಮಿಯಾ ಮಿಲಿಯಾ ಯುನಿವರ್ಸಿಟಿಯಲ್ಲಿ ಹಿಂದಿ ಪ್ರೊಫೆಸರ್‌ ಆಗಿದ್ದವರು.

1947ರ ಅವಧಿಯಲ್ಲಿನ ದೇಶವಿಭಜನೆ ಸಂದರ್ಭದ ಕಥನವಿದು. ವಿಭಜನೆಯ ತಕ್ಷಣದ ಗಾಯಗಳನ್ನು ಲಖನೌನಿಂದ ಲಾಹೋರ್‌ಗೆ ಸ್ಥಳಾಂತರಗೊಂಡ ಒಂದು ಮುಸ್ಲಿಂ ಕುಟುಂಬ ಮತ್ತು ಹಿಂದೂ ಕುಟುಂಬದ ಮುಖಾಮುಖಿಯ ಮೂಲಕ ಹೇಳುವ ಮಾನವೀಯ ಕಥನ. ಮತೀಯವಾದದ ಕರಾಳ ಚಹರೆಯ ಪರಿಚಯವೂ ಹೌದು. ತಮಗೆ ಲಾಹೋರ್‌ನಲ್ಲಿ ನಿಗದಿಯಾದ ಬಂಗಲೆಯೊಂದಕ್ಕೆ ಲಖನೌನಿಂದ ಮುಸ್ಲಿಂ ಕುಟುಂಬ ಬಂದಿಳಿಯುತ್ತದೆ. ಅಲ್ಲಿ ಬಂಗಲೆ ತೊರೆಯಲಿರುವ ಹಿಂದೂ ಕುಟುಂಬದ ಅಜ್ಜಿಯೊಂದಿಗೆ ಮುಸ್ಲಿಂ ಕುಟುಂಬದ ಮುಖಾಮುಖಿಯ ಮೂಲಕ ನಾಟಕ ಬಿಚ್ಚಿಕೊಳ್ಳುತ್ತದೆ. ಮುಸ್ಲಿಂ ಕುಟುಂಬ ಆ ಅಜ್ಜಿಯ ಅಂತ್ಯಸಂಸ್ಕಾರವನ್ನು ಆಕೆಯ ಸಂಪ್ರದಾಯದಂತೆ ನೆರವೇರಿಸಲು ಮುಂದಾದಾಗ ಸುತ್ತ ಏಳುವ ಮತೀಯ ಕ್ಷೋಭೆ ಕೊಲೆಯಲ್ಲಿಯೇ ಪರ್ಯಾವಸನಗೊಳ್ಳುತ್ತದೆ. ಇದರ ನಡುವೆಯೂ ಹಿಂದೂ ಮತ್ತು ಮುಸ್ಲಿಂ ಕುಟುಂಬಗಳ ನಡುವೆ ಕ್ರಮೇಣ ಪುಟಿದೇಳುವ ಮಾನವೀಯ ಸೆಲೆಗಳನ್ನು ಪ್ರೇಕ್ಷಕನ ಹೃನ್ಮನಗಳಲ್ಲಿ ಜೀವಝರಿಯಂತೆ ಜಿನುಗಿಸುವ ಅದ್ಭುತ ಯತ್ನ ಈ ನಾಟಕದ್ದು.

ಇದನ್ನು 80ರ ದಶಕದಲ್ಲಿ ದೇಶದ ಹೆಸರಾಂತ ರಂಗನಿರ್ದೇಶಕ ಹಬೀಬ್‌ ತನ್ವೀರ್‌ (ಈಗ ಅವರಿಲ್ಲ) ಮೊದಲ ಬಾರಿಗೆ ರಂಗಕ್ಕೆ ಅಳವಡಿಸಿದ್ದರು. ಭಾರತದ ಹಲವು ಬಾಷೆಗಳಿಗೆ ಈ ನಾಟಕ ತರ್ಜುಮೆಯಾಗಿ ಹಲವಾರು ಪ್ರಯೋಗಗಳನ್ನು ಕಂಢಿದೆ. ಕನ್ನಡದಲ್ಲಿ ‘ರಾವೀ ನದಿ ತೀರದಲ್ಲಿ’ ಪ್ರಯೋಗವಾಗಿ ಅತ್ಯಂತ ಜನಪ್ರಿಯಗೊಂಡಿತ್ತು.

ನಾಟಕ: ‘ಜಿಸ್‌ ಲಾಹೋರ್‌ ನೈ ದೇಖ್ಯಾ ವೋ ಜನ್ಮ್ಯಾಹೀ ನೈ’

ರಚನೆ: ಅಸಗರ್‌ ವಜಾಹತ್‌

ನಿರ್ದೇಶನ: ಹಬೀಬ್‌ ತನ್ವೀರ್‌

ಪ್ರಸ್ತುತಿ: ನಯಾ ಥಿಯೇಟರ್‌ ಭೊಪಾಲ್‌

ಸ್ಥಳ: ಎನ್‌ಎಸ್‌ಡಿ ಸ್ಟುಡಿಯೊ ಥಿಯೇಟರ್‌, ಕಲಾಗ್ರಾಮ, ಮಲ್ಲತ್ತಹಳ್ಳಿ. ನವೆಂಬರ್‌ 8, ಸಂಜೆ 7ಕ್ಕೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು