ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ: ಮತ್ತೆ ತುಘಲಕ್

Last Updated 1 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

‘ತುಘಲಕ್’ ಗಿರೀಶ ಕಾರ್ನಾಡರ ಎರಡನೇ ನಾಟಕ; 1964ರಲ್ಲಿ ರಚಿಸಿದ್ದು. ಇದರ ಮೊತ್ತಮೊದಲ ಪ್ರಯೋಗ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರೊಡಕ್ಷನ್ ಆಗಿ ಉರ್ದುವಿನಲ್ಲಿ ಪ್ರದರ್ಶನಗೊಂಡಿತು ಎಂದು ವಿಕಿಪೀಡಿಯ ಹೇಳುತ್ತದೆ. ಎಂ.ಎಸ್. ಸತ್ಯು ಅವರು ಹೇಳುವಂತೆ ಕಾರ್ನಾಡರು ಇದನ್ನು ಮೊತ್ತಮೊದಲು ದೆಹಲಿಯ ಕನ್ನಡ ಭಾರತಿಗೆ ಕೊಟ್ಟರು. ಕನ್ನಡ ಭಾರತಿಯಲ್ಲಿ ನಡೆದ ನಾಟಕದ ಕನ್ನಡರೂಪದ ಮೊದಲ ಪ್ರಯೋಗಕ್ಕೆ ಪ್ರಭಾಕರ ರಾವ್ ನಿರ್ದೇಶನ ಮಾಡಿದ್ದರು. ಬಿ.ವಿ. ಕಾರಂತರು ಕೂಡ ಅದರಲ್ಲಿ ಭಾಗಿಯಾಗಿದ್ದರು. ಮೊದಲ ಸಲ ತುಘಲಕ್‌ನ ಪಾತ್ರ ವಹಿಸಿದವರು ನಾರಾಯಣ ರಾವ್. ದೆಹಲಿಯ ಪುರಾನಾ ಕಿಲ್ಲಾದಲ್ಲಿ 1972ರಲ್ಲಿ ಅದ್ಭುತ ವೇಷಭೂಷಣಗಳ ಸಹಿತ ಮಾಡಿದ ಪ್ರಯೋಗ ಅತ್ಯಂತ ಜನಪ್ರಿಯವಾಯಿತು. ಅಲ್ಲಿಂದ ತುಘಲಕ್ ಹಲವಾರು ಭಾಷೆಗಳಿಗೆ ಅನುವಾದಗೊಂಡು ಅವುಗಳಲ್ಲೇ ಹಲವು ಥರದ ವಿಶ್ಲೇಷಣೆಗಳಿಗೆ ಒಡ್ಡಿಕೊಂಡು ಭಾರತದ ರಂಗಭೂಮಿಯಲ್ಲಿ ಕ್ಲಾಸಿಕ್‌ನ ಸ್ಥಾನವನ್ನು ಪಡೆದುಕೊಂಡಿತು.

ಭಿನ್ನ ಪ್ರಯೋಗಗಳ ಬಗ್ಗೆಯೇ ಒಂದು ಗಂಭೀರ ಅಕಾಡೆಮಿಕ್ ಅಧ್ಯಯನವನ್ನು ಮಾಡುವಷ್ಟು ಮಹತ್ವವನ್ನು ಈ ನಾಟಕ ಪಡೆದುಕೊಂಡಿತು. ಇದರ ಒಂದೇ ಒಂದು ಉದಾಹರಣೆ ಯೂನಿವರ್ಸಿಟಿ ಆಫ್ ವಿಸ್ಕಾನ್ಸಿನ್ - ಮ್ಯಾಡಿಸನ್‌ನ ಇಂಗ್ಲಿಷ್ ಮತ್ತು ಇಂಟರ್ ಡಿಸಿಪ್ಲಿನರಿ ಥಿಯೇಟರ್ ಸ್ಟಡೀಸ್‌ನ ಪ್ರೊಫೆಸರ್‌ ಆದ ಅಪರ್ಣಾ ಧಾರವಾಡಕರ್ ಅವರು ಬರೆದ ಟಿಪ್ಪಣಿ. ‘ವಸಾಹತುಶಾಹಿ ಮತ್ತು ನವವಸಾಹತುಶಾಹಿ ಇತಿಹಾಸಶಾಸ್ತ್ರದ ಇತ್ತೀಚಿನ ಆ್ಯಂಟಿ-ಓರಿಯೆಂಟಲಿಸ್ಟ್ ಮತ್ತು ಸಬಾಲ್ಟರ್ನ್ ವಿಮರ್ಶೆಗಳು ಐತಿಹಾಸಿಕ ಬರವಣಿಗೆಯಲ್ಲಿ ‘ನಿಜ’ ಮತ್ತು ‘ಕಾಲ್ಪನಿಕ’ ವಿಧಾನಗಳ ಪರಸ್ಪರ ಅವಲಂಬನೆಯನ್ನು ಅಲಕ್ಷಿಸುತ್ತವೆ. ಅಂತಹ ಪರಸ್ಪರ ಅವಲಂಬನೆಯನ್ನು ಗುರುತಿಸಲು ಮತ್ತು ವಸಾಹತೋತ್ತರ ಐತಿಹಾಸಿಕ ಕಾದಂಬರಿಗಳ ಪಠ್ಯ, ರಾಜಕೀಯ ಮತ್ತು ಸಾಂಸ್ಕೃತಿಕ ಸಂದರ್ಭಗಳನ್ನು ಗುರುತಿಸಲು, ಭಾರತದಲ್ಲಿ ಹದಿನಾಲ್ಕನೆಯ ಶತಮಾನದ ಇಸ್ಲಾಮಿಕ್ ಆಡಳಿತಗಾರನ ಸಮಕಾಲೀನ ಕನ್ನಡ ನಾಟಕ, ಕಾರ್ನಾಡರ ‘ತುಘಲಕ್’ (1964) ಉತ್ತಮ ಉದಾಹರಣೆ’ ಎನ್ನುತ್ತಾರೆ ಅವರು.

ದೆಹಲಿಯ ಪುರಾನಾ ಖಿಲ್ಲಾದಲ್ಲಿ ‘ತುಘಲಕ್‌’ ನಾಟಕ ಮೊದಲ ಪ್ರದರ್ಶನ (1972) ಕಂಡಾಗ
ದೆಹಲಿಯ ಪುರಾನಾ ಖಿಲ್ಲಾದಲ್ಲಿ ‘ತುಘಲಕ್‌’ ನಾಟಕ ಮೊದಲ ಪ್ರದರ್ಶನ (1972) ಕಂಡಾಗ

‘ತುಘಲಕ್‌ನ ಧಾರ್ಮಿಕ ಅಸಾಂಪ್ರದಾಯಿಕತೆಯನ್ನು ನಿರಾಕರಿಸಿದ ಮಧ್ಯಕಾಲೀನ ಮುಸ್ಲಿಂ ಇತಿಹಾಸಕಾರರು ಮತ್ತು ಹತ್ತೊಂಬತ್ತನೇ ಶತಮಾನದ ಪ್ರಾಚ್ಯವಾದಿಗಳು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಗೆ ಸಮರ್ಥನೆಯಾಗಿ ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆಯ ಪ್ರಕ್ಷುಬ್ಧತೆಯನ್ನು ಪರಿಗಣಿಸಿದ ಸಂಕೀರ್ಣ ಐತಿಹಾಸಿಕ ನಿರೂಪಣೆಯನ್ನೇ ಕಾರ್ನಾಡರು ಈ ನಾಟಕಕ್ಕೆ ಬಳಸಿಕೊಂಡಿದ್ದಾರೆ. ಧಾರ್ಮಿಕ ವ್ಯತ್ಯಾಸವನ್ನು ತನ್ನ ಕೇಂದ್ರವನ್ನಾಗಿ ಇಟ್ಟುಕೊಂಡ ‘ತುಘಲಕ್’, ಭಾರತದ ಸ್ವಾತಂತ್ರ್ಯಾನಂತರದ ಬಿಕ್ಕಟ್ಟನ್ನು ಮರುನಿರೂಪಿಸುತ್ತದೆ’ ಎಂದೂ ಅಭಿಪ್ರಾಯಪಡುತ್ತಾರೆ.

ಅಪರ್ಣಾ ಧಾರವಾಡಕರ್ ಅವರ ಈ ಒಂದು ಟಿಪ್ಪಣಿ, ಪ್ರಸ್ತುತ ಖ್ಯಾತ ನಾಟಕಕಾರ ಎಸ್. ಸುರೇಂದ್ರನಾಥ್ ಅವರು ರಂಗಶಂಕರದಲ್ಲಿ ಪ್ರಸ್ತುತಪಡಿಸುತ್ತಿರುವ ‘ತುಘಲಕ್’ನ ಮತ್ತೊಂದು ಹೊಸ ಪ್ರಯೋಗಕ್ಕೆ ನೇರವಾಗಿ ಅನ್ವಯವಾಗುತ್ತದೆ. ‘ಗಿರೀಶರ ‘ತುಘಲಕ್’ ನಾಟಕ ಯಾವತ್ತಿಗೂ ಅಪ್ರಸ್ತುತ ಆಗುವುದಿಲ್ಲ. ಅದು ಸದಾ ಪ್ರಸ್ತುತವೇ. ನಾನು ಅದನ್ನು ಚರಿತ್ರೆಯ ಚೌಕಟ್ಟಿನಿಂದ ತೆಗೆದು ಇವತ್ತಿಗೆ ಹತ್ತಿರವಾಗಿಸಿದ್ದೇನೆ. ನಾಟಕದಲ್ಲಿ ಏನೊಂದೂ ಬದಲಾವಣೆ ಮಾಡದೇ ಒಂದೆರಡು ಮಾತುಗಳನ್ನು ತೆಗೆದುಹಾಕಿದರೆ ಅದು ಹಠಾತ್ತಾಗಿ ಸಮಕಾಲೀನ ನಾಟಕ ಆಗಿಬಿಡುತ್ತದೆ. ತುಘಲಕ್‌ನ ತಳಮಳಗಳನ್ನು ಇವತ್ತಿಗೆ ಅನ್ವಯಿಸಲು ಬಹಳ ಕಷ್ಟಪಡಬೇಕಾಗಿಲ್ಲ’ ಎನ್ನುತ್ತಾರೆ ಸುರೇಂದ್ರನಾಥ್‌.

‘ಕಾರ್ನಾಡರು ಅದ್ಭುತ ಸಂಭಾಷಣೆ ಬರೆದಿದ್ದಾರೆ. ಹಿಂಸೆ ಬಗ್ಗೆ ಒಂದು ಮಾತು ಬರುತ್ತದೆ. ತುಘಲಕ್ ಹೇಳುತ್ತಾನೆ: ‘ಶಿಯಾಬುದ್ದೀನನ ತಾಣದಲ್ಲಿ ನನಗೆ ಒಂದು ದರ್ಶನ - ವಿಷನ್ - ಸಿಕ್ಕಿತು. ಆಗ ಅದನ್ನು ಒಪ್ಪಲು ನಾನು ಸಿದ್ಧನಿರಲಿಲ್ಲ, ಆದರೆ, ಈಗ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ಏಕೆಂದರೆ ಹಿಂಸೆಯ ಬೇರು ನನ್ನ ತಲೆಯಲ್ಲಿಲ್ಲ, ನನ್ನ ರಕ್ತದಲ್ಲಿದೆ. ನನ್ನ ಧಮನಿಯಲ್ಲಿದೆ. ನಾನು ಯಾರು ಅಂತ ಗೊತ್ತಾಗಲು ನನಗೆ ಹಿಂಸೆ ಬೇಕು’ ಎಂದು. ಈ ಸಂಭಾಷಣೆ ಕೇಳಿದವರಿಗೆ ಇದು ಹೇಗೆ ಸಮಕಾಲೀನ ಅನ್ನೋದು ಗೊತ್ತಾಗುತ್ತೆ. ಸ್ವಲ್ಪ ಸ್ಟ್ರೆಸ್ ಬದಲಿಸಿ ಪ್ರಸ್ತುತಪಡಿಸಿದ ತಕ್ಷಣ ನಾಟಕ ಆಟೊಮ್ಯಾಟಿಕಲಿ ಇವತ್ತಿಗೆ ಬಂದು ಕೂತುಕೊಳ್ಳುತ್ತೆ’ ಎಂದು ಅವರು ಹೇಳುತ್ತಾರೆ.

ಸುರೇಂದ್ರನಾಥ್ ಅವರ ಈ ಪ್ರಯೋಗಕ್ಕೆ ರಂಗ ವಿನ್ಯಾಸ ಮತ್ತು ವೇಷಭೂಷಣ ರೂಪಿರುವವರು ಹಿರಿಯ ನಾಟಕಕಾರ ನಟ ಎಂ.ಎಸ್.ಸತ್ಯು ಅವರು. ತಮ್ಮ ತೊಂಬತ್ತೆರಡನೆ ವಯಸ್ಸಿನಲ್ಲಿ ನಾಟಕದ ಹೊಸ ವ್ಯಾಖ್ಯಾನಗಳಿಗೆ ಅವರು ತೆರೆದುಕೊಳ್ಳುವ ರೀತಿಯೇ ಸಂಭ್ರಮಕ್ಕೆ ಕಾರಣ. ‘ತುಘಲಕ್ ಒಂದು ಒಳ್ಳೆಯ ನಾಟಕ. ತುಘಲಕ್ ತನ್ನ ಕಾಲವನ್ನೂ ಮೀರಿ ಬದುಕಿದ ವ್ಯಕ್ತಿ ಮತ್ತು ಪಾತ್ರ. ಅವನೊಬ್ಬ ಗ್ರೇಟ್ ವಿಷನರಿ - ಮಹಾ ದಾರ್ಶನಿಕ. ಆದರೆ, ಅವನೇ ಮಾಡಿದ ಕೆಲವು ಮೂರ್ಖ ಕೆಲಸಗಳು ಅವನ ಕನಸುಗಳನ್ನು ಹಾಳು ಮಾಡಿದವು. ಅವನು ದೆಹಲಿಯ ಎಲ್ಲಾ ಜನರನ್ನು ತುಘಲಕಾಬಾದ್‌ಗೆ ಶಿಫ್ಟ್ ಮಾಡುವ ತನ್ನ ಉದ್ದೇಶ ವಿಫಲವಾದಾಗ ಅವರನ್ನು ಮತ್ತೆ ದೆಹಲಿಗೆ ವಾಪಸ್ಸು ಕರೆದುಕೊಂಡು ಹೋಗುವುದು ಮೂರ್ಖತನವೇ ಸರಿ. ಆದರೆ, ಅವನ ಐಡಿಯಾ ಇದೆಯಲ್ಲಾ, ಅದು ಬಹಳ ಇಂಟರೆಸ್ಟಿಂಗ್’ ಎನ್ನುತ್ತಾರೆ ಈ ರಂಗಭೀಷ್ಮ. ಸುರೇಂದ್ರನಾಥ್ ನಾಟಕವನ್ನು ಸಮಕಾಲೀನಗೊಳಿಸಿರುವ ಕಾರಣ ಸತ್ಯು ರಂಗ ವಿನ್ಯಾಸ ಮತ್ತು ವೇಷಭೂಷಣವನ್ನು ಸಮಕಾಲೀನವಾಗಿಯೇ ರೂಪಿಸಿದ್ದಾರೆ. ‘ಕೋಟೆ ಇತ್ಯಾದಿ ಇಟ್ಟುಕೊಂಡಿದ್ದೀನಿ. ಆದರೆ, ವೇಷಭೂಷಣವನ್ನು ಇವತ್ತಿನ ಕಾಲದಂತೆ ಮಾಡಿದ್ದೀನಿ’ ಎಂದು ಅವರು ವಿವರಿಸುತ್ತಾರೆ.

ಸುರೇಂದ್ರನಾಥ್
ಸುರೇಂದ್ರನಾಥ್

ಬೆಕೆಟ್ ಸ್ಫೂರ್ತಿ: ‘ತುಘಲಕ್’ ನಾಟಕ ಚಾರಿತ್ರಿಕ ವ್ಯಕ್ತಿ ಮತ್ತು ಘಟನೆಗಳನ್ನು ಆಧರಿಸಿದ್ದರೂ ಕಾರ್ನಾಡರು ಅವುಗಳನ್ನು ತಮ್ಮ ದೃಷ್ಟಿಯ ಮೂಸೆಯಲ್ಲಿ ಕರಗಿಸಿ ನಾಟಕ ರಚನೆ ಮಾಡಿರುವುದು ತಿಳಿದ ಸಂಗತಿ. ಒಂದು ಸಂಗತಿ ಮಾತ್ರ ತಿಳಿದಿರಲಿಲ್ಲ. ಅದನ್ನು ಎಂ.ಎಸ್. ಸತ್ಯು ಅವರು ಈಗ ಹೇಳಿದರು. ‘ನಿಜವಾಗಿ ಗಿರೀಶನಿಗೆ ಈ ನಾಟಕ ಬರೆಯಲು ಸ್ಫೂರ್ತಿ 1959ರಲ್ಲಿ ಪ್ರಕಟವಾದ ಷಾನ್ ಅನೋಯ್‌ನ (Jean Anouilh) ಫ್ರೆಂಚ್ ನಾಟಕ ‘ಬೆಕೆಟ್’. ಅದೊಂದು ಜಗತ್ಪ್ರಸಿದ್ಧ ನಾಟಕ. ಆದರೆ, ಗಿರೀಶ ಅದನ್ನು ಎಲ್ಲೂ ಹೇಳಿಕೊಂಡಿಲ್ಲ. ಸಾಮಾನ್ಯವಾಗಿ ನಾಟಕಕಾರರು ತಮ್ಮ ನಾಟಕಗಳಿಗೆ ಮೂಲಸ್ಫೂರ್ತಿ ಯಾವುದು ಅಂತ ಹೇಳಿಕೊಳ್ಳುವುದೇ ಇಲ್ಲ. ಹಿಂದೆ ಜಿ.ಬಿ. ಜೋಶಿಯವರು ಬರೆದ ‘ನಾನೇ ಬಿಜ್ಜಳ’ದ ಥೀಮ್ ತಗೊಂಡು ಗಿರೀಶ ಒಂದು ನಾಟಕ ಬರೆದರು. ಆದರೆ, ಎಲ್ಲೂ ಅವರು ಜೋಶಿಯವರ ನಾಟಕವನ್ನು ಪ್ರಸ್ತಾಪ ಮಾಡಲಿಲ್ಲ’ ಎಂದು ಸತ್ಯು ವಿವರಿಸುತ್ತಾರೆ. ಸತ್ಯು ಅವರಿಗೆ ಇಷ್ಟವಾದ ‘ತುಘಲಕ್’ ಪ್ರಯೋಗ ಅಂದರೆ ಸಮುದಾಯದವರು ಮಾಡಿದ ಪ್ರಯೋಗ. ‘ಕೇರಳದಿಂದ ಬಂದಿದ್ದ ಡಾ. ಸಾಮ್ ಕುಟ್ಟಿ ಪಟ್ಟಾಂಕಾರಿ ಅವರ ನಿರ್ದೇಶನ ಬಹಳ ವಿಭಿನ್ನವಾಗಿತ್ತು’ ಎಂದು ಹೇಳುತ್ತಾರೆ.

‘ತುಘಲಕ್’ ಪ್ರಯೋಗದ ಬಗ್ಗೆ ಸುರೇಂದ್ರನಾಥ್ ಕೊಡುವ ಒಳನೋಟಗಳು ಇವು: ‘ಇದರಲ್ಲಿ ಮುಖ್ಯವಾಗಿ ಎರಡು ಪಾರ್ಟಿಗಳಿವೆ. ಒಂದು ಅರಮನೆಯ ಒಳಗಿರುವವರು, ಇನ್ನೊಂದು ಅರಮನೆಯ ಹೊರಗಿರುವವರು. ಅರಮನೆಯ ಒಳಗಿರುವವರ ನಿರ್ಧಾರಗಳು ಮತ್ತು ವರ್ತನೆಗಳು, ಅರಮನೆಯ ಹೊರಗಿರುವವರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎನ್ನುವುದು ಮತ್ತು ಅವರು ಹೇಗೆ ವರ್ತಿಸುತ್ತಾರೆ ಅನ್ನುವುದು ಪ್ರಮುಖ ಅಂಶ. ನಾಟಕದಲ್ಲಿ ಹದಿಮೂರು ದೃಶ್ಯಗಳಿವೆ. ಅವುಗಳನ್ನು ತೋರಿಸಲು ನನಗೊಂದು ತಟಸ್ಥ ಜಾಗ ಬೇಕಿತ್ತು. ಅದಕ್ಕೆ ಸತ್ಯು ಅವರ ವಿನ್ಯಾಸ ಅದ್ಭುತವಾಗಿದೆ. ಅವರು ಇದುವರೆಗೆ ನನ್ನ ಹತ್ತು ನಾಟಕಗಳಿಗೆ ರಂಗ ಮತ್ತು ವೇಷಭೂಷಣ ವಿನ್ಯಾಸ ಮಾಡಿದ್ದಾರೆ. ನಾನು ಸಾಮಾನ್ಯವಾಗಿ 16x16 ಅಡಿ ರಂಗ ವಿನ್ಯಾಸಕ್ಕೆ ಕಟ್ಟುಬೀಳುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಪ್ರೇಕ್ಷಕರ ನೋಟ ಅಲ್ಲಿಗೆ ಮೀಸಲಾಗಿರುತ್ತದೆ.’

ಸುರೇಂದ್ರನಾಥ್ ಅವರ ಎಲ್ಲಾ ರಂಗಪ್ರಯೋಗಗಳನ್ನೂ ಪ್ರೇಕ್ಷಕರು ಸ್ವಾಗತಿಸಿ ಒಪ್ಪಿಕೊಂಡಿದ್ದಾರೆ. ಏನೇನೂ ರಂಗ ಚೌಕಟ್ಟು (ಸ್ಟ್ರಕ್ಚರ್) ಇಲ್ಲದ ‘ಕಾಂತಾ ಮತ್ತು ಕಾಂತಾ’ ಆಗಲೀ ಎಲ್ಲೂ ಬ್ರೇಕ್ ಇಲ್ಲದ ‘ನಡುರಾತ್ರಿಯ ಪುಳಕ’ ಆಗಲೀ ನಾಲ್ಕು ಕಾಲೇಜು ಹುಡುಗರ ಬದುಕಿನ ಕುರಿತಾದ ‘ಮರ್ಯಾದೆ ಪ್ರಹಸನ’ ಆಗಲೀ ಪ್ರತಿಯೊಂದು ಪ್ರಯೋಗವನ್ನು ಜನ ಬಂದು ನೋಡಿ, ಮೆಚ್ಚಿಕೊಂಡಿದ್ದಾರೆ. ಕುತೂಹಲಕಾರಿಯಾದ ಈ ಪ್ರಯೋಗದ ಬಗ್ಗೆ ನಿರೀಕ್ಷೆ ಹೆಚ್ಚಿದೆ.

‘ಇದುವರೆಗೆ ‘ತುಘಲಕ್’ ಬಗ್ಗೆ ಇದ್ದ ಒಂದು ಪರಿಕಲ್ಪನೆಯನ್ನು ನಾನು ಬದಲಿಸಿದ್ದೇನೆ. ಇವತ್ತಿನ ಪರಿಕರಗಳನ್ನು ಬಳಸಿಕೊಂಡು ಸಮಕಾಲೀನಗೊಳಿಸಿ ನಾಟಕಕ್ಕೆ ಬೇರೊಂದು ಶೇಡ್ ಕೊಟ್ಟಿರುವೆ ಅಷ್ಟೆ. ಇನ್ನು ಏನೇ ವಿವರಣೆ ಕೊಟ್ಟರೂ ಪ್ರಯೋಗದ ಹೊಸತನವನ್ನು ಬಿಟ್ಟುಕೊಡುವಂತಾಗುತ್ತದೆ. ಬನ್ನಿ ನಾಟಕ ನೋಡಿ’ ಎನ್ನುತ್ತಾರೆ ಸುರೇಂದ್ರನಾಥ್‌. ಅವರು ಬಿಟ್ಟುಕೊಟ್ಟ ಒಂದೇ ಅಂಶ ಅಂದರೆ ತುಘಲಕ್ ಕೋಟು ಸೂಟಿನಲ್ಲಿರುತ್ತಾನೆ ಎನ್ನುವುದು!

(ಬೆಂಗಳೂರಿನ ರಂಗಶಂಕರದಲ್ಲಿ ಏಪ್ರಿಲ್ 4, 5 ಮತ್ತು 6 ರಂದು ಪ್ರತಿದಿನ ರಾತ್ರಿ 7ಕ್ಕೆ ತುಘಲಕ್‌ ನಾಟಕದ ಪ್ರಯೋಗ ನಡೆಯಲಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT