ಕತ್ತಲಲ್ಲಿ ಕಲಾಗ್ರಾಮ...ರಂಗ ಚಟುವಟಿಕೆಗಳು ಸ್ಥಗಿತ

7

ಕತ್ತಲಲ್ಲಿ ಕಲಾಗ್ರಾಮ...ರಂಗ ಚಟುವಟಿಕೆಗಳು ಸ್ಥಗಿತ

Published:
Updated:

ಬೆಂಗಳೂರು: ನಗರದಲ್ಲಿ ರವೀಂದ್ರ ಕಲಾಕ್ಷೇತ್ರ ಬಿಟ್ಟರೆ ಮಲ್ಲತ್ತಹಳ್ಳಿಯ ಕಲಾಗ್ರಾಮ ರಂಗಪ್ರಿಯರ ನೆಚ್ಚಿನ ತಾಣವಾಗಿ ರೂಪುಗೊಂಡಿದೆ. ಕಲಾಕ್ಷೇತ್ರದಲ್ಲಿ ರಂಗ ಚಟುವಟಿಕೆಗಳಿಗಿಂತ ಸರ್ಕಾರಿ ಕಾರ್ಯಕ್ರಮಗಳೇ ಹೆಚ್ಚಾಗಿ ನಡೆಯುತ್ತವೆ ಎನ್ನುವ ಆರೋಪದ ಕಾರಣಕ್ಕಾಗಿ ಬಹುತೇಕ ರಂಗಕರ್ಮಿಗಳು ಮಲ್ಲತ್ತಹಳ್ಳಿಯ ಸಮುಚ್ಚಯ ಭವನದ ಸಭಾಂಗಣದಲ್ಲೇ ತಮ್ಮ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು.

ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಮತ್ತು ಕುವೆಂಪು ಭಾಷಾ ಪ್ರಾಧಿಕಾರ ಕಲಾಗ್ರಾಮದಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಪರಿಸರ ರೂಪಿಸಲು ಕಾರಣವಾಗಿವೆ. ಎನ್‌ಎಸ್‌ಡಿಯ ‘ಮಲೆಗಳು ಮದುಮಗಳು’ ಮತ್ತು ‘ಭಾರತ ಭಾಗ್ಯವಿದಾತ’ ಬೃಹತ್ ನಾಟಕಗಳಿಂದಾಗಿ ಕಲಾಗ್ರಾಮ ರಂಗಪ್ರಿಯರ ಮನದಲ್ಲಿ ಅಚ್ಚೊತ್ತಿತ್ತು. ಇದೀಗ ಅಲ್ಲಿ ಸಂಭವಿಸಿರುವ ಆಗ್ನಿ ಆಕಸ್ಮಿಕದಿಂದಾಗಿ ರಂಗ ಚಟುವಟಿಕೆಗಳು ಸ್ಥಗಿತಗೊಂಡಿವೆ. ಸಮುಚ್ಚಯ ಭವನದ ಸುರಕ್ಷತೆಯ ಜತೆಗೆ ರಂಗ ಚಟವಟಿಕೆಗಳು ಕ್ಷೀಣಿಸುವ ಬಗ್ಗೆ ರಂಗಾಸಕ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ‘ಪ್ರಜಾವಾಣಿ’ ರಂಗಾಸಕ್ತರನ್ನು ಮಾತನಾಡಿಸಿದಾಗ...

ಇನ್ನು ಮುಂದಾದರೂ ಸಮಸ್ಯೆಯ ಬಗ್ಗೆ ಎಚ್ಚೆತ್ತುಕೊಳ್ಳಲಿ...

‘ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ಇರುವ ಸಮಸ್ಯೆ ಸೇರಿದಂತೆ ಬೆಂಗಳೂರಿನಲ್ಲಿ ರಂಗ ಚಟುವಟಿಕೆಗಳಿಗೆ ಇರುವ ಸಮಸ್ಯೆ ಕುರಿತು ಈ ಹಿಂದೆ ರಂಗಗೆಳೆಯರ ಜತೆಗೂಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶನಕರಿಗೆ ಪತ್ರ ಬರೆಯಲಾಗಿತ್ತು. ಅದರಲ್ಲಿ ಒಂದು ಸಮಸ್ಯೆ ಬಗೆಹರಿಸಿದ್ದು ಬಿಟ್ಟರೆ ಉಳಿದ ಸಮಸ್ಯೆಗಳು ಹಾಗೆಯೇ ಇವೆ. ಇನ್ನು ಮುಂದಾದರೂ ಇಲಾಖೆ ಈ ಬಗ್ಗೆ ಕ್ರಮಕೊಳ್ಳಬೇಕು. ಮುಖ್ಯವಾಗಿ ಎಮರ್ಜನ್ಸಿ ರೀಚಾರ್ಜೆಬಲ್ ಲೈಟ್ಸ್‌ ಅನ್ನು ವೇದಿಕೆಯ ಮುಂಭಾಗದ ಎರಡೂ ಬದಿಯಲ್ಲೂ ಅಳವಡಿಸಬೇಕು. ಕರೆಂಟ್ ಹೋದಾಗ, ಜನರೇಟರ್ ತೊಂದರೆಯಾದಾಗ ದ್ವನಿವರ್ಧಕಗಳು ಕೆಲಸ ಮಾಡುವಂತೆ ಯುಪಿಎಸ್ ಸೌಲಭ್ಯವನ್ನು ಒದಗಿಸಬೇಕು. ಕಲಾಕ್ಷೇತ್ರ, ಕಲಾಗ್ರಾಮ ಹಾಗೂ ನಯನ ರಂಗಮಂದಿರಗಳ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆಯಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಿ ರಂಗತಂಡಗಳಿಗೆ ಸತಾಯಿಸದೇ ಮೊದಲು ಬಂದವರಿಗೆ ಮೊದಲ ಆದ್ಯತೆ ಕೊಟ್ಟು ಮುಂಗಡವಾಗಿ ನೋಂದಣಿ ಮಾಡುವ ಪಾರದರ್ಶಕ ವ್ಯವಸ್ಥೆ ಜಾರಿಯಾಗಬೇಕು’ ಎನ್ನುತ್ತಾರೆ ರಂಗಕರ್ಮಿ ಶಶಿಕಾಂತ ಯಡಹಳ್ಳಿ.

ಆಡಳಿತ ವ್ಯವಸ್ಥೆ  ಉತ್ತಮಗೊಳ್ಳಲಿ...

‘ಎರಡೂವರೆ ತಿಂಗಳ ಹಿಂದೆ ನಾಟಕ ಮಾಡಿಸಿದಾಗ ಜನರೇಟರ್ ಸಮಸ್ಯೆ ಉಂಟಾಗಿತ್ತು. ಸ್ಥಳದಲ್ಲಿ ಗುತ್ತಿಗೆ ನೌಕರರು ಬಿಟ್ಟರೆ ಅಧಿಕಾರಿ ಇರಲಿಲ್ಲ. ಹಾಗಾಗಿ, ಕನಿಷ್ಠ 100 ರೂಪಾಯಿ ಕೊಟ್ಟು ಬ್ಯಾಟರಿ ಖರೀದಿಸಿ, ಜನರೇಟರ್ ಸರಿಪಡಿಸುವ ನಿರ್ಧಾರ ತೆಗೆದುಕೊಳ್ಳಲು ಆ ನೌಕರರಿಗೆ ಸಾಧ್ಯವಾಗಲಿಲ್ಲ. ಮೇಲಧಿಕಾರಿಗಳಿಗೆ ಕಾಯಬೇಕು. ಇದರಿಂದ ಪ್ರೇಕ್ಷಕರು ಮತ್ತು ರಂಗಕರ್ಮಿಗಳಿಗೆ ತೊಂದರೆ ಆಗುತ್ತಿದೆ. ಅಂದು ಅನಿವಾರ್ಯವಾಗಿ ಮೊಬೈಲ್ ಬೆಳಕಿನಲ್ಲೇ ‘ಜಲಗಾರ’ ನಾಟಕ ಪ್ರದರ್ಶಿಸಬೇಕಾಯಿತು. ಸಭಾಂಗಣದ ಆಸನಗಳು ಕಿತ್ತು ಹೋಗಿವೆ. ಅಲ್ಲಿ ಆಡಳಿತ ವ್ಯವಸ್ಥೆ  ಉತ್ತಮಗೊಂಡರೆ ಉತ್ತಮ ಎಂಬುದು ನನ್ನ ಅಭಿಪ್ರಾಯ’ ಎನ್ನುತ್ತಾರೆ ರಂಗ ನಿರ್ದೇಶಕ ಚನ್ನಕೇಶವಮೂರ್ತಿ.

ಅಂದೇ ಗಮನಕ್ಕೆ ತಂದಿದ್ದೆ...

‘ವರ್ಷದ ಹಿಂದೆ ‘ಮಲೆಗಳಲ್ಲಿ ಮದುಮಗಳು’ ನಾಟಕ ಪ್ರದರ್ಶಿಸುವಾಗ ಲೈಟಿಂಗ್ ವಿನ್ಯಾಸ ಮಾಡಿದ್ದೆ. ಆಗ ವೈಯರಿಂಗ್ ಸಮಸ್ಯೆ ಗುರುತಿಸಿದ್ದೆ. ಅದನ್ನು ಸಂಬಂಧಿಸಿದ ಅಧಿಕಾರಿಯೊಬ್ಬರ ಗಮನಕ್ಕೆ ತಂದಿದ್ದೆ. ಅವರು ಕಲಾಗ್ರಾಮ ಉಸ್ತುವಾರಿ ಹೊತ್ತಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಮಿರ್ಜಿ ಅವರಿಗೆ ತಿಳಿಸಲು ಸೂಚಿಸಿದ್ದರು. ಆದರೆ, ಮಿರ್ಜಿ ಅವರು ಅದನ್ನು ಸಮಸ್ಯೆ ಒಪ್ಪಿಕೊಳ್ಳಲೇ ಇಲ್ಲ. ನಾನೊಬ್ಬ ವೃತ್ತಿಪರ ಲೈಟಿಂಗ್ ಡಿಸೈನರ್. ಕಾಳಜಿಯಿಂದ ಹೇಳಿದ್ದೆ. ಆದರೆ, ಅಂದೇ ಗಮನಿಸಿದ್ದರೆ ಅವಘಡ ಸಂಭವಿಸುತ್ತಿರಲಿಲ್ಲ’ ಎನ್ನುತ್ತಾರೆ ಬೆಳಕು ವಿನ್ಯಾಸಕಾರ ನಂದಕಿಶೋರ್ ಕೆ.ಆರ್.

ಶೀಘ್ರ ದುರಸ್ತಿ ಕಾರ್ಯವಾಗಲಿ...

‘ಕಲಾಗ್ರಾಮಕ್ಕೆ ತುಂಬಾ ಒಳ್ಳೆಯ ಪ್ರೇಕ್ಷಕರು ಬರುತ್ತಿದ್ದಾರೆ. ರಂಗಶಂಕರ ಬಿಟ್ಟರೆ ಇಲ್ಲಿ ಹೆಚ್ಚು ರಂಗಪ್ರಿಯರು ಬರುತ್ತಾರೆ. ಈಗ ಅಗ್ನಿ ಅವಘಡ ಸಂಭವಿಸಿರುವುದರಿಂದ ಎನ್‌ಎಸ್‌ಡಿಯ ರಂಗಚಟುವಟಿಕೆಗಳಿಗೂ ತೊಂದರೆಯಾಗಲಿದೆ. ವಿದ್ಯುತ್ ವ್ಯವಸ್ಥೆ ಇಲ್ಲದೇ ಕತ್ತಲಲ್ಲಿ ಮುಳುಗಿದ್ದೇವೆ. ಸರ್ಕಾರ ಅಥವಾ ಸಂಬಂಧಿಸಿದ ಇಲಾಖೆ ಬೇಗ ದುರಸ್ತಿ ಕಾರ್ಯ ಕೈಗೊಂಡು ರಂಗಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಎನ್‌ಎಸ್‌ಡಿ ನಿರ್ದೇಶಕ ಸಿ. ಬಸವಲಿಂಗಯ್ಯ ಒತ್ತಾಯ

ಸಿಬ್ಬಂದಿಗೆ ಮೊದಲೇ ಸೂಕ್ತ ತರಬೇತಿ ಕೊಡಲಿ...

‘ಅಗ್ನಿ ಆಕಸ್ಮಿಕ ಸಂಭವಿಸಿದಾಗ ಫೈಯರ್ ಅಲಾರಾಂ ಏಕೆ ಹೊಡೆಯಲಿಲ್ಲ? ಅಲ್ಲಿನ ಸಿಬ್ಬಂದಿಗೆ ಮೊದಲೇ ಸೂಕ್ತ ತರಬೇತಿ ಕೊಡಬೇಕು. ಸೆಕ್ಯೂರಿಟಿ ನೋಡಿಕೊಂಡಿದ್ದರಿಂದ ಹೆಚ್ಚಿನ ಅಗ್ನಿ ಅನಾಹುತ ಸಂಭವಿಸಿಲ್ಲ. ಆದರೂ ಸೌಂಡ್ ರೂಂ ಪೂರ್ತಿ ಸುಟ್ಟುಹೋಗಿತ್ತು. ಸಭಾಂಗಣದ ಸೀಲಿಂಗ್ ತನಕ ಅಗ್ನಿ ವ್ಯಾಪಿಸಿದೆ. ಇದರಿಂದ ಮುಂದಿನ ದಿನಗಳಲ್ಲಿ ರಂಗಚಟುವಟಿಕೆಗಳು ಇಲ್ಲಿ ಸ್ತಬ್ಧವಾಗಲಿವೆ ಎನ್ನುತ್ತಾರೆ ಬೆಳಕು ವಿನ್ಯಾಸಕಾರ ಕಿರಣ್ ಸಿಜಿಕೆ

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !