ಬುಧವಾರ, ಸೆಪ್ಟೆಂಬರ್ 23, 2020
20 °C

ಸಕಲ ಕಲಾವಲ್ಲಭೆ ಸ್ನೇಹಶ್ರೀ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

ಮಕ್ಕಳಿಗೆ ವೇದಿಕೆಯೆಂದರೆ ಭಯ, ಮನೆಯಲ್ಲಿ ನವಿಲಿನಂತೆ ನರ್ತಿಸುವವರು ವೇದಿಕೆ ಏರಿದ ಕೂಡಲೇ ಕೊಂಚ ಆತಂಕಕ್ಕೊಳಗಾಗುತ್ತಾರೆ. ಆದರೆ, ಈ ಬಾಲೆ ಹಾಗಲ್ಲ. ವೇದಿಕೆ ಹತ್ತಿದಾಕ್ಷಣ ಚೈತನ್ಯದ ಚಿಲುಮೆಯಂತೆ ತೋರುತ್ತಾಳೆ. ಅದಮ್ಯ ಚೇತನವೊಂದು ಆವರಿಸಿಕೊಂಡಂತೆ ಆಕೆ ಭಾಸವಾಗುತ್ತಾಳೆ.

ಹೌದು, ಸ್ನೇಹಶ್ರೀ ಹೆಗಡೆ ಎಂಬ ಪುಟ್ಟ ಬಾಲಪ್ರತಿಭೆ ಚಟುವಟಿಕೆಯ ಗಣಿ. ಪ್ರಚಾರದ ಬೆನ್ನತ್ತದೇ ತೆರೆಮರೆಯಲ್ಲಿ ಬೆಳಗುತ್ತಿರುವ ಈ ಬಾಲಕಿ ಸಕಲ ಕಲಾವಲ್ಲಭೆ. ರಿಂಗ್ ಡಾನ್ಸ್ ಚತುರೆಯಾಗಿರುವ ಈಕೆ, ರಿಂಗಿಗೆ ಬೆಂಕಿ ಕಟ್ಟಿಕೊಂಡು, ಹಸನ್ಮುಖಿಯಾಗಿ ಸೊಂಟ ತಿರುಗಿಸುವುದನ್ನು ನೋಡಿದರೆ ಎದೆ ಝಲ್ಲೆನ್ನುತ್ತದೆ. ಕಬ್ಬಿಣದ ಮೊಳೆಯ ಸಾಲುಗಳ ಮೇಲೆ ಕಾಲೂರಿ, ಗಡಿಗೆಯ ತಲೆಯೇರಿ ನಿಂತು ಯಂತ್ರದ ಚಕ್ರ ತಿರುಗಿದ ವೇಗದಲ್ಲಿ ಈಕೆ ರಿಂಗ್ ತಿರುಗಿಸುತ್ತಾಳೆ.

ಮಂಗಳೂರಿನ ಮಕ್ಕಿಮನೆ ಉತ್ಸವದಲ್ಲಿ ಸ್ನೇಹಶ್ರೀಯ ‘ಫೈರ್ ರಿಂಗ್ ಡಾನ್ಸ್’ ಕಂಡ ಪ್ರೇಕ್ಷಕರ ಪ್ರತಿಕ್ರಿಯೆ, ಪ್ರೀತಿ ಎಂದಿಗೂ ಮರೆಯಲು ಸಾಧ್ಯವಿಲ್ಲ ಎನ್ನುತ್ತಾರೆ, ಈಕೆಯ ಅಮ್ಮ ಬಿಂದು ಹೆಗಡೆ.

ಯಕ್ಷಗಾನ ಕಲಾವಿದೆ ನಿರ್ಮಲಾ ಹೆಗಡೆ ಅವರ ‘ಯಕ್ಷಗೆಜ್ಜೆ’ ತರಬೇತಿ ಕೇಂದ್ರದ ವಿದ್ಯಾರ್ಥಿನಿ ಆಗಿರುವ ಸ್ನೇಹಶ್ರೀ, ಯಕ್ಷಗಾನದಲ್ಲೂ ಎತ್ತಿದ ಕೈ. ವಿಷ್ಣು, ಈಶ್ವರ, ವಾಯು, ದುಷ್ಯಂತ ಮೊದಲಾದ ಪೌರಾಣಿಕ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾಳೆ.

ಬೆಂಗಳೂರಿನ ಮಹಿಮಾ ಶೇಖರ, ಸಂಪದಾ ಮರಾಠೆ ಅವರಲ್ಲಿ ಭರತನಾಟ್ಯ ಕಲಿಯುತ್ತಿರುವ ಸ್ನೇಹಶ್ರೀ, ಗೆಜ್ಜೆ ಕಟ್ಟಿದರೆ, ಅದ್ಭುತ ಭರತನಾಟ್ಯ ಕಲಾವಿದೆ. ಅನೇಕ ಕಡೆಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದಾಳೆ.

ಇಷ್ಟಕ್ಕೇ ಮುಗಿದಿಲ್ಲ ಈ ಬಾಲೆಯ ಪ್ರತಿಭೆ. ಭಾರತೀಯರ ಹೆಗ್ಗಳಿಕೆಯಾಗಿರುವ ಯೋಗದಲ್ಲೂ ಈಕೆ ಪ್ರವೀಣೆ. ಪ್ರಾಥಮಿಕ, ಪ್ರೌಢಶಾಲಾ ಮಟ್ಟದಲ್ಲಿ ನಡೆಯುವ ಯೋಗ ಪ್ರದರ್ಶನದಲ್ಲಿ ರಾಜ್ಯ ಮಟ್ಟದವರೆಗೆ ಆಯ್ಕೆಯಾಗಿದ್ದಾಳೆ.

‘ನಾನು ಮನೆಯಲ್ಲಿ ತಾಲೀಮು ನಡೆಸುವುದು ಕಡಿಮೆ. ಹಾಗೆ ಮಾಡಿದರೆ ನನಗೆ ವೇದಿಕೆಯ ಮೇಲೆ ಗೊಂದಲವಾಗುತ್ತದೆ. ವೇಷ ಕಟ್ಟಿದಾಗ ನನ್ನೊಳಗಿನ ಕಲ್ಪನೆಯು ಅರಿವಿಲ್ಲದೇ ನೃತ್ಯದಲ್ಲಿ ಹೊರಹೊಮ್ಮುತ್ತದೆ. ಅಮ್ಮ ಹಾಡು ಆಯ್ಕೆ ಮಾಡಿದರೆ, ಅದಕ್ಕೆ ನಾನೇ ಕೊರಿಯೋಗ್ರಫಿ ಮಾಡಿಕೊಂಡು ರಿಂಗ್ ಡಾನ್ಸ್ ಮಾಡುತ್ತೇನೆ’ ಎನ್ನುತ್ತಾಳೆ ಸ್ನೇಹಶ್ರೀ.

ನೃತ್ಯ, ಯಕ್ಷಗಾನ, ಯೋಗದ ಜತೆಗೆ, ಕರಕುಶಲ ಕಲೆಯೂ ಈಕೆಯ ಆಸಕ್ತಿಯ ವಿಷಯ. ಬಹುಮುಖ ಪ್ರತಿಭೆಯ ಈಕೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡುವ ‘ಅಸಾಮಾನ್ಯ ಬಾಲಪ್ರತಿಭೆ’ ಪುರಸ್ಕಾರ ದೊರೆತಿದೆ. ಉತ್ತರ ಕನ್ನಡ ಜಿಲ್ಲೆ ಶಿರಸಿಯ ಪ್ರತಿಷ್ಠಿತ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿಯಾಗಿರುವ ಸ್ನೇಹಶ್ರೀ, ಹಕ್ರೆಮನೆಯ ಬಿಂದು ಮತ್ತು ದತ್ತಾತ್ರೇಯ ಹೆಗಡೆ ದಂಪತಿ ಪುತ್ರಿ. ಸಂಪರ್ಕ ಸಂಖ್ಯೆ: 9482111131.

ರಾಜ್ಯಮಟ್ಟಕ್ಕೆ ಆಯ್ಕೆ

ಇತ್ತೀಚೆಗೆ ಕಾರವಾರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಲಾಶ್ರೀ ಶಿಬಿರದಲ್ಲಿ ಸೃಜನಾತ್ಮಕ ಪ್ರದರ್ಶನ ಕಲೆ ವಿಭಾಗದಲ್ಲಿ ಯಕ್ಷನೃತ್ಯ ಪ್ರದರ್ಶಿಸಿದ್ದ ಸ್ನೇಹಶ್ರೀ, ಪ್ರಥಮ ಸ್ಥಾನ ಪಡೆದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು