ಗುರುವಾರ , ಏಪ್ರಿಲ್ 2, 2020
19 °C

ಮೈಸೂರು ರಂಗಭೂಮಿ | ರಂಗದ ಸರ್ವಾಂಗ ದರ್ಶಕ ನರೇಶ್‌

ರೇವಣ್ಣ ಎಂ. Updated:

ಅಕ್ಷರ ಗಾತ್ರ : | |

ನಮ್ಮ ಸಮಾಜದಲ್ಲಿ ಬೇಕಾದಷ್ಟು ವಿಲನ್‌ಗಳು ಇರುತ್ತಾರೆ. ಟಿ.ವಿ.ಗಳಲ್ಲಿ, ನೆಂಟರು, ಸ್ನೇಹಿತರು ವಿಲನ್‌ಗಳನ್ನು ತೋರಿಸುತ್ತಿರುತ್ತಾರೆ. ಸಿನಿಮಾಗಳಲ್ಲಂತೂ ವಿಲನ್‌ಗಳು ಇರಲೇ ಬೇಕು ಎಂಬಂಥ ಸ್ಥಿತಿ ಇದೆ. ಇಂಥ ಸಂದರ್ಭದಲ್ಲಿ ತಪ್ಪು ದಾರಿಯಲ್ಲಿ ಸಾಗುವವರಿಗೆ ಸರಿ ದಾರಿ ತೋರಿಸಬೇಕಿರುವುದು ಇಂದಿನ ಅಗತ್ಯ. ಆಗ ಮಾತ್ರ ಸಮಾಜ ಉತ್ತಮವಾಗಿರುತ್ತದೆ. ಈ ಕಾರಣದಿಂದಲೇ ನಮ್ಮ ನಾಟಕಗಳಲ್ಲಿ ವಿಲನ್ ಪಾತ್ರಗಳೇ ಇಲ್ಲ...

ಇದೇನಿದು? ನಾಟಕವಿರಲಿ, ಸಿನಿಮಾವೇ ಇರಲಿ ವಿಲನ್‌ ಪಾತ್ರವೇ ಇಲ್ಲ ಎಂದರೆ ಹೇಗೆ? ಆ ನಾಟಕ ಅಥವಾ ಸಿನಿಮಾ ಹೇಗೆ ಪರಿಪೂರ್ಣವಾಗಲು ಸಾಧ್ಯ ಎಂಬ ಪ್ರಶ್ನೆ ಮೂಡಿತೇ?

ಈ ಎಲ್ಲ ಬಗೆಯ ಅನುಮಾನ, ಪ್ರಶ್ನೆಗಳು ಮೂಡದಂತೆ ಮಕ್ಕಳ ನಾಟಕಗಳು ಹೇಗಿರಬೇಕು, ಮಕ್ಕಳಲ್ಲಿ ಈ ಕುರಿತ ಅರಿವಿನ ಗುಂಡಿಯನ್ನು ಹೇಗೆ ಚಾಲನೆ ಮಾಡಬೇಕು ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದವರು 3 ದಶಕಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ನಾಟಕ ಶಿಕ್ಷಕ ನರೇಶ್‌.

ನಗರದ ಯಾದವಗಿರಿಯ ಐ ಕ್ಯಾನ್‌ ದಿ ಲರ್ನಿಂಗ್‌ ಸೆಂಟರ್ ಸ್ಕೂಲ್‌ನಲ್ಲಿ ಮಕ್ಕಳಿಗೆ ನಾಟಕ ಹೇಳಿಕೊಡುವ ಅವರು, ರಂಗಭೂಮಿಯ ಎಲ್ಲ ಪ್ರಕಾರಗಳಲ್ಲೂ ಸಿದ್ಧಹಸ್ತರು.

ಮಗು ಒಂದು ಸೂಜಿ–ದಾರ ಹಿಡಿದುಕೊಂಡು ಒಂದು ಜಾಗಕ್ಕೆ ಚುಚ್ಚ ಬೇಕಾದರೆ ಶ್ರೇಷ್ಠವಾದ ಏಕಾಗ್ರತೆ ಮುಖ್ಯವಾಗುತ್ತದೆ. ಕೈ ಮತ್ತು ಕಣ್ಣಿನ ಚಲನೆ ಮುಖ್ಯವಾಗುತ್ತದೆ. ಇದೆಲ್ಲವೂ ರಂಗಭೂಮಿಗೆ ಅಗತ್ಯವಾಗುತ್ತದೆ. ರಂಗದ ಮೇಲೆ ಬರಲು ಇಷ್ಟ ಇಲ್ಲದವರಿಗೂ ರಂಗಭೂಮಿ ಅವಕಾಶ ನೀಡುತ್ತದೆ. ನಾವು ಕೇವಲ ಮಗುವಿಗೆ ಮಾತ್ರ ನಾಟಕವನ್ನು ಹೇಳಿಕೊಡುತ್ತಿಲ್ಲ. ನಾಟಕ ಎಂಬುದು ಸಮುದಾಯ ಕಲಿಕೆ ಆಗಿರುವುದರಿಂದ ಶಿಕ್ಷಕರಿಗೆ, ಪೋಷಕರಿಗೂ ಈ ಬಗ್ಗೆ ಮಾಹಿತಿ ನೀಡುತ್ತೇವೆ. ಏಕೆಂದರೆ ನಾಟಕದ ಬಗ್ಗೆ ಮಗು ಹೇಳಿದಾಗ ಪೋಷಕರಿಗೂ ಅದು ಅರ್ಥ ಆಗಬೇಕಲ್ಲ? ಶಿಕ್ಷಕರು ಪೋಷಕರೂ ಆಗಿರುವುದರಿಂದ ಮಕ್ಕಳಿಗೆ ಹೇಗೆ ಬೋಧಿಸಬೇಕು ಎಂಬ ಬಗ್ಗೆ ಅರಿವಿರಬೇಕು. ಈ ಕಾರಣದಿಂದ ಎಲ್ಲ ಕಡೆಯೂ ಪೋಷಕರು, ಮಕ್ಕಳು, ಶಿಕ್ಷಕರನ್ನು ಸೇರಿಸಿಕೊಂಡು ನಾಟಕ ಮಾಡುತ್ತೇವೆ ಎಂದು ವಿವರಿಸುತ್ತಾರೆ ನರೇಶ್‌.

‘ನಾಟಕ ಎನ್ನುವುದು ಸಮಾಜದ ಪ್ರಯೋಗ ಶಾಲೆ. ಯಾರ ಜತೆ ಹೇಗೆ ಇರಬೇಕು. ಹೇಗೆ ಬದುಕಬೇಕು. ವರ್ತನೆ ಹೇಗೆ ಇರಬೇಕು ಎಂಬುದನ್ನು ನಿಯಂತ್ರಿಸಬಹುದು. ಗಣಿತವನ್ನೂ ನಾಟಕದ ಮೂಲಕ ತಿಳಿಸುತ್ತೇವೆ. ಮಕ್ಕಳಲ್ಲಿ ಎಲ್ಲ ಸಾಮರ್ಥ್ಯವೂ ಇರುತ್ತದೆ. ಅವರಿಗೆ ಅದರ ಅರಿವು ಮಾಡಿಸಬೇಕು. ಆ ಕೆಲಸವನ್ನು ನಾನು ಮಾಡುತ್ತೇನೆ’ ಎನ್ನುವುದು ಅವರ ಮಾತು.

ಇತರರು ಅಭಿನಯವನ್ನು ಮಾತ್ರ ಕಲಿಸಿದರೆ ನಾವು ತಾಂತ್ರಿಕತೆ, ಕಾಸ್ಟ್ಯೂಮ್‌, ಡ್ರಾಯಿಂಗ್‌, ಸೆಟ್‌ ಡಿಸೈನಿಂಗ್‌, ಮ್ಯೂರಲ್‌ ಕೂಡ ಕಲಿಸುತ್ತೇನೆ. ಏಕೆಂದರೆ ರಂಗಭೂಮಿ ಎನ್ನುವುದು ಸಮಗ್ರವಾದ ಕಲೆ. ಶಾಲೆಯಲ್ಲೂ ವಿವಿಧ ಪ್ರಯೋಗಗಳ ಮೂಲಕ ನಾಟಕ ಕಲಿಸುವ ಅವರು, ಆಲಿವರ್‌ ಟ್ವಿಸ್ಟ್‌ ನಾಟಕವನ್ನು ಫುಡ್‌ ಗ್ಲೋರಿಯಸ್‌ ಫುಡ್‌ ಹೆಸರು ನೀಡಿ ಮೈಮ್‌ ಮತ್ತು ಕಥಕ್‌ ರೀತಿಯಲ್ಲಿ ಪ್ರದರ್ಶಿಸಿದ್ದಾರೆ. ಮಕ್ಕಳಿಂದ ನಗಾರಿ, ಕೋಲಾಟ, ಜಡೆ ಕೋಲಾಟವನ್ನೂ ಮಾಡಿಸಿದ್ದಾರೆ.

ಮಕ್ಕಳಲ್ಲೂ ಕಷ್ಟದ ಅರಿವು ಮೂಡಿಸಬೇಕು. ಮುಂದೆ ಅವರು ದೊಡ್ಡವರಾಗಿ ನಿರ್ಧಾರ ಕೈಗೊಳ್ಳುವವರಾದಾಗ ಸಮಾಜಮುಖಿ ಚಿಂತನೆಗಳನ್ನು ಮಾಡಲು ಇದು ನೆರವಾಗುತ್ತದೆ ಎನ್ನುವುದನ್ನು ಒತ್ತಿ ಹೇಳುವ ನರೇಶ್‌ ಅದನ್ನು ಕಾರ್ಯರೂಪಕ್ಕೂ ತಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)