ಈ ಪಾಂಚಾಲಿ ಅವಳಲ್ಲ...!

7

ಈ ಪಾಂಚಾಲಿ ಅವಳಲ್ಲ...!

Published:
Updated:
‘ಪಾಂಚಾಲಿ’ ರಂಗ ಪ್ರಯೋಗದ ರಿಹರ್ಸಲ್‌ನಲ್ಲಿ ಬಿ.ಜಯಶ್ರೀ ಮತ್ತು ಸತ್ಯನಾರಾಯಣ ರಾಜು

ಪಾಂಚಾಲಿ ಅಂದಾಕ್ಷಣ ಮಹಾಭಾರತದ ದ್ರೌಪದಿ ಥಟ್ಟನೆ ನೆನಪಾಗುತ್ತಾಳೆ. ಮಹಾಭಾರತ ನಡೆದಿದ್ದೇ ಅವಳ ಕಾರಣಕ್ಕಾಗಿ ಅನ್ನುವ ಕಥೆಯೂ ಜನಜನಿತ. ಆದರೆ, ಪುರುಷ ಪ್ರಧಾನ ಸಮಾಜದಲ್ಲಿ ಅವಳಂತರಂಗದ ಮಾತುಗಳು ನೇಪಥ್ಯದಲ್ಲಿ ಉಳಿದಿವೆ. ಅಂಥ ಮಾತು ಮತ್ತು ಮೌನಕ್ಕೆ ದನಿಯಾಗಲಿದೆ ‘ಪಾಂಚಾಲಿ’ ಲಾಸ್ಯರಂಗ ಪ್ರಯೋಗ.

ಹಿರಿಯ ರಂಗಕರ್ಮಿ ಬಿ.ಜಯಶ್ರೀ ಮತ್ತು ಖ್ಯಾತ ನೃತ್ಯಪಟು ಸತ್ಯನಾರಾಯಣ ರಾಜು ಅವರು ವಿವಿಧ ಪಾತ್ರಗಳಾಗಿ ‘ಪಾಂಚಾಲಿ’ಯ ಅಂತರಂಗವನ್ನು ತೆರೆದಿಡಲಿದ್ದಾರೆ. ಭರತನಾಟ್ಯದ ಸೊಗಸು–ರಂಗಭೂಮಿಯ ಸೊಗಡು ಎರಡನ್ನೂ ಮೇಳೈಸಿಕೊಂಡಿರುವ ಈ ಪ್ರಯೋಗ ವಿಭಿನ್ನವಾಗಿ ರೂಪುಗೊಂಡಿದೆ. ‘ಉರಿಯ ಉಯ್ಯಾಲೆ’ ನಾಟಕದ ನಂತರ ಬಿ.ಜಯಶ್ರೀ ಅವರು ‘ಪಾಂಚಾಲಿ’ಯಲ್ಲಿ ಭಿನ್ನ ಪಾತ್ರವಾಗಿ ಮತ್ತು ನಿರ್ದೇಶಕಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.   ‌

‘ನೃತ್ಯಪಟು ಸತ್ಯನಾರಾಯಣ ರಾಜು ಅವರು ಈ ಪ್ರಯೋಗವನ್ನು ನನ್ನ ಮುಂದಿಟ್ಟಾಗ ಅರ್ಧನಾರೀಶ್ವರನ ತತ್ವ ನೆನಪಾಯಿತು. ಅದನ್ನೇ ಮನದಲ್ಲಿಟ್ಟುಕೊಂಡು ಒಪ್ಪಿಕೊಂಡೆ. ನಿರ್ದೇಶನದ ಜತೆಗೆ ಅಭಿನಯವನ್ನೂ ಮಾಡಬೇಕೆಂದು ಹೇಳಿದಾಗ ಉರಿಯ ಉಯ್ಯಾಲೆ ನೆನಪಾಯಿತು. ಅದರ ಛಾಯೆ ಇಲ್ಲಿ ತಾರದೇ ನಾಟಕ ರೂಪಿಸಬೇಕಿತ್ತು. ಮಹಾಭಾರತದ ಪಾಂಚಾಲಿ ಏನೆಲ್ಲಾ ರೂಪ ತಾಳಿದ್ದಾಳೋ ಅದೆಲ್ಲ ಇಲ್ಲಿ ಇದ್ದೇ ಇರುತ್ತದೆ. ಆದರೆ, ಅದು ಯಾವ ಯಾವ ಥರದಲ್ಲಿ ಇರುತ್ತೆ ಅನ್ನೋದು ಮುಖ್ಯ. ಅದುವೇ ಪಾಂಚಾಲಿ ಪ್ರಯೋಗದ ವಿಶೇಷ’ ಎನ್ನುತ್ತಾರೆ ಹಿರಿಯ ರಂಗಕರ್ಮಿ ಬಿ.ಜಯಶ್ರೀ

‘ಪಾಂಚಾಲಿಯ ಕನ್ನಡಿಯಾಗಿ ನಾನು ನಟಿಸಿದ್ದೇನೆ. ರಾಜು ಪಾಂಚಾಲಿಯ ದೇಹವಾದರೆ, ನಾನು ಅವಳ ಮನಸಾಗುತ್ತೇನೆ. ನೃತ್ಯದಲ್ಲಿ ಅವರು ಮನಸಾದರೆ, ನಾನು ದೇಹವಾಗುತ್ತೇನೆ. ಅವರು ಪಾಂಚಾಲಿಯ ರೂಪವಾದರೆ ನಾನು ಕನ್ನಡಿ. ಅವರು ಅರ್ಜುನ ನಾನು ಭೀಮ, ಅವರು ಸೈಂಧವ ಮತ್ತೆ ನಾನು ಪಾಂಚಾಲಿ ಆಗುತ್ತೇನೆ. ಇದು ನೃತ್ಯ ಮತ್ತು ರಂಗಭೂಮಿ ಸಮ್ಮಿಲನದ ಅಪರೂಪದ ಪ್ರಯೋಗ. ಇದೊಂದು ಹೊಸ ಯೋಚನೆ. ಹೆಣ್ಣು ತನ್ನ ರಕ್ಷಣೆಗಾಗಿ ಗಂಡು ಅಥವಾ ಇತರರಿಗೆ ಅವಲಂಬಿಸದೇ ತನ್ನನ್ನು ತಾನೇ ರಕ್ಷಿಸಿಕೊಳ್ಳಬೇಕು ಅನ್ನುವ ಸಂದೇಶ ಇದರಲ್ಲಿದೆ. ಪ್ರೇಕ್ಷಕರು ಈ ಪ್ರಯೋಗದ ವಿಶೇಷ ಗುಣವನ್ನು ನೋಡಿಯೇ ಅನುಭವಿಸಬೇಕು’ ಎಂಬುದು ಅವರ ಇಂಗಿತ.

‘ದ್ರೌಪದಿ ಬಗ್ಗೆ ಐದು ವರ್ಷಗಳ ಹಿಂದೆಯೇ ರೂಪಕ ಮಾಡಬೇಕೆಂದು ಪ್ರಯತ್ನಪಟ್ಟಿದ್ದೆ. ಆದರೆ, ಅದು ಈಗ ಜಯಶ್ರೀ ಅವರೊಂದಿಗೆ ಸಾಕಾರವಾಗುತ್ತಿದೆ. ನೃತ್ಯಗಾರನಾಗಿ ಮಹಿಳೆಯ ಪಾತ್ರವನ್ನು  ಮಾಡೋದು ಸವಾಲು. ಗಂಡಿನ ದೇಹ ಹೆಣ್ಣಿನ ಲಾಲಿತ್ಯವನ್ನು ಸುಲಭವಾಗಿ ಪ್ರಸ್ತುತಪಡಿಸಲಾಗದು. ಹಾಗೆಂದು ನಾನು ದ್ರೌಪದಿಯಾಗಿ ನಟಿಸಿದ್ದೇನೆ ಅಂತಲ್ಲ. ಅವಳ ಅಂತರಂಗದ ಭಾವನೆಗಳಿಗೆ ಕನ್ನಡಿ ಹಿಡಿದಿದ್ದೇನೆ ಅಷ್ಟೇ’ ಎನ್ನುತ್ತಾರೆ ಪಾಂಚಾಲಿಯ ಮತ್ತೊಬ್ಬ ಪಾತ್ರಧಾರಿ ಸತ್ಯನಾರಾಯಣ ರಾಜು.

‘ನಮ್ಮ ಪ್ರಯೋಗಕ್ಕೆ ಅನುಕೂಲವಾಗುವಂತೆ ಎಚ್.ಎಸ್. ವೆಂಕಟೇಶಮೂರ್ತಿ ಅವರು ‘ಪಾಂಚಾಲಿ’ಯನ್ನು ಬರೆದುಕೊಟ್ಟಿದ್ದಾರೆ. ಈ ಪ್ರಯೋಗದಲ್ಲಿ ಹೊಸ ಸಂದೇಶವಿದೆ. ಮಹಾಭಾರತದ ದ್ರೌಪದಿಯನ್ನು ಕಾಪಾಡಲು ಅಂದು ಶ್ರೀಕೃಷ್ಣ ಬಂದಿದ್ದ. ಆದರೆ, ಈಗ ಹೆಣ್ಣು ತನ್ನನ್ನು ತಾನೇ ರಕ್ಷಿಸಿಕೊಳ್ಳಬೇಕು ಅನ್ನುವ ಚಿಂತನೆ ಇದರಲ್ಲಿದೆ. ವರ್ಣ, ದೇವರನಾಮಗಳಿಗಿಂತ ಭಿನ್ನವಾದ ಪ್ರಯೋಗವಿದು. ಇಲ್ಲಿ ಎರಡು ಮನಸುಗಳು ಮಾತನಾಡುತ್ತವೆ. ಅಂತರಂಗದ ಮಾತುಗಳಿಗೆ ನಾವು ಪಾತ್ರಗಳಾಗಿದ್ದೇವೆ. ಈ ಪ್ರಯೋಗದಲ್ಲಿ ನನಗೂ ಮಾತುಗಳಿವೆ. ನೃತ್ಯಪಟುವಾಗಿ ಇದು ನನಗೆ ದೊಡ್ಡ ಸವಾಲು. ಅದಕ್ಕಾಗಿ ಜಯಶ್ರೀ ಅಮ್ಮ ಅವರಿಂದ ಅಭಿನಯ ತರಬೇತಿ ಪಡೆದಿದ್ದೇನೆ. ಪ್ರತಿ ಹಂತದಲ್ಲೂ ಅವರು ನನ್ನನ್ನು ತಿದ್ದಿದ್ದಾರೆ. ಈ ಪ್ರಯತ್ನದ ಭಾಗವಾಗಿ ಲಾಸ್ಯರಂಗ ಪ್ರಯೋಗ ರಂಗದ ಮೇಲೆ ಬರಲಿದೆ’ ಎಂದು ತಮ್ಮ ಪಾತ್ರದ ಕುರಿತು ವಿವರಿಸುತ್ತಾರೆ ರಾಜು.

ಕನ್ನಡ ಸಾಹಿತ್ಯದ ಸೊಗಸು, ಕರ್ನಾಟಕ ಶಾಸ್ತ್ರೀಯ ಸಂಗೀತ–ಜನಪದ ಸಂಗೀತದ ಸೊಬಗು, ಭರತನಾಟ್ಯದ ಲಾವಣ್ಯ, ಗಾಂಭೀರ್ಯ ಹಾಗೂ ರಂಗಾಭಿನಯದ ವಿಶೇಷ ಕಲಾವಂತಿಕೆಯನ್ನು ‘ಪಾಂಚಾಲಿ’ ಪ್ರಯೋಗ ಒಳಗೊಂಡಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !