ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಯ ಹೊತ್ತು ‘ಬುದ್ಧಯಾನ’

Last Updated 26 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಕಾಶ್ಮೀರದ ಪುಲ್ವಾಮಾದಲ್ಲಿ ಎರಡೂವರೆ ತಿಂಗಳ ಹಿಂದೆ ಉಗ್ರರು ದಾಳಿ ನಡೆಸಿ ವೀರಯೋಧರನ್ನು ಬಲಿ ತೆಗೆದುಕೊಂಡಿದ್ದರು. ಈ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನದ ಮೇಲೆ ಯುದ್ಧ ಸಾರಬೇಕು ಎಂಬ ಕೂಗು ಎಲ್ಲೆಡೆಯಿಂದ ವ್ಯಾಪಕವಾಗಿ ಮಾರ್ದನಿಸಿತ್ತು. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕಾದರೆ ಯುದ್ಧವೊಂದೇ ಪರಿಹಾರ ಎಂದೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದರು. ಈಗ, ಶ್ರೀಲಂಕಾದಲ್ಲಿ ಉಗ್ರರಿಂದ ಸರಣಿ ಬಾಂಬ್ ಸ್ಫೋಟ ನಡೆದಿದೆ. ನೂರಾರು ಮಂದಿ ಮೃತಪಟ್ಟಿದ್ದಾರೆ. ಹಿಂಸೆಗೆ ಹಿಂಸೆ, ಸೇಡಿಗೆ ಸೇಡು, ಪ್ರತೀಕಾರಕ್ಕೆ ಪ್ರತೀಕಾರ....

ಎಲ್ಲ ಸಮಸ್ಯೆಗಳಿಗೂ ಯುದ್ಧ, ಹಿಂಸೆಯಿಂದ ಪರಿಹಾರ ಕಂಡುಕೊಳ್ಳಬಹುದೇ? ಯುದ್ಧಕ್ಕೆ ಪ್ರತಿಯುದ್ಧ ಮಾಡುತ್ತಾ ಹೋದರೆ ಮನುಕುಲದ ಉಳಿವು ಸಾಧ್ಯವೇ? ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರಿದ ಬುದ್ಧನ ನಾಡಿನಲ್ಲಿ ಜನರು ಯುದ್ಧೋನ್ಮಾದಕ್ಕೆ ಒಳಗಾಗುತ್ತಿರುವುದು ಯಾವ ಸಂದೇಶವನ್ನು ರವಾನಿಸುತ್ತದೆ? ಮನುಕುಲದ ಉಳಿವಿಗೆ ಬುದ್ಧ ಜೀವನ, ಬೋಧನೆ ಪ್ರಸ್ತುತ ಎಂಬುದನ್ನು ನಾಟಕದ ಮೂಲಕ ಹೇಳಲು ಹೊರಟಿದ್ದಾರೆ ರಂಗ ನಿರ್ದೇಶಕ ಗಿರೀಶ್ ಮಾಚಳ್ಳಿ.

‘ಬುದ್ಧಯಾನ’ ಎಂಬ ಆರು ಗಂಟೆಗಳ ನಾಟಕವನ್ನು ಚಾರ್ವಾಕ ಸಂಸ್ಥೆಯು ಪ್ರಸ್ತುತಪಡಿಸುತ್ತಿದೆ. ಈ ನಾಟಕವನ್ನು ರಚಿಸಿ, ನಿರ್ದೇಶನ ಮಾಡಿದವರು ಗಿರೀಶ್ ಮಾಚಳ್ಳಿ. ನಾಟಕದಲ್ಲಿ ಬರುವ ಆರು ಹಾಡುಗಳನ್ನೂ ಅವರೇ ರಚಿಸಿದ್ದಾರೆ. ಈ ಹಿಂದೆ, ‘ಬುದ್ಧನೆಡೆಗೆ’ ಎಂಬ ನಾಟಕವನ್ನು ನಿರ್ದೇಶಿಸಿದ್ದರು. ಇದರಲ್ಲಿ ಬುದ್ಧನ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸಿದ್ದರು. ಆದರೆ, ರಂಗಕರ್ಮಿಗಳು ಬುದ್ಧನ ಕುರಿತು ರಂಗದ ಮೇಲೆ ತರದ ವಿಷಯಗಳನ್ನು ‘ಬುದ್ಧಯಾನ’ ನಾಟಕದಲ್ಲಿ ಹೇಳಲು ಪ್ರಯತ್ನಿಸಿದ್ದಾರೆ.

‘ಬುದ್ಧ 83 ಸಾವಿರಕ್ಕೂ ಹೆಚ್ಚು ಬೋಧನೆಗಳನ್ನು ಮಾಡಿದ್ದಾನೆ. ತ್ರಿಪೀಠಕಗಳು, 78 ಸಂಪುಟಗಳನ್ನು ರಂಗರೂಪಕ್ಕೆ ತರುವುದು ಕಷ್ಟಸಾಧ್ಯ. ಜನರಿಗೆ ಬುದ್ಧನ ಬಗ್ಗೆ ಗೊತ್ತಿರುವ ವಿಷಯಗಳನ್ನು ಬಿಟ್ಟು ಹೊಸ ವಿಚಾರಗಳನ್ನು ಪರಿಚಯಿಸಲು ಪ್ರಯತ್ನಿಸಿದ್ದೇನೆ.

ಅಂಗುಲಿಮಾಲ, ವಿಶಾಖನ ಬಗ್ಗೆ ಎಲ್ಲರಿಗೂ ಗೊತ್ತಿರುವುದರಿಂದ ಈ ವಿಷಯಗಳನ್ನು ನಾಟಕಕ್ಕೆ ತಂದಿಲ್ಲ. ಬುದ್ಧ ಎಲ್ಲವನ್ನೂ ಬಿಟ್ಟು ಸನ್ಯಾಸತ್ವವನ್ನು ಸ್ವೀಕರಿಸಲು ಕಾರಣವಾದ ಅಂಶಗಳ ಬಗ್ಗೆ ಹೇಳಿದ್ದೇನೆ. ಭಿಕ್ಕು ಸಂಘವು ಬರಗಾಲದಲ್ಲಿ ಸಂಕಷ್ಟ ಎದುರಿಸಿತ್ತು. ಆಗ ಬುದ್ಧ ಹುರುಳಿಕಾಳು ತಿಂದಿದ್ದ. ತನ್ನ ತಂದೆ ಶುದ್ಧೋದನ ಸಾಯುವಾಗ ಸಾವಿನ ಬಗ್ಗೆ ಬುದ್ಧ ಬೋಧನೆ ಮಾಡುತ್ತಾನೆ. ಸಾವಿನ ಕೊನೆ ಗಳಿಗೆಯಲ್ಲೂ ತಂದೆಗೆ ಆತ್ಮಸ್ಥೈರ್ಯವನ್ನು ತುಂಬುತ್ತಾನೆ. ಈ ವಿಷಯಗಳ ಬಗ್ಗೆ ಯಾರೂ ನಾಟಕದಲ್ಲಿ ಹೇಳುವ ಪ್ರಯತ್ನ ಮಾಡಿಲ್ಲ’ ಎಂದು ಗಿರೀಶ್ ಮಾಚಳ್ಳಿ ತಿಳಿಸಿದರು.

‘ಸನ್ಯಾಸಿ, ರೋಗಿ, ಶವವನ್ನು ನೋಡಿ ಬುದ್ಧ ರಾಜ್ಯವನ್ನು ತೊರೆದ ಎಂಬುದು ಸತ್ಯವಲ್ಲ. ಸಾಕ್ಯ, ಕೊಲಿಯ ರಾಜ್ಯಗಳ ನಡುವೆ ರೋಹಿಣಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು. ಈ ವೇಳೆ ಸಾವು- ನೋವು ಆಗಿತ್ತು. ಕೊಲಿಯ ರಾಜ್ಯದ ಮೇಲೆ ಯುದ್ಧ ಸಾರಲು ಸಾಕ್ಯರ ಸಂಘವು ನಿರ್ಧರಿಸಿತ್ತು. ಇದನ್ನು ಬುದ್ಧ ವಿರೋಧಿಸಿದ್ದ. ಯುದ್ಧ ಮತ್ತೊಂದು ಯುದ್ಧಕ್ಕೆ ಬೀಜ ಬಿತ್ತುತ್ತದೆ. ಒಬ್ಬ ಆಕ್ರಮಣಕಾರರನ್ನು ಆಕ್ರಮಿಸಲು ಮತ್ತೊಬ್ಬ ಆಕ್ರಮಣಕಾರ ಬಂದೇ ಬರುತ್ತಾನೆ. ಹೀಗಾಗಿ ಯುದ್ಧ ಬೇಡವೆಂದು ಹೇಳುತ್ತಾನೆ. ಈ ವಿಷಯವನ್ನು ಬಹುಮತಕ್ಕೆ ಹಾಕುತ್ತಾರೆ. ಆದರೆ, ಬುದ್ಧನಿಗೆ ಬಹುಮತ ಬರುವುದಿಲ್ಲ. ಸಂಘದ ನಿಯಮದ ಪ್ರಕಾರ ಬಹುಮತ ಪಡೆಯದಿದ್ದರೆ ಗಲ್ಲಿಗೇರಿಸುವುದು, ಗಡಿಪಾರು ಮಾಡುವುದು, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು ಇವುಗಳಲ್ಲಿ ಒಂದು ಶಿಕ್ಷೆಗೆ ಒಳಗಾಗಬೇಕು. ಬುದ್ಧ ರಾಜನ ಮಗ ಆಗಿದ್ದರಿಂದ ಗಲ್ಲಿಗೇರಿಸುವುದಾಗಲಿ, ಗಡಿಪಾರು ಮಾಡಿದರೆ ಕೋಸಲ ದೇಶದ ರಾಜ ಕ್ರಮ ಕೈಗೊಳ್ಳುತ್ತಾನೆ ಎಂದು ಸಾಕ್ಯ ಸಂಘದವರು ಹೆದರುತ್ತಾರೆ.

ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸುತ್ತಾರೆ. ಆಗ, ತಪ್ಪು ನಾನು ಮಾಡಿದ್ದೇನೆ. ನನ್ನನ್ನು ಶಿಕ್ಷಿಸಿ, ಮನೆಯವರಿಗೆ ತೊಂದರೆ ಕೊಡಬೇಡಿ ಎಂದು ಬುದ್ಧ ಮನವಿ ಮಾಡುತ್ತಾನೆ. ಆಗ, ಬುದ್ಧನೇ ಒಂದು ಸಲಹೆ ನೀಡುತ್ತಾನೆ. ಸನ್ಯಾಸತ್ವ ಸ್ವೀಕರಿಸುವುದಾಗಿ ಹೇಳಿ ಭಿಕ್ಷಾ ವೃತ್ತಿ ಪಡೆಯುತ್ತಾನೆ’ ಎಂದು ವಿವರಿಸಿದರು.

ಇತಿಹಾಸದಲ್ಲಿ ಬುದ್ಧನ ಕುರಿತು ಒಂದು ಕೋನದ ಚಿತ್ರಿಸಲಾಗಿದೆ. ವಾಸ್ತವ ಬೇರೆಯೇ ಇದೆ. ಪ್ರಸ್ತುತ ಯುದ್ಧ ಸನ್ನಿವೇಶದಲ್ಲಿ ಶಾಂತಿಯನ್ನು ಸಾರಲು ಬುದ್ಧ ನಮಗೆ ಬೇಕೇ ಬೇಕು. ಆತ ಬದುಕಿದ್ದ ಕಾಲಘಟ್ಟದಲ್ಲೂ ರಾಜಕೀಯ ಪಿತೂರಿ, ಒಳಜಗಳ, ದ್ವೇಷ, ಅಸೂಹೆ ಬಲವಾಗಿ ಬೇರೂರಿತ್ತು. ಯಾವ ಸನ್ನಿವೇಶದಲ್ಲೂ ಪಲಾಯನ ಮಾಡದ ಬುದ್ಧ ಎಲ್ಲವನ್ನೂ ಮಧ್ಯಮ ಮಾರ್ಗದಿಂದಲೇ ಎದುರಿಸಿದ್ದ. ಅಂತಹ ಘಟನೆಗಳನ್ನು ರಂಗರೂಪಕ್ಕೆ ಇಳಿಸಿದ್ದೇನೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT