ಭಾನುವಾರ, ಜುಲೈ 25, 2021
25 °C

ಪಾಶ್ಚಾತ್ಯರಿಗೆ ಭಾರತೀಯ ಸಂಸ್ಕೃತಿ ಪರಿಚಯಿಸಿದ ಅಭಿಜ್ಞಾನ ಶಾಕುಂತಲ

ಎನ್.ಜಗನ್ನಾಥ ಪ್ರಕಾಶ್ Updated:

ಅಕ್ಷರ ಗಾತ್ರ : | |

Prajavani

ಮಹಾಕವಿ ಕಾಳಿದಾಸನ ‘ಅಭಿಜ್ಞಾನ ಶಾಕುಂತಲ’ ಪಾಶ್ಚಾತ್ಯರಿಗೆ ಭಾರತೀಯ ಸಾಹಿತ್ಯ, ಸಂಸ್ಕೃತಿ ಪರಿಚಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಮೊದಲ ನಾಟಕ. ಲ್ಯಾಟಿನ್ ಹಾಗೂ ಇಂಗ್ಲಿಷ್ ಭಾಷೆಗಳಿಗೆ ಅನುವಾದವಾಗಿ ಎರಡು ಶತಮಾನಗಳಿಗೂ (1789) ಹೆಚ್ಚು ಸಮಯ ಕಳೆದುಹೋದರೂ ಅದರ ಮೇಲಿನ ಚರ್ಚೆ, ನಾಟಕ ಪ್ರದರ್ಶನ ಇನ್ನೂ ನಿಂತಿಲ್ಲ.

ಭಾರತದಲ್ಲಿ ಜನಜನಿತವಾದ ಸಂಸ್ಕೃತ ನಾಟಕ ಶಾಕುಂತಲ ಮಹಾಭಾರತದಲ್ಲಿ ಬರುವ ಒಂದು ಪ್ರಸಂಗ. ಬುದ್ಧನ ಜಾತಕ ಕಥೆಗಳಲ್ಲೂ ಇಂತಹದ್ದೊಂದು ಸನ್ನಿವೇಶ ಇದೆ.

ದೊರೆ ದುಷ್ಯಂತ ತನ್ನ ಮಡದಿ ಶಕುಂತಲೆಗೆ ಉಂಗುರ ಕೊಟ್ಟಿದ್ದು, ಅದು ಆಕಸ್ಮಿಕ ಕಳೆದುಹೋಗಿದ್ದು, ಮುನಿಯ ಶಾಪದಿಂದ ದುಷ್ಯಂತ ಇದನ್ನೆಲ್ಲಾ ಮರೆತಿದ್ದು, ಹೊಳೆಗೆ ಬಿದ್ದ ಉಂಗುರ ಮೀನಿನ ಹೊಟ್ಟೆ ಸೇರಿ ಕೊನೆಗೆ ದುಷ್ಯಂತನ ಕೈಸೇರುವ ವೇಳೆಗೆ ನಡೆದ ಘಟನೆಗಳನ್ನು ಆಧರಿಸಿದ ಸಂಸ್ಕೃತ ನಾಟಕ ‘ಅಭಿಜ್ಞಾನ ಶಾಕುಂತಲ’ವನ್ನು ಆಗಿನ ಕಲ್ಕತ್ತೆಯ ಏಷ್ಯಾಟಿನ್ ಸೊಸೈಟಿ ಸ್ಥಾಪಕ ಹಾಗೂ ವಿದ್ವಾಂಸ ಸರ್ ವಿಲಿಯಂ ಜೋನ್ಸ್ ಲ್ಯಾಟಿನ್ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸಿದರು.

ತಮ್ಮದೇ ಭಾಷೆಯಲ್ಲಿ ಮೂಡಿಬಂದ ಶಾಕುಂತಲ ನಾಟಕದಿಂದ ಭಾರತದ ಸಾರಸ್ವತ ಲೋಕವನ್ನು ಪಾಶ್ಚಾತ್ಯರು ಅರಿಯಲು ನೆರವಾಯಿತು. ಕೇವಲ ಸಾಹಿತ್ಯ ಮಾತ್ರವಲ್ಲ, ಭಾರತದ ಜೀವನ ಧರ್ಮ ಇವರಿಗೆ ಮೊದಲ ಬಾರಿ ಪರಿಚಯವಾಯಿತು.

ಶಾಕುಂತಲ ನಾಟಕಕ್ಕೆ ಮೊದಲು ಹಾಗೂ ನಂತರ ಭಾರತದ ಹಲವು ಕೃತಿಗಳು ಪಾಶ್ಚಾತ್ಯ ಭಾಷೆಗಳಿಗೆ ಅನುವಾದಗೊಂಡರೂ ಶಕುಂತಲೆ ಕುರಿತ ಕುತೂಹಲ ಈಗಲೂ ಆಗಾಗ ಯೂರೋಪ್‌ನಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಇದಕ್ಕೆ ನಿದರ್ಶನ.

ವಿಲಿಯಂ ಜೋನ್ಸ್ ಕಾಳಿದಾಸನ ‘ಅಭಿಜ್ಞಾನ ಶಾಕುಂತಲ’ ಸಂಸ್ಕೃತ ನಾಟಕವನ್ನು ಮೊದಲನೆಯದಾಗಿ ಅನುವಾದಿಸಿದ್ದು ಲ್ಯಾಟಿನ್ ಭಾಷೆಗೆ. ಬಳಿಕ ಅವರೇ ಅದನ್ನು ಇಂಗ್ಲಿಷ್‌ಗೆ ಅನುವಾದ ಮಾಡಿದರು (1789). ಇದಾದ ನಂತರದ ವರ್ಷಗಳಲ್ಲಿ ಭಾರತದ ಹಲವಾರು ಕೃತಿಗಳು ಪಾಶ್ಚಾತ್ಯ ಭಾಷೆಗಳಿಗೆ ತರ್ಜುಮೆಗೊಂಡವು. ಮುಂದಿನ ನೂರು ವರ್ಷಗಳಲ್ಲಿ ‘ಶಾಕುಂತಲ’ ನಾಟಕ ಯೂರೋಪಿನ 12 ಭಾಷೆಗಳಲ್ಲಿ 46 ಅನುವಾದಗಳು ಬಂದಿದ್ದು ಒಂದು ಹೆಗ್ಗಳಿಕೆ.

ಪೌರಾತ್ಯ ಭಾಷೆಗಳಲ್ಲಿ ಕೇವಲ ಅನುವಾದಕ್ಕೆ ‘ಅಭಿಜ್ಞಾನ ಶಾಕುಂತಲ’ ನಿಲ್ಲಲಿಲ್ಲ. ಪ್ರದರ್ಶನ ಕಲೆಗಳಲ್ಲೂ ಅದು ಜೀವಂತವಾಯಿತು. ಒಪೇರಾ, ಬ್ಯಾಲೆ ನಾಟಕವಾಗಿ ಶಕುಂತಲೆ ಯೂರೋಪಿನ ಜನರ ಮನಗೆದ್ದಳು. ಇಟಲಿ, ಸೋವಿಯತ್‌ನಲ್ಲೂ ಜನಪ್ರಿಯಳಾದಳು
ಶಕುಂತಲೆ.

ಭಾರತೀಯ ದೇವಾನುದೇವತೆಗಳನ್ನು ತಮ್ಮ ಕುಂಚದಿಂದ ಜೀವಂತಗೊಳಿಸಿದ ಪ್ರಖ್ಯಾತ ಚಿತ್ರ ಕಲಾವಿದ ರಾಜಾ ರವಿವರ್ಮ ಅವರ ಕ್ಯಾನ್‌ವಾಸ್‌ನಲ್ಲೂ ಶಕುಂತಲೆ ಸ್ಥಾನ ಪಡೆದಳು.

ಶಾಕುಂತಲ ಕಥನವನ್ನು ಸರಣಿ ಚಿತ್ರ ಕೃತಿಗಳಾಗಿ ಕೊಟ್ಟರು ರಾಜಾ ರವಿವರ್ಮ. ಶಾಕುಂತಲ ಚಿತ್ರ ಸರಣಿ ಜಗತ್ತಿನ ಹಲವೆಡೆ ಪ್ರದರ್ಶನಗೊಂಡು ರಸಿಕರ ಗಮನ ಸೆಳೆದವು. ರವಿವರ್ಮ ಚಿತ್ರಗಳನ್ನು ಉಪಯೋಗಿಸಿಕೊಂಡು ಭಾರತೀಯ ಅಂಚೆ ಇಲಾಖೆ ಎರಡು ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆಗೊಳಿಸಿದ್ದು, ಅದು ಜಗತ್ತಿನ ಅಂಚೆಚೀಟಿ ಸಂಗ್ರಹಕಾರರ ಮೆಚ್ಚಿನ ಚೀಟಿಗಳಾಗಿವೆ.

ನಮ್ಮ ದೇಶಕ್ಕೆ ಭಾರತವೆಂಬ ಹೆಸರು ಬರಲು ಕಾರಣವಾದ ಭರತ ಚಕ್ರವರ್ತಿ ಕಾಳಿದಾಸ ವಿರಚಿತ ನಾಟಕದ ದೊರೆ ದುಷ್ಯಂತ ಹಾಗೂ ಶಕುಂತಲೆಯ ಪುತ್ರ. ಭಾರತದ ಸಂಸ್ಕೃತಿಯ ಚರಿತ್ರೆಯಲ್ಲಿ ಹಾಸುಹೊಕ್ಕಾಗಿರುವ ಶಕುಂತಲೆ ಬೆಳ್ಳಿತೆರೆಯಲ್ಲೂ ಕಾಣಿಸಿಕೊಂಡಿದ್ದಾಳೆ. ಕರ್ನಾಟಕ ಸಂಗೀತದ ಪ್ರಸಿದ್ಧ ಗಾಯಕಿ ಎಂ.ಎಸ್. ಸುಬ್ಬಲಕ್ಷ್ಮಿ ತಮಿಳು ಭಾಷೆಯ ‘ಶಾಕುಂತಲ’ ಚಿತ್ರದಲ್ಲಿ ಶಕುಂತಲೆಯ ಪಾತ್ರ ನಿರ್ವಹಿಸಿದ್ದು. ಅಸ್ಸಾಂನ ಸಂಗೀತದ ಮೇರುವ್ಯಕ್ತಿ ಬೂಪೇನ್ ಹಜಾರಿಕ ಅಸ್ಸಾಮಿ ಭಾಷೆಯಲ್ಲಿ ತಯಾರಿಸಿದ ‘ಶಾಕುಂತಲಾ’ ಚಿತ್ರಕ್ಕೆ (1961) ರಾಷ್ಟ್ರಪತಿಗಳ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯೂ ಸಂದಿತು. ಕನ್ನಡತಿ ಬಿ. ಸರೋಜಾದೇವಿ ಶಕುಂತಲೆಯಾಗಿ ಅಭಿನಯಿಸಿದ್ದ ತೆಲುಗು ಚಿತ್ರದಲ್ಲಿ ದುಷ್ಯಂತನಾಗಿ ನಟಿಸಿದ್ದವರು
ಎನ್.ಟಿ. ರಾಮರಾವ್.

ಕನ್ನಡಿಗ ವಿ. ಶಾಂತಾರಾಂ ಮರಾಠಿ ರಂಗಭೂಮಿಯಲ್ಲಿ ಸಂಗೀತ ನಾಟಕವನ್ನಾಗಿ ಶಕುಂತಲೆಯನ್ನು ಪ್ರಸ್ತುತಪಡಿಸಿದ್ದರಲ್ಲದೆ ಹಿಂದಿ ಚಿತ್ರವನ್ನು ತೆರೆಗೂ ತಂದರು.

ಚಿತ್ರಕಲಾವಿದರು, ಶಿಲ್ಪಿ, ಚಿತ್ರ ನಿರ್ದೇಶಕರನ್ನು ಸೆಳೆದಿರುವ ಶಕುಂತಲೆ ಸಾಹಿತ್ಯದಲ್ಲಿ ಗಣನೀಯ ಸ್ಥಾನ ಪಡೆದು ಅನೇಕ ಭಾರತೀಯ ಭಾಷಾ ಸಾಹಿತ್ಯದಲ್ಲೂ ಮೂಡಿ ಬಂದಿದ್ದಾಳೆ. ಈಶ್ವರಚಂದ್ರ ವಿದ್ಯಾಸಾಗರ್, ಅಭಿನೇಂದ್ರನಾಥ ಟ್ಯಾಗೋರ್, ಬಂಗಾಲಿಗೆ ಶಕುಂತಲೆಯನ್ನು ತಂದಿದ್ದಾರೆ. ಕನ್ನಡದಲ್ಲಿ ಬಸವಪ್ಪ ಶಾಸ್ತ್ರಿಗಳು, ಎಸ್.ವಿ. ಪರಮೇಶ್ವರಭಟ್ಟ, ಕೆ.ಟಿ. ಪಾಂಡುರಂಗಿ, ಬನ್ನಂಜೆ ಗೋವಿಂದಾಚಾರ್ಯ ಮೊದಲಾದ ಬರಹಗಾರರು ದುಷ್ಯಂತ – ಶಕುಂತಲೆಯ ಕಥನವನ್ನು ಕನ್ನಡಕ್ಕೆ ತಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.