ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕವ್ಯಕ್ತಿ ನಾಟಕದಲ್ಲಿ ಗೋಕುಲ ಸಂಭ್ರಮ

Published 31 ಮಾರ್ಚ್ 2024, 0:30 IST
Last Updated 31 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ರಂಗದ ಮೇಲಿನ ಮಂದ ಬೆಳಕಿನಲ್ಲಿ ಪಾಪಣ್ಣಿಯ ಬೆರಗುಗಣ್ಣುಗಳ ನೋಟ. ಮಾನಸ ಗೆಳೆಯ ಕೆರೆ, ಚಿಟ್ಟೆಯೇ ಅವನ ಒಡನಾಡಿಗಳು. ಅವನ ಬದುಕಿನ ದುಃಖ, ದುಮ್ಮಾನಗಳಿಗೆ ಕಿವಿಯಾಗುವವರು ಇವರೇ... ತನ್ನದೇ ಜಗತ್ತಿನಲ್ಲಿ ಪ್ರೀತಿಯ ಹುಡುಕಾಟದಲ್ಲಿ ತೊಡಗುವ ಪಾಪಣ್ಣಿ ಎಂಬ ಬಾಲಕನ ಅಭದ್ರತೆಗಳಿಗೆ ಪ್ರಕೃತಿಯೇ ಉತ್ತರ ನೀಡುವ ಬಗೆಯನ್ನು ‘ಚಿಟ್ಟೆ’ ಎಂಬ ಏಕವ್ಯಕ್ತಿ ನಾಟಕವು ಪ್ರೇಕ್ಷಕರ ಮುಂದೆ ತೆರೆದಿಡುತ್ತದೆ.

ಪಾಪಣ್ಣಿಯ ಬೆರಗುಗಳಿಗೆ ಜೀವ ತುಂಬಿ ತನ್ನ ಮನೋಜ್ಞ ಅಭಿನಯದ ಮೂಲಕ ರಂಗಾಸಕ್ತರ ಮನಗೆಲ್ಲುತ್ತಾನೆ 14ರ ಬಾಲಕ ಗೋಕುಲ ಸಹೃದಯ. ಗೋಕುಲ ಅಭಿನಯಿಸಿರುವ ‘ಚಿಟ್ಟೆ’ ನಾಟಕವು ಈಗಾಗಲೇ 100 ಪ್ರದರ್ಶನಗಳನ್ನು ಕಂಡಿದೆ.

ಭಾರತ ರಂಗಭೂಮಿಯಲ್ಲಿಯೇ ಒಂದು ಗಂಟೆ ರಂಗದ ಮೇಲೆ ಏಕವ್ಯಕ್ತಿ ನಾಟಕ ಪ್ರದರ್ಶಿಸಿದ ಮೊದಲ ಬಾಲ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರನಾಗಿರುವ ಗೋಕುಲ, ಈ ಸಾಧನೆಗಾಗಿ ‘ಕಲಾಂ ಬುಕ್ ಆಫ್ ವರ್ಲ್ಡ್’ ಹಾಗೂ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ನಲ್ಲಿ ದಾಖಲಾಗಿದ್ದಾನೆ. ಈತ ಬೆಂಗಳೂರಿನ ಪ್ರೆಸಿಡೆನ್ಸಿ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದಾನೆ.

‘ಗೋಕುಲ, ನಾಲ್ಕನೇ ವಯಸ್ಸಿನಿಂದಲೇ ರಂಗಾಸಕ್ತಿ ಬೆಳೆಸಿಕೊಂಡವ. ಬೇಸಿಗೆ ಶಿಬಿರದಿಂದ ಆರಂಭವಾದ ಅವನ ರಂಗದ ಜೊತೆಗಿನ ಒಡನಾಟ ದಿನೇ ದಿನೇ ಹೆಚ್ಚಾಗುತ್ತಿದೆ’ ಎನ್ನುತ್ತಾರೆ ತಾಯಿ ಲಕ್ಷ್ಮಿ ರಘುನಂದನ್.

‘ಚಿಟ್ಟೆ’ ನಾಟಕವು ರಾಜ್ಯದಲ್ಲಿ ಮಾತ್ರವಲ್ಲದೆ ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಅಂಡಮಾನ್‍ನಲ್ಲೂ ಪ್ರದರ್ಶನಗೊಂಡು ಪ್ರೇಕ್ಷಕರನ್ನು ಮೋಡಿ ಮಾಡಿದೆ. ಗೋಕುಲನ ಮನೋಜ್ಞ ಅಭಿನಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಬೇಲೂರು ರಘುನಂದನ್ ಅವರ ರಚನೆಯಲ್ಲಿ ಮೂಡಿಬಂದಿರುವ ‘ಚಿಟ್ಟೆ’ ಏಕವ್ಯಕ್ತಿ ನಾಟಕವನ್ನು ‘ಕಾಜಾಣ’ ಸಂಸ್ಥೆಯು ಪ್ರಸ್ತುತ ಪಡಿಸಿದೆ. ಕೃಷ್ಣಮೂರ್ತಿ ಕವತ್ತಾರ್ ಅವರ ನಿರ್ದೇಶನದ ಈ ನಾಟಕವು ಅಕ್ಷರ, ಅನ್ನ, ಹಸಿವು, ಕಲೆ, ಕುಟುಂಬ ಮತ್ತು ಸಮಾಜ, ಶೈಕ್ಷಣಿಕ ವ್ಯವಸ್ಥೆ–ಹೀಗೆ ಬಹುಮುಖೀ ಆಯಾಮಕ್ಕೂ ಬೆಳಕು ಚೆಲ್ಲುತ್ತದೆ. ಮಕ್ಕಳ ಮನಸ್ಥಿತಿಯನ್ನು ಕೇಂದ್ರೀಕರಿಸಿ ಈ ನಾಟಕವು ರೂಪುಗೊಂಡಿದೆ. 

‘ಚಿಟ್ಟೆ’ ನಾಟಕವು ಮೂರೇ ವರ್ಷಕ್ಕೆ 100 ರಂಗ ಪ್ರದರ್ಶನಗಳನ್ನು ಕಂಡಿರುವುದು ಹೆಮ್ಮೆ ತಂದಿದೆ. ಅಪ್ಪ, ಅಮ್ಮ, ಶಾಲೆಯ ಶಿಕ್ಷಕರ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಗಿದೆ. ಕೃಷ್ಣಮೂರ್ತಿ ಕವತ್ತಾರ್ ಅವರ ಶಿಸ್ತುಬದ್ಧ ಮಾರ್ಗದರ್ಶನದಲ್ಲಿ ಈ ನಾಟಕವು ಸಾಕಾರವಾಗಿದೆ’ ಎನ್ನುತ್ತಾನೆ ಗೋಕುಲ ಸಹೃದಯ.

‘ಸಾಮಾನ್ಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಯಾವ ತಿಳಿವಳಿಕೆ, ವಿವೇಕವನ್ನು ಪಡೆಯಲು ಸಾಧ್ಯವೋ ಅದಕ್ಕಿಂತ ಮಿಗಿಲಾದ ಮಾನವೀಯ ವಿವೇಕ, ಅರಿವನ್ನು ‘ಚಿಟ್ಟೆ’ ನಾಟಕದ ಮೂಲಕ ಗೋಕುಲ ಪಡೆದಿದ್ದಾನೆ. ಶಿಕ್ಷಣದಲ್ಲಿ ರಂಗಭೂಮಿ ಸೇರಿದರೆ ಇಂತಹ ಅದ್ಭುತಗಳು ಸಂಭವಿಸುತ್ತವೆ. ಈ ನಾಟಕದ ಮೂಲಕ ಆತ ಮನುಷ್ಯತ್ವಕ್ಕೆ ಬೇಕಾದ ದಾರಿಯನ್ನು ಕಂಡುಕೊಂಡಿದ್ದಾನೆ. ಜವಾಬ್ದಾರಿಯುತವಾದ ಪಾಲಕರಾಗಿ ನಾವು ಆತನಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವನ ಜೊತೆಗೆ ನಿಂತಿದ್ದೇವೆ’ ಎನ್ನುತ್ತಾರೆ ನಾಟಕಕಾರ ಹಾಗೂ ಗೋಕುಲನ ತಂದೆ ಬೇಲೂರು ರಘುನಂದನ್.

‘ಚಿಟ್ಟೆ ನಾಟಕಕ್ಕಾಗಿ ಬೇರೆ ಬೇರೆ ಕಡೆ ಸುತ್ತಾಟ ನಡೆಸುವಾಗ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಭೌಗೋಳಿಕವಾಗಿ ವಿಭಿನ್ನ ಪರಿಸರದಲ್ಲಿ ಗೋಕುಲ ಒಡನಾಟ ನಡೆಸಿದ್ದಾನೆ. ಇದು ಆತನ ಮೇಲೆ ತುಂಬಾ ಪರಿಣಾಮ ಬೀರಿದೆ. ರಂಗಭೂಮಿಯು ಶಿಕ್ಷಣದಲ್ಲಿ ಬಂದರೆ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಇನ್ನಷ್ಟು ಸಹಕಾರಿಯಾಗಲಿದೆ’ ಎನ್ನುತ್ತಾರೆ ಅವರು.

ಮೇಘಮೈತ್ರಿ ಬಾಲ ಪುರಸ್ಕಾರ, ಪಂಡಿತ್ ಪುಟ್ಟರಾಜ ಸನ್ಮಾನ, ಸಿ.ಜಿ.ಕೆ. ರಾಷ್ಟ್ರೀಯ ನಾಟಕೋತ್ಸವದಲ್ಲಿ ರಂಗಗೌರವ, ಶಾರದಾ ಪ್ರತಿಷ್ಠಾನದ ರಂಗಗೌರವ ಸೇರಿದಂತೆ ಹಲವು ಗೌರವ, ಪುರಸ್ಕಾರಗಳಿಗೆ ಗೋಕುಲ ಪಾತ್ರನಾಗಿದ್ದಾನೆ.

‘ಚಿಟ್ಟೆ’ ನಾಟಕವಲ್ಲದೆ, ‘ಸಾಲುಮರಗಳ ತಾಯಿ ತಿಮ್ಮಕ್ಕ’, ‘ರೂಬಿಕ್ಸ್ ಕ್ಯೂಬ್’, ‘ಅರೇಬಿಯನ್ ನೈಟ್ಸ್’, ‘ಅಣ್ಣನ ನೆನಪು’ ಸೇರಿದಂತೆ ಹಲವು ನಾಟಕಗಳಲ್ಲಿ ನಟಿಸುವ ಮೂಲಕ ಗೋಕುಲ ಪಳಗಿದ್ದಾನೆ.

ಸವಿತಕ್ಕ, ಬಸಂತ್ ಜಿ. ಪ್ರಸಾದ್, ಪವನ್ ಕುಮಾರ್ ಅವರ ಹಿಮ್ಮೇಳದಲ್ಲಿ ‘ಚಿಟ್ಟೆ’ಯು ರಂಗದಲ್ಲಿ ರೆಕ್ಕೆ ಬಿಚ್ಚಿ ಹಾರಾಡಿದೆ.

‘ಚಿಟ್ಟೆ’ಯ ಸುತ್ತ...

ಮಕ್ಕಳನ್ನು ಸಾಕಿ ಸಲಹಿ ವಿವೇಕಯುತ ಪ್ರಜೆಗಳನ್ನಾಗಿ ರೂಪಿಸುವುದು ತಂದೆ-ತಾಯಿಯ ಬಹುದೊಡ್ಡ ಜವಾಬ್ದಾರಿ. ‘ಚಿಟ್ಟೆ’ ನಾಟಕವು ಪಾಲಕರಿಗೆ ತಮ್ಮ ಈ ಜವಾಬ್ದಾರಿಯನ್ನು ನೆನಪಿಸುತ್ತದೆ. ಮಕ್ಕಳಿಗೆ ಸರಿಯಾದ ಪೋಷಣೆ ಸಿಗದಿದ್ದರೆ ಅವರ ಮನಸ್ಸು ಹೇಗೆ ನೊಂದುಕೊಳ್ಳುತ್ತದೆ ಎಂಬುದನ್ನೂ ಈ ಏಕವ್ಯಕ್ತಿ ನಾಟಕವು ಕಣ್ಣಿಗೆ ಕಟ್ಟುವಂತೆ ಪ್ರಸ್ತುತ ಪಡಿಸುತ್ತದೆ.

ಕುಟುಂಬ ಮತ್ತು ಸಮಾಜವು ಶಿಕ್ಷಣಕ್ಕೆ ನೀಡಿರುವ ವ್ಯಾಖ್ಯಾನಕ್ಕೂ ಮಕ್ಕಳ ಮನಸ್ಸಿನಲ್ಲಿ ಅಡಗಿರುವ ಅವರದೇ ಆದ ವಿವೇಕಕ್ಕೂ ಇರುವ ಭಿನ್ನತೆಯೂ ಇಲ್ಲಿ ಅನಾವರಣಗೊಂಡಿದೆ. ಕುಟುಂಬ ಸಮಾಜದ ವ್ಯವಸ್ಥೆಯು ಮಕ್ಕಳ ಮನಸ್ಸಿಗೆ ಘಾಸಿಯುಂಟು ಮಾಡಿದರೆ ಅದು ಅವರ ಮನೋಲೋಕವನ್ನು ಹೇಗೆ ಕಾಡುತ್ತದೆ ಎಂಬುದನ್ನೂ ಮನೋಜ್ಞವಾಗಿ ಕಟ್ಟಿಕೊಡಲಾಗಿದೆ.

ನಾಟಕದಲ್ಲಿ ಪಾಪಣ್ಣಿಯು ತನ್ನ ಮನಸ್ಸಿನ ತುಮುಲಗಳನ್ನು ನೋವನ್ನು ಹಾಡು ಕುಣಿತಗಳೊಂದಿಗೆ ಪ್ರೇಕ್ಷಕರ ಮುಂದಿಡುತ್ತಾ ಸಮಾಜಕ್ಕೆ ಮಹತ್ವದ ಸಂದೇಶವನ್ನೂ ನೀಡುತ್ತಾನೆ. ಇದು ಕೇವಲ ಮಕ್ಕಳ ನಾಟಕವಷ್ಟೇ ಅಲ್ಲದೆ ಹಿರಿಯರಿಗೂ ಮುದ ನೀಡುತ್ತದೆ. ಹಾಸ್ಯ ಸನ್ನಿವೇಶಗಳು ನಗೆಗಡಲಲ್ಲಿ ತೇಲಿಸಿದರೆ ಭಾವುಕ ಸನ್ನಿವೇಶಗಳು ನೋಡುಗರ ಮನಸ್ಸನ್ನು ಆದ್ರಗೊಳಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT