ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪಾತ್ರಗಳ ಒಳಗು ಹೊರಗು': ರಂಗಭೂಮಿ ಸಾಧಕಿಯರ ಮನದಾಳದ ಮಾತು

ಮಾರ್ಚ್ 27 – ವಿಶ್ವ ರಂಗಭೂಮಿ ದಿನ
Published 22 ಮಾರ್ಚ್ 2024, 23:30 IST
Last Updated 22 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಮಾರ್ಚ್‌ 27 ವಿಶ್ವರಂಗಭೂಮಿ ದಿನ. ಈ ಹಿನ್ನೆಲೆಯಲ್ಲಿ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಸಾಧಕಿಯರ ಮನದಾಳದ ಮಾತು ಇಲ್ಲಿದೆ...

ನಿಜ ಜೀವನದ ಕನ್ನಡಿ: ಶಿಲ್ಪಾ ಮೊಕಾಶಿ, ಧಾರವಾಡ

ರಂಗಭೂಮಿಯ ಸೆಳೆತವೇ ಹಾಗೆ. ಅಷ್ಟು ಸುಲಭಕ್ಕೆ ಬಿಡುವಂಥದ್ದಲ್ಲ. ಹಾಗೆಯೇ ಅಷ್ಟು ಬೇಗ ಒಲಿಯುವಂಥದ್ದೂ ಅಲ್ಲ. ವಿದೇಶದಲ್ಲಿದ್ದು ಅಲ್ಲಿನ ನಾಟಕಗಳ ಸೊಗಡನ್ನೂ ಅರಿತಿರುವ ಧಾರವಾಡದ ಶಿಲ್ಪಾ ಮೊಕಾಶಿ, ನಾಟಕಗಳು ನಿಜ ಜೀವನದಲ್ಲಿ ನಡೆಯುವ ಘಟನೆಗಳಿಗೆ ಕನ್ನಡಿಯಂತೆ ಎನ್ನುತ್ತಾರೆ.

ಚಿಕ್ಕಂದಿನಿಂದಲೂ ನಾಟಕ ಎಂದರೆ ಹುಚ್ಚು. ಧಾರವಾಡದಲ್ಲಿ ಓದಿದ್ದು ಎಂಜಿನಿಯರಿಂಗ್‌ ಆದರೂ ರಂಗಭೂಮಿ ಸೆಳೆತ ಮಾತ್ರ ಹಾಗೆಯೇ ಇತ್ತು. ಯಾವ ಪಾತ್ರವಾದರೂ ಸರಿ ವೇದಿಕೆ ಹತ್ತಿ ನಟಿಸುತ್ತಿದ್ದೆ. ಆದರೆ ಮದುವೆಯಾದ ಮೇಲೆ ಹುಟ್ಟೂರು ಮಾತ್ರವಲ್ಲ, ದೇಶವನ್ನೇ ಬಿಟ್ಟು ಹೋಗಿದ್ದೆ. 12 ವರ್ಷ ವಿದೇಶದಲ್ಲಿದ್ದ ನನಗೆ ನಾಟಕ, ವೇದಿಕೆಯ ಸಂಪರ್ಕ ಕಡಿದಿತ್ತು. ಆದರೆ ಅದರೆಡೆಗಿನ ಹುಚ್ಚು ಆಸೆ ಮಾತ್ರ ಕಡಿಮೆಯಾಗಿರಲಿಲ್ಲ. 

ಇಂಗ್ಲೆಂಡ್‌ನಲ್ಲಿ ಅನೇಕ ನಾಟಕಗಳು ನಡೆಯುತ್ತವೆ‌. ವರ್ಷಗಟ್ಟಲೇ ಒಂದೇ ನಾಟಕ ಪ್ರದರ್ಶಿಸಿದರೂ ನೋಡುಗರ ಸಂಖ್ಯೆ ಕಡಿಮೆಯಾಗುವುದಿಲ್ಲ. ಅಲ್ಲಿದ್ದಾಗ ಆಗಾಗ ನಾಟಕ ನೋಡಲು ಹೋಗುತ್ತಿದ್ದೆ. ವೇದಿಕೆ ಮೇಲೆ ಒಬ್ಬೊಬ್ಬರ ನಟನೆಯನ್ನು ನೋಡಿ ನಾನು ಮಾಡಬೇಕಿತ್ತು ಎಂದು ನನ್ನೊಳಗೇ ಮರುಗಿದ್ದಿದೆ. 

2015ರಲ್ಲಿ ಭಾರತಕ್ಕೆ ವಾಪಸ್‌ ಆಗಿ ಮೈಸೂರಿನಲ್ಲಿ ವಾಸವಿದ್ದೆವು. ಆಗ ಮತ್ತೆ ‘ಅರಿವು ರಂಗ’ ತಂಡದೊಂದಿಗೆ ಸೇರಿ ನಾಟಕ ಮಾಡಿದ್ದೆ. ವೇದಿಕೆ ಹತ್ತಿದಾಗ ಏನೋ ಕಳೆದುಕೊಂಡಿದ್ದನ್ನು ಮತ್ತೆ ಪಡೆದುಕೊಂಡಂತಾಗಿತ್ತು, ಮಗು ತಾಯಿ ಮಡಿಲನ್ನು ಮತ್ತೆ ಸೇರಿದ ಅನುಭವವದು.

ವಿದೇಶಕ್ಕೆ ಹೋಗುವ ಮೊದಲು ನನ್ನ ರಂಗಭೂಮಿ ಜ್ಞಾನ ಇಲ್ಲಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಅಲ್ಲಿ ಬೇರೆ ಬೇರೆ ನಾಟಕಗಳನ್ನು ನೋಡಲು ಸಾಧ್ಯವಾಗಿತ್ತು. ಧ್ವನಿ ನಾಟಕ, ವಿಜ್ಞಾನ ನಾಟಕ, ಹಾರರ್‌ ನಾಟಕದ ಜತೆಗೆ ಅವರು ಬಳಸುವ ವಿವಿಧ ತಂತ್ರಗಳನ್ನು ತಿಳಿಯಲು ಸಾಧ್ಯವಾಯಿತು. ಅದರ ಬಗ್ಗೆ ತಿಳಿಯಬೇಕೆಂದು ಭಾರತಕ್ಕೆ ಬಂದ ಮೇಲೆ ರಂಗಭೂಮಿ ವಿಷಯದ ಮೇಲೆ ಉನ್ನತ ಶಿಕ್ಷಣ ಪಡೆದುಕೊಂಡೆ. ನಾಟಕದ ವಿವಿಧ ಆಯಾಮಗಳನ್ನು ತಿಳಿದುಕೊಂಡು ನನ್ನಲ್ಲಿ ಅಳವಡಿಸಿಕೊಂಡೆ.

ನನ್ನ ಮಕ್ಕಳಿಗೆ ಶಾಲೆಗೆ ಕಳಿಸಿ ಶಿಕ್ಷಣ ಕೊಡಿಸುವ ಬದಲು ಮನೆಯಲ್ಲಿಯೇ ರಂಗಭೂಮಿಯ ಹಿನ್ನೆಲೆಯಲ್ಲಿ ಶಿಕ್ಷಣ ನೀಡುತ್ತಿದ್ದೇನೆ. ಇದರಿಂದ ಮಕ್ಕಳಿಗೆ ಭಾಷೆ, ಬರವಣಿಗೆಯ ಸುಧಾರಣೆಯಾಗುತ್ತದೆ. ಅಲ್ಲದೆ ಹೊಸ ಬಗೆಯ ಕಲಿಕೆ ನೀಡುವ ಪ್ರಯೋಗ ನನ್ನದು.

ಮಕ್ಕಳು, ಸಂಸಾರದ ಜಂಜಾಟದ ನಡುವೆ ಕೆಲವೊಮ್ಮೆ ಅನಿಸಿದ್ದಿದೆ ಇಷ್ಟೆಲ್ಲಾ ಜವಾಬ್ದಾರಿ ಬೇಕಿತ್ತಾ ಎಂದು. ಆದರೆ ನಮ್ಮವರು ನೀಡುವ ಪ್ರೋತ್ಸಾಹ ಎಂತಹ ಸಾಧನೆಗಾದರೂ ಸ್ಫೂರ್ತಿ ನೀಡಬಲ್ಲದು. ಅದೇ ಹುರುಪಿನಲ್ಲಿ ನಾಟಕವನ್ನು ನಿರ್ದೇಶಿಸಿ, ತಂಡದೊಂದಿಗೆ ಪ್ರದರ್ಶನ ನೀಡುತ್ತಿದ್ದೇನೆ.

ಬೆಸೆಯುವ ಸೊಬಗೇ ರಂಗಭೂಮಿ: ಶ್ರದ್ಧಾ ರಾಜ್‌, ಇಂಗ್ಲಿಷ್‌ ರಂಗಭೂಮಿ

2015ರಿಂದಲೂ ರಂಗಭೂಮಿಯಲ್ಲಿ ಸಕ್ರಿಯಳಾಗಿದ್ದೀನಿ. ಸ್ವತಂತ್ರ ನಟಿಯಾಗಿದ್ದರೂ ಆಫ್‌ ಸ್ಟ್ರೀಮ್‌ ಫಿಶಸ್‌ ಮತ್ತು ಕ್ವಾಬಿಲಾ ಕಲೆಕ್ಟಿವ್‌ ಎರಡೂ ತಂಡಗಳಲ್ಲಿಯೂ ಗುರುತಿಸಿಕೊಂಡಿದ್ದೇನೆ. ಈಗ ನಟನೆಯನ್ನು ವೃತ್ತಿಯಾಗಿಯೂ ತೆಗೆದುಕೊಂಡಿದ್ದೇನೆ. ‘ಪಂಚಮ ಪದ’, ‘ಆಶಿ ಮತ್ತು ರೇಣು’ ಹೀಗೆ ವಿಭಿನ್ನ ನಾಟಕಗಳಲ್ಲಿ ಪಾತ್ರ ಮಾಡಿದ್ದೇನೆ. ಜತೆಗೆ ಮಕ್ಕಳ ನಾಟಕ ‘ಗಾಢ್‌ ಆಫ್ ಕಾರ್ನೆಜ್‌’ನಲ್ಲಿಯೂ ಪಾತ್ರ ನಿರ್ವಹಿಸಿದ್ದೇನೆ. 

ಪಿಯು ಓದುತ್ತಿರುವಾಗಲೇ ರಂಗಭೂಮಿಯ ನಂಟು ಅಂಟಿಕೊಂಡಿತು. ನನಗೆ ರಂಗಭೂಮಿಯೆಂಬುದು ಪ್ರತಿಯೊಂದರ ಹೆಣಿಗೆ ಎಂದೇ ಅನಿಸುತ್ತದೆ. ಅದು ಪಾತ್ರವೇ ಆಗಿರಬಹುದು; ಕಥೆಯೇ ಆಗಿರಬಹುದು; ಭಾವವೇ ಆಗಿರಬಹುದು; ಸನ್ನಿವೇಶವೇ ಆಗಿರಬಹುದು. ಹೀಗೆ ಎಲ್ಲವನ್ನು ಹೆಣೆಯುತ್ತ ಒಂದು ಮಾದರಿಯಾಗಿ ರೂಪುಗೊಳ್ಳುವ ಸೊಬಗೇ ರಂಗಭೂಮಿ. ಒಂದಕ್ಕೊಂದು ಬೆಸೆದು ನೋಡುವ ಪರಿಯೇ ಚಂದ. ವ್ಯಷ್ಟಿಯಾಗಿ, ಸಮಷ್ಟಿಯಾಗಿ ಹೇಗೆ ನೋಡಿದರೂ ರಂಗಭೂಮಿ ಜೀವನದ ಉದ್ದಕ್ಕೂ ಹೊಳಹುಗಳನ್ನು ನೀಡುತ್ತಲೇ ಇರುತ್ತದೆ. ಕಾಲೇಜಿನಲ್ಲಿದ್ದಾಗ ರಂಗಭೂಮಿಯಲ್ಲಿ ಸಿಕ್ಕ ಗೆಳೆಯರೂ ಈಗಲೂ ನನ್ನ ಜತೆ ಇದ್ದಾರೆ. ಬದುಕುವ ದಾರಿ, ಮಾರ್ಗದರ್ಶನ, ಜತೆಗೆ ಸ್ನೇಹಿತರ ಬೆಂಬಲ ಹೀಗೆ ಎಲ್ಲವನ್ನು ಕೊಟ್ಟಿದೆ. 

ರಂಗಭೂಮಿಯಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ. ನಾನು ಆರಂಭಿಕ ಹೆಜ್ಜೆಗಳನ್ನು ಇಟ್ಟಿದ್ದು ನಿರ್ದೇಶಕಿಯೊಬ್ಬರ ಸಹಾಯದಿಂದಲೇ.  ಹೆಣ್ಣುಮಕ್ಕಳ ಕೆಲಸಕ್ಕೆ ಪ್ರಾಮುಖ್ಯತೆಯೂ ಸಿಗುತ್ತಿದೆ. ಇಂಗ್ಲಿಷ್‌ ರಂಗಭೂಮಿಯಲ್ಲಿ ಕಥೆ ಹಾಗೂ ನಿರೂಪಣೆಯ ಶೈಲಿಯಲ್ಲಿ ಹಲವು ಪ್ರಯೋಗಗಳು ಆಗುತ್ತಿವೆ. ಅದರಲ್ಲಿಯೂ ಹೆಣ್ಣುಮಕ್ಕಳ ದೃಷ್ಟಿಕೋನದಿಂದ ಪ್ರಯೋಗಗಳು ನಡೆಯುತ್ತಿರುವುದು ಗಮನಾರ್ಹ. ಗಾಢ ಸತ್ಯಕ್ಕೆ ಪ್ರೇಕ್ಷಕ  ಪ್ರಭುವಿನ ಮುಂದೆ ಕನ್ನಡಿ ಹಿಡಿಯುವುದಕ್ಕೆ ರಂಗಭೂಮಿಯಲ್ಲಿ ಬಹಳಷ್ಟು ಅವಕಾಶಗಳಿವೆ. ಅನನ್ಯ ಜಗತ್ತು ಎನಿಸಿಕೊಂಡಿರುವ ಕನ್ನಡ ಮತ್ತು ಇಂಗ್ಲಿಷ್‌ ರಂಗಭೂಮಿಗಳೆರಡೂ ಒಂದಕ್ಕೊಂದು ಸಮೀಪ ಬರುತ್ತಿದೆ ಎನಿಸುತ್ತಿರುವುದು ಖುಷಿಯ ವಿಚಾರ.

ಬದುಕು ಕೊಟ್ಟಿದೆ: ಮಾಲತಿ ಸರದೇಶಪಾಂಡೆ, ಬೆಂಗಳೂರು

ಜೀವನವೊಂದು ನಾಟಕ ರಂಗ, ಎಲ್ಲರೂ ಕಲಾವಿದರೆ ಎಂಬ ಮಾತು ನಿಜವೇ ಇರಬಹುದು. ನಾಟಕದ ವಿಚಾರ ಬಂದಾಗ ಎಲ್ಲರೂ ಕಲಾವಿದರಾಗಲಾರರು. ಅದಕ್ಕೆ ಬದ್ಧತೆ, ಸಿದ್ಧತೆ ಎಲ್ಲವೂ ಬೇಕು. ಅದರಲ್ಲೂ ಇಂದಿನ ಡಿಜಿಟಲ್ ಯುಗದಲ್ಲಿ ತಾಸುಗಟ್ಟಲೆ ಪ್ರೇಕ್ಷಕನನ್ನು ಹಿಡಿದಿಡುವುದು ಮೊದಲಿಗಿಂತ ಹೆಚ್ಚು ಸವಾಲೇ ಸರಿ. ಅಂತಹ ಶಕ್ತಿ ನಾಟಕಕ್ಕಿದೆಯಾದರೂ ಕಲಾವಿದರಿಗೂ ಅಂತಹ ತಾಕತ್ತಿರಬೇಕು. ಇಂತಹ ತಾಕತ್ತಿನ ಕಲಾವಿದೆ, ಇಂದಿಗೂ ಆಧುನಿಕತೆಯೊಟ್ಟಿಗೆ ನಾಟಕದಲ್ಲಿ ತೊಡಗಿಸಿಕೊಂಡು ಸಾಗುತ್ತಿರುವವರು ಮಾಲತಿ ಸರದೇಶಪಾಂಡೆ.

ನಾಟಕವೆಂದರೇನೇ ಹಾಗೆ, ಅದು ಆಪ್ಯಾಯಮಾನವಾದದ್ದು. ರಂಗದ ರಂಗಿನ ಬೆಳಕಿನಲ್ಲಿ ಬಣ್ಣ ತೊಟ್ಟು ನಿಂತರೆ ನಿಜ ಅಸ್ತಿತ್ವ ಮರೆಯಾಗಿ ಪಾತ್ರವಾಗಿ ಬದಲಾಗುವ ಸುಂದರ ಅನುಭವವದು. ಚಿಕ್ಕಂದಿನಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ನಾನು 20ನೇ ವಯಸ್ಸಿನಲ್ಲಿ ಸಂಪೂರ್ಣವಾಗಿ ವೇದಿಕೆ ಹತ್ತಿದ್ದೆ. ಧಾರವಾಡದಲ್ಲಿ ಹಯವದನ ನಾಟಕದಲ್ಲಿ ಪದ್ಮಿನಿಯಾಗಿ ಬಣ್ಣ ಹಚ್ಚಿದ ಮೇಲೆ ರಂಗಭೂಮಿ ನನ್ನ ಜೀವನದ ಭಾಗವೇ ಆಯಿತು.

ಬದಲಾವಣೆ ನಿರಂತರ...ಇಂದು ರಂಗಭೂಮಿ ಹೊಸ ತಂತ್ರಜ್ಞಾನದೊಂದಿಗೆ ಹೊಸ ಆವಿಷ್ಕಾರಗಳೊಂದಿಗೆ ಬೆಳೆದುನಿಂತಿದೆ. ಕಾಲಕ್ಕೆ ತಕ್ಕಂತೆ ನಾವೂ ಬದಲಾವಣೆ ಮಾಡಿಕೊಂಡು, ಕಲೆಯ ನೈಜ ಸತ್ವಕ್ಕೆ ಕುಂದು ಬಾರದಂತೆ ನಡೆಸಿಕೊಂಡು ಬರುತ್ತಿದ್ದೇವೆ. ಕಲಾವಿದರಾಗಿ ಅದು ನಮ್ಮ ಕರ್ತವ್ಯ ಕೂಡ.

ಹಿಂದೆಲ್ಲಾ ತಡರಾತ್ರಿ ನಾಟಕದಲ್ಲಿ ಅಭಿನಯಿಸಲು ಹೆಣ್ಣುಮಕ್ಕಳು ಮನೆಯಿಂದ ಹೊರಹೋಗುತ್ತಾರೆ ಎಂದರೆ ಕುಟುಂಬಕ್ಕೆ ಭಯವೇ ಹೆಚ್ಚಿತ್ತು.   ನಾಟಕದ ಬಗ್ಗೆ ಅರಿವಿದ್ದವರು, ಅದರ ಹಿನ್ನೆಲೆಯಲ್ಲಿಯೇ ಬೆಳೆದು ಬಂದವರು ಮಾತ್ರ ಮುಂದೆ ಬರಲು ಸಾಧ್ಯವಾಗುತ್ತಿತ್ತು. ಈಗ ಕಾಲ ಬದಲಾಗಿದೆ, ನಾಟಕದಲ್ಲಿ ಆಸಕ್ತಿ ಹೊಂದಿರುವ ಯುವ ಜನತೆ ನಮ್ಮ ನಡುವೆ ಇದ್ದಾರೆ ಎನ್ನುವುದು ಖುಷಿಯ ವಿಷಯ.

ಹವ್ಯಾಸಿ ರಂಗಭೂಮಿ ಕಲಾವಿದೆಯಾಗಿ ಪಯಣ ಆರಂಭಿಸಿದ ನನ್ನನ್ನು ಕಲೆ ಅಪ್ಪಿಕೊಂಡಿತ್ತು. ವೇದಿಕೆಯಲ್ಲಿ ನಿಂತ ಮೇಲೆ ರಮಾಬಾಯಿ, ಮೋಹಿನಿ, ಲಕ್ಷ್ಮಿ ಯಾವುದೇ ಪಾತ್ರವಾಗಲೀ ಮಾಲತಿ ಮರೆಯಾಗಿ ಆ ಪಾತ್ರವೇ ರಾರಾಜಿಸುತ್ತಿತ್ತು. ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿದರೂ ಸಹಿರಿಸಹಿ ಮತ್ತು ಆಲ್‌ ದಿ ಬೆಸ್ಟ್ ನನ್ನ ನೆಚ್ಚಿನ ನಾಟಕ. 11-13 ಜನರ ನಮ್ಮ ತಂಡ ಇಂದಿಗೂ ಕಲಾಪ್ರೇಮಿಗಳನ್ನು ನಾಟಕದತ್ತ ಹೊರಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂಬ ಹೆಮ್ಮೆ ನಮ್ಮದು. ಕಿರುತೆರೆಯಲ್ಲಿ ಸಕ್ರಿಯರಾಗಿದ್ದರೂ ನಾಟಕದ ಒಲವು ಇಂದಿಗೂ ನನ್ನನ್ನು ಸೆಳೆಯುತ್ತದೆ.

ನಾಟಕವೇ ಜೀವಾಳ: ಹನುಮಕ್ಕ, ಮರಿಯಮ್ಮನಹಳ್ಳಿ

ಕೆ. ವಿ ಸುಬ್ಬಣ್ಣ, ಯು. ಆರ್‌. ಅನಂತಮೂರ್ತಿ, ಬಿ. ವಿ. ಕಾರಂತರು ಹೀಗೆ ಅನೇಕ ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಬೆಳೆದ ಅಪ್ಪಟ ಹವ್ಯಾಸಿ ರಂಗಭೂಮಿ ಕಲಾವಿದೆ ನಾನು. 1994ರಿಂದ ನಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಪ್ರತಿ ಕಲಾವಿದರಿಗೂ ರಂಗಭೂಮಿಯೇ ಬುನಾದಿ.

ತಂದೆಯ ಪೀಳಿಗೆಗೆ ರಂಗಭೂಮಿಯೊಂದಿಗಿನ ನಂಟು ಕೊನೆಯಾಗಬಾರದು, ಅದನ್ನು ಮುಂದುವರಿಸಿಕೊಂಡು ಏನಾದರೂ ಸಾಧನೆ ಮಾಡಬೇಕೆಂದು ಹೊರಟ ನನಗೆ ನಾಟಕವೇ ಜೀವಾಳವಾಗಿತ್ತು. ಮನೆ ತೊರೆದು ನೀನಾಸಂಗೆ ಸೇರಿದ್ದು ನನ್ನ ತಂದೆಗೆ ಇಷ್ಟವಿರಲಿಲ್ಲ, ಸರಿಸುಮಾರು ಮೂರು ತಿಂಗಳು ಮನೆಯವರ ಸಂಪರ್ಕವಿಲ್ಲದೆ ಹೊರಗಿನವರ ಉಪಚಾರದಲ್ಲಿಯೇ ಇದ್ದೆ, ಹೆಣ್ಣುಮಕ್ಕಳನ್ನು ರಂಗಭೂಮಿಯಿಂದ ದೂರವಿಡುತ್ತಿದ್ದ ಕಾಲದಲ್ಲಿ ಅದರಲ್ಲೇ ಜೀವನ ಕಟ್ಟಿಕೊಳ್ಳಲು ಹೊರಟಿದ್ದೆ. ದಿನಕಳೆದಂತೆ ನನ್ನ ಏಳಿಗೆ ಕಂಡು ತಂದೆಯೂ ಕ್ರಮೇಣ ಒಪ್ಪಿಕೊಂಡರು. ಅಲ್ಲಿಂದ ನನ್ನ ಪಯಣಕ್ಕೆ ಹೊಸ ತಿರುವು ಶುರುವಾಗಿತ್ತು.

ನಾಟಕವೇ ಜೀವನವಾಗಿ ಸುಮಾರು 30 ವರ್ಷಗಳು ಕಳೆಯುತ್ತಾ ಬಂತು. 200ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಇಂದಿಗೂ ವೇದಿಕೆ ಹತ್ತುವಾಗ ಅದೇನೋ ಅಳುಕು, ಆಂತರ್ಯದಲ್ಲಿ ಭಯ ಪುಟಿದೇಳುತ್ತದೆ. ಪಾತ್ರವಾಗಿ ಒಮ್ಮೆ ಮೈಮರೆತರೆ ಹೊರಗಿನ ಪ್ರಪಂಚ ಶೂನ್ಯ. ಅಂತಹ ಒಂದು ಭಯ ಇದ್ದರೆ ಮಾತ್ರ ಒಬ್ಬ ಕಲಾವಿದ ಮುಂದುವರಿಯಲು ಸಾಧ್ಯ ಎನ್ನುವುದು ನನ್ನ ತತ್ವ.

ನಿರ್ದೇಶಕರು ನೀಡುವ ಪ್ರತೀ ಪಾತ್ರವೂ ಸವಾಲು. ವೈಯಕ್ತಿಕವಾಗಿ ಎಷ್ಟೇ ಕಲಿಸಿದರೂ ಎದುರಿಗಿರುವ ಕಲಾವಿದನ ನಟನೆ ನೋಡಿ ಕಲಿಯುವ ಮನಸ್ಸಿರಬೇಕು. ನನ್ನ ಪಾತ್ರವನ್ನು ನಾನು ಇನ್ನಷ್ಟು ಚಂದವಾಗಿ ಹೇಗೆ ಮಾಡಬಹುದು ಎನ್ನುವ ಹುಮ್ಮಸ್ಸಿರಬೇಕು. ಆಗ ಮಾತ್ರ ನಾಟಕದಲ್ಲಿನ ಪಾತ್ರ ನಾವಾಗಲು ಸಾಧ್ಯ. ಪ್ರತಿ ಪಾತ್ರಕ್ಕೆ ಜೀವ ತುಂಬುವ ಹಾಗೆ ರಂಗಭೂಮಿ ನಮ್ಮ ಜೀವನಕ್ಕೆ ರಂಗು ತುಂಬಿದೆ. ಏನೇ ಸನ್ನಿವೇಶ ಬರಲಿ, ಯಾವುದೇ ಜಾಗವಿರಲಿ ಬದುಕಬಲ್ಲೆ ಎನ್ನುವ ಧೈರ್ಯ ನೀಡಿದೆ. ಅದರಲ್ಲೇ ಜೀವನ ರೂಪಿಸಿಕೊಂಡೆ ಎನ್ನುವ ಸಾರ್ಥಕತೆ ನನ್ನದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT