ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಂಗಭೂಮಿ | ಮತ್ತೆ ಮುಖ್ಯಮಂತ್ರಿ: ರಾಜಕಾರಣಕ್ಕೆ ನಿಲುವುಗನ್ನಡಿ

Published : 29 ಸೆಪ್ಟೆಂಬರ್ 2024, 0:30 IST
Last Updated : 29 ಸೆಪ್ಟೆಂಬರ್ 2024, 0:30 IST
ಫಾಲೋ ಮಾಡಿ
Comments

80 ರ ದಶಕದ ರಂಗಭೂಮಿ ಕ್ಷೇತ್ರದಲ್ಲಿ ಸಂಚಲನೆ ಮೂಡಿಸಿದ್ದ ‘ಮುಖ್ಯಮಂತ್ರಿ’ ನಾಟಕದ ‘ಮುಖ್ಯಮಂತ್ರಿ’ ಪಾತ್ರದ ಮೂಲಕವೇ ದಾಖಲೆಗಳನ್ನು ನಿರ್ಮಿಸಿ, ‘ಶಾಶ್ವತ ಮುಖ್ಯಮಂತ್ರಿ’ ಎಂಬ ಹಿರಿಮೆಗೆ ಪಾತ್ರರಾಗಿರುವ ಮುಖ್ಯಮಂತ್ರಿ ಚಂದ್ರು, ‘ಮತ್ತೆ ಮುಖ್ಯಮಂತ್ರಿ’ಯಾಗಿ ರಂಗದ ಮೇಲೆ ಬಂದಿದ್ದಾರೆ.

44 ವರ್ಷಗಳ ಬಳಿಕವೂ ‘ಮುಖ್ಯಮಂತ್ರಿ’ ನಾಟಕವನ್ನು ‍‍‍ಪ್ರೇಕ್ಷಕರು ಕಿಕ್ಕಿರಿದು ನೋಡುತ್ತಿದ್ದಾರೆ. ಆದರೂ, ಹೊಸತೇನಾದರೂ ಮಾಡಬೇಕೆಂಬ ಹಂಬಲದಿಂದ, ಸಮಕಾಲೀನ ರಾಜಕಾರಣದ ಹೂರಣ ಹೊತ್ತು ‘ಮತ್ತೆ ಮುಖ್ಯಮಂತ್ರಿ’ ಮೂಡಿದೆ. ಇದು ರಾಜಕೀಯ ಆತ್ಮಾವಲೋಕನ ಮತ್ತು ವಿಡಂಬನೆಯೇ ಪ್ರಧಾನವಾದ ನಾಟಕ. ಈ ಕಾಲದ ರಾಜಕಾರಣ, ರಾಜಕಾರಣಿಗಳಿಗೆ ಹಿಡಿದ ನಿಲುವುಗನ್ನಡಿ. ಹಳೆಯ ‘ಮುಖ್ಯಮಂತ್ರಿ’ ಜೊತೆಗೆ ‘ಮತ್ತೆ ಮುಖ್ಯಮಂತ್ರಿ’ಯನ್ನು ಹೋಲಿಸುವ ಅವಕಾಶವೂ ಇದೆ.

‘ಮುಖ್ಯಮಂತ್ರಿ ನಾಟಕದಲ್ಲಿ ಹೇಗಾದರೂ ಮಾಡಿ ಕುರ್ಚಿ ಉಳಿಸಿಕೊಳ್ಳಬೇಕೆಂಬ ಚತುರ, ಪಿತೂರಿಗಾರ ಮುಖ್ಯಮಂತ್ರಿ ಕೃಷ್ಣ ದ್ವೈಪಾಯನ ಕೌಲ್‌ ಅರ್ಥಾತ್‌ ಕೆ.ಡಿ. ಕೌಲ್ ಕಂಡರೆ, ಇಲ್ಲಿ, ಪ್ರಜಾತಂತ್ರದ ದಾರಿಯಲ್ಲಿ ನಡೆಯಲು ಬಯಸಿದ, ಸ್ಥಾನವನ್ನು ತ್ಯಜಿಸಲು ನಿರ್ಧರಿಸುವ ಮುಖ್ಯಮಂತ್ರಿ ಶೀಲವಂತನಿದ್ದಾನೆ. 71ರ ಇಳಿವಯಸ್ಸಿನಲ್ಲಿ ಚಂದ್ರು ಅವರದ್ದು ಪ್ರಬುದ್ಧ ಹಾಗೂ ಎಂದಿನ ಲೀಲಾಜಾಲ ಅಭಿನಯ.

‘ಮುಖ್ಯಮಂತ್ರಿ’ ನಾಟಕವನ್ನು ಅಭಿನಯಿಸಿರುವ ಬೆಂಗಳೂರಿನ ‘ಕಲಾ ಗಂಗೋತ್ರಿ’ ಹವ್ಯಾಸಿ ತಂಡದ ಕಲಾವಿದರೇ ‘ಮತ್ತೆ ಮುಖ್ಯಮಂತ್ರಿ’ ನಾಟಕದಲ್ಲಿ ಅಭಿನಯಿಸಿದ್ದಾರೆ. ಅಂದು ಆ ನಾಟಕವನ್ನು ನಿರ್ದೇಶಿಸಿದ್ದ ಬಿ.ವಿ.ರಾಜರಾಂ ಇದನ್ನೂ ನಿರ್ದೇಶಿಸಿದ್ದಾರೆ. ರಣಜಿತ್‌ ಕಪೂರ್‌ ಅವರ ಹಿಂದಿ ನಾಟಕವನ್ನು ಟಿ.ಎಸ್‌.ಲೋಹಿತಾಶ್ವ ಅನುವಾದಿಸಿದ್ದರು.

ಸಾಮಾಜಿಕ, ಪೌರಾಣಿಕ ನಾಟಕಗಳ ಮೂಲಕ ಕನ್ನಡ ರಂಗಭೂಮಿ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಗಳಿಸಿರುವ ವಿಮರ್ಶಕ, ನಾಟಕಕಾರ ಕೆ.ವೈ.ನಾರಾಯಣಸ್ವಾಮಿ, ‘ಮತ್ತೆ ಮುಖ್ಯಮಂತ್ರಿ’ಯನ್ನು ರಚಿಸಿರುವುದು ವಿಶೇಷ. ಮೊದಲ ರಾಜಕೀಯ ನಾಟಕದಲ್ಲೇ ಅವರ ಪ್ರತಿಭೆ ಹೊಸ ದಿಕ್ಕಿಗೆ ವಿಸ್ತರಿಸಿದೆ. ತಂಡವು ಹೇಳಿಕೊಳ್ಳುವಂತೆ, ’ಇದು ದೇಶದ 75 ವರ್ಷಗಳ ರಾಜಕೀಯ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವ ಯತ್ನ’.

ತನ್ನ ಸಚಿವ ಸಂಪುಟದಲ್ಲಿ ನಡೆದ ಅಪಾರ ಭ್ರಷ್ಟಾಚಾರವನ್ನು ತಡೆಯಲು ಆಗಲಿಲ್ಲವೆಂಬ ಹತಾಶೆ, ಪಶ್ಚಾತ್ತಾಪದಿಂದ ಕೊರಗುವ ಹಂಗಾಮಿ ಮುಖ್ಯಮಂತ್ರಿ ಶೀಲವಂತ, ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಲು ನಿರಾಕರಿಸಿ, ಆದರ್ಶ ರಾಜಕಾರಣದ ಪ್ರತಿನಿಧಿಯಾಗಿ ಎದುರಿಸುವ ತೊಳಲಾಟಗಳು ಹಾಗೂ ಮುಖ್ಯಮಂತ್ರಿ ಹುದ್ದೆಗಾಗಿ ಆಕಾಂಕ್ಷಿಗಳು ನಡೆಸುವ ಪಿತೂರಿಯೇ ನಾಟಕದ ಕೇಂದ್ರ ವಸ್ತು.

ನಾಟಕದುದ್ದಕ್ಕೂ ಶಾಂತವೇರಿ ಗೋಪಾಲಗೌಡರು ಸೇರಿದಂತೆ ಹಿಂದಿನ, ಇಂದಿನ ಪ್ರಸಿದ್ಧ ರಾಜಕಾರಣಿಗಳ ವ್ಯಕ್ತಿತ್ವದ ನೆರಳೂ ಕಾಣುವುದರಿಂದಲೇ ಇದಕ್ಕೆ ಸಮಕಾಲೀನ ಮಹತ್ವವೂ ಸಿಕ್ಕಿದೆ. ಜನವಿರೋಧಿ ಆಡಳಿತದಿಂದ ಬಳಲುವ ಹೋರಾಟಗಾರರು, ರೈತರು, ಅಲ್ಪಸಂಖ್ಯಾತರ ಅಸಹಾಯಕತೆ, ಮಾಧ್ಯಮಗಳ ಓಲೈಕೆಯೂ ಎದುರಾಗುತ್ತದೆ.

ಇಲ್ಲಿ ರಾಜಕೀಯ ವಿಡಂಬನೆಯೇ ಪ್ರಧಾನ. ಹೀಗಾಗಿ ಚುರುಕು ಮುಟ್ಟಿಸುವ, ವ್ಯಂಗ್ಯ ಒಳಗೊಂಡ ಪಂಚಿಂಗ್ ಸಂಭಾಷಣೆಗಳೇ ಜೀವಾಳ. ಚಂದ್ರು ಅವರೊಂದಿಗೆ ಮಂಜುನಾಥ ಹೆಗಡೆ, ಬಿ.ವಿ.ರಾಜಾರಾಂ, ಶ್ರೀನಿವಾಸ ಮೇಷ್ಟ್ರು ಅವರಂಥ ಹಿರಿಯ ನಟರ ಸಲೀಸಾದ ಅಭಿನಯವು ಅದನ್ನು ನಾಟಕೀಯವಾಗಿ ಮೇಲಕ್ಕೆತ್ತುತ್ತದೆ. ಈ ನಟರ ಉತ್ಸಾಹವೇ ನಾಟಕದ ಹೈಲೈಟ್. ಆದರೂ, 25ಕ್ಕೂ ಹೆಚ್ಚು ಪಾತ್ರಗಳ ನಿರಂತರ ಸಂಭಾಷಣೆಯಿಂದ ಒಮ್ಮೊಮ್ಮೆ ವಾಚ್ಯವೆನಿಸುವುದೂ ಉಂಟು. ಮಾತಿಗೇ ಇಲ್ಲಿ ಮಹತ್ವ.

ಕೆಲವೇ ಕುರ್ಚಿ, ಮೇಜುಗಳು ಹಾಗೂ ಸಾಂಕೇತಿಕ ಭಿತ್ತಿಫಲಕಗಳ ರಂಗಸಜ್ಜಿಕೆ ಗಮನ ಸೆಳೆಯುತ್ತದೆ. ಕೆಲವು ಪಾತ್ರಗಳಿಗೆ ಸಹಜತೆ ಮೀರಿ ಮೇಕಪ್‌ ಮಾಡಿದ್ದು ಕಣ್ಣಿಗೆ ರಾಚುತ್ತದೆ. ಬೆಳಕಿನ ವಿನ್ಯಾಸದಲ್ಲಿ ವೈವಿಧ್ಯತೆ ಕೊಂಚ ಕಡಿಮೆ.

ನಾಟಕದಲ್ಲೊಂದು ವೈರುಧ್ಯವೂ ಇದೆ. ‘ಸತ್ಯಂ ವದ, ಧರ್ಮಂ ಚರ’ (ಸತ್ಯವನ್ನು ಮಾತನಾಡಿ, ನೀತಿವಂತ ಜೀವನವನ್ನು ನಡೆಸು) ಎಂಬುದು ನಾಣ್ಣುಡಿ. ಅದರ ಮೊದಲ ಭಾಗವನ್ನು ‘ಸತ್ಯಂ ವಧ’ ಎಂದು ಬದಲಾಯಿಸಿ, ನಾಟಕದ ಶೀರ್ಷಿಕೆಯ ಅಡಿಸಾಲಾಗಿ ಬಳಸಲಾಗಿದೆ. ಎಂದರೆ ಸತ್ಯವನ್ನು ವಧೆ ಮಾಡು, ಕೊಲ್ಲು ಎಂದರ್ಥ. ಇನ್ನೂ ಮುದ್ರಣದ ಹಂತದಲ್ಲಿರುವ ನಾಟಕದ ಪಠ್ಯದಲ್ಲಿ, ಕೋರ್ಟಿನ ಕಲಾಪದ ನಡುವೆಯೇ ಗುಂಡು ಹಾರಿಸಿ ಶೀಲವಂತನನ್ನ ಕೊಲ್ಲುವುದೇ ಕೊನೇ ದೃಶ್ಯವಾಗಿ ಬರುತ್ತದೆ. ಸ್ವಾರ್ಥಿ ರಾಜಕಾರಣವು ಸತ್ಯವನ್ನು ಕೊಲ್ಲುತ್ತದೆ ಎಂಬುದು ಇಲ್ಲಿ ಗ್ರಹಿಸಬೇಕಾದ ಅರ್ಥ. ಆದರೆ, ರಂಗ ಪ್ರಯೋಗದಲ್ಲಿ ಕೊನೆಗೆ ಶೀಲವಂತನೇ ಮತ್ತೆ ಮುಖ್ಯಮಂತ್ರಿಯಾಗುತ್ತಾನೆ!

‘ನಾನು ರಾಜಕೀಯ ಅಪರಾಧಿ.‌ ಮತ್ತೆ ಸಿಎಂ ಆಗುವುದಿಲ್ಲ. ಸಿಎಂ ಅನ್ನು ಆಯ್ಕೆ ಮಾಡುವ‌ ಅಧಿಕಾರವೂ ಇಲ್ಲ’ ಎಂದು ತನ್ನ ಅವಧಿಯ ಎಲ್ಲ ಹಗರಣಗಳ ತನಿಖೆ ನಡೆಸಬೇಕೆಂದು ಕೋರ್ಟಿಗೆ ಪತ್ರ ಬರೆಯುವ ಶೀಲವಂತ, ಕೊನೆಯಲ್ಲಿ ಮುಗುಳ್ನಗುತ್ತಾ ಮತ್ತೆ ಅದೇ ಸ್ಥಾನಕ್ಕೆ ಮರಳುವಲ್ಲಿ ತಾರ್ಕಿಕ ಸಮರ್ಥನೆಯೂ ಕಾಣುವುದಿಲ್ಲ.

‘ಮತ್ತೆ ಮುಖ್ಯಮಂತ್ರಿ’ ನಾಟಕ
‘ಮತ್ತೆ ಮುಖ್ಯಮಂತ್ರಿ’ ನಾಟಕ

ಹೀಗಾಗಿ, ನಾಟಕದ ಅಂತ್ಯಕ್ಕೂ, ಶೀರ್ಷಿಕೆಯ ಅಡಿ ಸಾಲು ಸೂಚಿಸುವ ಆಶಯಕ್ಕೂ ಹೊಂದಿಕೆಯಾಗುವುದಿಲ್ಲ. ದುರಂತದ ಆಶಯಕ್ಕೆ ತಕ್ಕಂತೆಯೇ ನಾಟಕದ ದೃಶ್ಯಾವಳಿಗಳನ್ನು ಕಟ್ಟಿಕೊಟ್ಟ ನಾಟಕಕಾರರ ಉದ್ದೇಶವನ್ನು, ನಟ, ನಿರ್ದೇಶಕರ ‘ಸುಖಾಂತ್ಯವೇ ಮುಖ್ಯ’ ಎಂಬ ಭಾವನಾತ್ಮಕ ನಿಲುವು ಮರೆ ಮಾಡಿದೆ. ನಾಟಕದ ಒಟ್ಟಾರೆ ತಾತ್ವಿಕತೆಯ ಕುರಿತು ಇಡೀ ತಂಡದಲ್ಲಿ ಒಂದೇ ನಿಲುವಿಲ್ಲದಿರುವುದೂ ಇದಕ್ಕೆ ಕಾರಣವಿರಬಹುದು.

ಅದರಿಂದಲೇ, ‘ಭ್ರಷ್ಟಾಚಾರ, ಸ್ವಾರ್ಥ, ಹಗೆತನಗಳಿಂದ ತುಂಬಿರುವ ರಾಜಕೀಯ ವರ್ತಮಾನದಲ್ಲಿ ‍‍ಪ್ರಜಾಪ್ರಭುತ್ವದ ಬಗ್ಗೆ ಸ್ವಲ್ಪ ಮಟ್ಟಿಗೆ ‍‍ಪಾಪಪ್ರಜ್ಞೆಯನ್ನು ಜಾಗೃತಗೊಳಿಸಬೇಕು’ ಎಂಬ ತಂಡದ ಆಶಯಕ್ಕೆ ತಕ್ಕ ಮಹತ್ವವೂ ದೊರಕಿಲ್ಲ.

‘ಮತ್ತೆ ಮುಖ್ಯಮಂತ್ರಿ’ ನಾಟಕದಲ್ಲಿ ಮುಖ್ಯಮಂತ್ರಿ ಚಂದ್ರು
‘ಮತ್ತೆ ಮುಖ್ಯಮಂತ್ರಿ’ ನಾಟಕದಲ್ಲಿ ಮುಖ್ಯಮಂತ್ರಿ ಚಂದ್ರು

ಮೈಸೂರಿನ ‘ನಟನ’ ವೇದಿಕೆಯಲ್ಲಿ ಕಿಕ್ಕಿರಿದ ಪ್ರೇಕ್ಷಕರ ನಡುವೆ ಪ್ರದರ್ಶನ ಕಂಡ ರಂಗಪ್ರಯೋಗವನ್ನು ‘ಕಲಾ ಗಂಗೋತ್ರಿ’ ತಂಡ ಪರಿಷ್ಕರಿಸಲು ಚಿಂತಿಸುತ್ತಿರುವುದು ಸಮಾಧಾನಕರ ಅಂಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT