ಇತ್ತೀಚೆಗೆ ಕನ್ನಡ ರಂಗಭೂಮಿಯಲ್ಲಿ ಯುವ ತಲೆಮಾರು ನಾಟಕ ರಚನೆ, ನಿರ್ದೇಶನ ಹಾಗೂ ಪ್ರಯೋಗಗಳಲ್ಲಿ ಅನೇಕ ಹೊಸತನಗಳನ್ನು ಹೊತ್ತು ತರುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ‘ನಾವು...’ ಎಂಬ ನಾಟಕ. ಅಭಿಮನ್ಯು ಭೂಪತಿ ಮತ್ತು ರೋಹಿತ್ ಜೋಡಿ ಈ ನಾಟಕವನ್ನು ರಚಿಸಿದೆ. ವಿನ್ಯಾಸ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಅಭಿಮನ್ಯು ಭೂಪತಿ ನಿಭಾಯಿಸಿದ್ದಾರೆ. ಬೆಂಗಳೂರು ಥಿಯೇಟರ್ ಆನ್ಸಂಬಲ್ ತಂಡ ಈ ನಾಟಕವನ್ನು ಅಭಿನಯಿಸಿದೆ.
ಭಾರತದ ಸಂವಿಧಾನದ ಪೀಠಿಕೆಯು ‘ಭಾರತೀಯರಾದ ನಾವು’ ಎಂಬ ಸಾಲಿನೊಂದಿಗೆ ಪ್ರಾರಂಭವಾಗುತ್ತದೆ. ‘ನಾವು’ ಎಂಬುದು ಜಾತಿ ಧರ್ಮ ವರ್ಗ ವರ್ಣ ಲಿಂಗ ಹಾಗೂ ಪ್ರದೇಶ–ಹೀಗೆ ಎಲ್ಲ ಬಗೆಯ ಅಸಮಾನತೆಗಳನ್ನು ಮೀರಿದ ಒಂದು ಒಳಗೊಳ್ಳುವ ಪರಿಕಲ್ಪನೆ. ಜಾತಿ ಅಸಮಾನತೆ ಹಾಗೂ ಕ್ರೌರ್ಯವನ್ನು ಸಾಮಾನ್ಯ ಸಂಗತಿಗಳಂತೆ ಹಗುರವಾಗಿ ಪರಿಗಣಿಸುತ್ತಿರುವ ಈ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಇದರ ತೀವ್ರತೆಯನ್ನು ತಲುಪಿಸುವ ಹೊಸದಾರಿಗಳನ್ನು ನಾವು ಕಂಡುಕೊಳ್ಳಬೇಕಿದೆ. ಕನ್ನಡ ರಂಗಭೂಮಿಯಲ್ಲಿ ಈ ಬಗೆಯ ಹೊಸದಾದ ಪ್ರಯೋಗಗಳನ್ನು ‘ನಾವು...’ ನಾಟಕ ಮಾಡಿದೆ.
ನಾಟಕ ಮತ್ತು ಪ್ರೇಕ್ಷಕರ ನಡುವಿನ ನಿರ್ದಿಷ್ಟ ಮಾನಸಿಕ ದೂರವನ್ನು ಈ ನಾಟಕವು ಹೊಸತನಕ್ಕೆ ಎಂಬಂತೆ ತುಸು ಬದಲಾಯಿಸಿದೆ. ‘ಈ ನಾಟಕದಲ್ಲಿ ನೀವೂ ಕೂಡ ಪಾಲುದಾರರು ಸ್ವಾಮಿ, ಎಚ್ಚರದಿಂದಿರಿ’ ಎಂದು ಪ್ರಾರಂಭವಾಗುವ ನಾಟಕವು ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಪ್ರೇಕ್ಷಕರನ್ನು ಅಣಿಗೊಳಿಸುತ್ತದೆ. ಪ್ರಯೋಗದ ದೃಷ್ಟಿಯಿಂದ ಆರಂಭದಿಂದಲೇ ಸಾಂಪ್ರದಾಯಿಕ ಮಾದರಿಗಳನ್ನು ಮುರಿದು ಹೊಸತನಕ್ಕೆ ತಿರುಗುವ ನಾಟಕವು ನಿಧಾನವಾಗಿ ಪ್ರೇಕ್ಷಕರನ್ನೂ ಹೊಸತನಕ್ಕೆ ಹೊಂದಿಸುವಲ್ಲಿ ಯಶಸ್ವಿಯಾಗಿದೆ. ತೊಂಬತ್ತರ ದಶಕದಿಂದ ಇಲ್ಲಿಯವರೆಗೆ ಭಾರತೀಯ ಸಮಾಜದಲ್ಲಿ ಜಾತಿ ಕಾರಣಕ್ಕಾಗಿ ನಡೆದ ದೌರ್ಜನ್ಯಗಳ ಕರಾಳತೆಯನ್ನು ಅತಿರೇಕಗಳಿಲ್ಲದೆ ಪ್ರೇಕ್ಷಕರ ಮುಂದಿಡುತ್ತದೆ. ನಾಟಕವನ್ನು ನೋಡುತ್ತಲೇ ಪ್ರೇಕ್ಷಕರು ತಮ್ಮನ್ನು ತಾವು ನಾಟಕದ ಭಾಗವಾಗಿಸಿಕೊಂಡು ಸಂವೇದನೆಗೆ ಒಳಗಾಗುವ ಪ್ರಕ್ರಿಯೆಯೇ ಕನ್ನಡ ರಂಗಭೂಮಿಯಲ್ಲಿ ಹೊಸತು ಎನ್ನಬಹುದು. ರಂಗಶಂಕರದ 2023ರ ಕನ್ನಡ ನಾಟಕೋತ್ಸವದ ಸಲುವಾಗಿ ಈ ನಾಟಕವವನ್ನು ರಚಿಸಲಾಗಿತ್ತು.
ಸಾಮಾಜಿಕ ಚರಿತ್ರೆಯಲ್ಲಿ ಜಾತಿ ಕಾರಣಕ್ಕಾಗಿ ಆಗಿ ಹೋದ ಅನೇಕ ಕ್ರೌರ್ಯಗಳನ್ನು ನೆನಪಿಸುವಂತಹ ಅನೇಕ ಘಟನೆಗಳನ್ನು ನಾಟಕದ ಹಿನ್ನೆಲೆಯಲ್ಲಿ ಬಳಸಿಕೊಳ್ಳಲಾಗಿದೆ. 2006 ರಲ್ಲಿ ಮಹಾರಾಷ್ಟ್ರದ ಖೈರ್ಲಾಂಜಿಯಲ್ಲಿ ನಡೆದ ಭೀಕರ ಹತ್ಯಾಕಾಂಡವನ್ನೂ ಒಳಗೊಂಡಂತೆ ಇತ್ತೀಚೆಗೆ ಕರ್ನಾಟಕದಲ್ಲಿ ವಸತಿ ಶಾಲೆಯ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ ಅಮಾನವೀಯ ಘಟನೆಗಳವರೆಗೆ ದಲಿತ ಸಂವೇದನೆಯನ್ನು ಭಾವನಾತ್ಮಕತೆಯ ಆಚೆಗೆ ವಾಸ್ತವದ ನೆಲೆಗಟ್ಟಿನಲ್ಲಿ ನಾಟಕವು ಕಟ್ಟಿಕೊಡುತ್ತದೆ.
‘ನಾಟಕವನ್ನು ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಇರಾದೆ ನಮ್ಮದಲ್ಲ, ಬದಲಾಗಿ ನಾಟಕವನ್ನು ಪ್ರೇಕ್ಷಕ ಎದೆಯಾಳಕ್ಕೆ ಇಳಿಸಿಕೊಂಡು ಸಾಮಾಜಿಕ ಬದಲಾವಣೆಯ ಜವಾಬ್ದಾರಿಯನ್ನು ಹೊರುವಂತಾಗಬೇಕು. ಜಾತಿಯ ಕಾರಣಕ್ಕಾಗಿ ನಡೆಯುವ ಕ್ರೌರ್ಯ, ಅಪಮಾನಗಳನ್ನು ಅಂತಃಕರಣದಲ್ಲಿ ನೋಡುವಂತಾಗಬೇಕು ಮತ್ತು ಎಲ್ಲವೂ ಸರಿಯಿದೆ ಎಂಬ ಭ್ರಮಾಲೋಕದಿಂದ ಪ್ರೇಕ್ಷಕರು ಹೊರಬರಬೇಕು. ಈ ಕಾರಣದಿಂದಲೇ ಅನೇಕ ಹೊಸತನಗಳನ್ನು ಈ ನಾಟಕದಲ್ಲಿ ನಾವು ತಂದಿದ್ದೇವೆ’ ಎನ್ನುತ್ತಾರೆ ಯುವ ನಿರ್ದೇಶಕ ಅಭಿಮನ್ಯು ಭೂಪತಿ. ಇದೊಂದು ಡಿವೈಸ್ಡ್ ನಾಟಕವಾಗಿದ್ದು, ರಂಗಭೂಮಿಯ ಸಂಪ್ರದಾಯಿಕತೆಯನ್ನು ಒಡೆದು ಕಟ್ಟಿದ ನಾಟಕವಾಗಿದೆ.
ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಒಂದೋ ಶೋಷಕರಾಗಿ ಇಲ್ಲವೇ ಶೋಷಿತರಾಗಿ ಬದುಕಬೇಕೇ ಹೊರತು ಇವೆರಡನ್ನೂ ಮೀರಿ ಬದುಕುವುದು ಕಷ್ಟದ ಕೆಲಸ. ಸಾಮಾಜಿಕ ಬದಲಾವಣೆ ಎಂಬುದು ಕೇವಲ ಶೋಷಿತರ ನೋವು ಅಪಮಾನಗಳನ್ನು ವಿಜ್ರಂಭಿಸುವುದರಲ್ಲಿ ಇಲ್ಲ, ಬದಲಾಗಿ ನಿರಂತರ ಶೋಷಣೆಯನ್ನು ಮಾಡುವ ವರ್ಗಗಳು ಆತ್ಮಾವಲೋಕನ ಮಾಡಿಕೊಳ್ಳುವಂತಾಗಬೇಕು. ಇಂತಹ ಸಾಧ್ಯತೆಗಳನ್ನು ‘ನಾವು...’ ನಾಟಕವು ಒಳಗೊಂಡಿದೆ.
20ನೇ ಶತಮಾನದಲ್ಲಿ ಜರ್ಮನಿಯ ಬರ್ಟೋಲ್ಟ್ ಬ್ರೆಕ್ಟ್‌ನಿಂದಾಗಿ ಎಪಿಕ್ ಥಿಯೇಟರ್ ಪರಿಕಲ್ಪನೆ ಹೆಚ್ಚು ಜನಪ್ರಿಯವಾಯಿತು. ಬ್ರೆಕ್ಟ್‌ಗೆ ರಂಗಭೂಮಿ ಜನಸಾಮಾನ್ಯರ ರಾಜಕೀಯ ಶಿಕ್ಷಣಕ್ಕೆ ಸಾಧನವಾಗಿ ಕಂಡಿತ್ತು. ಭಾವೋದ್ವೇಗದಲ್ಲಿ ಮನುಷ್ಯ ತನ್ನ ವಿವೇಚನಾಶಕ್ತಿಯನ್ನು ಕಳೆದುಕೊಳ್ಳುತ್ತಾನೆ ಎಂದು ತಿಳಿದಿದ್ದ ಬ್ರೆಕ್ಟ್ ತನ್ನ ಏಲಿನಿಯೇಷನ್ ಸಿದ್ಧಾಂತಕ್ಕೆ ಒಂದು ಸ್ವರೂಪವನ್ನು ಕೊಡುವುದಾಗಿ ಹಲವಾರು ಪ್ರಯೋಗಗಳನ್ನು ಮಾಡುತ್ತಾನೆ. ಅಂಥದ್ದೇ ಒಂದು ಪ್ರಯೋಗವನ್ನು ಈ ನಾಟಕದಲ್ಲೂ ಕಾಣಬಹುದು. ಎಲ್ಲಾ ಕಲಾವಿದರು ತಮ್ಮ ಪಾತ್ರಗಳನ್ನು ಸಹಜವಾಗಿ ಮನಮುಟ್ಟುವಂತೆ ನಟಿಸಿದ್ದಾರೆ. ಪಾತ್ರಧಾರಿಗಳು ಒಂದು ಕ್ಷಣ ಒಂದು ಮುದ್ದಾದ ಸಣ್ಣ ರೈತ ಕುಟುಂಬದಂತೆ ಪ್ರೇಕ್ಷಕರ ಮನಸ್ಸಿನಲ್ಲಿ ನೆಲೆಸಿದರೆ, ಮರುಕ್ಷಣ ಅವರು ಕೇವಲ ನಟರಾಗಿ ಪಾತ್ರಗಳ ಅಂತರಾಳವನ್ನು ವಿಮರ್ಶಾತ್ಮಕವಾಗಿ ಬಯಲುಗೊಳಿಸುತ್ತಾರೆ. ದೃಶ್ಯಗಳ ನಡುವೆ ನೈಜ ಸಾಕ್ಷ್ಯಚಿತ್ರಗಳ ತುಣುಕುಗಳನ್ನು ತೆರೆಯ ಮೇಲೆ ತೋರಿಸಿ, ಇದು ಕೇವಲ ಕಥೆಯಲ್ಲ, ನಮ್ಮ ನಿಮ್ಮೆಲ್ಲರ ಜೀವನ ಎಂದು ನಮ್ಮನ್ನು ಮತ್ತೆ ಮತ್ತೆ ಎಚ್ಚರಿಸುತ್ತಾರೆ. ಮಂಜು ನಾರಾಯಣ್ ಅವರ ಬೆಳಕಿನ ವಿನ್ಯಾಸ ಪೂರಕವಾಗಿದ್ದು ಕೊನೆಯ ದೃಶ್ಯದಲ್ಲಿ ಸಶಕ್ತವಾಗಿ ಮೂಡಿಬಂದಿದೆ. ಪ್ರಸನ್ನ ಎಂ.ಎಸ್. ಅವರ ಸಂಗೀತ ಸಂಯೋಜನೆ ಅಚ್ಚುಕಟ್ಟಾಗಿದೆ. ದೈಹಿಕ ರಂಗಭೂಮಿಯ ಬಳಕೆ ಈ ನಾಟಕದ ಪ್ರಸ್ತುತಿಯನ್ನು ಉನ್ನತ ಮಟ್ಟಕ್ಕೆ ಒಯ್ದಿದೆ. ಇಲ್ಲಿನ ಸಂಕೇತಗಳ ಬಳಕೆ ನಿಜಕ್ಕೂ ಪ್ರೇಕ್ಷಕರ ಮನದಲ್ಲಿ ದೀರ್ಘಕಾಲ ಉಳಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.