ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಪ್ರತಿಭೆಯ ‘ರಂಗ’ ಗುರುತುಗಳು

ವಿಶ್ವ ರಂಗಭೂಮಿ ದಿನ ಇಂದು– ಗ್ರಾಮೀಣ ಭಾಗದಲ್ಲಿ ಅರಳುತ್ತಿರುವ ಪ್ರತಿಭೆ
Last Updated 27 ಮಾರ್ಚ್ 2021, 5:21 IST
ಅಕ್ಷರ ಗಾತ್ರ

ಮುಂಡರಗಿ: ತಾಲ್ಲೂಕಿನ ಮಕ್ತುಂಪುರ ಗ್ರಾಮದ ಶಿವಪ್ಪ ಕೊಟ್ರಪ್ಪ ವಾಲಿಕಾರ ಎಂಬ 34 ವರ್ಷದ ಯುವಕ ರಂಗಭೂಮಿಯಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸುವ ಮೂಲಕ ರಂಗಪ್ರಿಯರ ಗಮನ ಸೆಳೆದಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಸಾಮಾಜಿಕ, ಪೌರಾಣಿಕ ಹಾಗೂ ಐತಿಹಾಸಿಕ ಕಥಾ ಹಂದರಗಳುಳ್ಳ 20 ಅಧಿಕ ನಾಟಕಗಳನ್ನು ನಿರ್ದೇಶಿಸುವ ಮೂಲಕ ಕಲಾಭಿಮಾನಿಗಳ ಮನ ಗೆದ್ದಿದ್ದಾರೆ.

ಯಾವುದೇ ರಂಗ ತರಬೇತಿ ಇಲ್ಲದೇ ಸ್ವ ಆಸಕ್ತಿಯಿಂದ ಅವರು 15 ನಾಟಕಗಳಲ್ಲಿ ಸ್ತ್ರೀ ಪಾತ್ರ ಸೇರಿದಂತೆ ಹಲವಾರು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆ ಮೂಲಕ ಅವರು ಪಾತ್ರಕ್ಕೂ ಸೈ, ನಿರ್ದೇಶನಕ್ಕೂ ಸೈ ಎನಿಸಿಕೊಂಡಿದ್ದಾರೆ.

ಶಿವಪ್ಪ ಅವರು ಅಚ್ಚುಕಟ್ಟಾಗಿ ನಾಟಕಗಳನ್ನು ನಿರ್ದೇಶಿಸುವುದರಿಂದ ಅವರಿಗೆ ಬೇಡಿಕೆ ಹೆಚ್ಚಿದೆ. ಧಾರವಾಡ, ಕೊಪ್ಪಳ, ಹಾವೇರಿ, ಸಿಂಧನೂರು, ಗದಗ ಮೊದಲಾದ ಕಡೆಗಳಲ್ಲಿ ಅವರು ಹವ್ಯಾಸಿ ಹಾಗೂ ವೃತ್ತಿ ನಾಟಕಗಳನ್ನು ನಿರ್ದೇಶಿಸಿದ್ದಾರೆ.

ಶಿವಪ್ಪ ಅವರ ತಂದೆ ಕೊಟ್ರಪ್ಪ ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದರು. ಜತೆಗೆ ಭಜನೆಗಳನ್ನು ಹಾಡುತ್ತಿದ್ದರು. ಹೀಗಾಗಿ ಶಿವಪ್ಪ ಅವರಿಗೆ ಬಾಲ್ಯದಲ್ಲಿಯೇ ನಾಟಕ, ಹಾರ್ಮೋನಿಯಂ, ತಬಲಾ ಮೊದಲಾದವುಗಳ ಗೀಳು ಹಿಡಿಯಿತು. ನಂತರ ಗ್ರಾಮದ ದುರುಗಪ್ಪ ತಿಪ್ಪಣ್ಣವರ ಮಾಸ್ತರ ಹಾಗೂ ಮಳ್ಳಪ್ಪ ಗುಡಸಲಮನಿ ಮಾಸ್ತರ ಅವರ ಮಾರ್ಗದರ್ಶನದಲ್ಲಿ ಹಾರ್ಮೋನಿಯಂ ಕಲಿತು ಪೂರ್ಣಾವಧಿ ನಿರ್ದೇಶಕರಾದರು.

‘ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ್‌’, ‘ಸಾವು ತಂದ ಸೌಭಾಗ್ಯ’, ‘ಸತ್ಯವೆಲ್ಲಿದೆ ಕೈ ಎತ್ತಿ ಹೇಳಿ?’, ‘ಕಾಲು ಕೆದರಿದ ಹುಲಿ’, ‘ಇಂದ್ರಕೀಲ ವಿರಾಟ ಪರ್ವ’ (ದೊಡ್ಡಾಟ) ಮೊದಲಾದವುಗಳನ್ನು ನಿರ್ದೇಶಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ. ದೊಡ್ಡಾಟದಲ್ಲಿ ಜನ ಮೆಚ್ಚುವಂತೆ ಸ್ತ್ರೀ ಪಾತ್ರ ನಿರ್ವಹಿಸಿದ್ದಾರೆ.

ಅವರ ರಂಗಭೂಮಿ ಕಲೆಯನ್ನು ಕಂಡು ವಿವಿಧ ಸಂಘ ಸಂಸ್ಥೆಗಳು, ಮಠ ಮಾನ್ಯಗಳು ಅವರಿಗೆ ‘ರಂಗಭೂಮಿ ಕಲಾರತ್ನ’, ‘ಕಲಾವಿಭೂಷಣ’, ‘ಕಾಯಕ ಕಲಾಭೂಷಣ’, ‘ಪುಟ್ಟರಾಜ ಪುರಸ್ಕಾರ’, ‘ಮೃಡಗಿರಿ ರತ್ನ’, ‘ಸಿರಿಗನ್ನಡ ರಂಗಭೂಮಿ ಕಲಾರತ್ನ’ ಮೊದಲಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಡೆಸುವ ಜಾನಪದ ಸಂತೆ, ಗಿರಿಜನೋತ್ಸವ, ಸುಗ್ಗಿ ಹುಗ್ಗಿ, ಯುವ ಸೌರಭ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಗೂ ನಾಡಿನ ವಿವಿಧ ಉತ್ಸವಗಳಲ್ಲಿ ಶಿವು ಅವರು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

***

ನಾಟಕ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಛಲವಿದೆ. ರಂಗಭೂಮಿ ಕಲಾವಿದರ ಮಾರ್ಗದರ್ಶನದಲ್ಲಿ ಅದಕ್ಕೆ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ.

- ಶಿವಪ್ಪ ವಾಲಿಕಾರ, ರಂಗ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT