ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗರೂಪ ವಿಮರ್ಶೆ: ಸಂವಿಧಾನ ಅನುಷ್ಠಾನವೇ 'ಧನ್ವಂತರಿ ಚಿಕಿತ್ಸೆ'

ಪ್ರೊ. ವಿ. ಚಂದ್ರಶೇಖರ ನಂಗಲಿ
Published 11 ಏಪ್ರಿಲ್ 2024, 10:39 IST
Last Updated 11 ಏಪ್ರಿಲ್ 2024, 10:39 IST
ಅಕ್ಷರ ಗಾತ್ರ

ರಂಗರೂಪಕ (ನಾಟಕ): ಧನ್ವಂತರಿ ಚಿಕಿತ್ಸೆ
ಮೂಲ ಕಥನ: ಕುವೆಂಪು
ರಂಗರೂಪ ಮತ್ತು ನಿರ್ದೇಶನ: ಡಾ. ಎಂ. ಬೈರಪ್ಪ ಕುಪ್ನಳ್ಳಿ
ರಂಗರೂಪ ವಿಮರ್ಶೆ: ವಿಮರ್ಶಕ ಪ್ರೊ.ಚಂದ್ರಶೇಖರ ವಿ. ನಂಗಲಿ

ಪ್ರಸ್ತುತಿ..

ಕಾಲೇಜು ರಂಗಭೂಮಿ; ಕನ್ನಡ ವಿಭಾಗದ ರಂಗಾಂತರಂಗ ತಂಡ
ಕ್ರಿಸ್ತು ಜಯಂತಿ ಕಾಲೇಜು, ಬೆಂಗಳೂರು.

ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜು, ಕನ್ನಡ ವಿಭಾಗದ ವಿದ್ಯಾರ್ಥಿ ಬಳಗದ 'ರಂಗಾಂತರಂಗ‘ ತಂಡದಿಂದ ಪ್ರದರ್ಶಿತವಾದ ರಂಗರೂಪ ‘ಧನ್ವಂತರಿ ಚಿಕಿತ್ಸೆ‘! ಕುವೆಂಪು ಬರೆದ ಸ್ವಾತಂತ್ರ‍್ಯ ಪೂರ್ವದ ಸಣ್ಣಕತೆಯನ್ನು ಆಧರಿಸಿದ ನಾಟಕವಿದು. ಕುವೆಂಪು ಅವರು ರಂಗನಾಟಕದ ವಿರೋಧಿ ಮಾತುಗಳನ್ನು ‘ಶೂದ್ರ ತಪಸ್ವಿ‘ ನಾಟಕದ ಮುನ್ನುಡಿಯಲ್ಲಿ ಆಡಿದ್ದಾರೆ. ಮನೋರಂಗಭೂಮಿಯ ಪ್ರಬಲ ಪ್ರತಿಪಾದನೆ ಮಾಡುವ ಕುವೆಂಪು ಅವರ ಸಮಗ್ರ ಸಾಹಿತ್ಯವೇ ನಮಗೆ ಇಂದು ರಂಗನಾಟಕದ ಆಕರಗಳಾಗಿವೆ. ಈ ದಿಸೆಯಲ್ಲಿ ‘ಧನ್ವಂತರಿ ಚಿಕಿತ್ಸೆ‘ ಸಣ್ಣಕತೆಯು ರಂಗರೂಪ ಪಡೆದಿದೆ ಎಂಬುದು ಗಮನಾರ್ಹ ಸಂಗತಿ.

ಪೌರಾಣಿಕ ಮತ್ತು ಸಾಮಾಜಿಕ ಫ್ಯಾಂಟಸಿಯನ್ನು ಒಳಗೊಂಡಿರುವ ಧನ್ವಂತರಿಯ ಚಿಕಿತ್ಸೆ ಎಂಬ ಸಣ್ಣಕತೆಯು ಯಥಾವತ್ತಾಗಿ ರಂಗನಾಟಕವಾಗಲು ಸಾಧ್ಯವಿಲ್ಲ. ಇದನ್ನು ಮುರಿದು ಯಥೋಚಿತ ಸೇರ್ಪಡೆಗಳ ಮೂಲಕ ರಂಗ ರೂಪಕ್ಕೆ ತರುವ ಸವಾಲ್ ಜವಾಬ್ ಎದುರಿಸಬೇಕಾಗುತ್ತದೆ.

ಮನೋರಂಗಭೂಮಿಯಿಂದ ಕಾಲೇಜು ರಂಗಭೂಮಿಗೆ ಬಂದ ಕುವೆಂಪು ಅವರ ‘ಧನ್ವಂತರಿಯ ಚಿಕಿತ್ಸೆ‘ಯನ್ನು ರಂಗರೂಪಕ್ಕೆ ತಂದು ನಿರ್ದೇಶನ ಮಾಡಿರುವ ಡಾ.ಎಂ.ಬೈರಪ್ಪ ಕುಪ್ನಳ್ಳಿ ಅವರು ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗದ ಅಧ್ಯಾಪಕರು.

‘ಧನ್ವಂತರಿ ಚಿಕಿತ್ಸೆ‘ ನಾಟಕದ ದೃಶ್ಯ

‘ಧನ್ವಂತರಿ ಚಿಕಿತ್ಸೆ‘ ನಾಟಕದ ದೃಶ್ಯ

ಪ್ರಸ್ತುತ ರಂಗರೂಪದ ಆರಂಭದಲ್ಲಿ ಜ್ಯೋತಮ್ಮಗಳ ಮೂಲಕ ಭೂಮಿತಾಯಿಯ ಪ್ರಾರ್ಥನಾ ಗೀತೆಯನ್ನು ಅಳವಡಿಸಿದ ಬೈರಪ್ಪ ಅವರು ಭೂಮಿತಾಯಿ ಚೊಚ್ಚಿಲ ಮಗನಿಗೆ ತಕ್ಕ ತಾತ್ವಿಕ ಪ್ರವೇಶ ಒದಗಿಸಿದ್ದಾರೆ. ಕುವೆಂಪು ಅವರ ಪ್ರಸಿದ್ಧ ಕವಿತೆಗಳಾದ 1) ಬಾ ಇಲ್ಲಿ ಸಂಭವಿಸು ಸತ್ಯಾವತಾರ ಮತ್ತು 2) ಉಳುವ ಯೋಗಿಯ ನೋಡಲ್ಲಿ ಎಂಬ ಹಾಡುಗಳನ್ನು ಅರ್ಥಪೂರ್ಣವಾಗಿ ಸಂಯೋಜನೆ ಮಾಡಿದ್ದಾರೆ. ಜೊತೆಗೆ ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಹಾಡಿದ ‘ಎಲ್ಲಿ ಹೋದವೋ....‘ ಎಂಬ ಜೀವಕೇಂದ್ರಿತ ಹಸಿರು ಹಾಡನ್ನು ಸೇರಿಸಿ ಈ ರಂಗರೂಪದ ಧ್ವನಿ ಶಕ್ತಿಯನ್ನು ಹೆಚ್ಚಿಸಿದ್ದಾರೆ. ರೈತ ರೋದನದ ಗೋಳಿನ ನೀಳ್ದನಿಯನ್ನು ತಪ್ಪಿಸಲು, ಬಾಬಾಸಾಹೇಬ್ ಅಂಬೇಡ್ಕರ್ ರೂಪಿಸಿದ ಭಾರತದೇಶದ ಸಂವಿಧಾನದ ಅನುಷ್ಠಾನವೇ ಸೂಕ್ತಮಾರ್ಗ ಎಂಬುದನ್ನು ಎತ್ತಿ ಹಿಡಿದು ಇದೇ ನಿಜವಾದ ಧನ್ವಂತರಿ ಚಿಕಿತ್ಸೆ ಎಂದು ಸೂಚಿಸಿದ್ದಾರೆ.

ರೈತ ರೋದನದ ಕಥಾವಸ್ತುವನ್ನು (ಪೌರಾಣಿಕ ಮತ್ತು ಸಾಮಾಜಿಕ ಫ್ಯಾಂಟಸಿಯ ಮೂಲಕ ಶೋಕವಿಸ್ಮಯದ ಕಥನ ಕಲೆ) ಹೊಂದಿರುವ ಈ ಸಣ್ಣಕತೆ ಎಂದೆಂದಿಗೂ ನಿತ್ಯಪ್ರಸ್ತುತವಾಗಿದೆ. ಎಲ್ಲಾ ಕಾಲ ದೇಶಗಳಲ್ಲಿ ಸಕಲ ಸಾಮ್ರಾಜ್ಯಗಳ ಭಾರವನ್ನು ಹೊತ್ತು ನಲುಗಿ ಹೋಗುತ್ತಿರುವ ರೈತಾಪಿ ಬದುಕಿನ ಬವಣೆ ನಾಟಕೀಯ ತಿರುವುಗಳಿಂದ ಕೂಡಿದ್ದು ರಂಗರೂಪಕ್ಕೆ ತಕ್ಕ ರೀತಿಯಲ್ಲಿದೆ. ಪೌರಾಣಿಕ ಮತ್ತು ಸಾಮಾಜಿಕ ಫ್ಯಾಂಟಸಿ ಕೇಂದ್ರಿತ ಸಣ್ಣ ಕತೆಯನ್ನು ರಂಗರೂಪಕ್ಕೆ ತರುವಾಗ ಅನೌಚಿತ್ಯಕ್ಕೆ ಎಡೆ ಕೊಡದಂತೆ ಎಚ್ಚರ ವಹಿಸಿರುವುದು ಮೆಚ್ಚುಗೆಯನ್ನು ಪಡೆಯುತ್ತದೆ.

ರೂಪಕ ಭಾಷೆಯಲ್ಲಿ ಹೇಳುವುದಾದರೆ, ಸಣ್ಣಕತೆ ಎಂಬ ಕಂಬಳಿ ಹುಳು ರಂಗರೂಪಕ್ಕೆ ಬಂದು ಬಣ್ಣದ ಚಿಟ್ಟೆಯಾಗಿದೆ ಎನ್ನಬಹುದು. ನಲವತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಒಳಗೊಂಡಿರುವ ಈ ರಂಗರೂಪದ ಅಳವಡಿಕೆ ಎಲ್ಲೂ ಬೋರ್ ಹೊಡೆಯುವುದಿಲ್ಲ. ದೇವಲೋಕದಲ್ಲಿದ್ದ ವಿಶ್ವಾಮಿತ್ರ ಮಹರ್ಷಿ ಭೂಲೋಕಕ್ಕೆ ಬಂದಾಗ ‘ಶ್ರೀ ಸಾಮಾನ್ಯನೇ ಭಗವನ್ ಮಾನ್ಯಂ‘ ಎಂಬ ಕುವೆಂಪು ನೀತಿಯಂತೆ ಸಾಮಾಜಿಕ ವೇಷದಲ್ಲಿ ಕಾಣಿಸಿ ಕೊಳ್ಳುವುದು ಸರಿಯಾಗಿದೆ. ಕತೆಯಲ್ಲಿ ಇಲ್ಲದ ರೈತನ ಹೆಂಡತಿ, ತಾಯಾದ ಅಜ್ಜಿ, ರೈತನ ಮಗಳು, ಮಾಮೂಲು ವೈದ್ಯ, ಮಹಾಮಾಂತ್ರಿಕ, ಶಿಷ್ಯ ನಕ್ಷತ್ರಿಕ, ರಾಜಕಾರಣಿ, ಪೊಲೀಸ್ ಅಧಿಕಾರಿ ಮುಂತಾದ ಯಥೋಚಿತ ಪಾತ್ರಕಲ್ಪನೆ ಮಾಡಿ ಕುವೆಂಪು ಆಶಯಕ್ಕೆ ಭಂಗ ಬಾರದಂತೆ ನಿರ್ವಹಣೆ ಮಾಡಿದ ಬೈರಪ್ಪನವರ ನಿರ್ದೇಶನ ಯಶಸ್ವಿಯಾದ ಪ್ರಯೋಗವಾಗಿದೆ. ಜಾತಿ ವಿವಾದದ ಸಾಮಾಜಿಕ ಸಂಘರ್ಷಕ್ಕೆ ಎಡೆಗೊಡುವ ಪರಶುರಾಮನ ಪಾತ್ರವನ್ನು ಕೈ ಬಿಟ್ಟಿರುವುದು ಉಚಿತವಾಗಿದೆ.

ಕುವೆಂಪು ಅವರ ‘ಧನ್ವಂತರಿಯ ಚಿಕಿತ್ಸೆ‘ ನಮ್ಮ ದೇಶದ ಸಂವಿಧಾನ ಮಂಡನೆಗೂ ಮುಂಚೆಯೇ ಬಂದ ಸಣ್ಣಕತೆ. ಕುವೆಂಪು ಅವರ ಸಮಗ್ರ ಸಾಹಿತ್ಯಕ್ಕೂ ಭಾರತದೇಶದ ಸಂವಿಧಾನಕ್ಕೂ ತಾಯಿ-ಮಗು ಸಂಬಂಧವಿದೆ. ಇದನ್ನು ಗ್ರಹಿಸಿ, ಸಂವಿಧಾನ ಪೀಠಿಕೆಯನ್ನು ದೃಶ್ಯೀಕರಿಸಿರುವ ಬಗೆ ಮನ ಸೆಳೆಯುತ್ತದೆ. ‘ಸಂವಿಧಾನ ರಕ್ಷತೀ ರಕ್ಷಿತ‘ ಮತ್ತು ‘ರೈತ ರಕ್ಷತೀ ರಕ್ಷಿತಃ‘ ಎಂಬ ಪ್ಲೆಕಾರ್ಡುಗಳನ್ನು ಕೈಯಲ್ಲಿ ಹಿಡಿದುಕೊಂಡು ಕಾಣಿಸಿಕೊಳ್ಳುವ ಪಾತ್ರಗಳು ಗಮನಾರ್ಹ.

ಒಟ್ಟಿನಲ್ಲಿ ಐನೂರಕ್ಕೂ ಹೆಚ್ಚು ಮಂದಿ ಕುಳಿತುಕೊಳ್ಳುವಂತೆ ರೂಪಿಸಿರುವ ಕ್ರಿಸ್ತು ಜಯಂತಿ ಕಾಲೇಜಿನ ಎಸ್.ಕೆ.ಇ ಆಡಿಟೋರಿಯಂನಲ್ಲಿ ಯುವಶಕ್ತಿಯನ್ನು ಒಳಗೊಂಡ ಈ ರಂಗರೂಪವನ್ನು ನಾನು ನೋಡಿ ಇಷ್ಟ ಪಟ್ಟಿದ್ದೇನೆ. ಇದು ಕಾಲೇಜು ರಂಗಭೂಮಿಯಲ್ಲಿ ಮಾತ್ರವಲ್ಲದೇ ನಾಡಿನಾದ್ಯಂತ ಪ್ರದರ್ಶನಗೊಳ್ಳಲಿ ಎಂದು ಹಾರೈಸುತ್ತೇನೆ. ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗದ ರಂಗಾಂತರಂಗ ತಂಡದ ಮೂಲಕ ಪ್ರಸ್ತುತಪಡಿಸಿದ ಡಾ.ಎಂ.ಬೈರಪ್ಪ ಕುಪ್ನಳ್ಳಿ ಅವರಿಗೆ ಮತ್ತು ಬೆಂಬಲವಾಗಿರುವ ಕನ್ನಡ ವಿಭಾಗದ ಬೋಧಕ ವರ್ಗ ಮತ್ತು ಪ್ರೋತ್ಸಾಹ ನೀಡುತ್ತಿರುವ ಆಡಳಿತ ವರ್ಗಕ್ಕೆ ಹಾಗೂ ಅಭಿನಯಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಮತ್ತು ಶುಭಹಾರೈಕೆಗಳು.

‘ಧನ್ವಂತರಿ ಚಿಕಿತ್ಸೆ‘ ನಾಟಕದ ದೃಶ್ಯ

‘ಧನ್ವಂತರಿ ಚಿಕಿತ್ಸೆ‘ ನಾಟಕದ ದೃಶ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT