ಗಂಡಿನ ದೇಹದಲ್ಲಿ ಹೆಣ್ಮನ ಹೊಂದುವ ಪ್ರಕೃತಿಯ ವೈಚಿತ್ರ್ಯಕ್ಕೆ ಬಲಿಯಾದವರ ಬವಣೆಗಳ ಬಗ್ಗೆ ಅನಾದಿ ಕಾಲದಿಂದಲೂ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ ಅವೆಲ್ಲವೂ ತೆರೆಮರೆಯ ಚರ್ಚೆಗಳು. ವ್ಯಂಗ್ಯಕ್ಕೆ, ಹಾಸ್ಯಕ್ಕೆ, ಆಶೀರ್ವಾದಕ್ಕೆ, ಆಚರಣೆಗೆ ಸರಕಾಗಿದ್ದವರ ಬದುಕು ಸದಾ ಬಟಾ ಬಯಲು. ಬರೀ ಸವಾಲುಗಳನ್ನೇ ತುಂಬಿಕೊಂಡಿರುವ ಲೈಂಗಿಕ ಅಲ್ಪಸಂಖ್ಯಾತರ ಜೀವನದ ವೈಪರೀತ್ಯಗಳನ್ನು ರಂಗದ ಮೇಲೆ ತರುವ ಪ್ರಯತ್ನವೇ `ಬದುಕು ಬಯಲು' ನಾಟಕ.

ಬದುಕಿನುದ್ದಕ್ಕೂ ಇರುವ ಸವಾಲುಗಳನ್ನು ಮೆಟ್ಟಿ ನಿಂತ ಲೈಂಗಿಕ ಅಲ್ಪಸಂಖ್ಯಾತೆ ಎ.ರೇವತಿ ಅವರ `ಬದುಕು ಬಯಲು' ಆತ್ಮಚರಿತ್ರೆ ಆಧರಿಸಿದ ರಂಗರೂಪದ ಐವತ್ತನೇ ಪ್ರದರ್ಶನ ಈಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಎಂ. ಗಣೇಶ ಹೆಗ್ಗೋಡು ಅವರ ನಿರ್ದೇಶನದಲ್ಲಿ ಜನಮನದಾಟ ರಂಗ ತಂಡದ ನಟರು ಲೈಂಗಿಕ ಅಲ್ಪಸಂಖ್ಯಾತರ ಬದುಕಿನ ಸೂಕ್ಷ್ಮಗಳನ್ನು ತೆರೆಯ ಮೇಲೆ ತರುವಲ್ಲಿ ಯಶಸ್ವಿಯಾದರು.

ಯಾತನೆಯೇ ಕತೆ
ತಮಿಳುನಾಡಿನ ಸೇಲಂನ ಶ್ರೀಮಂತರ ಮನೆಯ ಮಾಲೀಕನ ಕಿರಿಯ ಮಗನಾಗಿ ಜನಿಸುವ ದೊರೈಸಾಮಿ, ಎ.ರೇವತಿಯಾಗುವ ಯಾತನಾಮಯವಾದ ಕಥನವೇ ನಾಟಕದ ತಿರುಳು. ಗಂಡಾಗಿ ಹುಟ್ಟಿ ಹೆಣ್ಣಾಗಿ ಪರಿವರ್ತನೆಯಾಗುವ ಅದೆಷ್ಟು ಲೈಂಗಿಕ ಅಲ್ಪಸಂಖ್ಯಾತರು ಅನುಭವಿಸುವ ಅವಮಾನ, ಸಾಮಾಜಿಕ ತಾರತಮ್ಯ, ದೈಹಿಕ ಮತ್ತು ಮಾನಸಿಕ ಹಿಂಸೆಯ ರೂಪಕವಾಗಿ ರೇವತಿಯ ಪಾತ್ರ ವಿಸ್ತರಣೆಯಾಗುತ್ತಾ ಹೋಗುತ್ತದೆ.

ಹೆಣ್ಣಿನ ದೇಹವಾಗಿ ಪರಿವರ್ತನೆಯಾಗುವ ರೇವತಿ ನಾಚಿಕೆ, ಒನಪು, ವಯ್ಯಾರದಿಂದಲೇ ತನ್ನ ಹಳೆಯ ವೃತ್ತಾಂತವನ್ನು, ಅನುಭವಿಸಿದ ನರಕವನ್ನು ಕಟ್ಟಿಕೊಡುತ್ತಾ ಹೋಗುತ್ತಾಳೆ. ಅತ್ತ ಹೆಣ್ಣಿನ ರೂಪ ಹೊಂದಿರುವ ರೇವತಿ ಮತ್ತು ಇತ್ತ ಹೆಣ್ಣಿನ ಸ್ವಭಾವದ ದೊರೈಸಾಮಿ ಪಾತ್ರಗಳು ಮುಖಾಮುಖಿಯಾಗುತ್ತಲೇ ಅರ್ಧನಾರೀಶ್ವರ ಕಲ್ಪನೆಯೊಂದು ರಂಗದ ಮೇಲೆ ಮೂಡುತ್ತದೆ.

ಸ್ತ್ರೀ ಸ್ವಭಾವಗಳನ್ನು, `ಆಕೆ'ಯ ಭಾವನೆಗಳನ್ನು ಅದುಮಿಡಲಾರದೆ ಮನೆಯವರಿಂದ ಏಟು ತಿನ್ನುವ ದೊರೈಸ್ವಾಮಿ `ಅಂಬಾ' ಎನ್ನುವ ಮಂಗಳಮುಖಿಯ ಸಹಾಯದಿಂದ ದೆಹಲಿಗೆ ತೆರಳಿ ಲಿಂಗ ಪರಿವರ್ತನೆಯ ಶಸ್ತ್ರಚಿಕಿತ್ಸೆಗೂ ಒಳಗಾಗುತ್ತಾನೆ. ಇದರ ನಡುವೆ ತನ್ನವರು ಭಿಕ್ಷಾಟನೆಗೆ, ಲೈಂಗಿಕ ವೃತ್ತಿಗೆ ಮಾತ್ರ ಅಂಟಿಕೊಂಡಿರುವುದು ಯಾಕೆ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಮುಂದಾಗುತ್ತಾಳೆ.

ರಾಮಾಯಣದಲ್ಲಿ!
ಈ ಮಧ್ಯೆ ರಾಮಾಯಣದ ಕತೆಯ ಎಳೆಯೊಂದನ್ನು ತರಲಾಗಿದೆ. ರಾಮನನ್ನು ಕಾಡಿಗೆ ಬೀಳ್ಕೊಡುವ ಸಂದರ್ಭದಲ್ಲಿ ರಾಮನ ಅಣತಿಯಂತೆ ಊರಿನ ಪುರುಷ ಹಾಗೂ ಮಹಿಳಾ ವರ್ಗ ಹಿಂತಿರುಗುತ್ತಾರೆ. ಆದರೆ ಪುರುಷನೂ ಅಲ್ಲದ ಮಹಿಳೆಯೂ ಅಲ್ಲದ ಒಂದು ವರ್ಗ ಮಾತ್ರ ರಾಮ ಹಿಂತಿರುಗಿ ಬರುವವರೆಗೂ ಕಾದು ನಿಲ್ಲುತ್ತಾರೆ. ಅಲ್ಲೇ ಬೀಡುಬಿಟ್ಟ ಇವರನ್ನು ಕಂಡು ಆಶ್ಚರ್ಯಗೊಳ್ಳುವ ರಾಮ `ಆಡುವ ಮಾತುಗಳೆಲ್ಲವೂ ನಿಜವಾಗಲಿ' ಎಂದು ಆಶೀರ್ವಾದ ಮಾಡುತ್ತಾನೆ. ಈ ಮೂಲಕ ಲೈಂಗಿಕ ಅಲ್ಪಸಂಖ್ಯಾತರ ಅಸ್ತಿತ್ವ ಪುರಾಣದಲ್ಲೂ ಇದೆ ಎಂಬ ಅಂಶವನ್ನು ನಿರ್ದೇಶಕರು ಪ್ರೇಕ್ಷಕರಿಗೆ ರವಾನಿಸುತ್ತಾರೆ.

ಕಾಡುವ ಲೈಂಗಿಕ ಅಭೀಪ್ಸೆಗಳನ್ನು ಅದುಮಿಡಲಾರದೆ ರೇವತಿ ತಾನಾಗಿಯೇ ಲೈಂಗಿಕ ವೃತ್ತಿಯ ಕೂಪಕ್ಕೆ ಬೀಳುತ್ತಾಳೆ. ಅಲ್ಲಿನ ಕ್ರೌರ್ಯದಿಂದ ನಲುಗಿ ಮನೆಗೆ ಮರಳುತ್ತಾಳೆ. ಅಮ್ಮ, ಅಣ್ಣಂದಿರೂ ದೊರೈಸಾಮಿಯನ್ನು ರೇವತಿಯಾಗಿ ಕಾಣಲು ವಿರೋಧಿಸುತ್ತಾರಾದರೂ ಅಪ್ಪ ಮಾತ್ರ `ಇವನು ದೇವರಿಗೆ ಹತ್ತಿರನಾದವನು' ಎಂದು ಒಪ್ಪಿಕೊಳ್ಳಲು ಅನುವಾಗುತ್ತಾರೆ.

ದೈಹಿಕ ಬದಲಾವಣೆಯ ನಂತರವೂ ಅಣ್ಣಂದಿರ, ನೆರಮನೆಯವರ ಮಾನಸಿಕ ಹಾಗೂ ದೈಹಿಕ ಹಿಂಸೆಗಳ ನಡುವೆಯೇ ರೇವತಿ ಕೆಲಕಾಲ ಅಲ್ಲಿಯೇ ತಂಗುತ್ತಾಳೆ. ಆಸ್ತಿ ಪಡೆದುಕೊಳ್ಳಲು `ಒಂದು ದಿನದ ಮಟ್ಟಿಗೆ ಗಂಡಾಗು' ಎಂಬ ವಕೀಲರ ಮಾತನ್ನು ವಿರೋಧಿಸುವ ರೇವತಿ `ಜೀವನಪರ್ಯಂತ ಹೆಣ್ಣಾಗಿಯೇ ಇದ್ದು ಹೆಣ್ಣಾಗಿಯೇ ಸಾಯಬೇಕೆಂದಿರುವೆ. ಆಸ್ತಿಗೋಸ್ಕರ ಒಂದು ದಿನದ ಮಟ್ಟಿಗೆ ಹೆಣ್ಣಾಗಲಾರೆ' ಎಂಬ ದಿಟ್ಟತನದ ಮಾತಾಡುತ್ತಾಳೆ.

ಕೊನೆಗೆ ಬೆಂಗಳೂರೆಂಬ ಮಾಯಾನಗರಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆಂದು ಹುಟ್ಟಿರುವ `ಸಂಗಮ' ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ಜೀವನದಲ್ಲಿ ಸಂತೃಪ್ತಿ ಕಾಣುತ್ತಾಳೆ. ಪ್ರೀತಿಯಿಂದ ಸಾಕಿ ಬೆಳೆಸಿದ ಗಂಡು ಮಕ್ಕಳ ಮೋಸಕ್ಕಿಂತ, ಅವಮಾನಿಸಿದರೂ ಗಂಡಾಗಿ, ಹೆಣ್ಣಾದ ರೇವತಿಯೇ ನನ್ನ ಪಾಲಿನ ದೇವರು ಎಂದು ವೃದ್ಧ ತಂದೆ ಹೇಳುವಲ್ಲಿಗೆ ನಾಟಕ ಕೊನೆಗೊಳ್ಳುತ್ತದೆ.

ಶಸ್ತ್ರಚಿಕಿತ್ಸೆಯ ವೇಳೆಯಲ್ಲಿ ಅನುಭವಿಸುವ ಯಾತನೆ, ಮಾರಿ ಹಬ್ಬದಲ್ಲಿ ಹೆಣ್ಣಿನ ವೇಷ ತೊಟ್ಟು ನರ್ತಿಸುವ ಸಂದರ್ಭದಲ್ಲಿ ದೊರೈಸಾಮಿಯಲ್ಲಿ ಬದಲಾಗುವ ಹಾವಭಾವ, ಮುಖ ಚಹರೆ, ನಿರಂತರವಾಗಿ ನಡೆಯುವ ಪೊಲೀಸ್ ದೌರ್ಜನ್ಯಗಳನ್ನು ನಿರ್ದೇಶಕರು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಸಂಗೀತ ಹಾಗೂ ಭಾವಾಭಿನಯಕ್ಕೆ ಇನ್ನಷ್ಟು ಒತ್ತು ನೀಡಿ ಕೌಶಲವನ್ನು ಮೆರೆಯಬಹುದಿತ್ತು. ಸಂಭಾಷಣೆಗೆ ತುಸು ಹರಿತ ನೀಡಿ, ಲೈಂಗಿಕ ಅಲ್ಪಸಂಖ್ಯಾತರ ಪ್ರತಿಭೆಯನ್ನೇ ಬಳಸಿಕೊಂಡಿದ್ದರೆ ನಾಟಕದ ತೀವ್ರತೆ ಇನ್ನಷ್ಟು ಹೆಚ್ಚುತ್ತಿತ್ತು.

ಹೆಣ್ಮನದ ಭಾವನೆಗಳನ್ನು ಅದುಮಿಡಲಾರದೆ ಒದ್ದಾಡುವ ಹಾಗೂ ಲಿಂಗಪರಿವರ್ತನೆಯಾದ ನಂತರದ ತೊಳಲಾಟಗಳನ್ನು ಮಾತ್ರವೇ ನಾಟಕದಲ್ಲಿ ಚಿತ್ರಿಸಲಾಗಿದೆ. ಇವೆಲ್ಲವನ್ನು ದಾಟಿ ಯಶಸ್ವಿ ಮಹಿಳೆಯಾಗಿ ತನ್ನಂತೆ ಇರುವ ನೂರಾರು ಮಂದಿಗೆ ರೇವತಿ ಹೇಗೆ ತಾಯಿ ಸ್ಥಾನದಲ್ಲಿದ್ದು ರಕ್ಷಣೆ ಒದಗಿಸುತ್ತಾಳೆ ಎಂಬುದನ್ನು ಸೂಕ್ಷ್ಮವಾಗಿ ತೋರಿಸಬಹುದಿತ್ತು. ಈ ಮೂಲಕ ಆಂತರಿಕ, ಸಾಮಾಜಿಕ ಮತ್ತು ದೈಹಿಕ ತೊಳಲಾಟಗಳನ್ನು ಅನುಭವಿಸುವ ಎಲ್ಲ ಲೈಂಗಿಕ ಅಲ್ಪಸಂಖ್ಯಾತರಿಗೆ ಒಂದು ಬಗೆಯ ಸಾಂತ್ವನ ನೀಡುವ ಅವಕಾಶವಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.