ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಸೌಭಾಗ್ಯ ಈ ಪಾತ್ರ

Last Updated 25 ಏಪ್ರಿಲ್ 2019, 12:32 IST
ಅಕ್ಷರ ಗಾತ್ರ

ರಾಕೇಶ್‌ ಮಯ್ಯ, ಕಲರ್ಸ್‌ ಸೂಪರ್‌ನ ಮಗಳು ಜಾನಕಿಯ ನಿರಂಜನ್‌ ಧಾವಳಿ ಅವರು ನಮ್ಮೊಂದಿಗೆ ಮಾತನಾಡಿದ್ದಾರೆ. ಈ ಸಂಭಾಷಣೆಯ ಪೂರ್ಣ ಭಾಗ ನಿಮಗಾಗಿ

ನಿಮ್ಮ ಪರಿಚಯವನ್ನು ಹೇಳಿ..

ನಾನು ಹುಟ್ಟಿದ್ದು ಬೆಂಗಳೂರು. ಬೆಳೆದದ್ದು ಪುತ್ತೂರು. ಬಿಕಾಂ ನಂತರ ಎಂಬಿಎ ಮಾಡಿ ಮತ್ತೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದೆ. ಸಿನಿಮಾ– ಟಿವಿಗಳಲ್ಲಿ ತೊಡಗಬೇಕು ಎನ್ನುವ ಅದಮ್ಯ ಬಯಕೆ ನನ್ನಲ್ಲಿತ್ತು. ಆ ರಂಗದಲ್ಲಿ ನನಗೆ ಗಾಡ್‌ ಫಾದರ್‌ ಎನ್ನುವವರು ಇರಲಿಲ್ಲ. ಜೊತೆಗೆ ಕ್ಷೇತ್ರ ಕೂಡ ಹೊಸದಾಗಿತ್ತು. ಅದಕ್ಕೆ ಹೇಗೆ ಪ್ರಯತ್ನಿಸಬೇಕು ಎನ್ನುವ ಪ್ರಾಥಮಿಕ ತಿಳಿವಳಿಕೆ ಆಗ ಇರಲಿಲ್ಲ. ಎಂಎನ್‌ಸಿ ಕಂಪನಿಯೊಂದರ ಹಣಕಾಸು ವಿಭಾಗದಲ್ಲಿ ಹತ್ತು ತಿಂಗಳು ಕೆಲಸ ಮಾಡಿದೆ. ಅಷ್ಟರಲ್ಲಿ ಬೇಸರವಾಗಿ ಕೆಲಸ ಬಿಟ್ಟೆ. ನಂತರ ದಿನಪತ್ರಿಕೆಯೊಂದಲ್ಲಿ ಪತ್ರಿಕಾ ಛಾಯಾಗ್ರಹಕನಾಗಿ ಸೇರಿದೆ. ಎರಡು ವರ್ಷ ತುಂಬುವಷ್ಟರಲ್ಲಿ ಆಡಿಷನ್‌ಗಳಿಗೆಹೋಗಲು ಪ್ರಾರಂಭಿಸಿದೆ. ಅಷ್ಟರಲ್ಲಿ ವಿನು ಬಳಂಜ ಅವರ ‘ಲವಲವಿಕೆ’ಯಲ್ಲಿ ಪುಟ್ಟ ಪಾತ್ರವನ್ನು ನಿರ್ವಹಿಸಿದೆ. ಇದರ ಜೊತೆ ಹವ್ಯಾಸಿ ಛಾಯಾಗ್ರಹಣವನ್ನು ಮುಂದುವರಿಸಿದೆ. ಆಮೇಲೆ ‘ನಿಹಾರಿಕೆ’ಯಲ್ಲಿಯೂ ನಟಿಸುವ ಅವಕಾಶ ಸಿಕ್ಕಿತು. ನಂತರ ‘ಅವಳು’ನಲ್ಲಿ ನಾ ಏಕ ಪಾತ್ರವನ್ನು ನಿರ್ವಹಿಸಿದೆ. ಅಷ್ಟರಲ್ಲಿ ಸಾಕಷ್ಟು ಕಿರುಚಿತ್ರಗಳನ್ನು ಮಾಡಿದ್ದೆ. ಅದರಲ್ಲಿ ’ಸಿಲ್ಕ್‌ ಬೋರ್ಡ್‌’ ಅತ್ಯಂತ ಜನಪ್ರಿಯವಾಗಿತ್ತು. ಅದು ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆಯನ್ನು ಕೇಂದ್ರಿಕರಿಸಿದ ಹಾಸ್ಯ ಚಿತ್ರವಾಗಿತ್ತು. ಹತ್ತಾರು ಕಿರುಚಿತ್ರ, ಮ್ಯೂಸಿಕ್‌ ವಿಡಿಯೋಗಳಲ್ಲಿ ನಟಿಸಿದೆ. ಅಷ್ಟರಲ್ಲಿ ಈ ಪಾತ್ರ ಸಿಕ್ಕಿದೆ.

ಸೃಜನಶೀಲ ಹವ್ಯಾಸದ ನಡುವೆ ಬದುಕಿನ ಹುಡುಕಾಟ ಆತಂಕವನ್ನು ಹುಟ್ಟಿಸಿರಲಿಲ್ಲವೇ?

ನನಗೆ ಇದನ್ನೇ ಮಾಡಬೇಕು ಎಂದಾಗಲಿ ಇದಾಗಬೇಕು ಎಂದಾಗಲಿ ಹೇರುವವರು ಯಾರು ಇರಲಿಲ್ಲ. ಹಾಗಾಗಿ ಭವಿಷ್ಯದ ಭಯ ನನಗೆ ಕಾಡಲೇ ಇಲ್ಲ. ನನ್ನ ಅಪ್ಪ– ಅಮ್ಮ ನನ್ನ ಆಯ್ಕೆಯನ್ನು ಬೆಂಬಲಿಸುತ್ತಿದ್ದರು. ನನಗೆ ಖಚಿತವಾಗಿ ಗೊತ್ತಿದೆ. ಹಾಗೆಂದು ನನ್ನಲ್ಲಿ ಗೊಂದಲಗಳು ಹುಟ್ಟಿರಲಿಲ್ಲ ಎಂದಲ್ಲ. ಗೊಂದಲಗಳು ಕಾಡಿವೆ, ಯೋಚನೆಯನ್ನೂ ಮಾಡಿದ್ದೇನೆ. ಆದರೆ ಒಂದಿಲ್ಲ ಒಂದು ದಿನ ಗುರುತಿಸುವಂತೆ ಬೆಳೆಯುತ್ತೇನೆ ಎನ್ನುವ ಭರವಸೆ ಇರುವುದರಿಂದ ಪ್ರಯೋಗಗಳನ್ನು ಮಾಡಲು ಸಾಧ್ಯವಾಯಿತು. ಪಾತ್ರವನ್ನು ಕಲಿಯಬೇಕಿತ್ತು ಕಲಿಯುತ್ತಾ ಸಾಗುತ್ತಿದ್ದೇನೆ. ಇಲ್ಲದಿದ್ದರೆ ಬಹುಬೇಗ ಸೋತು ಹೋಗುತ್ತೇವೆ. ಈಗ ಒಳ್ಳೆಯ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಜೊತೆಗೆ ಸೀತಾರಾಂ ಸರ್‌ ಅವರಿಂದ ಸಾಕಷ್ಟು ಕಲಿಯುತ್ತಿದ್ದೇನೆ. ಅವರ ನಿರ್ದೇಶನದ ವೈಖರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತೇನೆ.

ಧಾರಾವಾಹಿಯಲ್ಲಿ ಕುಟುಂಬವನ್ನು ಮೌಖಿಕವಾಗಿ ಚಿತ್ರಿಸಲಾಗುತ್ತಿದೆ. ಏಕೆ ದೃಶ್ಯವನ್ನು ತೋರಿಸುತ್ತಿಲ್ಲ.

ಕುತೂಹಲ ಇರಲಿ ಎನ್ನುವುದು ಮುಖ್ಯ. ಎಲ್ಲದಕ್ಕೂ ಸಮಯ ಎನ್ನುವುದು ಬಂದೇ ಬರುತ್ತದೆ. ಆಗ ನನ್ನ ತಂದೆ–ತಾಯಿ ಮನೆ ಎಲ್ಲವನ್ನೂ ತೋರಿಸುತ್ತಾರೆ. ಈ ಹಿಂದೆ ನನ್ನ ಮತ್ತು ಜಾನಕಿ ಮದುವೆ ಆಗಿದ್ದನ್ನು ತುಂಬಾ ಜನ ಸರಿ ಇಲ್ಲ. ಆನಂದ್‌ ಮದುವೆಯಾಗಬೇಕಿತ್ತು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ರೀತಿಯ ಭಾವನಾತ್ಮಕ ನೆಲೆಯಲ್ಲಿ ತೆರೆದುಕೊಳ್ಳುತ್ತಿರಲಿಲ್ಲ. ಸಿಎಸ್ಪಿ ಸರ್‌ ಮೊದಲು ಅವರು ಕಥೆಯ ಹೂರಣವನ್ನು ಹೇಳಿ ಹೀಗೆ ಮಾಡಬೇಕು ಎಂದು ಹೇಳಿರುತ್ತಾರೆ.ನಂತರ ಅವರ ಬರಹವನ್ನು ಕೊಡುತ್ತಾರೆ. ಓದುತ್ತಿದ್ದಂತೆಯೇ ಭಾವಪರವಶರಾಗುತ್ತೇವೆ. ಅದು ನಮ್ಮ ಮನಸ್ಸಿಗೂ ತಟ್ಟುತ್ತದೆ. ಚಿತ್ರೀಕರಣದ ಪರಿಸರವೂ ಹಾಗೆ ಮಾಡುತ್ತದೆ. ಏನೋ ಕಾರಣಕ್ಕೆ ಅದನ್ನು ತೋರಿಸುತ್ತಿಲ್ಲ ಅಷ್ಟೆ.

ನಿರಂಜನ್‌ ಪಾತ್ರ ಬಗ್ಗೆ ಎಂತಹ ಪ್ರತಿಕ್ರಿಯೆ ಸಿಕ್ಕಿದೆ?

ತುಂಬಾ ಜನ ಒಳ್ಳೆಯ ಅಭಿಪ್ರಾಯವನ್ನು ನೀಡಿದ್ದಾರೆ. ಹಿರಿಯರು ಕೆಲವರು ನಿರಂಜನ್‌ ಎಂದೇ ಕರೆಯುತ್ತಾರೆ. ಮೈದಡುವುತ್ತಾರೆ, ತಬ್ಬು ಮಾತನಾಡುತ್ತಾರೆ. ಆಗೆಲ್ಲ ನನಗೆ ಅವರ ಮನೆಯ ಹುಡುಗನೋ ಎನ್ನುವ ಭಾವ ಪ್ರಾಪ್ತಿಯಾಗಿದ್ದಿದೆ. ನಾನು ಎಂದೂ ಇಂತಹ ಪ್ರೀತಿಯನ್ನು ನಿರೀಕ್ಷೆಯನ್ನೇ ಮಾಡಿರಲಿಲ್ಲ. ನನ್ನ ಪಾತ್ರ ಸ್ವಲ್ಪ ವಿಲನ್‌ ಗುಣಗಳ ಮಿಶ್ರಿತವಾಗಿ ನಿರೂಪಿತವಾಗಿದೆ. ಆದರೆ ಯಾರೋ ಕೋಪವನ್ನು ವ್ಯಕ್ತಪಡಿಸದೆ ಮರುಕವನ್ನು ವ್ಯಕ್ತಪಡಿಸುತ್ತಾರೆ. ಅವರ ತಕರಾರು ಇರುವುದು ನನ್ನ ಭಾರ್ಗಿ ಪಾತ್ರದ ಮೇಲೆ. ನನಗೆ ಈ ಪಾತ್ರ ದೊಡ್ಡ ಭಾಗ್ಯವನ್ನು ಕರುಣಿಸಿದೆ ಎಂದೇ ಭಾವಿಸಿದ್ದೇನೆ.

ಈ ಪಾತ್ರಕ್ಕೆ ಆಯ್ಕೆ ಆದ ಸಂದರ್ಭವನ್ನು ಹೇಳಬಹುದಾ?

ಒಂದು ದಿನ ಅನಿರೀಕ್ಷಿತವಾಗಿ ಭೂಮಿಕಾ ಪ್ರೊಡಕ್ಷನ್‌ನಿಂದ ನನಗೆ ಆಡಿಷನ್‌ಗೆ ಫೋನ್‌ ಬಂತು. ಸೀತಾರಾಂ ಸರ್‌ ಮತ್ತೆ ಧಾರಾವಾಹಿ ಮಾಡುತ್ತಾರಾ? ಎನ್ನುವ ಸಂದೇಹದ ಪ್ರಶ್ನೆಯನ್ನೇ ಕೇಳಿದ್ದೆ. ಮೊದಲ ಆಡಿಷನ್‌ ಮುಗಿಸಿ ಬಂದ ಮೇಲೆ ಅದನ್ನು ಮರೆತೇ ಬಿಟ್ಟಿದ್ದೆ. ಹದಿನೈದು ದಿನಗಳು ಕಳೆದ ಬಳಿಕ ಮತ್ತೊಂದು ಫೋನ್‌ ಬಂತು. ಸೀತಾರಾಂ ಸರ್‌ ಮಾತನಾಡಬೇಕು ಎನ್ನುವ ಸಂದೇಶವನ್ನು ಅವರು ನೀಡಿದರು. ವೈಯಕ್ತಿಕ ವಿವರವನ್ನು ಕೇಳಿ. ತಾವು ಪಾತ್ರದ ಮೂಲಕ ಏನನ್ನು ನಿರೀಕ್ಷೆ ಮಾಡುತ್ತೇನೆ ಎನ್ನುವುದನ್ನು ಹೇಳಿದರು. ಆದರೂ ನನಗೆ ಏನೋ ತಪ್ಪಿತಸ್ಥ ಭಾವನೆ ಕಾಡುತ್ತಿತ್ತು. ಮಾತನಾಡುತ್ತಾ ನಮ್ಮ ಮನೆಯ ಹಿರಿಯರಂತೆ ಅನ್ನಿಸಿದರು. ನಂತರ ಮತ್ತೆರಡು ಬಾರಿ ಆಡಿಷನ್‌ ಟೆಸ್ಟ್‌ಗಳನ್ನು ಮಾಡಿದರು. ಕೊನೆಗೂ ನನ್ನನ್ನು ಆಯ್ಕೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT