ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಸಿದ್ಧರಾಜ ಕಲ್ಯಾಣಕರ‌ ಇನ್ನಿಲ್ಲ

Last Updated 8 ಸೆಪ್ಟೆಂಬರ್ 2020, 8:27 IST
ಅಕ್ಷರ ಗಾತ್ರ

ನಟ ಸಿದ್ಧರಾಜ ಕಲ್ಯಾಣಕರ‌ (60) ಮಂಗಳವಾರ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.

ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾದಲ್ಲಿ ಅವರು ಸಕ್ರಿಯರಾಗಿದ್ದರು. ಅವರು ಹುಬ್ಬಳ್ಳಿಯ ನವನಗರದ ನಿವಾಸಿ. ಕಿರುತೆರೆ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಅವರು ಕನ್ನಡದಲ್ಲಿ 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಬಣ್ಣ ಹಚ್ಚಿದ ಮೊದಲ ಸಿನಿಮಾ ‘ಯಾರೇ ನೀ ಅಭಿಮಾನಿ’. ಇದು ತೆರೆಕಂಡಿದ್ದು 2000ರಲ್ಲಿ.

‘ಹೃದಯ ಹೃದಯ’, ‘ಶ್ರೀಮಂಜುನಾಥ’, ‘ಸೂಪರ್’, ‘ಬುದ್ಧಿವಂತ’ ಅವರು ಅಭಿನಯಿಸಿರುವ ಪ್ರಮುಖ ಚಿತ್ರಗಳಾಗಿವೆ. ಸೋಮವಾರವಷ್ಟೇ ಅವರು ‘ಪ್ರೇಮಲೋಕ’ ಧಾರಾವಾಹಿಯ ಶೂಟಿಂಗ್‌ ಸೆಟ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿಯೂ ಅಪ್‌ಲೋಡ್‌ ಮಾಡಿದ್ದರು.

1993ರಲ್ಲಿ ‘ಹೊಸಹೆಜ್ಜೆ’ ಧಾರಾವಾಹಿ ಮೂಲಕ ಅವರ ಕಿರುತೆರೆ ಪಯಣ ಆರಂಭಗೊಂಡಿತು. ಸಿನಿಮಾಗಳ ಜೊತೆ ಜೊತೆಗೆಯೇ ಕಿರುತೆರೆಯಲ್ಲೂ ಪ್ರಧಾನ ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕ ಮನೆ ಮಾತಾಗಿದ್ದರು. ಹಿರಿತೆರೆ ಮತ್ತು ಕಿರುತೆರೆಯಲ್ಲಿ ತೊಡಗಿಸಿಕೊಂಡಿದ್ದರೂ ರಂಗಭೂಮಿಯ ನಂಟನ್ನು ಅವರು ಬಿಟ್ಟಿರಲಿಲ್ಲ. ಪ್ರಸ್ತುತ ಅವರು ‘ಪ್ರೇಮಲೋಕ’ ಮತ್ತು ‘ಗಿಣಿರಾಮ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು.

ಸಿದ್ದರಾಜ್‌ ಕಲ್ಯಾಣಕರ್‌ ಅವರ ನಿಧನಕ್ಕೆ ನಿರ್ದೇಶಕರಾದ ಟಿ.ಎನ್‌. ಸೀತಾರಾಂ, ಬಿ. ಸುರೇಶ, ನಟ ಮಂಡ್ಯ ರಮೇಶ್‌ ಸೇರಿದಂತೆ ಚಿತ್ರರಂಗದ ಹಲವರು ಕಂಬನಿ ಮಿಡಿದಿದ್ದಾರೆ.

ಹುಬ್ಬಳ್ಳಿಯಲ್ಲಿ ಕಲ್ಯಾಣಕರ ಅಂತ್ಯಕ್ರಿಯೆ
ಹುಬ್ಬಳ್ಳಿ:
ಜನ್ಮದಿನದಂದೇ ನಿಧನರಾದ ರಂಗಭೂಮಿ ಹಾಗೂ ಸಿನಿಮಾ ಕಲಾವಿದ ಸಿದ್ಧರಾಜ ಕಲ್ಯಾಣಕರ ಅವರ ಅಂತ್ಯಕ್ರಿಯೆ ಹುಬ್ಬಳ್ಳಿಯ ನವನಗರದಲ್ಲಿ ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ನಡೆಯಲಿದೆ.

ಸೋಮವಾರ ಬೆಂಗಳೂರಿನಲ್ಲಿ ತಮ್ಮ 60ನೇ ಜನ್ಮದಿನ ಆಚರಿಸಿಕೊಂಡಿದ್ದ ಸಿದ್ಧರಾಜ ಬಾಲ್ಯದಿಂದಲೂ ನಾಟಕದ ಬಗ್ಗೆ ಅಪರಿಮಿತ ಪ್ರೀತಿ ಹೊಂದಿದ್ದರು. ’ಬಾಗಿಲ ತಗೀರಪ್ಪೊ ಬಾಗಿಲ’ ಇದು ಅವರು ಅಭಿನಯಿಸಿದ ಮೊದಲ ನಾಟಕ.

ಕಲ್ಯಾಣಕರ ಜನ್ಮದಿನ ಆಚರಿಸಿಕೊಂಡ ದಿನ ‘ನೀವೂ ಸೀನಿಯರ್‌ ಸಿಟಿಜನ್ ಆದ್ರೀ’ ಎಂದು ಅವರಿಗೆ ತಮಾಷೆ ಮಾಡಿದ್ದೆ. ಈಗ ಇಲ್ಲ ಎಂದರೆ ನಂಬಲು ಅಗುತ್ತಿಲ್ಲ. ಅವರು ಯಾವ ಪ್ರಶಸ್ತಿಗಳನ್ನೂ ಹುಡುಕಿಕೊಂಡು ಹೋದವರಲ್ಲ. ಕಲೆ, ರಂಗಭೂಮಿ ಉಸಿರಾಗಿತ್ತು ಎಂದು ಅವರ ಒಡನಾಡಿ ಹಾಗೂ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನೆನಪುಗಳನ್ನು ಹಂಚಿಕೊಂಡರು.

ರಂಗಕರ್ಮಿ ಋತ್ವಿಕ್‌ಸಿಂಹ ’ಸಿದ್ಧರಾಜ ಕಲ್ಯಾಣಕರ್ ಇನ್ನಿಲ್ಲ!!! ಎಂತ ಆಘಾತಕಾರಿ ಸುದ್ದಿ, ಅದೆಷ್ಟು ದಿನ, ವಾರ.. ತಿಂಗಳು.. ವರುಷ ಒಟ್ಟಾಗಿ ನಟಿಸಿ ಕಾಲ ಕಳೆದಿದ್ದೇವೆ? ರಂಗಭೂಮಿಯ ವಿಷಯಗಳ ಕುರಿತು ಮಾತನಾಡಿದ್ದೇವೆ. ನಿನ್ನೆಯಷ್ಟೇ ಜನುಮ ದಿನದ ಶುಭಾಶಯಗಳನ್ನು ತಿಳಿಸಿ.. ಇಂದು ವಿದಾಯ ಹೇಳುವಂತಾಯಿತಲ್ಲಾ? ಹೋಗಿಬನ್ನಿ... ಹಿರಿಯ ಮಿತ್ರ’ ಎಂದು ನೋವು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT