ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರಿಗೆ ಜೀವ ತುಂಬಿದ ಐಶ್ವರ್ಯಾ

Last Updated 7 ಜನವರಿ 2021, 19:30 IST
ಅಕ್ಷರ ಗಾತ್ರ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ‘ಅನುರೂಪ’ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಪ್ರವೇಶಿಸಿದವರು ಐಶ್ವರ್ಯಾ ಪಿಸ್ಸೆ. ಮೂಲತಃ ಬೆಂಗಳೂರಿನವರಾದ ಇವರು ತೆಲುಗು ಹಾಗೂ ತಮಿಳು ಕಿರುತೆರೆ ಕ್ಷೇತ್ರದಲ್ಲೂ ಮಿಂಚಿದವರು. ಸದ್ಯ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಸುಂದರಿ’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

‘ದೇಹದ ಬಣ್ಣಕ್ಕಿಂತ ಮನಸ್ಸಿನ ಬಣ್ಣ ಮುಖ್ಯ’ ಎಂಬ ಸಂದೇಶ ಸಾರುವ ಈ ಕಥೆಯಲ್ಲಿ ಸುಂದರಿಯೇ ಕಥಾನಾಯಕಿ. ವರ್ಣ ತಾರತಮ್ಯ ವಿರೋಧಿಸಿ ತನ್ನ ಕನಸಿನ ಹಾದಿಯನ್ನು ಹಿಂಬಾಲಿಸುವ ಹುಡುಗಿ ಆಕೆ. ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಮೇಶ್ ಅರವಿಂದ್ ಅವರ ಸ್ಲಿಂಗ್ ಶಾಟ್ ಸಂಸ್ಥೆಯಡಿ ಈ ಧಾರಾವಾಹಿ ಮೂಡಿಬರುತ್ತಿದೆ. ಇದೇ 11ರಿಂದ ರಾತ್ರಿ 8 ಗಂಟೆಗೆ ಧಾರಾವಾಹಿ ಪ್ರಸಾರವಾಗಲಿದೆ. ಸುಂದರಿ ಧಾರಾವಾಹಿ ಹಾಗೂ ತಮ್ಮ ಪಾತ್ರದ ಕುರಿತು ‘ಪ್ರಜಾಪ್ಲಸ್’ ಜೊತೆ ಮಾತನಾಡಿದ್ದಾರೆ ಐಶ್ವರ್ಯಾ.

ನಿಮ್ಮ ಪಾತ್ರದ ಕುರಿತು ಹೇಳಿ
ಸುಂದರಿಯ ಪಾತ್ರ ನನ್ನದು. ಸುಂದರಿ ಬಹಳ ಆಸೆ, ಆಕಾಂಕ್ಷೆಗಳನ್ನು ಹೊತ್ತ ಕನಸು ಕಂಗಳ ಹುಡುಗಿ. ಐಎಎಸ್ ಅಧಿಕಾರಿಯಾಗಬೇಕು ಎಂಬುದು ಅವಳ ಬಹುದೊಡ್ಡ ಕನಸು. ಆದರೆ ತನ್ನ ಬಾಹ್ಯನೋಟದಿಂದ ಅವಳು ಹಲವು ಕಡೆ ಅವಮಾನಕ್ಕೆ ಗುರಿಯಾಗುತ್ತಿರುತ್ತಾಳೆ. ಆದರೂ ಕನಸಿನ ಹಾದಿಯಲ್ಲಿ ಮುಂದೆ ಸಾಗುತ್ತಲೇ ಇರುತ್ತಾಳೆ. ತನ್ನ ಕನಸನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ ಎದುರಾಗುವ ಕಷ್ಟ ಮತ್ತು ಸವಾಲುಗಳನ್ನು ಮೆಟ್ಟಿ ಹೇಗೆ ಮುಂದೆ ಬರುತ್ತಾಳೆ ಎಂಬುದನ್ನು ಈ ಪಾತ್ರ ಹೇಳುತ್ತದೆ.

ಕಥೆಯ ಬಗ್ಗೆ ಹೇಳುವುದಾದರೆ..
ಇದೊಂದು ಸಮಾಜಕ್ಕೆ ಸ್ಫೂರ್ತಿ ನೀಡುವ ಕಥೆ. ಇದರಲ್ಲಿ ಮಹಿಳಾ ಸಬಲೀಕರಣದ ಬಗ್ಗೆಯೂ ತಿಳಿಸಲಾಗಿದೆ. ಕೌಟುಂಬಿಕ ಹಿನ್ನೆಲೆ ಇರಿಸಿಕೊಂಡಿರುವ ಕಥೆಯಲ್ಲಿ ಭಾವನಾತ್ಮಕ ಅಂಶವೂ ಹೆಚ್ಚಿದೆ.

ಧಾರಾವಾಹಿಗೆ ಆಯ್ಕೆಯಾದ ಬಗೆ
ನನಗೆ ಪ್ರೊಡಕ್ಷನ್ ಹೌಸ್‌ನಿಂದ ಕರೆ ಬಂದಾಗ ನಾನು ನಟಿಸಲು ಆಗುವುದಿಲ್ಲ ಎಂದೇ ಹೇಳಿದ್ದೆ. ಯಾಕೆಂದರೆ ಈ ಪಾತ್ರ ತುಂಬಾನೇ ಭಿನ್ನವಾಗಿದೆ. ಆಗ ನನ್ನಿಂದ ಮಾಡಬಹುದು ಎನ್ನುವ ಆತ್ಮವಿಶ್ವಾಸ ನನ್ನಲ್ಲಿ ಇರಲಿಲ್ಲ. ಅದೇನೇ ಇರಲಿ ನೀವು ಒಂದು ಸಲ ವಿಡಿಯೊ ಕಳಿಸಿ ಎಂದಿದ್ದರು ನಿರ್ದೇಶಕರು. ಆಗ ನಾನೇ ಮೈಗೆ ಕಪ್ಪು ಬಣ್ಣ ಬಳಿದುಕೊಂಡು ಒಂದು ವಿಡಿಯೊ ಕ್ಲಿಪ್ ಕಳಿಸಿದ್ದೆ. ಇದು ಅವರಿಗೆ ಇಷ್ಟವಾಗಿ ಲುಕ್ ಟೆಸ್ಟ್‌ಗೆ ಕರೆದಿದ್ದರು. ಎಲ್ಲವೂ ಓಕೆ ಆಗಿ ಆಯ್ಕೆಯಾದೆ.

ಹಿಂದೆಂದೂ ಇಂತಹ ಪಾತ್ರ ಮಾಡಿರಲಿಲ್ಲವೇ?
ನಾನು ಇಲ್ಲಿಯವರೆಗೆ ಇಂತಹ ಪಾತ್ರ ಮಾಡೇ ಇಲ್ಲ. ನಾನು ಬಬ್ಲಿ ಪಾತ್ರಗಳಿಗೆ ಬಣ್ಣ ಹಚ್ಚಿದ್ದು ಜಾಸ್ತಿ. ನಾನ್ಯಾಕೆ ಈ ಪಾತ್ರ ಮಾಡಬಾರದು ಎಂದು ನನಗೆ ನಾನೇ ಸವಾಲಾಗಿ ತೆಗೆದುಕೊಂಡೆ. ನನ್ನ ಗಂಡ, ಅಮ್ಮ ತುಂಬಾ ಸಹಕಾರ ನೀಡಿದ್ದಾರೆ. ಒಂದೇ ರೀತಿ ಪಾತ್ರ ಮಾಡುವುದಕ್ಕಿಂತ ಭಿನ್ನ ಪಾತ್ರಗಳಲ್ಲಿ ನಟಿಸಿದರೆ ನನ್ನ ವೃತ್ತಿಜೀವನಕ್ಕೆ ಒಂದು ತಿರುವು ನೀಡಬಹುದು ಎನ್ನಿಸಿತ್ತು. ಹಾಗಾಗಿ ಈ ಪಾತ್ರ ಮಾಡಲೇಬೇಕು ಎನ್ನುವ ಆತ್ಮವಿಶ್ವಾಸದಲ್ಲಿ ನಟಿಸು‌ತ್ತಿದ್ದೇನೆ.

ಮತ್ತೆ ಕನ್ನಡದಲ್ಲಿ ನಟಿಸುತ್ತಿರುವ ಬಗ್ಗೆ ಹೇಳಿ
ನಾನು ಕನ್ನಡದಲ್ಲಿ ಕೊನೆಯದಾಗಿ ನಟಿಸಿದ್ದು ‘ಸರ್ವ ಮಂಗಳ ಮಾಂಗಲ್ಯೇ’ ಧಾರಾವಾಹಿಯಲ್ಲಿ. ಆ ಧಾರಾವಾಹಿ ತುಂಬಾನೇ ಚೆನ್ನಾಗಿತ್ತು. ಲಾಕ್‌ಡೌನ್‌ ಆಗಿದ್ದರಿಂದ ಅದು ಅರ್ಧಕ್ಕೆ ನಿಂತಿತ್ತು. ಈಗ ಒಂದು ಒಳ್ಳೆಯ ಕಥೆಯೊಂದಿಗೆ ಮತ್ತೆ ಕನ್ನಡದ ಜನರ ಮುಂದೆ ಬರುತ್ತಿರುವುದು ಖುಷಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT