ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Big Boss 8: ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಚಂದ್ರಚೂಡ್ ಯಾರು ಗೊತ್ತೇ?

Last Updated 2 ಏಪ್ರಿಲ್ 2021, 9:55 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತೀ ವರ್ಷದಂತೆ ಈ ಬಾರಿಯೂ ಕನ್ನಡದ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ. ಹೌದು, 32ನೇ ದಿನ ಪತ್ರಕರ್ತ, ಬರಹಗಾರ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದು, ತಮ್ಮ ಮಾತಿನ ಮೂಲಕ ಮನೆ ಮಂದಿಗೆ ಕೊಂಚ ಆತಂಕ ತಂದಿದ್ದಾರೆ.

ಇದ್ದಕ್ಕಿದ್ದಂತೆ ಮನೆಗೆ ಪ್ರವೇಶಿಸಿದ ಚಂದ್ರಚೂಡ್, ಮನೆಯ ಸದಸ್ಯರನ್ನು ಗೊಂದಲಕ್ಕೆ ದೂಡಿದರು. ಪ್ರಶಾಂತ್ ಸಂಬರಗಿ, ರಾಜೀವ್ ಬಿಟ್ಟರೆ ಬೇರೆ ಯಾರಿಗೂ ಅವರ ಪರಿಚಯ ಇಲ್ಲದಂತೆ ಕಂಡುಬಂತು. ಎಲ್ಲರನ್ನೂ ಹಾಲ್‌ಗೆ ಕರೆದ ಅವರು ವಿಶಿಷ್ಟ ಮಾತಿನ ಲಹರಿ ಮೂಲಕ ಎಲ್ಲರಲ್ಲೂ ಕುತೂಹಲ ಮೂಡಿಸಿದರು. ಬಳಿಕ ತಮ್ಮ ಪರಿಚಯ ಮಾಡಿಕೊಟ್ಟ ಚಂದ್ರಚೂಡ್, ಆಂಧ್ರಪ್ರದೇಶದ ಪವಾಡ ಪುರುಷರಬಗ್ಗೆ ಪುಸ್ತಕ ಬರೆದು 90 ದಿನ ಜೈಲುವಾಸದ ದಿನಗಳನ್ನು ಬಿಚ್ಚಿಟ್ಟರು. ಈ ಮನೆಯನ್ನೂ ಕಾರಾಗೃಹದಂತೆ ಹೇಳುತ್ತಿದ್ದರು. ಆದರೆ, ಇಲ್ಲಿ ಬಂದ್ಮೇಲೆ ಹಾಸ್ಟೆಲ್ ರೀತಿ ಕಾಣುತ್ತಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

'ಬೆತ್ತಲಾಗುವುದಕ್ಕೆ ಬಂದಿರುವುದು': ಬಿಟ್ಟ ಕಣ್ಣು ಬಿಟ್ಟಂತೆ ಕುಳಿತು ಚಂದ್ರ ಚೂಡ್ ಮಾತುಗಳನ್ನು ಕೇಳುತ್ತಿದ್ದ ಸದಸ್ಯರಿಗೆ ಚಂದ್ರಚೂಡ್ ಅಚ್ಚರಿ ಮೇಲೆ ಅಚ್ಚರಿ ಮೂಡಿಸಿದರು. ನಾನು ಇಲ್ಲಿ ಬೆತ್ತಲಾಗುವುದಕ್ಕೆ ಬಂದಿರುವುದು. ಮನುಷ್ಯ ಮಾನಸಿಕವಾಗಿ ಬೆತ್ತಲಾದಂತೆ ಮಾನವನಾಗುತ್ತಾನೆ. ನಾನು ಏನೆಂಬುದು ಮುಂದೆ ತಿಳಿಯುತ್ತದೆ ಎಂದರು. ಇಷ್ಟು ದಿನ ಆಟ ಹುಡುಗಾಟದ ಮೂಲಕ ಮನೆಯಲ್ಲಿ ಕಾಲ ಕಳೆದ ಸದಸ್ಯರಿಗೆ ಚಂದ್ರಚೂಡ್ ಎಂಟ್ರಿ ಕೊಂಚ ಆತಂಕ ಮೂಡಿಸಿದಂತೆ ಭಾಸವಾಯಿತು. ಪ್ರತಿಯೊಬ್ಬರಿಗೂ ಅವರ ಪ್ರದರ್ಶನದ ಮೇಲೆ ಅಂಕ ನೀಡಿದ ಅವರು ದಿವಂಗತ ಕೆ.ಎಸ್. ಅಶ್ವತ್ಥ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದರು. 3 ದಶಕ ಒಬ್ಬ ನಟನನ್ನು ಗುರುಗಳೆಂದು ಜನ ಪೂಜಿಸುತ್ತಾರೆಂದರೆ ಅವರ ಕಲೆ ಎಂತಹುದು ಎಂದು ಕೊಂಡಾಡಿದರು.

ಪ್ರಶಾಂತ್‌ಗೆ ಸ್ವಲ್ಪ ಸಿಹಿ, ಸ್ವಲ್ಪ ಕಹಿ: ಚಕ್ರವರ್ತಿ ಚಂದ್ರಚೂಡ್ ಮನೆಗೆ ಎಂಟ್ರಿಯಾಗುತ್ತಿದಂತೆ ಅವರ ಪರಿಚಯವಿದ್ದ ಸಂಬರಗಿ ಕೊಂಚ ನಗುಮುಖದಲ್ಲೇ ಸ್ವಾಗತ ಕೋರಿದರು. ಪ್ರಶಾಂತ್ ಪರಿಚಯದ ಬಗ್ಗೆ ಹೇಳಿಕೊಂಡ ಚಂದ್ರಚೂಡ್, ಅವರ ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕಿತ್ತು. ಕಾರಣಾಂತರಗಳಿಂದ ಆಗಲಿಲ್ಲ ಎಂದರು. ಮಾತಿನ ಮಧ್ಯೆ, ನನಗೆ ಸುಳ್ಳು ಹೇಳುವುದೆಂದರೆ ಆಗುವುದಿಲ್ಲ. ತಂತ್ರದಲ್ಲಿ ನಂಬಿಕೆ ಇದೆ. ಕುತಂತ್ರದಲ್ಲಿ ಅಲ್ಲ ಎನ್ನುವ ಮೂಲಕ ಸಂಬರಗಿಗೆ ತಿರುಗೇಟು ನೀಡಿದರು. ಮನೆಯಲ್ಲಿ ಸುಳ್ಳು ಹೇಳುತ್ತಾರೆಂದು ಸಂಬರಗಿ ವಿರುದ್ಧ ಈಗಾಗಲೇ ಹಲವರ ಆರೋಪವಿದೆ. ಈ ಮಧ್ಯೆ, ಚಂದ್ರಚೂಡ್ ಬಳಿ ಬಂದ ಅರವಿಂದ್, ಇಷ್ಟು ಸುಳ್ಳು ಹೇಳುವ ಸಂಬರಗಿ ಜೊತೆ ನಿಮಗೆ ಹೇಗೆ ಪರಿಚಯವಾಯಿತು ಎಂದು ಛೇಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT