ಬುಧವಾರ, ಫೆಬ್ರವರಿ 1, 2023
26 °C

BBK9:ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಕಾವ್ಯ ಶ್ರೀ ಗೌಡ, ದೀಪಿಕಾಗೆ ಶಾಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಂಗಳಗೌರಿ ಮದುವೆ ಧಾರಾವಾಹಿ ಖ್ಯಾತಿಯ ಕಿರುತೆರೆ ನಟಿ ಕಾವ್ಯ ಶ್ರೀ ಗೌಡ, 10ನೇ ವಾರ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.

ಮನೆಯಲ್ಲಿ ಲಕ್ಕಿ ಕ್ಯಾಂಡಿಡೇಟ್ ಎನಿಸಿಕೊಂಡಿದ್ದ ಅವರು, ಘಟಾನುಘಟಿ ಸ್ಪರ್ಧಿಗಳ ನಡುವೆ 70 ದಿನ ಪೂರೈಸಿದ್ದಾರೆ. ಆದರೆ, ಈ ವಾರ ಅವರ ಪರವಾಗಿ ಸೇವ್ ಮಾಡುವಷ್ಟು ವೀಕ್ಷಕರ ಮತ ಬಿದ್ದಿಲ್ಲ. 

ಮೊದಲ ದಿನದಂದು ತಮ್ಮ ಆಕರ್ಷಕ ಮಾತಿನ ವೈಖರಿ, ನೇರ ನುಡಿ, ಹಾಸ್ಯ ಪ್ರಜ್ಞೆ ಮೂಲಕ ವೀಕ್ಷಕರನ್ನು ರಂಜಿಸಿದ್ದ ಕಾವ್ಯ, ಟಾಸ್ಕ್‌ಗಳಲ್ಲಿ ಕೊಂಚ ಹಿಂದೆ ಬಿದ್ದಿದ್ದರು. ಕ್ಯಾಪ್ಟನ್ಸಿ ಟಾಸ್ಕ್ ಗೆದ್ದು ನಾಯಕಿಯಾಗಿದ್ದು, ಅವರ ಈ ಆವೃತ್ತಿಯ ಸಾಧನೆಯಾಗಿತ್ತು. ಮೊದ ಮೊದಲು ಮನೆಯ ಯಾವುದೇ ಗುಂಪಿನಲ್ಲೂ ಸೇರಿಕೊಳ್ಳದೆ ಸೆಪರೇಟ್ ಆಗಿರುತ್ತಿದ್ದ ಕಾವ್ಯ, ಬಳಿಕ ಎಲ್ಲರ ಜೊತೆ ಬೆರೆತು ಆಟದ ಲಯ ಕಂಡುಕೊಂಡಿದ್ದರು. 

ಎಲಿಮಿನೇಶನ್ ಇಲ್ಲದ ವಾರ, ನಾಮಿನೇಶನ್‌ನಿಂದ ಸೇವ್ ಮಾಡಿದ್ದ ಗೊಬ್ಬರಗಾಲ, ಕ್ಯಾಪ್ಟನ್ ಆಗಿದ್ದಕ್ಕೆ ಸಿಕ್ಕಿದ ಇಮ್ಯುನಿಟಿ.. ಹೀಗೆ ಹಲವು ಬಾರಿ ಅದೃಷ್ಟ ಅವರ ಕೈಹಿಡಿದಿತ್ತು. ಮನೆಯ ಸದಸ್ಯರಲ್ಲಿ ಬಹುತೇಕರು ಕಾವ್ಯ ಅವರಿಗೆ ರಿಯಲ್ ಆಗಿರುತ್ತಾರೆ ಎಂಬ ಮತ ಒತ್ತಿದ್ದಕ್ಕೆ ಕ್ಯಾಪ್ಟನ್ಸ್ಇ ಟಾಸ್ಕ್ ಆಡಲೂ ಸಾಧ್ಯವಾಗಿತ್ತು.

ಅನಾರೋಗ್ಯದಿಂದ ಮಂಕಾಗಿದ್ದ ಕಾವ್ಯ

ಈ ವಾರ  ಅನಾರೋಗ್ಯಕ್ಕೆ ತುತ್ತಾಗಿದ್ದ ಕಾವ್ಯ, ಟಾಸ್ಕ್ ಮತ್ತು ಮನೆಯ ಸದಸ್ಯರ ಜೊತೆಗಿನ ಒಡಬನಾಟದಲ್ಲಿ ಹಿಂದೆ ಬಿದ್ದಿದ್ದರು. ಸಹ ಸದಸ್ಯರ ಪೋಷಕರು ಬಂದಾಗಲೂ ಅಷ್ಟಾಗಿ ಬೆರೆಯಲಿಲ್ಲ. ಅಲ್ಲದೆ, ಬ್ಯಾಟರಿ ರಿಚಾರ್ಜ್ ಟಾಸ್ಕ್‌ಗಳಲ್ಲಿ ಅವರ ಭಾಗವಹಿಸುವಿಕೆ ಇರಲಿಲ್ಲ. ಹೀಗಾಗಿ, ವೀಕ್ಷಕರ ಗಮನ ಸೆಳೆಯುವಲ್ಲಿ ಕಾವ್ಯ ವಿಫಲವಾದಂತೆ ಕಂಡುಬಂದಿತ್ತು.

ಮನೆ ಕಟ್ಟಬೇಕು

ಬಹಳ ದುಃಖದಿಂದ ಬಿಗ್ ಬಾಸ್ ಮನೆ ಬಿಟ್ಟು ಹೊರಬಂದ ಕಾವ್ಯ, ನಿರೂಪಕ ಸುದೀಪ್ ಬಳಿ ಮನೆ ಕಟ್ಟಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದರು. ನಮ್ಮ ಸ್ವಂತ ಊರು ಮತ್ತು ಬೆಂಗಳೂರು ಎರಡೂ ಕಡೆ ನಮಗೆ ಸ್ವಂತ ಮನೆ ಇಲ್ಲ. ಹೀಗಾಗಿ, ನಮ್ಮ ಅಪ್ಪ ಅಮ್ಮನ ಆಸೆಯಂತೆ ಮನೆ ಕಟ್ಟಬೇಕು ಎಂದು ಹೇಳಿಕೊಂಡರು. ಇಷ್ಟು ದಿನ ಇರುತ್ತೇನೆ ಎಂದುಕೊಂಡಿರಲಿಲ್ಲ. 70 ದಿನ ಕಳೆದಿದ್ದು ಖುಷಿ ಇದೆ ಎಂದರು. ಇದೇವೇಳೆ, ಯಾರು ಗೆಲ್ಲಬಹುದು ಎಂಬ ಸುದೀಪ್ ಪ್ರಶ್ನೆಗೆ, ರಾಕೇಶ್ ಹೆಸರು ಹೇಳಿದರು. ಟಾಪ್ 3ನಲ್ಲಿ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಅಮೂಲ್ಯ ಬರಬಹುದು ಎಂದು ಹೇಳಿದರು.

ದೀಪಿಕಾ ದಾಸ್‌ಗೆ ಶಾಕ್

ಈ ವಾರ ಎಲಿಮಿನೇಟ್ ಆದ ಕಾವ್ಯ ಅವರಿಗೆ ಮುಂದಿನ ವಾರಕ್ಕೆ ಒಬ್ಬರನ್ನು ನಾಮಿನೇಟ್ ಮಾಡುವ ಅಧಿಕಾರ ನೀಡಿದ್ದರು ಬಿಗ್ ಬಾಸ್. ಇದರನ್ವಯ ದೀಪಿಕಾ ದಾಸ್ ಅವರನ್ನು ನಾಮಿನೇಟ್ ಮಾಡಿದರು. ಹಿಂದೆಲ್ಲ ಬೇರೆ ರೀತಿ ಇದ್ದ ದೀಪಿಕಾ, ಈ ವಾರ ಚಟುವಟಿಕೆಯಿಂದಿದ್ದಾರೆ. ಹೀಗಾಗಿ, ಅವರು ರಿಯಲ್ ಎನಿಸುವುದಿಲ್ಲ ಎಂಬ ಕಾರಣ ಕೊಟ್ಟರು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು