ಬೆಂಗಳೂರು: ಬಿಗ್ ಬಾಸ್ ಕನ್ನಡ 10ನೇ ಆವೃತ್ತಿಯ 4ನೇ ವಾರ ದಿವಂಗತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಮನೆಯಿಂದ ಹೊರಬಿದ್ದಿದ್ದಾರೆ.
ಮಾಡೋದೆಲ್ಲ ಮಾಡಿದ್ದೇನೆ. ಮತ್ತೇನು ಮಾಡಬೇಕೊ ಗೊತ್ತಾಗುತ್ತಿಲ್ಲ ಎನ್ನುತ್ತಿದ್ದ ರಕ್ಷಕ್, ವೀಕ್ಷಕರ ಅವಗಾಹನೆಗೆ ಒಳಗಾಗಿ ಎಲಿಮಿನೇಟ್ ಆಗಿ ಹೊರಬಿದ್ದಿದ್ದಾರೆ.
ಟಾಸ್ಕ್‌ಗಳಲ್ಲಿ ಬಹಳ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದ ರಕ್ಷಕ್ ಎರಡನೇ ವಾರವೇ ಮನೆಯ ಕ್ಯಾಪ್ಟನ್ ಆಗಿ ಗಮನ ಸೆಳೆದಿದ್ದರು. ಆದರೆ, ಇತರೆ ಚಟುವಟಿಕೆಗಳಲ್ಲಿ ಅವರು ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಕೆಲವೊಮ್ಮೆ, ಮಾತುಗಳಲ್ಲಿ ಹಾದಿ ತಪ್ಪುತಿದ್ದ ಅವರು ಕಿಚ್ಚನಿಂದ ಪಾಠ ಹೇಳಿಸಿಕೊಂಡಿದ್ದರು.
ಮೂರನೇ ವಾರದಿಂದ ಹದಗೆಟ್ಟ ಮನೆಯ ವಾತಾವರಣದಲ್ಲಿ ರಕ್ಷಕ್ ಕಳೆದೇ ಹೋಗಿದ್ದರು. ಮನೆಯಲ್ಲಿ ಗುಂಪುಗಾರಿಕೆ ಹೆಚ್ಚಾಗಿ ವಿನಯ್ ಬಳಗದಲ್ಲಿ ಕಾಣಿಸಿಕೊಂಡಿದ್ದ ಅವರಿಗೆ ಪ್ರೇಕ್ಷಕ ಕೆಂಪು ಬಾವುಟ ತೋರಿಸಿದ್ದಾನೆ.
ವಿನಯ್ ಜಸ್ಟ್ ಮಿಸ್
ಭಾನುವಾರದ ಸಂಚಿಕೆಯಲ್ಲಿ ತನಿಶಾ, ಮೈಕಲ್, ಸ್ನೇಹಿತ್ ಸೇಫ್ ಆದರೆ ವಿನಯ್ ಮತ್ತು ರಕ್ಷಕ್ ಅಂತಿಮ ಹಂತಕ್ಕೆ ಬಂದಿದ್ದರು. ಕಳೆದ ವಾರ ವಿನಯ್ ಬಳಗದ ಪದ ಬಳಕೆ, ಆಕ್ರಮಣಕಾರಿ ವರ್ತನೆಗೆ ಜನ ಬೇಸತ್ತು ಮತ ಹಾಕದಿರುವುದು ಎದ್ದು ಕಂಡಿತು.
ಬಳೆ ಬಗೆಗಿನ ಆಕ್ಷೇಪಾರ್ಹ ಮಾತು. ಸಂಗೀತಾ ಮತ್ತು ತನಿಶಾ ಜೊತೆಗಿನ ವಾಗ್ಯುದ್ಧ, ಗುಂಪುಗಾರಿಕೆ ಇವೇ ಮುಂತಾದ ವರ್ತನೆಗಳಿಂದ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ವಿನಯ್, ರಕ್ಷಕ್ ಜೊತೆ ಕೊನೆಯ ಮೆಟ್ಟಿಲಲ್ಲಿ ಬಂದು ನಿಂತಿದ್ದರು. ಅದೃಷ್ಟವಶಾತ್ ರಕ್ಷಕ್ ಹೊರಬಿದ್ದು ವಿನಯ್ ಸೇಫ್ ಆದರು.
ಒಂದು ರೀತಿಯಲ್ಲಿ ಇದು ವಿನಯ್‌ಗೆ ಎಚ್ಚರಿಕೆ ಗಂಟೆಯೇ ಆಗಿತ್ತು. ದುರ್ವರ್ತನೆಗೆ ಬಿಗ್ ಬಾಸ್ ಮನೆಯಲ್ಲಿ ಜಾಗ ಇಲ್ಲ, ವೀಕ್ಷಕರು ಸಹ ಅದನ್ನು ಸಹಿಸುವುದಿಲ್ಲ ಎಂಬ ಸಂದೇಶ ವಿನಯ್ ಸಿಕ್ಕಿತ್ತು. ಕೊನೆಗೆ ಏನೇ ತಪ್ಪಾಗಿದ್ದರೂ ಕ್ಷಮಿಸಿ ಎಂದು ಹೇಳಿ ವಿನಯ್ ಮನೆಗೆ ಹಿಂದಿರುಗಿದರು.
ಬೆಳಕಿನಾಟದಲ್ಲಿ ಮರೆಯಾದ ರಕ್ಷಕ್
ಈ ವಾರದ ಎಲಿಮಿನೆಶನ್ ಬೇರೆ ರೀತಿಯಾಗಿಯೇ ಇತ್ತು. ಎರಡು ಲೈಟ್‌ಗಳ ಕೆಳಗೆ ರಕ್ಷಕ್ ಮತ್ತು ವಿನಯ್ ಅವರನ್ನು ನಿಲ್ಲಿಸಿ ಸ್ವಿಚ್ ಆನ್ ಮತ್ತು ಆಫ್ ಮಾಡಲಾಗುತ್ತಿತ್ತು. ಯಾರ ದೀಪ ಆರಿ ಹೋಗುತ್ತದೆಯೋ ಅವರು ಹೊರ ಹೋಗುತ್ತಾರೆ. ಯಾರ ದೀಪ ಬೆಳಗುವುದನ್ನು ಮುಂದುವರಿಸುತ್ತದೆಯೋ ಅವರು ಗೆಲ್ಲುತ್ತಾರೆ ಎಂಬ ನಿಯಮವಿತ್ತು. ದೀಪ ಆರುವ ಮತ್ತು ಉರಿಯುವ ಆಟದಲ್ಲಿ ವಿನಯ್ ಮತ್ತೊಂದು ಅವಕಾಶ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.