ಮಂಗಳವಾರ, ಮೇ 18, 2021
30 °C

Bigg Boss 8: ನಿಧಿ– ಪ್ರಶಾಂತ್ ಮಾತುಕತೆಯ ವಿಡಿಯೊ ನೋಡಿ ಶಾಕ್ ಆದ ಅರವಿಂದ್

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ 50ನೇ ದಿನ ಮುಗಿಸಿದೆ. ಟಾಸ್ಕ್‌ಗಳು ಸಹ ಕಠಿಣವಾಗುತ್ತಾ ಹೋಗುತ್ತಿವೆ. ಈ ಹಿಂದೆ 'ಹೊಲಸು ನಿದ್ಧಿ' ಎಂಬ ಪದವನ್ನು 'ಹೊಲಸು ನಿಧಿ' ಎಂಬಂತೆ ತಪ್ಪಾಗಿ ಕೇಳಿಸಿಕೊಂಡು ಅರವಿಂದ್‌ಗೆ ನಿಧಿ ಸುಬ್ಬಯ್ಯ ಕಪ್ಪು ಮಸಿ ಹಚ್ಚಿದ್ದರು. ಆದರೆ, ಈಗ ನಿಧಿ ಬಗ್ಗೆ ಯಾರೋ ಹೇಳಿದ ತಪ್ಪು ಮಾಹಿತಿಯನ್ನು ಆಧರಿಸಿ ಅವರನ್ನು ಕಳಪೆ ಎಂದು ನಿರ್ಧರಿಸಿದ ತಮ್ಮ ತಪ್ಪಿಗೆ ಅರವಿಂದ್ ವಿಷಾಧ ವ್ಯಕ್ತಪಡಿಸಿದ್ದಾರೆ.

ಸುಳ್ಳು ಮಾತನ್ನು ನಂಬಿದ್ದ ಅರವಿಂದ್: ವಾರ್ಡನ್ ಟಾಸ್ಕ್ ವೇಳೆ ನಿಧಿಯವರು ಅತ್ಯುತ್ತಮ ಸ್ಪರ್ಧಿ ಎಂದು ಘೋಷಿಸಲು ಮನೆಯ ನಾಲ್ಕೈದು ಮಹಿಳೆಯರ ಹೆಸರು ಸೂಚಿಸಿದ್ದರು. ಆದರೆ, ಪ್ರಶಾಂತ್ ಮಾತ್ರ ದಿವ್ಯಾ ಸುರೇಶ್ ಹೆಸರನ್ನು ಒತ್ತಿ ಹೇಳಿದ್ದರು. ಇದರಿಂದಾಗಿ, ಅತ್ಯುತ್ತಮ ಸ್ಪರ್ಧಿ ಮತ್ತು ಹೆಚ್ಚು ಪತ್ರ ಅಡಗಿಸಿಟ್ಟ ಖ್ಯಾತಿಯೂ ದಿವ್ಯಾ ಸುರೇಶ್ ಅವರಿಗೆ ಸಿಕ್ಕಿತ್ತು. ಹೀಗಾಗಿ, ಮತ್ತೊಬ್ಬರಿಗೆ ಸಿಗಬೇಕಾದ ಕ್ಯಾಪ್ಟನ್ಸಿ ಕಂಟೆಸ್ಟೆಂಟ್ ಮಿಸ್ಸಾದ ಬಗ್ಗೆ ಅರವಿಂದ್ ಅವರು ಪ್ರಶಾಂತ್ ಸಂಬರಗಿ ಬಳಿ ವಿಚಾರಿಸಿದಾಗ, ನಾನೇನು ಮಾಡಲಿ ಮಹಿಳೆಯರ ವಾರ್ಡನ್ ಆಗಿದ್ದ ನಿಧಿ ಸುಬ್ಬಯ್ಯ ಅವರು ದಿವ್ಯಾ ಸುರೇಶ್ ಅವರ ಹೆಸರನ್ನೇ ಹೇಳಿದರು. ಹಾಗಾಗಿ, ಅವರನ್ನೇ ಆಯ್ಕೆ ಮಾಡಿದೆ ಎಂದು ಸುಳ್ಳು ಹೇಳಿದ್ದರು

ಈ ಮಾತುಗಳನ್ನೇ ನಂಬಿಕೊಂಡ ಅರವಿಂದ್, ಕಳಪೆ ಸ್ಪರ್ಧಿ ಆಯ್ಕೆ ವೇಳೆ ನಿಧಿ ಹೆಸರು ಸೂಚಿಸಿದ್ದಲ್ಲದೆ, ಪ್ರಶಾಂತ್ ಮತ್ತು ನಿಧಿಗೆ ಸಮಾನ ಮತಗಳು ಬಿದ್ದಿದ್ದರಿಂದ ತಮ್ಮ ನಾಯಕನ ಅಧಿಕಾರಿ ಬಳಸಿ ನಿಧಿ ಕಳಪೆ ಸ್ಪರ್ಧಿ ಎಂದು ಘೋಷಿಸಿದ್ದರು. ಇದೇ ಕಾರಣಕ್ಕೆ ಪ್ರಶಾಂತ್ ಮಾತನ್ನು ನಂಬಿ ಹಲವರು ನಿಧಿಗೆ ಕಳಪೆ ಪಟ್ಟ ಕೊಟ್ಟಿದ್ದರು.

ಕಣ್ಣು ತೆರೆಸಿದ ಬಿಗ್ ಬಾಸ್: ಈ ಎಲ್ಲ ಪ್ರಸಂಗಗಳನ್ನು ಗಮನಿಸಿದ್ದ ಬಿಗ್ ಬಾಸ್, ನಾಯಕ ಅರವಿಂದ್ ಅವರನ್ನು ಕನ್ಫೆಶನ್ ಕೊಠಡಿಗೆ ಕರೆದು ವಾರ್ಡನ್‌ಗಳು ಅತ್ಯುತ್ತಮ ಸ್ಪರ್ಧಿ ಆಯ್ಕೆ ನಡೆಸಿದ ವಿಡಿಯೊ ತೋರಿಸಿದರು. ಈ ವೇಳೆ, ಸತ್ಯ ಅರಿತ ಅರವಿಂದ್ ಮೌನವಾದರು. ನಿಧಿ ಸುಬ್ಬಯ್ಯ ಎಲ್ಲ ಸ್ಪರ್ಧಿಗಳಿಗೂ ನ್ಯಾಯ ಒದಗಿಸುವ ಮಾತುಗಳನ್ನಾಡಿರುವುದು ಅವರ ಗಮನಕ್ಕೆ ಬಂದಿತು. ಪ್ರಶಾಂತ್ ಸುಳ್ಳು ಹೇಳಿರುವುದು ಅರಿವಾಯ್ತು.

ಬಳಿಕ, ಲಿವಿಂಗ್ ಏರಿಯಾದಲ್ಲಿ ನಿಧಿ ಅವರನ್ನು ಕರೆದು ಅರವಿಂದ್ ಅವರು ತಮ್ಮ ತಪ್ಪಿಗೆ ವಿಷಾಧ ವ್ಯಕ್ತಪಡಿಸಿದರು. ತೀರ್ಪು ಪ್ರಕಟಣೆಗೂ ಮುನ್ನ ನಿಮ್ಮ ಮತ್ತು ಪ್ರಶಾಂತ್ ನಡುವೆ ನಡೆದ ಮಾತುಕತೆಯ ವಿಡಿಯೊವನ್ನು ಬಿಗ್ ಬಾಸ್ ನನಗೆ ತೋರಿಸಿದರು. ನಿನ್ನದು ಯಾವುದೇ ದೋಷವಿಲ್ಲ. ಗುಡ್ ಗರ್ಲ್ ಎಂದು ಗದ್ಗದಿತರಾದರು.

ಒಟ್ಟಿನಲ್ಲಿ, ಬಿಗ್ ಬಾಸ್ ಮನೆಯಲ್ಲಿ ಸುಳ್ಳಿನಿಂದಲೇ ಕುಖ್ಯಾತರಾಗಿರುವ ಪ್ರಶಾಂತ್ ಸಂಬರಗಿ ಮನೆಯ ಸದಸ್ಯರ ನಡುವೆ ಒಡಕು ಮೂಡಿಸುತ್ತಿದ್ದಾರೆ. ಬಿಗ್ ಬಾಸ್ ಇದನ್ನು ಗಂಭೀರವಾಗಿ ಪರಿಗಣಿಸಿರುವುದು ಕಂಡು ಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು