ಬುಧವಾರ, ಜೂನ್ 16, 2021
28 °C

Bigg Boss 8: ಮತ್ತೆ ಆರಂಭವಾಗುತ್ತಾ ಬಿಗ್‌ ಬಾಸ್? ಬಲವಾದ ಸುಳಿವು ಕೊಟ್ಟ ಸುದೀಪ್

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ 72ನೇ ದಿನಕ್ಕೆ ಕೊನೆಗೊಂಡಿದೆ. ಕೋವಿಡ್ ಆರ್ಭಟದಲ್ಲಿ ಶೂಟಿಂಗ್ ಸಾಧ್ಯವಾಗದೇ ಮುಕ್ಕಾಲು ಭಾಗ ಮುಗಿದಿದ್ದ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಗಿದೆ. ಆದರೆ, ಇದು ಇಷ್ಟಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಮತ್ತೆ ಆರಂಭವಾಗುವ ಸೂಚನೆ ಕೊಟ್ಟಿದ್ದಾರೆ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್.

ಹೌದು, ಅಂತಿಮ ಎಪಿಸೋಡ್‌ನಲ್ಲಿ ಮನೆಯ ಸದಸ್ಯರಿಗೆ ಭಾವನಾತ್ಮಕ ವಿಡಿಯೊ ಸಂದೇಶ ನೀಡಿದ ಕಿಚ್ಚ ಸುದೀಪ್ ಅವರು, ತಾರ್ಕಿಕ ಅಂತ್ಯಕಾಣದ ಶೋ ಬಗ್ಗೆ ಬೇಸರಗೊಂಡು ಸಪ್ಪೆ ಮುಖಗಳನ್ನು ಹಾಕಿಕೊಂಡು ಕುಳಿತಿದ್ದ ಸದಸ್ಯರಿಗೆ ಗುಡ್ ನ್ಯೂಸ್ ಕೊಟ್ಟರು.

ಕಿಚ್ಚ ಹೇಳಿದ್ದೇನು?: ಈ ಶೋ ಅಂತ್ಯವಾಗುತ್ತಿರುವ ಬಗ್ಗೆ ಈಗಾಗಲೇ ಬಿಗ್ ಬಾಸ್ ನಿಮಗೆ ಹೇಳಿರುತ್ತಾರೆ. ಕೋವಿಡ್ ಪರಿಸ್ಥಿಯಿಂದ ಶೋ ಮುಗಿಯುತ್ತಿರುವ ಬಗ್ಗೆ ನನಗೂ ಅತ್ಯಂತ ಬೇಸರವಾಗಿದೆ. ನಮ್ಮೆಲ್ಲರಿಗಿಂತ ಅತಿ ಹೆಚ್ಚು ಪ್ರೇಕ್ಷಕರಿಗೆ ನೋವಾಗಿದೆ. ನೀವೆಲ್ಲರೂ ಅತ್ಯುತ್ತಮವಾಗಿ ಮನೆಯ ಟಾಸ್ಕ್‌ಗಳಲ್ಲಿ ಪಾಲ್ಗೊಂಡು ಜನರ ಮನಸ್ಸು ಗೆದ್ದಿದ್ದೀರಿ. ನೀವೆಲ್ಲರೂ ವಿನ್ನರ್ಸ್ ಎಂದರು. ಮೂರು ವಾರ ನಾನು ಬರುವುದಕ್ಕೆ ಆಗಲಿಲ್ಲ. ಬಳಿಕ, ಕೋವಿಡ್ ಪ್ರೋಟೊಕಾಲ್‌ನಿಂದ ಶೂಟಿಂಗ್ ನಡೆಯಲಿಲ್ಲ. ಇದು ಅಂತ್ಯವಲ್ಲ. ಬಿಗ್ ಬಾಸ್ ವಿನ್ನರ್ ಘೋಷಣೆಯಾಗದೆ ಈ ಕಾರ್ಯಕ್ರಮ ಅಂತ್ಯ ಕಾಣುವುದಿಲ್ಲ. ಭವಿಷ್ಯದಲ್ಲಿ ಇದಕ್ಕಾಗಿ ತಂಡ ಯಾವ ಯೋಜನೆ ರೂಪಿಸುತ್ತೆ ನೋಡೋಣ. ಈಗ ಹೊರಗೆ ಹೋಗುತ್ತಿರುವ ನೀವು ಭವಿಷ್ಯವನ್ನು ಎದುರು ನೋಡಿ ಎಂದು ಸುದೀಪ್ ಹೇಳಿದರು.

ಹೀಗಾಗಿ, ನೋವಿನಿಂದ ಮನೆಯಿಂದ ಹೊರ ಹೋಗಲು ನಿರ್ಧರಿಸಿದ್ದ ಸದಸ್ಯರ ಮುಖದಲ್ಲಿ ಮಂದಹಾಸ ಮೂಡಿತ್ತು. ಮತ್ತೊಂದು ಅವಕಾಶ ಸಿಗಬಹುದೇ ಎಂಬ ನಿರೀಕ್ಷೆಯಲ್ಲೇ ತಮ್ಮ ತಮ್ಮ ಮನೆಯ ಹಾದಿ ಹಿಡಿದರು.

ಸುಳಿವು ಕೊಟ್ಟ ಬಿಗ್ ಬಾಸ್: ಇದಕ್ಕೂ ಮುನ್ನ, ಬಿಗ್ ಬಾಸ್ ಮಾರ್ಮಿಕವಾಗಿ ಶೋ ಮತ್ತೆ ಪ್ರಾರಂಭವಾಗುವ ಸೂಚನೆ ಕೊಟ್ಟರು. ಯಾವುದೇ ಪಯಣದ ಅಂತ್ಯಕ್ಕೆ ಒಂದು ಆರಂಭವಿರುತ್ತದೆ. ನೀವು ಆರಂಭಿಸದ ಪಯಣ ಮಾತ್ರ ಪೂರ್ತಿ ಮಾಡಲಾಗದ ಪಯಣ ಎಂಬುದು ನೆನಪಿರಲಿ. ನಿಂತ ಪ್ರಯಾಣ ಯಾವುದೇ ಸಂದರ್ಭ ಆರಂಭವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಹೀಗಾಗಿ, ಕೊರೊನಾ ಅಬ್ಬರ ಇಳಿದ ಬಳಿಕ ಕೊನೆಯ ಕಂತುಗಳನ್ನು ಮತ್ತೆ ನಡೆಸುವ ಸಾಧ್ಯತೆ ಇದ್ದಂತೆ ಕಾಣುತ್ತಿದೆ. ಭವಿಷ್ಯ ಕೊರೊನಾ ಪರಿಸ್ಥಿತಿ ಏನಾಗಬಹುದು ಎಂಬ ಊಹೆ ಮಾಡಲಾಗದ ಕಾರಣ ಶೋ ಪುನರಾರಂಭಿಸುವ ಯೋಚನೆ ಬಗ್ಗೆ ಬಿಗ್ ಬಾಸ್ ತಂಡ ಅಧಿಕೃತ ಮಾಹಿತಿ ನೀಡಿದಂತಿಲ್ಲ ಎನ್ನುವಂತೆ ಕಾಣುತ್ತಿದೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು