ಶನಿವಾರ, ಮೇ 15, 2021
25 °C

Bigg Boss 8: ಕಣ್ಣೀರಲ್ಲಿ ಮುಳುಗಿದ ಮನೆ, ನಿಧಿಗೆ ಗಿಫ್ಟ್ ಕೊಟ್ಟು ಹೋದ ವಿಶ್ವ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕನ್ನಡದ ಬಿಗ್ ಬಾಸ್ ಮನೆಯಲ್ಲಿ 7ನೇ ವಾರ ಸುದೀಪ್ ಅನುಪಸ್ಥಿತಿಯಲ್ಲಿ ವಿಶಿಷ್ಟ ರೀತಿಯಲ್ಲಿ ಎಲಿಮಿನೇಶನ್ ನಡೆದಿದೆ. ಸಿಂಗರ್ ಮತ್ತು‌ ಮನೆಯ ಕಿರಿಯ ಸದಸ್ಯ ವಿಶ್ವನಾಥ್ ಎಲ್ಲರಿಗಿಂತ ಕಡಿಮೆ ವೀಕ್ಷಕರ ಮತಗಳನ್ನು ಪಡೆದು ಮನೆಯಿಂದ ಹೊರಹೋಗಿದ್ದಾರೆ.

ಒಬ್ಬೊಬ್ಬರು ಒಂದೊಂದು ರೀತಿ ಸೇಫ್: ಸುದೀಪ್ ಅನುಪಸ್ಥಿತಿಯಲ್ಲಿ ಮನೆಯಲ್ಲಿಯೇ ಸದಸ್ಯರನ್ನು ಒಬ್ಬೊಬ್ಬರಾಗಿ ವಿಶಿಷ್ಟ ರೀತಿಯಲ್ಲಿ ಸೇಫ್ ಮಾಡಲಾಯಿತು. ಮೊದಲಿಗೆ ಲಿವಿಂಗ್ ಏರಿಯಾದಲ್ಲಿ ಪೆಟ್ಟಿಗೆಗಳನ್ನು ಇಟ್ಟು ಅದರಲ್ಲಿ ನಾಮಿನೇಶನ್ ಆಗಿರುವ ಸ್ಪರ್ಧಿಗಳು ಕೈಇಡುವಂತೆ ಸೂಚಿಸಲಾಯಿತು. ಕೈ ತೆಗೆದಾಗ ಯಾರ ಕೈಗೆ ಹಸಿರು ಬಣ್ಣ ಮೆತ್ತಿಕೊಂಡಿರುತ್ತದೆಯೊ ಅವರು ಸೇಫ್ ಎಂಬ ನಿಯಮವಿತ್ತು. ಇಲ್ಲಿ ದಿವ್ಯಾ ಉರುಡುಗ ಅವರ ಕೈ ಹಸಿರಾಗಿದ್ದರಿಂದ ಮೊದಲಿಗೆ ಸೇಫ್ ಆದರು.

ನಕ್ಕು ಅರವಿಂದ್ ಅವರನ್ನು ಸೇಫ್ ಮಾಡಿದ ಮಗು: ಹೌದು, ಎರಡನೇ ಸದಸ್ಯನನ್ನು ಸೇಫ್ ಎಂದು ಘೋಷಿಸಲು ಅಳುವ ಮಗುವಿನ ಗೊಂಬೆಯನ್ನು ಎಲ್ಲರ ಕೈಗೆ ನೀಡಲಾಗಿತ್ತು. ಅಳುತ್ತಿದ್ದ ಮಗುವಿನ ಗೊಂಬೆ ಯಾರ ಕೈಗೆ ಬಂದಾಗ ಅಳು ನಿಲ್ಲಿಸಿ ನಗುತ್ತದೆಯೋ ಅವರು ಸೇಫ್ ಎಂದು ಹೇಳಲಾಗಿತ್ತು. ಮೊದಲ ಸುತ್ತಿನಲ್ಲಿ ಎಲ್ಲ ಸದಸ್ಯರು ಪ್ರಯತ್ನಪಟ್ಟರೂ ಮಗು ಅಳು ನಿಲ್ಲಿಸಲಿಲ್ಲ. ಎರಡನೇ ಸುತ್ತಿನಲ್ಲಿ, ಅರವಿಂದ್ ಕೈಸೇರಿದ ಕೂಡಲೇ ಮಗು ನಕ್ಕಿದ್ದರಿಂದ ಅವರು ಸೇಫ್ ಆದರು.

ಬಲೂನಿನಿಂದ ಮಂಜು ಪಾವಗಡ ಸೇಫ್: ನಾಮಿನೇಶನ್ನಿನಲ್ಲಿ ಉಳಿದ ಪ್ರತೀ ಸದಸ್ಯರ ಕೈಗೆ ಬಲೂನ್ ನೀಡಲಾಗಿತ್ತು. ಬಲೂನ್ ಒಡೆದಾಗ ಮಂಜು ಪಾವಗಡ ಅವರಿಗೆ ಹಸಿರು ಚೀಟಿ ಸಿಕ್ಕಿದ್ದರಿಂದ ಅವರು ಸೇಫ್ ಆದರು.

ಬಳಿಕ, ಗನ್ ಶೂಟ್ ಸುತ್ತಿನಲ್ಲಿ ದಿವ್ಯಾ ಸುರೇಶ್, ತೆಂಗಿನಕಾಯಿ ಒಡೆಯುವ ಸುತ್ತಿನಲ್ಲಿ ರಾಜೀವ್, ಪತ್ರದ ಸುತ್ತಿನಲ್ಲಿ ಶಮಂತ್ ಸೇಫ್ ಆದರು.

ಅಂತಿಮವಾಗಿ ಉಳಿದ ಚಕ್ರವರ್ತಿ ಚಂದ್ರಚೂಡ್ ಮತ್ತು ವಿಶ್ವನಾಥ್ ಅವರಿಗೆ ಢವಢವ ಶುರುವಾಗಿತ್ತು. ಟಿವಿ ಪರದೆ ಮೇಲೆ ಯಾರ ವಿಟಿ ಪ್ಲೇ ಆಗುತ್ತದೆಯೊ ಅವರ ಪಯಣ ಇಲ್ಲಿಗೆ ಅಂತ್ಯವಾಗುತ್ತದೆ ಎಂದು ಬಿಗ್ ಬಾಸ್ ಘೋಷಿಸಿದರು. ವಿಶ್ವನಾಥ್ ವಿಟಿ ಪ್ಲೇ ಆಗುವುದರೊಂದಿಗೆ ಅವರು ಮನೆ ಬಿಟ್ಟು ಹೊರನಡೆದರು.

ಕಣ್ಣೀರಲ್ಲಿ ಮುಳುಗಿದ ಮನೆ: ವಿಶ್ವನಾಥ್ ಹೊರಡುವ ವೇಳೆ ಮನೆಯ ಸದಸ್ಯರೆಲ್ಲರಿಗೆ ದುಃಖ ಉಮ್ಮಳಿಸಿ ಬಂದಿತು. ಪ್ರತಿಯೊಬ್ಬರೂ ವಿಶ್ವನಾಥ್ ಜೊತೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡು ಗದ್ಗದಿತರಾದರು. ಅವನು ಉಳಿದು, ನಾನು ಹೋಗಿದ್ದರೆ ಚೆನ್ನಾಗಿತ್ತು ಎಂದು ಚಕ್ರವರ್ತಿ ಚಂದ್ರಚೂಡ್ ದುಃಖ ತೋಡಿಕೊಂಡರು. ಕೊನೆಯಲ್ಲಿ ಅಮ್ಮನ ಕುರಿತಾದ ಹಾಡು ಹಾಡಿ ವಿಶ್ವನಾಥ್ ಹೊರನಡೆದರು.

ಅಕ್ಕ ನಿಧಿಗೆ ವಿಶ್ವನಾಥ್ ಗಿಫ್ಟ್: ಮನೆಯಿಂದ ತೆರಳುವ ವೇಳೆ ಮುಂದಿನ ವಾರ ಒಬ್ಬರನ್ನು ಎಲಿಮಿನೇಶನ್ನಿನಿಂದ ಪಾರು ಮಾಡುವ ಅಧಿಕಾರವನ್ನು ಬಿಗ್ ಬಾಸ್ ವಿಶ್ವನಾಥ್ ಅವರಿಗೆ ಕೊಟ್ಟರು. ಆ ಸಂದರ್ಭ, ವಿಶ್ವನಾಥ್ ಮನೆಯಲ್ಲಿ ತಾನು ಪ್ರೀತಿಯಿಂದ ಅಕ್ಕ ಎಂದು ಕರೆಯುತ್ತಿದ್ದ ನಿಧಿ ಸುಬ್ಬಯ್ಯ ಅವರ ಹೆಸರು ಸೂಚಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು