ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೇಕಿನ ನಂತರ ಬಣ್ಣ ಹೊಸದಾಗಿದೆ!

Last Updated 28 ಮೇ 2020, 19:30 IST
ಅಕ್ಷರ ಗಾತ್ರ

ಎರಡು ತಿಂಗಳ ಗೃಹಬಂಧನದ ನಂತರ ಬದುಕು ಮತ್ತೆ ಗರಿಗೆದರುತ್ತಿದೆ. ಬಸ್ಸುಗಳು ರಸ್ತೆಗಿಳಿದಿವೆ, ವಿಮಾನಗಳು ಆಕಾಶಕ್ಕೇರಿವೆ. ಆದರೂ ಬದುಕು ಸಂಪೂರ್ಣ ಯಥಾಸ್ಥಿತಿಗೆ ಮರಳಿದೆ ಅನ್ನಿಸ್ತಿಲ್ಲ. ಯಾಕೆಂದರೆ ನಮ್ಮ ಬದುಕಿನ ಯಥಾಸ್ಥಿತಿ ಟಿ.ವಿ ಧಾರಾವಾಹಿಗಳ ಕಥಾಸ್ಥಿತಿಯ ಜೊತೆಗೂ ಬೆಸೆದುಕೊಂಡಿದೆ. ದೈನಂದಿನ ಬದುಕನ್ನು ಮುಂದುವರಿಸುವ ಸೀರಿಯಲ್ಲುಗಳು ಶುರುವಾಗದ ಹೊರತು ಜನರ ಮನಸಿನ ಲಾಕ್ ಡೌನ್ ಮುಗಿಯುವುದಿಲ್ಲ.

ವಿಮಾನಗಳು ಆಕಾಶಕ್ಕೇರುವುದರಷ್ಟೇ, 'ರಾಶಿ'ಯ ಆಟೋ ರಸ್ತೆಗಿಳಿಯುವುದೂ ನೋಡುಗರಿಗೆ ಮುಖ್ಯ, ಮಕ್ಕಳ ಶಾಲೆಗಳು ಸದ್ಯಕ್ಕೆ ಶುರುವಾಗುವ ಲಕ್ಷಣಗಳಿಲ್ಲದಿದ್ದರೂ 'ಕನ್ನಡತಿ'ಯ ಕ್ಲಾಸುಗಳು ಶುರುವಾದರೆ ಅಷ್ಟರ ಮಟ್ಟಿಗೆ ಸಮಾಧಾನ. ಜಗತ್ತೆಲ್ಲಾ ಬಾಯಿಗೆ ಬಟ್ಟೆ ಕಟ್ಟಿಕೊಂಡಿದ್ದರೂ, 'ಮೀರಾ' ಒಬ್ಬಳು ಪಟಪಟ ಮಾತಾಡುತ್ತಿದ್ದರೆ ಎಲ್ಲವೂ ಸರಿ ಇದೆ ಅನ್ನುವ ಖುಷಿ.

ಜೂನ್ 1ರಿಂದ ಧಾರಾವಾಹಿಗಳು ಮತ್ತೆ ಪ್ರಸಾರವಾಗಲಿವೆ. ಈಗಾಗಲೇ ಚಿತ್ರೀಕರಣವೂ ಶುರುವಾಗಿದೆ. ಕ್ಯಾಮೆರಾ, ಟ್ರಾಲಿ, ಲೈಟುಗಳ ಜೊತೆಯಲ್ಲಿ ಮಾಸ್ಕು, ಸ್ಯಾನಿಟೈಸರ್, ಸೋಪುಗಳನ್ನು ಸಹ ಹರಡಿಕೊಂಡು ಸದ್ದಿಲ್ಲದೆ 'ಆ್ಯಕ್ಷನ್' ಶುರುವಾಗಿದೆ.

ಕಲರ್ಸ್ ಕನ್ನಡ ವಾಹಿನಿ ಹೊಸ ಬಣ್ಣದಲ್ಲಿ ಬರಲು ಸಿದ್ಧವಾಗಿದೆ. ‘ನಿರಂತರ ಓಡುತ್ತಲೇ ಇರುವವರು, ಮಳೆ ಸುರಿದಾಗ ವಿಧಿಯಿಲ್ಲದೆ ಮರದಡಿ ನಿಲ್ಲುತ್ತೇವಲ್ಲ, ಹಾಗೆ ಈ ಲಾಕ್‌ಡೌನ್‌ ವಿರಾಮವೂ ಎಲ್ಲರಿಗೂ ತುಸು ನಿಂತು ಯೋಚಿಸಿ ಹೊಸ ಹುರುಪಿನಲ್ಲಿ ಮುಂದೆ ಸಾಗುವ ಅವಕಾಶ ನೀಡಿದೆ. ಹಾಗಾಗಿ ಇದು ಬರೀ ಮುಂದುವರಿಕೆಯಲ್ಲ, ಹೊಸ ಪಯಣ. ಜೂನ್ ಒಂದರಿಂದ ಕಲರ್ಸ್ ಕನ್ನಡ ಹೊಸ ಬಣ್ಣ, ಹೊಸ ರೂಪದಲ್ಲಿ ಇರಲಿದೆ’ ಎನ್ನುತ್ತಾರೆ ವಯಾಕಾಂ 18 ಸಂಸ್ಥೆಯ ಕನ್ನಡ ಕ್ಲಸ್ಟರ್‌ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್.

'ಬಣ್ಣ ಹೊಸದಾಗಿದೆ; ಬಂಧ ಬಿಗಿಯಾಗಿದೆ!' ಎನ್ನುವುದು ಕಲರ್ಸ್ ಕನ್ನಡ ಚಾನೆಲ್ಲಿನ ಹೊಸ ಘೋಷವಾಕ್ಯ.ಕೊರೊನಾ ನಂತರದ ಶೂಟಿಂಗ್ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಹೊಸ ಅನುಭವ ನೀಡುತ್ತಿದೆ. 'ಕಷ್ಟ ಸುಖ ಅನ್ನೋದಕಿಂತ ಇದೊಂದು ಚಾಲೆಂಜ್' ಎನ್ನುತ್ತಾರೆ ‘ಮಿಥುನರಾಶಿ’ ಧಾರಾವಾಹಿಯ ನಿರ್ಮಾಪಕ ನರಹರಿ.

ನಿರ್ದೇಶಕ ರಾಮ್‌ಜಿಯವರಿಗಂತೂ ಡಬಲ್ ಟ್ರಬಲ್. ಏಕೆಂದರೆ ಅವರು ‘ಗೀತಾ’ ಹಾಗೂ ‘ಮಂಗಳಗೌರಿ ಮದುವೆ' ಎರಡೂ ಧಾರಾವಾಹಿಗಳ ನಿರ್ದೇಶಕ ಹಾಗೂ ನಿರ್ಮಾಪಕ. ‘ಕೊರೊನಾ ಜತೆ ಸಂಸಾರ ತುಂಬಾ ಕಷ್ಟ, ಎಲ್ಲಾ ಸೆಟ್ಟಲ್ಲೂ ನರ್ಸ್‌ಗಳನ್ನು ಇರಿಸಿದ್ದೇವೆ. ಮಾಸ್ಕು ಉಸಿರುಗಟ್ಟಿಸುತ್ತೆ, ಗ್ಲೌಸು ಬೆವರು ಹರಿಸುತ್ತೆ, ಬೆವರಿನಿಂದಾಗಿ ಮೇಕಪ್ಪು ನಿಲ್ತಾ ಇಲ್ಲ. ಏನು ಮಾಡೋದು?’ ಎನ್ನುವುದು ಅವರ ಪ್ರಶ್ನೆ.

ನಟ, ನಟಿಯರ ಅನುಭವಗಳು ಇನ್ನೊಂದು ಥರ. ‘ಎರಡು ತಿಂಗಳಿಂದ ಮೀರಾಳನ್ನ ತುಂಬಾ ಮಿಸ್ ಮಾಡ್ಕೊತಾ ಇದ್ದೆ, ಈಗ ಶೂಟಿಂಗ್ ಶುರುವಾಗಿರುವುದರಿಂದ ಥ್ರಿಲ್ ಆಗಿದೀನಿ’ ಎನ್ನುತ್ತಾರೆ 'ನಮ್ಮನೆ ಯುವರಾಣಿ'ಯ ಮೀರಾ ಪಾತ್ರಧಾರಿ ಅಂಕಿತಾ.

‘ಎರಡು ತಿಂಗಳಾದ ಮೇಲೆ ಮತ್ತೆ ಕೆಲಸ ಮಾಡ್ತಿರೋದು ನೆಮ್ಮದಿ ಅನಿಸ್ತಿದೆ. ಮತ್ತೆ ದುಡಿಮೆಯ ದಾರಿ ತೆರೆದಿದೆ. ಸುರಕ್ಷಿತ ಚಿತ್ರೀಕರಣ ನಮ್ಮ ಮುಖ್ಯ ಗುರಿ’ ಎನ್ನುತ್ತಾರೆ ‘ಕನ್ನಡತಿ' ಧಾರಾವಾಹಿಯ ಹರ್ಷ ಪಾತ್ರಧಾರಿ ಕಿರಣ್ ರಾಜ್.

‘ಶೂಟಿಂಗ್ ಮಾಡೋದು ಕಷ್ಟನೇ ಆದ್ರೂ ಸುಮ್ಮನೆ ಮನೆಯಲ್ಲಿ ಕೂತ್ಕೊಳೋದು ಅದಕ್ಕಿಂತ ಕಷ್ಟ’ ಎನ್ನುತ್ತಾರೆ ‘ಇವಳು ಸುಜಾತಾ’ ಧಾರಾವಾಹಿಯ ನಿರ್ಮಾಪಕ ನಟ ಸೃಜನ್ ಲೋಕೇಶ್.

ಧಾರಾವಾಹಿ ಶೂಟಿಂಗ್ ಶುರುಮಾಡಿರುವ ಸೃಜನ್, ‘ಆದಷ್ಟು ಬೇಗ ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೂ ಸರ್ಕಾರಅನುಮತಿ ನೀಡಿದಲ್ಲಿ ‘ಮಜಾಟಾಕೀಸ’ನ್ನೂ ಶುರು ಮಾಡಬಹುದು ಎಂಬ ಉತ್ಸಾಹದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT