ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂಗಲ್ಯವೋಪ್ರೇಮವೋ...!

Last Updated 21 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಮುಖದ ತುಂಬಾ ಸಿಟ್ಟು. ಮನಸ್ಸಿನ ತುಂಬಾ ಪ್ರೀತಿ. ಅಪ್ಪ ಅಮ್ಮನ ಮುದ್ದಿನ ಮಗ, ತಂಗಿಗೆ ಇಷ್ಟದ ಅಣ್ಣ. ಅಣ್ಣನ ಮುದ್ದಿನ ತಮ್ಮ. ಒಳ್ಳೆಯ ಸ್ನೇಹಿತ. ಇಂತಿಪ್ಪ ತೇಜು, ತಾನು ಪ್ರೀತಿ ಮಾಡುತ್ತಿರುವ ಹುಡುಗಿ ಮಾಯಾಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕೋ ಅಥವಾ ಸಪ್ತಪದಿ ತುಳಿದ ಶ್ರಾವಣಿ ಜೊತೆ ಮುಂದೆ ಸಾಗಬೇಕೋ ಎಂಬ ತೊಳಲಾಟದಲ್ಲಿ ಇದ್ದಾನೆ.

ಆದರೆ, ‘ನನಗೆ ಇಬ್ಬರ ಗುಣವೂ ಇರುವ ಹುಡುಗಿಯೇ ಬೇಕು’ ಅಂತಿದ್ದಾರೆ ಚಂದನ್! ‘ನಾನು ಮದುವೆ ಆಗೋ ಹುಡುಗಿ ಅರ್ಧ ಮಾಯಾ ಹಾಗೆ, ಇನ್ನರ್ಧ ಶ್ರಾವಣಿ ಹಾಗೆ ಇರಬೇಕು. ಹೊರಗೆ ಜನರ ಜೊತೆ ಬೆರೆಯೋ ರೀತಿಯಲ್ಲೂ ಇರಬೇಕು, ಮನೆಯಲ್ಲಿ ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳೋ ರೀತಿಯಲ್ಲೂ ಇರಬೇಕು. ಈ ಎರಡನ್ನೂ ಸರಿ ತೂಗಿಸಿಕೊಂಡು ಹೋಗೋ ಹುಡುಗಿ ಬೇಕು’ ಎನ್ನುವುದು ಅವರ ಬಯಕೆ.

ಚಿಕ್ಕ ವಯಸ್ಸಿನಲ್ಲೇ ನಟನೆಯ ಹುಚ್ಚು ಹತ್ತಿಸಿಕೊಂಡು ಮನರಂಜನಾ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಬೇಕು ಎಂಬ ಕನಸು ಹೊತ್ತಿದ್ದಾರೆ. ‘ಚಿಕ್ಕ ವಯಸ್ಸಿಂದಲೂ ನಟ ಆಗಬೇಕು ಅಂತ ಕನಸಿತ್ತು. ಎಲ್ಲರೂ ಮಾಡುವ ಹಾಗೆ ನಾನೂ ಕನ್ನಡಿ ಮುಂದೆ ನಿಂತು ಡೈಲಾಗ್ ಹೇಳ್ತಿದ್ದೆ. ಕಾಲೇಜಿಗೆ ಬಂದಮೇಲೆ ನಾಟಕ ಬರೆದೆ. ಹೀಗೆ ನಿರ್ದೇಶನದ ಬಗ್ಗೆ ಕೂಡ ಆಸಕ್ತಿ ಬೆಳೆಯಿತು. ಈ ಆಸಕ್ತಿ ಬೇರೆ ಭಾಷೆ ಮತ್ತು ಬೇರೆ ಬೇರೆ ದೇಶಗಳ ಸಿನಿಮಾ ನೋಡುವಂತೆ ಮಾಡಿತು’ ಎಂದು ತಮ್ಮ ಆಸಕ್ತಿಗಳ ಬಗ್ಗೆ ಉತ್ಸಾಹದಿಂದ ಹೇಳುತ್ತಾರೆ ಚಂದನ್.

ಡಾ. ರಾಜ್‍ಕುಮಾರ್ ಅಭಿನಯದ ‘ಭಕ್ತ ಪ್ರಹ್ಲಾದ’ ಚಿತ್ರದ ಹಿರಣ್ಯಕಶಿಪುವಿನ ಡೈಲಾಗನ್ನು ಸೀರಿಯಲ್‍ನಲ್ಲಿ ಒಮ್ಮೆ ಹೇಳಿ ಜನರ ಮನ ಗೆದ್ದಿದ್ದರು ಚಂದನ್. ‘ನಾನು ಶಾಲೆಯ ನಾಟಕವೊಂದರಲ್ಲಿ ಈ ಪಾತ್ರ ಮಾಡಿದ್ದೆ. ನಾನು ಚಿಕ್ಕವನಾಗಿದ್ದಾಗಿನಿಂದಲೂ ಡಾ. ರಾಜ್ ಅವರ ಅನುಕರಣೆ ಮಾಡಿಕೊಂಡು ಬಂದಿದೀನಿ’ ಎಂದರು. ತೇಜು ಕೂಡ ರಾಜ್ ಅವರ ಅಭಿಮಾನಿ. ‘ಹಿರಣ್ಯಕಶಿಪುವಿನ ಡೈಲಾಗ್ ಹೇಳುವ ಅವಕಾಶ ಸಿಕ್ಕಿತ್ತು. ಒಂದೇ ಟೇಕ್‍ನಲ್ಲಿ ಫುಲ್ ಡೈಲಾಗ್ ಹೇಳಿಬಿಟ್ಟೆ. ಚೆನ್ನಾಗಿದೆ ಅಂತ ಎಲ್ಲರೂ ಬೆನ್ನು ತಟ್ಟಿದ್ರು. ಆದರೂ, ನಂಗೆ ಅಷ್ಟು ಸಮಾಧಾನ ಇಲ್ಲ. ಇನ್ನೂ ಚೆನ್ನಾಗಿ ಹೇಳಬಹುದಿತ್ತು’ ಎನ್ನುವುದು ಅವರ ಅಭಿಪ್ರಾಯ.

ಟಿ.ವಿ. ವಾಹಿನಿಯವರು ಚಂದನ್ ಅವರಿಗೆ ಕರೆ ಮಾಡಿದ್ದಾಗ, ವಾಹಿನಿಯವರಿಗೆ ಬೈದು ಬಿಟ್ಟಿದ್ದರಂತೆ! ‘ಚಾನೆಲ್‌ನವರು ಎಲ್ಲೂ ಸಣ್ಣ ಪಾತ್ರ ಕೂಡ ಮಾಡದ ಹೊಸ ಮುಖವನ್ನು ಹುಡುಕುತ್ತ ಇದ್ದರು. ನನ್ನ ಸ್ನೇಹಿತರು ನನಗೆ ಗೊತ್ತಿಲ್ಲದ ಹಾಗೆ ನನ್ನ ಫೋಟೊ ಕಳಿಸಿಬಿಟ್ರು. ಮಜಾ ಅಂದರೆ, ಚಾನೆಲ್‌ನವರು ಒಂದು ದಿನ ರಾತ್ರಿ 12 ಗಂಟೆಗೆ ಫೋನ್ ಮಾಡಿ ಆಡಿಷನ್‍ಗೆ ಬನ್ನಿ ಅಂದರು. ಹಿಂದೆ ಒಂದು ಸಲ ಹೀಗೇ ಮಂಗ ಆಗಿದ್ದೆ. ಹಾಗಾಗಿ, ಇದೂ ಫೇಕ್ ಕರೆ ಇರಬೇಕು ಅಂತ ಚೆನ್ನಾಗಿ ಬೈದುಬಿಟ್ಟಿದ್ದೆ. ಆಮೇಲೆ ಎರಡು ದಿನ ಬಿಟ್ಟು ಮತ್ತೆ ಫೋನ್ ಬಂತು. ಇದು ನಕಲಿ ಕರೆ ಅಲ್ಲ ಅಂತ ಖಾತರಿಯಾಗಿ ಆಡಿಷನ್‍ಗೆ ಹೋದೆ. ನಾನೆಲ್ಲೋ ಸಣ್ಣ ಪಾತ್ರ ಅಂದುಕೊಂಡಿದ್ದೆ. ಆದರೆ, ಆಮೇಲೆ ಗೊತ್ತಾಗಿದ್ದು ಆಡಿಷನ್ ನಡೆದಿದ್ದು ಮುಖ್ಯಪಾತ್ರಕ್ಕೆ ಅಂತ’ ಎಂದು ತಮಗೆ ಪಾತ್ರ ದೊರೆತ ಕಥೆಯನ್ನು ಹಂಚಿಕೊಂಡರು.

ನಿಭಾಯಿಸುತ್ತಿರುವ ಪಾತ್ರ ‘ತೇಜು’ ಮತ್ತು ತಮ್ಮ ನಿಜ ವ್ಯಕ್ತಿತ್ವ ‘ಚಂದನ್’ ನಡುವೆ ಹೊಂದಾಣಿಕೆ ಇದೆಯಂತೆ. ಈ ಕಾರಣಕ್ಕಾಗಿಯೇ ಪಾತ್ರ ಒಪ್ಪಿಕೊಂಡೆ ಅನ್ನುತ್ತಾರೆ ಅವರು. ‘ಧಾರಾವಾಹಿಯ ಕಥೆ ತುಂಬಾ ಇಷ್ಟ ಆಯಿತು. ಜೀವನಕ್ಕೆ ತುಂಬಾ ಹತ್ತಿರ ಅನ್ನಿಸಿತು. ತೇಜು ಪಾತ್ರದ ಸ್ವಭಾವ ಹಾಗೂ ನನ್ನ ಸ್ವಭಾವ ಸರಿಸುಮಾರು ಒಂದೇ. ಮೊದಲು ಕಥೆ ನಮಗೆ ಇಷ್ಟ ಆದ್ರೆ, ಅದನ್ನ ನಾವು ಜನರಿಗೆ ಚೆನ್ನಾಗಿ ತೋರಿಸಬಹುದು ಎನ್ನುವುದು ನನ್ನ ಅಭಿಪ್ರಾಯ. ಹಾಗಾಗಿ ಸೀರಿಯಲ್ ಒಪ್ಪಿಕೊಂಡೆ’.

‘ಖ್ಯಾತಿ ಬಂದ ಮೇಲೆ ಜನ ನಮ್ಮನ್ನು ಗುರುತಿಸುವುದಕ್ಕೆ ಪ್ರಾರಂಭಿಸುತ್ತಾರೆ. ತುಂಬಾ ಪ್ರೀತಿ ತೋರಿಸುತ್ತಾರೆ. ಆಗ ನಮಗೆ ಖುಷಿ ಆಗುತ್ತದೆ. ಆದರೆ, ಕೆಲವೊಮ್ಮೆ ಪೇಚಿಗೆ ಸಿಲುಕುವ ಸಂದರ್ಭಗಳೂ ಇರುತ್ತವೆ’ ಎಂದು ತಾವು ಸಿಲುಕಿದ ಸ್ಥಿತಿಯೊಂದರ ಬಗ್ಗೆ ಹೇಳಿದರು ಚಂದನ್. ‘ಮಾಲ್‍ನಲ್ಲಿ ವಾಶ್‍ರೂಮಿಗೆ ಹೋಗ್ತಾ ಇದ್ದರೆ, ನನಗೆ ಗೊತ್ತಿಲ್ಲದ ಹಾಗೆ ಹಿಂದಿನಿಂದ ವೀಡಿಯೊ ಮಾಡ್ತಾರೆ. ಒಮ್ಮೆ ಅಂತೂ ನಾನು ನನ್ನ ಸ್ನೇಹಿತೆ ಜೊತೆ ಮಾತಾಡ್ತಾ ಇದ್ದೆ, ಅದನ್ನ ಫೋಟೊ ತೆಗೆದು ಪ್ರೇಯಸಿ ಜೊತೆ ಮಾತಾಡ್ತಾ ಇದ್ದ ಅಂತ ಸುದ್ದಿ ಹಬ್ಬಿಸಿ ಬಿಟ್ಟಿದ್ರು’ ಎಂದರು.

‘ಶ್ರಾವಣಿನ ಒಪ್ಪಿಕೊಳ್ಳುತ್ತೀರಾ’ ಎಂದು ಕೇಳಿದರೆ ‘ಸೀರಿಯಲ್ ನೋಡಿ’ ಎಂದು ಒಂದೇ ಮಾತಿನಲ್ಲಿ ಹೇಳಿ ಕುತೂಹಲ ಉಳಿಸಿಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT